ಪರಿಶಿಷ್ಟ ಜಾತಿಗಳಲ್ಲಿ (ಎಸ್‌ಸಿ) ಒಳಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿರುವ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ಅಧ್ಯಕ್ಷತೆಯ ಆಯೋಗ ಸೋಮವಾರ (ಆ.4) ಸರ್ಕಾರಕ್ಕೆ ತನ್ನ ಅಂತಿಮ ವರದಿ ಸಲ್ಲಿಸಿತು.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಾಗಮೋಹನ್‌ದಾಸ್ ಆಯೋಗ ತನ್ನ ವರದಿ ಸಲ್ಲಿಸಿತು. ಸಮೀಕ್ಷೆಯ ದತ್ತಾಂಶ ಮತ್ತು ಅನುಬಂಧಗಳು ಒಟ್ಟು ಸೇರಿ ಸುಮಾರು 1,766 ಪುಟಗಳು ಮತ್ತು ಆರು ಶಿಫಾರಸ್ಸುಗಳನ್ನೊಳಗೊಂಡ ವರದಿಯನ್ನು ನೀಡಿದೆ ಎಂಬ ಮಾಹಿತಿ ದೊರೆತಿದೆ.
ವರದಿ ಸಲ್ಲಿಕೆ ವೇಳೆ ಸಚಿವರಾದ ಡಾ. ಜಿ.ಪರಮೇಶ್ವರ್, ಎಚ್.ಸಿ ಮಹದೇವಪ್ಪ, ಕೆ.ಎಚ್ ಮುನಿಯಪ್ಪ, ಶಿವರಾಜ ತಂಗಡಗಿ, ಆರ್.ಬಿ.ತಿಮ್ಮಾಪುರ, ಪ್ರಿಯಾಂಕ್ ಖರ್ಗೆ ಹಾಗೂ ನಾಗಮೋಹನ್ ದಾಸ್ ಆಯೋಗದ ಪ್ರಮುಖರು ಮತ್ತು ಸರ್ಕಾರದ ಉನ್ನತ ಅಧಿಕಾರಿಗಳು ಇದ್ದರು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನ್ಯಾ. ನಾಗಮೋಹನ್‌ದಾಸ್ ಆಯೋಗ ಒಳಮೀಸಲಾತಿ ಸಂಬಂಧ ವರದಿ ನೀಡಿದೆ. ಅದರಲ್ಲಿ ಏನಿದೆ ಎಂದು ಇನ್ನೂ ನೋಡಿಲ್ಲ. ಆಗಸ್ಟ್ 7ರಂದು ಸಚಿವ ಸಂಪುಟ ಸಭೆಯಿದೆ. ಅದರಲ್ಲಿ ವರದಿಯನ್ನು ಮಂಡಿಸಿ ಚರ್ಚೆ ಮಾಡುತ್ತೇವೆ” ಎಂದು ಹೇಳಿದರು.
ಒಳಮೀಸಲಾತಿ ಕುರಿತು ನಾಗಮೋಹನ್ ದಾಸ್ ಆಯೋಗದ ಅಂತಿಮ ವರದಿ ಇಂದು ಸಲ್ಲಿಕೆ: ಪರಿಶಿಷ್ಟ ಜಾತಿಗಳ ಮೀಸಲಾತಿ ಕುರಿತು ಕುತೂಹಲ


