ಒಳಮೀಸಲಾತಿ ಕಲ್ಪಿಸಲು ಅಡ್ಡಿಯಾಗಿದ್ದ ಆದಿ ಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಜಾತಿಗಳ ಗೊಂದಲಕ್ಕೆ ತೆರೆ ಎಳೆಯಲು ಸರ್ಕಾರ ತೀರ್ಮಾನಿಸಿ ತಂತ್ರಾಂಶ ಮಾದರಿಯನ್ನು ಬಿಡುಗಡೆಗೊಳಿಸಿದೆ.
ಜಸ್ಟೀಸ್ ನಾಗಮೋಹನ್ ದಾಸ್ ಏಕಸದಸ್ಯ ಆಯೋಗದ ವರದಿಯಲ್ಲಿ ಎಕೆ, ಎಡಿ ಮತ್ತು ಎಎ ಗುಂಪಿನಲ್ಲಿ ಗುರುತಿಸಿಕೊಂಡಿದ್ದ 4,74,954 ಜನರು ತಮ್ಮ ಮೂಲ ಜಾತಿಯನ್ನು ನಮೂದಿಸಿರಲಿಲ್ಲ ಹಾಗೂ ಈ ಹಿಂದೆ ಸದಾಶಿವ ಆಯೋಗದ ವರದಿಯಂತೆ ಸುಮಾರ 44 ಲಕ್ಷ ಜನರು ತಮ್ಮ ಜಾತಿ ಪ್ರಮಾಣ ಪತ್ರವನ್ನು ಎಕೆ, ಎಡಿ, ಎಎ ಎಂಬ ಹೆಸರಿನಲ್ಲಿ ಪಡೆದುಕೊಂಡಿದ್ದರು. ಒಳಮೀಸಲಾತಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಗೊಳಿಸಲು ಮೂಲ ಜಾತಿ ಪ್ರಮಾಣ ಪತ್ರ ನೀಡಲು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ನಿರಂತರವಾಗಿ ಸರ್ಕಾರವನ್ನು ಒತ್ತಾಯಿಸಿತ್ತು.
ಇದರ ಬೆನ್ನಲ್ಲೇ ಕಂದಾಯ ಇಲಾಖೆಯ ವೆಬ್ಸೈಟ್ ನಲ್ಲಿ ಮೂಲ ಜಾತಿ ಪ್ರಮಾಣ ಪತ್ರವನ್ನು ವಿತರಿಸಿಲು ಅನುಕೂಲವಾಗುವಂತೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಮಾದರಿಯನ್ನು ಬಿಡುಗಡೆಗೊಳಿಸಿದೆ.

ಈ ಮೂಲಕ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳು ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಗುಂಪುಗಳಲ್ಲಿ ಒಳಮೀಸಲಾತಿಯ ಅನುಕೂಲ ಪಡೆಯಲು ಮೂಲ ಜಾತಿ ಪ್ರಮಾಣ ಪತ್ರ ಅಗತ್ಯವೆಂದು ಸರ್ಕಾರ ಆದೇಸ ಹೊರಡಿಸಿತ್ತು.
ಎಕೆ, ಎಡಿ, ಎಎ ಜಾತಿ ಪ್ರಮಾಣ ಪತ್ರವನ್ನು ಹೊಂದಿರುವ ಮಾದಿಗ ಸಂಬಂದಿತ ಜಾತಿಗೆ ಸೇರಿದವರು ಮಾದಿಗ ಅಥವಾ ಉಪಜಾತಿ-ಪ್ರವರ್ಗ-ಎ ಎಂದು, ಹೊಲೆಯ ಸಂಬಂದಿತ ಜಾತಿಗೆ ಸೇರಿದವರು ಹೊಲೆಯ ಅಥವಾ ಉಪಜಾತಿ-ಪ್ರವರ್ಗ-ಬಿ ಎಂದು ಜಾತಿ ಪ್ರಮಾಣ ಪತ್ರ ಪಡೆಯಲು ಸೂಚಿಸಲಾಗಿದೆ.

ದುರುದ್ದೇಶದಿಂದ ಇತರೆ ಮೂಲ ಜಾತಿಯ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ಒಳಮೀಸಲಾತಿ ಅನುಕೂಲವನ್ನು ಪಡೆದುಕೊಳ್ಳವುದು ಕಂಡು ಬಂದರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಪಡೆದುಕೊಂಡ ಮೀಸಲಾತಿಯ ಸೌಲಭ್ಯವನ್ನು ಹಿಂಪಡಡೆಯಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯು ಆದೇಶ ಹೊರಡಿಸಿದೆ.
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


