ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಕಳಕಳಿ ಉಳ್ಳವರು ಎಂದು ನಾವು ಭಾವಿಸುತ್ತೇವೆ. ಆದ್ದರಿಂದ, ಅವರ ಸಮುದಾಯ ಪರವಾದ ಬದ್ಧತೆ ಬಹಿಂರಂಗ ಆಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪರಿಶಿಷ್ಟ ಜಾತಿ ಒಳಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್ ಹೇಳಿದರು.
ಒಳಮೀಸಲಾತಿ ಜಾರಿ ಸಂಬಂಧ ಜಸ್ಟೀಸ್ ನಾಗಮೋಹನ್ ದಾಸ್ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಇದೇ ಮಳೆಗಾಲ ಅಧಿವೇಶನದಲ್ಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಪ್ರೀಢಂ ಪಾರ್ಕಿನಲ್ಲಿ ನಡೆಯುತ್ತಿರುವ ಅಹೋರಾತ್ರಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಇಂದಿನಿಂದ ಆರಂಭವಾಗಿರುವ ಅಧೀವೇಶನದಲ್ಲಿ ಒಳಮಿಸಲಾತಿ ವಿಚಾರ ತೆಗೆದುಕೊಳ್ಳಬೇಕು ಎಂಬ ಕಾರಣಕ್ಕೆ ನಾವು ಈ ಹೋರಾಟ ಆರಂಭಿಸಿದ್ದೇವೆ; ಇದು ಆರಂಭ ಮಾತ್ರ. ಇಲ್ಲಿ ಹಲವು ತಜ್ಞರು ಮತ್ತು ಹೋರಾಟಗಾರರು ಬಂದಿದ್ದಾರೆ. ಇದು ಯಾವುದೋ ಒಂದು ಸಂಘಟನೆಯ ಹೋರಾಟವಲ್ಲ, ಇದು ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತಿರುವ ಹೋರಾಟ. ಒಳ ಮೀಸಲಾತಿ ಕುರಿತು ನಾವು ಇಲ್ಲಿ ಮುಕ್ತವಾಗಿ ಚರ್ಚೆ ಮಾಡಬೇಕಿದೆ” ಎಂದರು.
“ಮೊದಲು ಜಸ್ಟೀಸ್ ನಾಗಮೋಹನ್ ದಾಸ್ ವರದಿ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಬೇಕು, ಸಣ್ಣಪುಟ್ಟ ಬದಲಾವಣೆಗಳಿದ್ದರೆ ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ ಸಂಪುಟ ಉಪ ಸಮಿತಿ ರಚನೆ ಮಾಡುವ ಮೂಲಕ ಇದನ್ನು ಮುಂದೂಡಬಾರದು” ಎಂದರು.
“ಸಿದ್ದರಾಮಯ್ಯ ಸಾಮಾಜಿಕ ಕಳಕಳಿ ಉಳ್ಳವರು ಎಂದು ನಾವೆಲ್ಲರೂ ಭಾವಿಸುತ್ತೇವೆ, ಅವರ ಬದ್ಧತೆ ಬಹಿಂರಂಗ ಆಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ. ಮಾದಿಗ ಸಮುದಾಯ 35 ವರ್ಷಗಳ ಕಾಲ ಮಾಡಿರುವ ಹೋರಾಟ ಯಾವುದೋ ಒಂದು ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಆದರೆ, ಕೆಲವು ಸಂದರ್ಭಗಳಲ್ಲಿ ನಾವು ಒಂದು ಪಕ್ಷದ ಪರವಾಗಿ ನಿಂತಿರಬಹುದು. ಆದ್ದರಿಂದ ಕಾಂಗ್ರೆಸ್ ಪಕ್ಷ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಕೂಡಲೇ ಅಂಗೀಕರಿಸಬೇಕು” ಎಂದು ಆಗ್ರಹಿಸಿದರು.

“ಜ್ಞಾನ ಪ್ರಕಾಶ ಸ್ವಾಮೀಜಿ ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಸುಟ್ಟಿದ್ದು ಸರಿಯಲ್ಲ. ಆ ಮೂಲಕ ನೀವು ಒಂದೂವರೆ ಕೋಟಿ ಜನಸಂಖ್ಯೆಯ ಬದುಕನ್ನು ಸುಡಲು ಹೊರಟಿದ್ದೀರಿ. ಜ್ಞಾನಪ್ರಕಾಶ ಸ್ವಾಮೀಜಿ ಮಾಡಿದ್ದು ಸರಿಯಲ್ಲ; ಒಳ ಮೀಸಲಾತಿಯ ಹಿಂದಿನ ಹೋರಾಟದಲ್ಲಿ ಅವರು ನಮ್ಮೊಂದಿಗೆ ಇದ್ದರು. ಈ ಆದಿ ಕರ್ನಾಟಕ-ಆದಿ ದ್ರಾವಿಡ ವಿವಾದವನ್ನು ನಾವು ಮಾತನಾಡುವುದು ಸರಿಯಲ್ಲ. ಯಾವ ಜಾತಿ ಯಾವ ಗುಂಪಿನಲ್ಲಿ ಇರಬೇಕು ಎಂಬುದನ್ನು ಅದೇ ಸಮುದಾಯ ನಿರ್ಧರಿಸಬೇಕು. ಬೇಕಿದ್ದರೆ ನೀವು ಸರ್ಕಾರದೊಂದಿಗೆ ಚರ್ಚೆ ಮಾಡಿ, ಈ ಬಿಡಾರಕ್ಕೆ ಬಂದು ನೀವು ನಮ್ಮೊಂದಿಗೆ ಮುಕ್ತವಾಗಿ ಚರ್ಚೆ ಮಾಡಿ. ನಾವೇ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಕೊಳ್ಳಬೇಕು” ಎಂದರು.
ಹಕ್ಕೊತ್ತಾಯಗಳು:
• ಜಸ್ಟಿಸ್ ನಾಗಮೋಹನ್ ದಾಸ್‌ರವರ ವರದಿಯನ್ನು ಅಧಿವೇಶನದಲ್ಲಿ ಅಂಗೀಕರಿಸಿ, ಒಳಮೀಸಲಾತಿ ಜಾರಿಗೊಳಿಸಬೇಕು.
• ಮತ್ತೊಂದು ಉಪ ಸಮಿತಿ ರಚಿಸದೇ, ಸಚಿವ ಸಂಪುಟದಲ್ಲಿ ಜಾರಿಗೆ ಒಮ್ಮತದ ನಿರ್ಧಾರ ಕೈಗೊಳ್ಳಬೇಕು.
• ಮುಖ್ಯಮಂತ್ರಿಗಳು ತಾವೇ ನೀಡಿದ್ದ ಒಳಮೀಸಲಾತಿ ಗ್ಯಾರಂಟಿಯನ್ನು ತಮ್ಮ ಪರಮಾಧಿಕಾರ ಬಳಸಿ ಜಾರಿಮಾಡಬೇಕು.
• ಒಳ ಮೀಸಲಾತಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಕೈಬಿಡಬೇಕು.
ಮಳೆಗಾಲ ಅಧಿವೇಶನದಲ್ಲಿ ಒಳಮೀಸಲಾತಿ ಅಂಗೀಕರಿಸಲು ಆಗ್ರಹಿಸಿ ಅಹೋರಾತ್ರಿ ಧರಣಿ


