Homeಮುಖಪುಟ’ಹಿಂದುತ್ವಕ್ಕೆ ಮರುಳಾಗಿರುವ "ಜಾತಿ" ಬಿಜೆಪಿಯ ಜತೆಗೆ ಇದೆ’; ಗುಜರಾತ್ ಕಾಂಗ್ರೆಸ್ ಮುಖಂಡ ಜಿಗ್ನೇಶ್ ಅವರೊಂದಿಗೆ ಮಾತುಕತೆ

’ಹಿಂದುತ್ವಕ್ಕೆ ಮರುಳಾಗಿರುವ “ಜಾತಿ” ಬಿಜೆಪಿಯ ಜತೆಗೆ ಇದೆ’; ಗುಜರಾತ್ ಕಾಂಗ್ರೆಸ್ ಮುಖಂಡ ಜಿಗ್ನೇಶ್ ಅವರೊಂದಿಗೆ ಮಾತುಕತೆ

- Advertisement -
- Advertisement -

ದಲಿತ ಹೋರಾಟಗಾರ-ಮುಖಂಡ ಜಿಗ್ನೇಶ್ ಮೇವಾನಿ ಗುಜರಾತಿನ ವಡಗಾಂ ಕ್ಷೇತ್ರದ ಶಾಸಕ. ಸದ್ಯಕ್ಕೆ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷರಾಗಿರುವ ಅವರು ತಮ್ಮ ರಾಜ್ಯದಲ್ಲಿ ಡಿಸೆಂಬರ್ 1 ಮತ್ತು 5ರಂದು ನಡೆಯುವ ವಿಧಾನಸಭಾ ಚುನಾವನೆಯಲ್ಲಿ ಕಾಂಗ್ರೆಸ್‌ಅನ್ನು ಗೆಲ್ಲಿಸಿ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ಕೆಲಸಗಳ ನಡುವೆ ಬೆಂಗಳೂರಿಗೆ ಭೇಟಿ ನೀಡಿದಾಗ ಗುಜರಾತಿನ ಚುನಾವಣೆಗಳ ಬಗ್ಗೆ ನ್ಯಾಯಪಥಕ್ಕೆ ಅವರು ನೀಡಿದ ಸಂದರ್ಶನವಿದು.

ಗುರುಪ್ರಸಾದ್: ನೀವೀಗ ಗುಜರಾತ್ ಕಾಂಗ್ರೆಸ್‌ನ ಕಾರ್ಯಕಾರಿ ಅಧ್ಯಕ್ಷರಾಗಿದ್ದೀರಿ. ಇಡೀ ದೇಶದಲ್ಲಿ ಗುಜರಾತ್ ಅತಿ ಹೆಚ್ಚು ಕೋಮು ಧ್ರುವೀಕರಣಗೊಂಡ ರಾಜ್ಯ ಎನ್ನಬಹುದು. ಅಲ್ಲಿನ ಪರಿಸ್ಥಿತಿ ಈಗ ಹೇಗಿದೆ? ಚುನಾವಣೆಗಳು ಹತ್ತಿರವಿರುವಾಗ ನಿಮ್ಮ ಸವಾಲುಗಳೇನು?

ಜಿಗ್ನೇಶ್ ಮೇವಾನಿ: ಗುಜರಾತ್ ಕೆಲವು ವರ್ಷಗಳಿಂದ ಹಿಂದುತ್ವದ ಪ್ರಯೋಗಶಾಲೆಯಾಗಿದ್ದು, ಬಿಜೆಪಿ ಬಹಳ ಬಲಶಾಲಿ ಪಕ್ಷವಾಗಿ ರಾಜ್ಯದ ಎಲ್ಲಾ ವಲಯಗಳನ್ನು ತೆಕ್ಕೆಗೆ ತೆಗೆದುಕೊಂಡಿರುವಾಗ ಮತ್ತು ಎಲ್ಲಾ ಸಂಸ್ಥೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನೇ ಬುಡಮೇಲು ಮಾಡುತ್ತಿರುವಾಗ ಕಾಂಗ್ರೆಸ್ ಮಾತ್ರವೇ ಅಲ್ಲ, ಬೇರೇ ಯಾವುದೇ ರಾಜಕೀಯ ಪಕ್ಷಕ್ಕೆ ಇದು ಕಷ್ಟದ ಮತ್ತು ಸವಾಲಿನ ಪರಿಸ್ಥಿತಿ. ಅಲ್ಲದೆ ಕಾರ್ಪೊರೆಟ್‌ಗಳು, ಮತ್ತಿತರ ಸ್ವಹಿತಾಸಕ್ತಿ ಗುಂಪುಗಳು ಮೋದಿ, ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರದ ಬೆಂಬಲಕ್ಕೆ ನಿಂತಿರುವಾಗ ಹೋರಾಟ ಇನ್ನಷ್ಟು ಕಷ್ಟವಾಗುತ್ತದೆ. ಆದರೆ ಇದರ ವಿರುದ್ಧ ದಿಟ್ಟವಾಗಿ ಹೋರಾಡುತ್ತಿದ್ದೇವೆ. ಕಳೆದ ಚುನಾವಣೆಯಲ್ಲಿ ಕೂಡ ಗೆಲುವಿನ ಹತ್ತಿರಕ್ಕೆ ಬಂದಿದ್ದವು. ಈ ನಿಟ್ಟಿನಲ್ಲಿ ಈ ಬಾರಿ ಗೆಲ್ಲುವ ವಿಶ್ವಾಸವಿದೆ. ಹೋರಾಟ ನಿರಂತರವಾಗಿದೆ.

ಪ್ರ: ಕೊನೆಯ ಬಾರಿ ಗುಜರಾತ್‌ನಿಂದ ಹೊರಗಿರುವವರಿಗೆ ಕಾಂಗ್ರೆಸ್ ಅಷ್ಟು ಸೀಟುಗಳನ್ನು ಗೆದ್ದದ್ದು ಅಚ್ಚರಿಯೆನಿಸಿತ್ತು. ಏಕೆಂದರೆ ಯಾವ ಎಕ್ಸಿಟ್ ಪೋಲ್‌ಗಳೂ ಅದನ್ನು ಸೂಚಿಸಿರಲಿಲ್ಲ. ಈ ಬಾರಿ ಪರಿಸ್ಥಿತಿ ಹೇಗಿದೆ?

: ಮೋದಿಯವರ ರ್‍ಯಾಲಿಗಳಿಗೆ ಜನರು ಬರುತ್ತಿಲ್ಲ. ಜನ ಮೋದಿಯವರಿಂದ ಬೇಸತ್ತು ಹೋಗಿದ್ದಾರೆ. ಅವರಿಂದ ಏನೂ ಹೊಸತು ಬರುತ್ತಿಲ್ಲ. ಹಣದ ಮೂಲಕ ಮತ್ತು ಸರ್ಕಾರಿ ಇಲಾಖೆಗಳಿಗೆ ಜನರನ್ನು ಕರೆತರುವಂತೆ ಒತ್ತಡ ಹೇರಿ ಅವರ ಸಭೆಗಳಿಗೆ ಜನ ಸೇರಿಸಲಾಗುತ್ತಿದೆ. ಇದು ಗುಜರಾತ್ ಚುನಾವಣೆಯ ಸದ್ಯದ ಕಥೆಯನ್ನು ಹೇಳುತ್ತಿದೆ. ಇನ್ನು ಎರಡನೆಯದಾಗಿ ಗುಜರಾತ್ ಸರ್ಕಾರದ ಇಡೀ ಸಂಪುಟವನ್ನು ಬದಲಾಯಿಸಲಾಯಿತು. ಮೂರನೆಯದಾಗಿ, ಕೋವಿಡ್ ಸಂದರ್ಭದಲ್ಲಿ ಗುಜರಾತ್ ಸರ್ಕಾರದ ವೈಫಲ್ಯ. ನಾಲ್ಕನೆಯದಾಗಿ, ಜಿಎಸ್‌ಟಿ, ಡಿಮಾನೆಟೈಸೇಶನ್ ಮತ್ತಿತರ ಆರ್ಥಿಕ ನೀತಿಗಳಿಂದ ಗುಜರಾತ್ ಜನ ಹೈರಾಣಾಗಿ ರೋಸಿಹೋಗಿದ್ದಾರೆ. ಅದರಲ್ಲೂ ಸಣ್ಣ ಮತ್ತು ಮಧ್ಯಮ ವ್ಯಾಪಾರಿ ವರ್ಗ, ನಿರುದ್ಯೋಗಿ ಯುವಕರು ಶತಮಾನಗಳ ಕಾಲ ವ್ಯವಹಾರದ ತವರೆನಿಸಿಕೊಂಡಿದ್ದ ಗುಜರಾತ್‌ನಲ್ಲಿ ಆಕ್ರೋಶಗೊಂಡಿದ್ದಾರೆ. ಈ ಎಲ್ಲಾ ಸೂಚನೆಗಳಿಂದ ನಾವು ಈ ಚುನಾವಣೆಯಲ್ಲಿ ಚಾಲಕನ ಸ್ಥಾನದಲ್ಲಿದ್ದೇವೆ ಮತ್ತು ಚುನಾವಣೆ ಗೆಲ್ಲಲು ಸಂಪೂರ್ಣವಾಗಿ ಕಾರ್ಯೋನ್ಮುಖರಾಗಿದ್ದೇವೆ.

ಇದನ್ನೂ ಓದಿ: ಗುಜರಾತ್: ಮೋದಿ-ಶಾ ಜೋಡಿಗೆ ’ಮಾಡು ಇಲ್ಲವೇ ಮಡಿ’ ಚುನಾವಣೆ

ಪ್ರ: ಗೆಲ್ಲುವ ಸೂಚನೆ ನೀಡುವ ಆಂತರಿಕ ಸರ್ವೇಗಳು ಪಕ್ಷದೊಳಗೆ ನಡೆದಿವೆಯೇ?

: ನಮಗೆ ಬಹಳ ಒಳ್ಳೆಯ ಚಾನ್ಸ್ ಇದೆ ಈ ಬಾರಿ. ಅದರ ಬಗ್ಗೆ ನನಗೆ ಭರವಸೆಯಿದೆ.

ಪ್ರ: ಕರ್ನಾಟಕದಲ್ಲಿ ಒಂದು ಮೇಲ್ಮಟ್ಟಕ್ಕೆ ಯಾವ ಜಾತಿ ಸಮುದಾಯ ಯಾವ ಪಕ್ಷದ ಜೊತೆಗೆ ಹೆಚ್ಚು ಗುರುತಿಸಿಕೊಂಡಿದೆ ಎಂಬ ಒಂದು ಅಂದಾಜಿದೆ. ಗುಜರಾತ್‌ನಲ್ಲಿ ಕಾಂಗ್ರೆಸ್‌ಗಾಗಲೀ ಅಥವಾ ಬಿಜೆಪಿ ಪಕ್ಷಕ್ಕಾಗಲೀ ಜಾತಿಗಳ ನಡುವೆ ಮತದಾನದ ವಿಷಯದಲ್ಲಿ ಅಂತಹ ಧ್ರುವೀಕರಣ ಗುರುತಿಸಲು ಸಾಧ್ಯವೇ?

: ಪ.ಜಾ, ಪ.ಪಂ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಸಾಮಾನ್ಯವಾಗಿ ಕಾಂಗ್ರೆಸ್‌ನ ಮೂಲ ಮತಬ್ಯಾಂಕ್ ಎಂದು ಪರಿಗಣಿಸಲಾಗುತ್ತದೆ. ಹಿಂದಿನಿಂದಲೂ ಅವರು ಕಾಂಗ್ರೆಸ್ ಕೈಹಿಡಿದಿದ್ದಾರೆ. ಆದರೆ ಉಳಿದವರು ಬಿಜೆಪಿ ಜತೆಗೆ ಇದ್ದಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ನಗರದ ಮತದಾದರರು ಹೆಚ್ಚು ಬಿಜೆಪಿಯ ಜತೆಗಿದ್ದಾರೆ. ಕಳೆದ 40 ವರ್ಷಗಳಿಂದಲೂ ಅದನ್ನು ಬದಲಾಯಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ಹಾಗೆಯೇ ಹಿಂದುತ್ವಕ್ಕೆ ಮರುಳಾಗಿರುವ “ಜಾತಿ” ಬಿಜೆಪಿಯ ಜತೆಗೆ ಇದೆ ಎನ್ನಬಹುದು. ಉಳಿದಂತೆ ಗ್ರಾಮೀಣ ಗುಜರಾತ್ ಮತ್ತು ಸಣ್ಣ ಪಟ್ಟಣಗಳಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಈ ಚುನಾವಣೆಗಳಲ್ಲಿ ಕೂಡ ಕಾಂಗ್ರೆಸ್ ಆ ಪ್ರದೇಶಗಳಲ್ಲಿ ಒಳ್ಳೆಯ ಸಾಧನೆ ಮಾಡುವ ಭರವಸೆಯಿದೆ.

ಪ್ರ: ಬಿಜೆಪಿಗೆ ನಕಲಿ ಸುದ್ದಿಗಳನ್ನು ಸೃಷ್ಟಿಸುವ ಮತ್ತು ಹರಡುವ ಅತಿ ದೊಡ್ಡ ಎಕೋಸಿಸ್ಟಮ್ ಇದೆ. ಇದನ್ನು ಕೌಂಟರ್ ಮಾಡಲು ಕಾಂಗ್ರೆಸ್ ಯಾವುದಾದರೂ ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆಯೇ?

: ಖಂಡಿತಾ. ನಾವೂ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಪರಿಣಾಮಕಾರಿ ಅಭಿಯಾನಗಳನ್ನು ನಡೆಸುತ್ತಿದ್ದೇವೆ. ನಮ್ಮ ಪಕ್ಷ ನೀಡುತ್ತಿರುವ ಭರವಸೆಗಳು ಕೂಡ ಆ ನಿಟ್ಟಿನಲ್ಲಿಯೇ ಇವೆ. 3000 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಿರ್ಮಿಸುವುದಾಗಿ ರಾಹುಲ್ ಗಾಂಧಿಯವರು ಘೋಷಿಸಿದ್ದಾರೆ. ಭೂಸುಧಾರಣೆಯ ಬಗ್ಗೆ ಮಾತನಾಡಿದ್ದೇವೆ. ಅಲ್ಲದೆ ಹಲವು ಯಾತ್ರೆಗಳನ್ನು ಆಯೋಜಿಸಿದ್ದೇವೆ. ಈ ಪರಿವರ್ತನ ಯಾತ್ರೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಚಾಲನೆ ನೀಡಿ ಭಾಗಿಯಾಗಿದ್ದಾರೆ. ಯುವ ಕಾಂಗ್ರೆಸ್ ಕೂಡ ರ್‍ಯಾಲಿ ನಡೆಸಿದೆ. ಗುಜರಾತಿನಲ್ಲಿ 15% ಬುಡಕಟ್ಟು ಸಮುದಾಯದ ನಾಗರಿಕರಿದ್ದಾರೆ. ಆದಿವಾಸಿ ಅಧಿಕಾರ ಸತ್ಯಾಗ್ರಹಕ್ಕೆ ಚಾಲನೆ ನೀಡಲು ರಾಹುಲ್ ಗಾಂಧಿಯವರೇ ಬಂದಿದ್ದರು. ಕಳೆದ ತಿಂಗಳು 50 ಸಾವಿರ ದಲಿತರನ್ನು ಸೇರಿಸಿ ಸಭೆಯನ್ನು ನಡೆಸಿದ್ದೇವೆ. ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.

ಪ್ರ: ಭಾರತ್ ಜೋಡೋ ಇಂದ ಪ್ರಯೋಜನವಾಯಿತೇ? ಈ ಯಾತ್ರೆಯ ಮಾರ್ಗದಲ್ಲಿ ಗುಜರಾತ್ ಇಲ್ಲದೆ ಇರುವುದು ಕೊರತೆಯಲ್ಲವೇ?

: ಈ ಯಾತ್ರೆ ಗುಜರಾತ್‌ನಿಂದಲೇ ಪ್ರಾರಂಭವಾಗಬೇಕಿತ್ತು ಎನ್ನುವ ಆಸೆ ವೈಯಕ್ತಿಕವಾಗಿ ನನಗಿತ್ತು. ಆದರೆ ಕಾಂಗ್ರೆಸ್ ಧುರೀಣರು ಇವತ್ತಿನ ಪರಿಸ್ಥಿತಿಗೆ ತಕ್ಕಂತೆ ಕಾರ್ಯಕ್ರಮವನ್ನು ಆಯೋಜಿಸಿದರು. ಆದರೆ ರಾಹುಲ್ ಗಾಂಧಿಯವರೇ ಹೇಳಿರುವಂತೆ ಇದು ಯಾವುದೇ ಪ್ರಯೋಜನ ಗಳಿಸಲು ಆಯೋಜಿಸಿರುವ ಯಾತ್ರೆಯಲ್ಲ. ದೇಶದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು, ದೇಶದ ಉದ್ದಗಲ ಸುತ್ತಿ, ಭಾರತದಲ್ಲಿ ಆರ್‌ಎಸ್‌ಎಸ್ ನಡೆಸುತ್ತಿರುವ ಒಡಕನ್ನು ಸರಿಪಡಿಸಲು, ಹಿಂದೂ-ಮುಸ್ಲಿಮರನ್ನು ಒಟ್ಟಿಗೆ ತರಲು, ಹಲವು ಸಮುದಾಯಗಳನ್ನು ಒಗ್ಗೂಡಿಸಲು ನಡೆಸುತ್ತಿರುವ ಯಾತ್ರೆಯಿದು. ಅದು ಹೆಸರಿನಿಂದಲೇ ವ್ಯಕ್ತವಾಗುತ್ತದೆ. ಇದು ಚುನಾವಣೆಯ ಲೆಕ್ಕಾಚಾರಕ್ಕೆ ನಡೆಯುತ್ತಿರುವ ಯಾತ್ರೆಯಂತೂ ಅಲ್ಲ. ಆದರೆ ಭಾರತ್ ಜೋಡೋ ಯಾತ್ರೆಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲದಿಂದ ಗುಜರಾತಿನ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬಹಳ ಉತ್ಸುಕರಾಗಿದ್ದಾರೆ ಮತ್ತು ಸ್ಫೂರ್ತಿ ಪಡೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಈ ಯಾತ್ರೆಯಲ್ಲಿ ಮಾಡುತ್ತಿರುವ ತಪಸ್ಸು ಮತ್ತು ಅವರ ಬದ್ಧತೆ ಕೇರಳ ಮತ್ತು ಕರ್ನಾಟಕದಲ್ಲಿ ಸಿಕ್ಕ ಜನಬೆಂಬಲದಿಂದ ವ್ಯಕ್ತವಾಗಿದೆ. ಅದರ ಪರಿಣಾಮ ಗುಜರಾತ್‌ಗೂ ತಲುಪಿದೆ.

ಪ್ರ: ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ನೇರ ಹಣಾಹಣಿಯಿತ್ತು. ಆದರೆ ಈ ಬಾರಿ ಮೂರನೇ ಪಕ್ಷ ಎಎಪಿ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಅತಿ ಹೆಚ್ಚು ಪ್ರಚಾರ ಪಡೆಯುತ್ತಿದೆ. ಕಾಂಗ್ರೆಸ್‌ಗೆ ಇದರಿಂದ ಹಿನ್ನಡೆ ಇದೆಯೇ?

: ಮುಖ್ಯವಾಹಿನಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಿಂದಲೇ ಎಎಪಿ ಕಾಣಿಸಿಕೊಳ್ಳುತ್ತಿರುವುದು. ಅವರು ಪಿಆರ್, ಬ್ರಾಂಡಿಂಗ್, ಮಾರ್ಕೆಟಿಂಗ್ ವಿಭಾಗಗಳಲ್ಲಿ ಸಾಕಷ್ಟು ಹಣ ಹೂಡಿದ್ದಾರೆ. ಸಾಮಾಜಿಕ ಮತ್ತು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಸಾಕಷ್ಟು ಖರ್ಚು ಮಾಡುತ್ತಿದ್ದಾರೆ. ಪಂಜಾಬ್ ಚುನಾವಣೆಗಳಲ್ಲಿ ಕೂಡ ಸಾಕಷ್ಟು ಹಣ ಹರಿಸಿದ್ದಾರೆ ಎಂದು ಕೇಳಿದ್ದೇನೆ. ಆದರೆ ಅವರಿಗೆ ಕ್ಯಾಡರ್ ಇಲ್ಲ; ಪಕ್ಷದ ಮೂಲ ಬೇಸ್ ಇಲ್ಲ. ಸುಮ್ಮನೆ ಹವಾ ಸೃಷ್ಟಿಸಿದರೆ ಚುನಾವಣೆ ಗೆಲ್ಲಲಾಗುವುದಿಲ್ಲ. ನಾಳೆ ಚುನಾವಣೆ ನಡೆದರೆ ಒಂದು ಕ್ಷೇತ್ರವನ್ನು ಕೂಡ ಅವರಿಗೆ ಗೆಲ್ಲಲಾಗುವುದಿಲ್ಲ. ಇದನ್ನು ಸಂಪೂರ್ಣ ಪ್ರಜ್ಞೆಯಿಂದಲೇ ಹೇಳುತ್ತಿದ್ದೇನೆ. ಅವರಿಗೆ ಒಂದು ಸಣ್ಣ ವೋಟ್‌ಶೇರ್ ಸಿಗಲಿದೆ. ಆದರೆ ತ್ರಿಕೋಣ ಸ್ಪರ್ಧೆಯಿದೆ ಎಂಬುದರಲ್ಲಿ ಹುರುಳಿಲ್ಲ.

ಪ್ರ: ಕಳೆದ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರ ವಡಗಾಂನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಲಿಲ್ಲ. ನೀವು ಸ್ವತಂತ್ರವಾಗಿ ಗೆದ್ದಿರಿ. ಆದರೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವಾಗ ಸವಾಲುಗಳು ಹೆಚ್ಚಾಗಿವೆಯೇ?

: ನನ್ನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಮೊದಲನೇ ಗುರಿಯಾಗಿದ್ದೇನೆ ಎಂಬ ಸೂಚನೆಯಿದೆ. ಆರ್‌ಎಸ್‌ಎಸ್ ತನ್ನ ಕ್ಯಾಡರ್‌ನ 1000 ಜನರನ್ನು ನನ್ನ ಸೋಲಿಸುವುದಕ್ಕಾಗಿಯೇ ನೇಮಿಸುತ್ತಿದೆ ಎಂದು ತಿಳಿದುಬಂದಿದೆ. ಹಿಂದೆ ಕೂಡ, ಜಿಗ್ನೇಶ್ ಜಿಹಾದಿಗಳಿಂದ ದುಡ್ಡು ತೆಗೆದುಕೊಳ್ಳುತ್ತಿದ್ದಾರೆಂಬ ಅತಿ ಕೆಟ್ಟ ಮತ್ತು ಸುಳ್ಳು ಹೇಳಿಕೆಗಳನ್ನು ಅಮಿತ ಶಾ ನೀಡಿದ್ದರು. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬಂದು ಹೋಗಿದ್ದರು. ಈ ಬಾರಿ ಇನ್ನೂ ಹೆಚ್ಚು ತೀವ್ರವಾಗಿ ತೊಡಗಿಸಿಕೊಳ್ಳಲಿದ್ದಾರೆ. ನಾನು ನನ್ನ ಕೆಲಸವನ್ನು ದಕ್ಷವಾಗಿ ಮಾಡಿದ್ದೇನೆ ಮತ್ತು ಮಾಡುತ್ತಿದ್ದೇನೆ. ನನ್ನ ಕ್ಷೇತ್ರದಲ್ಲಿ ಗುಜರಾತಿನಲ್ಲೇ ಅತಿ ಹೆಚ್ಚು ಅನ್ನಬಹುದಾದ 10 ಸಾವಿರ ಜನರಿಗೆ ಮಹಾತ್ಮಾ ಗಾಂಧಿ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಕೆಲಸ ಸಿಕ್ಕಿದೆ.

ಇದನ್ನೂ ಓದಿ: ಗುಜರಾತ್‌: 2036ರ ಒಲಂಪಿಕ್ಸ್‌ ಆಯೋಜನೆ ಕನಸು ಕಂಡ ಬಿಜೆಪಿ ಪ್ರಣಾಳಿಕೆ

ನನ್ನ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ ಮಾಡಲು ಬಿಜೆಪಿಗೆ ಕೂಡ ಆಗುತ್ತಿಲ್ಲ. ನನ್ನ ಕ್ಷೇತ್ರದ ಜನ ನನ್ನ ಕೆಲಸವನ್ನು ಪ್ರಶಂಸಿಸುತ್ತಿದ್ದಾರೆ. ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಇವೆಲ್ಲಾ ನನ್ನನ್ನು ಕಾಯುತ್ತವೆ ಎಂದು ನಂಬಿದ್ದೇನೆ.

ಪ್ರ: ಕಳೆದ ಬಾರಿ 19 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಿರಿ. ಅದಕ್ಕೆ ಹೋಲಿಸಿದರೆ ಈ ಬಾರಿ ನಿಮ್ಮ ಮತ ಗಳಿಕೆಯಲ್ಲಿ ಹೆಚ್ಚಳ ಸಾಧ್ಯತೆಯಿದೆಯೇ?

: ಈ ಬಾರಿ 25 ಸಾವಿರ ಮತಗಳಿಗಿಂತಲೂ ಹೆಚ್ಚು ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಆದರೆ ನನ್ನದೊಂದು ಕ್ಷೇತ್ರದ ಬಗ್ಗೆ ಮಾತ್ರ ನನ್ನ ಚಿಂತೆಯಲ್ಲ. ಅಲ್ಲದೆ, ಚುನಾವಣೆ ಎಂದರೆ ಗೆಲುವು ಮತ್ತು ಸೋಲು ಮಾತ್ರವಲ್ಲ. ಅದಕ್ಕೂ ಮೀರಿದ ಕೆಲಸ ಮಾಡುವ ಉತ್ಸಾಹವಿದೆ.

ಪ್ರ: ಅದು ನಿಜ; ನೀವು ಸಾಮಾಜಿಕ ಕಾರ್ಯಕರ್ತರಾಗಿ ರಾಜಕಾರಣ ಪ್ರಾರಂಭಿಸಿದವರು..

: ಚುನಾವಣೆ ಮುಗಿದ ಮುಂದಿನ ದಿನ ನಾನು ಬೀದಿಗೆ ಇಳಿಯುತ್ತೇನೆ. ಕಚ್ ಭಾಗದಲ್ಲಿ ಭೂರಹಿತರಿಗೆ ಮತ್ತು ನಿರ್ದಿಷ್ಟವಾಗಿ ದಲಿತರಿಗೆ ಭೂಮಿ ಬೇಡಿಕೆಯ ಬಗ್ಗೆ ಹೋರಾಟ ಮಾಡಬೇಕಿದೆ. ಹಾಗೆಯೇ ಗುಜರಾತ್‌ನಲ್ಲಿ ಭಾರತ್ ಜೋಡೋ ರೀತಿಯ ಜಾಥಾ ಮಾಡಬೇಕಿದೆ. ಚುನಾವಣೆ ಗೆಲ್ಲುವುದು ಒಂದು. ಆದರೆ ಚುನಾವಣೆಯ ನಂತರ ನನ್ನ ಜನಗಳಿಗೆ ಮಾಡಬೇಕಾದ ಕೆಲಸ ಸಾಕಷ್ಟಿದೆ.

ಪ್ರ: ಚುನಾವಣೆಯಿಂದ ಸ್ವಲ್ಪ ಹೊರಬಂದು ಚರ್ಚೆ ಮಾಡುವುದಾದರೆ, ಗುಜರಾತ್‌ನಲ್ಲಿ ಐತಿಹಾಸಿಕವಾಗಿ ಮತ್ತು ಪ್ರಚಲಿತದಲ್ಲಿ ದಲಿತ ಚಳವಳಿಗಳ ಬಗ್ಗೆ ಸ್ವಲ್ಪ ಹೇಳ್ತೀರಾ?

: ಗುಜರಾತಿನಲ್ಲಿ ದಲಿತರು 7% ಇದ್ದರೂ ಕೂಡ ದಲಿತ ಚಳವಳಿಯ ದೊಡ್ಡ ಇತಿಹಾಸವಿದೆ. ಬಾಬಾಸಾಹೇಬರು ಕೂಡ ಅಹಮದಾಬಾದ್ ಮತ್ತು ಗುಜರಾತಿನ ವಿವಿಧ ಬಾಗಗಳಲ್ಲಿ ಓಡಾಡಿದ್ದರು. ನಾನೆಲ್ಲೋ ಓದಿದ್ದೆ, 1931ರಲ್ಲಿ ಬಾಬಾಸಾಹೇಬರು ಅಹಮದಾಬಾದಿನ ದರಿಯಾಪುರ ಭಾಗದಲ್ಲಿ ಗುಜರಾತಿಯಲ್ಲಿ ಬಾಷಣ ಮಾಡಿದ್ದರು ಎಂದು. ಗುಜರಾತ್ ಮತ್ತು ಮಹಾರಾಷ್ಟ್ರ ಒಂದೇ ಪ್ರಾಂತ್ಯಕ್ಕೆ ಒಳಪಟ್ಟಿದ್ದ ಕಾರಣಕ್ಕಾಗಿಯೂ ದಲಿತ್ ಪ್ಯಾಂಥರ್ಸ್‌ನ ಕೆಲವು ಸಂಸ್ಥಾಪಕರ ಪ್ರಭಾವವೂ ಇಲ್ಲಿ ಇತ್ತು. ಅಲ್ಲದೆ ಊನಾ ಚಳವಳಿ ನಡೆದದ್ದು ನಿಮಗೆ ಗೊತ್ತಿರಬಹುದು. ನಾನು ಸಕ್ರಿಯವಾಗಿ ರಾಜಕಾರಣದಲ್ಲಿ ಬೆಳೆದದ್ದು ಅಲ್ಲಿಂದಲೇ. ಇಲ್ಲಿ ದಲಿತ ಭೂಚಳವಳಿ ಕೂಡ ದೊಡ್ಡದಾಗಿತ್ತು. ದಲಿತ ದೌರ್ಜನ್ಯಗಳು ಕೂಡ ಹೆಚ್ಚಿದ್ದು ಇಲ್ಲಿ ಮೊದಲಿನಿಂದಲೂ ದಲಿತ ಚಳವಳಿ ಸಕ್ರಿಯವಾಗಿದೆ. ಈಗಂತೂ ಬಿಜೆಪಿ-ಆರ್‌ಎಸ್‌ಎಸ್ ಮತ್ತು ಸೋ ಕಾಲ್ಡ್ ಮೇಲ್ಜಾತಿಗಳ ಕೂಟದಿಂದ ಈ ದೌರ್ಜನ್ಯಗಳು ಹೆಚ್ಚಾಗಿವೆ. ಅದರ ವಿರುದ್ಧವೂ ಹೋರಾಟ ನಡೆಯುತ್ತಿದೆ.

ಪ್ರ: ನಿಮಗೆ ಪ್ರಭಾವ ಬೀರಿದ ದಲಿತ ಹೋರಾಟಗಾರರನ್ನು ನೆನಪಿಸಿಕೊಳ್ಳಬಹುದಾ?

: ವಾಲ್ಜಿಬಾಯ್ ಪಟೇಲ್ ಎಂಬ ಒಬ್ಬ ಮುಖಂಡರಿದ್ದರು. ಅವರ ಹೆಸರಿನಲ್ಲಿ ಪಟೇಲ್ ಇರುವುದರಿಂದ ಗೊಂದಲ ಬೇಡ; ಅವರು ದಲಿತರು. ಗುಜರಾತಿನ ದಲಿತ್ ಪ್ಯಾಂಥರ್ಸ್‌ನ ಸಂಸ್ಥಾಪಕರಲ್ಲಿ ಅವರೂ ಒಬ್ಬರೂ. ಹಲವು ಭೂಹೋರಾಟ ಚಳವಳಿಗಳನ್ನು ಕಟ್ಟಿದವರು. ಸುಮಾರು 4500 ಭೂರಹಿತರಿಗೆ ಭೂಮಿ ಸಿಗುವಂತೆ ಮಾಡಿದವರು. ಹಲವು ದಲಿತ ದೌರ್ಜನ್ಯಗಳ ವಿರುದ್ಧ ಹೋರಾಡಿದವರು. ಅವರು ನನ್ನ ವಿರುದ್ಧ ಕ್ರಿಟಿಕಲ್ ಆಗಿದ್ದರೂ ಕೂಡ ಅವರ ಆರು ದಶಕಗಳ ಕೆಲಸ ನನಗೆಂದೂ ಸ್ಫೂರ್ತಿ ನೀಡಿದೆ. ಹೀಗೆ ಇನ್ನೂ ಹಲವರು ನನ್ನ ಹೋರಾಟಕ್ಕೆ ಸ್ಫೂರ್ತಿಯಾಗಿದ್ದಾರೆ.

ಸಂದರ್ಶಕ: ಗುರುಪ್ರಸಾದ್ ಡಿ ಎನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...