Homeಅಂಕಣಗಳು'ಅಂಬೇಡ್ಕರ್ ಆ ಕಾಲದಲ್ಲಿ ಸಂವಿಧಾನ ಬರ್ದಿದ್ಕೋ, ನಮ್ಮಪ್ಪಾಮ್ಮ ಸ್ಕೂಲಿಗೆ ಕಳ್ಸಿದ್ಕೊ, ಇಷ್ಟೆಲ್ಲಾ ಜಗತ್ತು ತಿಳ್ಕೋಣಕ್ಕಾಯ್ತು'

‘ಅಂಬೇಡ್ಕರ್ ಆ ಕಾಲದಲ್ಲಿ ಸಂವಿಧಾನ ಬರ್ದಿದ್ಕೋ, ನಮ್ಮಪ್ಪಾಮ್ಮ ಸ್ಕೂಲಿಗೆ ಕಳ್ಸಿದ್ಕೊ, ಇಷ್ಟೆಲ್ಲಾ ಜಗತ್ತು ತಿಳ್ಕೋಣಕ್ಕಾಯ್ತು’

- Advertisement -
- Advertisement -

ರಂಗನಟ ಮತ್ತು ರಂಗ ನಿರ್ದೇಶಕ ಚಂದ್ರಶೇಖರ ಕೆ 2010ರಿಂದ ನೀನಾಸಮ್ ತಿರುಗಾಟ, ಜನಮನದಾಟ, ಆಟಮಾಟ ತಂಡಗಳೊಂದಿಗೆ ಕೆಲಸ ಮಾಡಿ ಹತ್ತಾರು ನಾಟಕಗಳಲ್ಲಿ ನಟಿಸಿದ್ದಾರೆ. ಕೇರಳದ ಥಿಯೇಟರ್ ರೂಟ್ಸ್ & ವಿಂಗ್ಸ್ ಸದಸ್ಯರಾಗಿ ದೇಶವಿದೇಶಗಳಲ್ಲಿ ಸಾಕಷ್ಟು ನಾಟಕ ಪ್ರದರ್ಶನಗಳನ್ನು ನೀಡಿರುವುದಲ್ಲದೆ ಸಿನಿಮಾ ಮತ್ತು ಕಿರುತೆರೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಜಂಗಮ ಕಲೆಕ್ಟಿವ್ ತಂಡದ ಭಾಗವಾಗಿ ಮಕ್ಕಳ ರಂಗಶಿಕ್ಷಣದಲ್ಲಿ ಪ್ರಸ್ತುತ ತೊಡಗಿಸಿಕೊಂಡಿರುವ ಚಂದ್ರು ಅವರನ್ನು ಮತ್ತೊಬ್ಬ ರಂಗ ನಿರ್ದೇಶಕ ಲಕ್ಷ್ಮಣ್ ಕೆಪಿ ಸಂದರ್ಶಿಸಿದ್ದಾರೆ.

ಲಕ್ಷ್ಮಣ್: ನಿಮ್ಮ ಊರು, ಓದಿದ್ದು ಬೆಳ್ದಿದ್ದೆಲ್ಲ ಎಲ್ಲಿ?

ಚಂದ್ರಶೇಖರ ಕೆ: ನಮ್ಮ ಊರು ಕೋಡಿಹಳ್ಳಿ, ಚನ್ನರಾಯಪಟ್ಟಣ ತಾಲೂಕು, ಹಾಸನ ಜಿಲ್ಲೆ. ನಮ್ಮೂರು ಚನ್ನರಾಯಪಟ್ಟಣದಿಂದ ಬಾಳ ದೂರ. ವ್ಯವಹಾರಕ್ಕೆಲ್ಲ ತಿಪಟೂರೆ ಹತ್ತಿರ. ಓದಿದ್ದು ನಮ್ಮೂರಿನಲ್ಲೇ ಏಳನೇ ತರಗತಿವರೆಗೂ. ಹೈಸ್ಕೂಲು ಮತ್ತೆ ಪಿಯುಸಿ ಅಣತಿ ಅನ್ನೋ ಊರಿನಲ್ಲಿ. ಡಿಗ್ರಿ ಕಲ್ಪತರು ಕಾಲೇಜು ತಿಪಟೂರಿನಲ್ಲಿ. ಡಿಗ್ರಿನಲ್ಲಿ ಬಾಳಷ್ಟು ಸಬ್ಜೆಕ್ಟ್‌ಗಳು ಫೇಲ್ ಆಗಿದ್ದವು. ಆಮೇಲೆ ಏನ್ಮಾಡ್ಬೇಕು ಗೊತ್ತಾಗ್ಲಿಲ್ಲ… ಬೆಂಗಳೂರು ಗಾರ್ಮೆಂಟ್ಸ್ ಕಡೆಗೆ ಹೋಗಣ ಅಂತಿದ್ದೆ. ಆದ್ರೆ ನನ್ನ ಕಾಲೇಜ್‌ನಲ್ಲಿ ಎನ್.ಕೆ. ಹನುಮಂತಯ್ಯ ಅಂತ ಒಬ್ಬರು ಟೀಚರ್ ಇದ್ರು. ಅವ್ರು ಕವಿಗಳು ಅಂತ ನಂಗೆ ಗೊತ್ತಿರ್ಲಿಲ್ಲ. ನಾನು ಜನಪದ ಗೀತೆ ಕಾಂಪಿಟಿಷನ್‌ಗೆಲ್ಲ ಹೋಗ್ತಿದ್ದೆ. ಅದನ್ನ ನೋಡಿದ್ರು. ನನ್ನ ಫೋನ್ ನಂಬರ್ ಇಸ್ಕೊಂಡಿದ್ರು. ದಿನ ಸಂಜೆ ಫೋನ್ ಮಾಡೋರು. ನಾನು ಈವಯ್ಯ ಯಾಕಪ್ಪ ಫೋನ್ ಮಾಡ್ತಿದೆ ಅನ್ಕೋತಿದ್ದೆ. ಸರಿ ಬಂದು ಹೋಗು ಆಫೀಸಿಗೆ ಅನ್ನೋರು. ಏನ್ಮಾಡ್ಬೇಕು ಅನ್ಕೊಂಡಿದೀಯ ಮುಂದೆ ಅಂತ ಕೇಳೋರು. ನಾನು ನಂಗೆ ಜನಪದ ಅಂದ್ರೆ ಇಷ್ಟ, ಜನಪದ ಎಂ.ಎ. ಮಾಡ್ಬೇಕು ಅನ್ಕೊಂಡಿದೀನಿ, ಹಾಡುಗಾರ ಆಗ್ಬೇಕು ಅನ್ಕೊಂಡಿದೀನಿ, ಹಂಗೆಹಿಂಗೆ ಅಂತಿದ್ದೆ. ಡಿಗ್ರಿ ಕೊನೆ ದಿನ ಕಡೆ ಸರ್ತಿ ಮಾತಾಡ್ಸಿ ಹೋಗಣ ಅಂತ ಹನುಮಂತಯ್ಯ ಅವ್ರ ಹತ್ರ ಹೋಗಿದ್ದೆ. ಆಗ ಅವ್ರು, ನೀನಾಸಂ ಅಂತ ಸಂಸ್ಥೆ ಇದೆ ಕಣಯ್ಯ, ಅವ್ರು ತಿಪಟೂರಿನಲ್ಲಿ ಇಪ್ಪತ್ತು ದಿನದ ವರ್ಕ್‌ಶಾಪ್ ಮಾಡ್ತಿದಾರೆ, ಹೋಗು ಅಪ್ಲಿಕೇಶನ್ ಹಾಕು ಅಂತಂದ್ರು. ನಂಗೇನು ಇಂಟರೆಸ್ಟ್ ಇರ್ಲಿಲ್ಲ ಬಟ್ ಏನು ಕೆಲ್ಸಿರ್ಲಿಲ್ಲ… ಊರಲ್ಲಿ ಆಗ ಹುಣಸೆ ಮರ ಬಡಿಯೋ ಕೆಲಸ, ಇಲ್ಲ ಗಾರೆ ಕೆಲಸ ಇರೋದು… ಇರ್ಲಿ ತಗೊ ನೋಡಣ ಅಂತ ಹೋದೆ. ಅಪ್ಲಿಕೇಶನ್ ತೊಗೊಳಕ್ಕೆ ಅಂತ ಸತೀಶ್ ಅನ್ನೋವ್ರತ್ರ ಹೋದೆ. ಅವ್ರು ನೀನಾಸಂನವ್ರು ನಾಟಕ ಕಲಿಸಿಕೊಡ್ತಾರೆ, ಒಳ್ಳೆ ಭವಿಷ್ಯ ಇದೆ ಅಂತಂದ್ರು… ನಂಗೇನು ಅರ್ಥಾಗ್ಲಿಲ್ಲ.

ಆದರು ಕೊನೆಗೆ ಅಪ್ಲಿಕೇಶನ್ ಹಾಕ್ದೆ. ಶಿಬಿರ ಸ್ಟಾರ್ಟ್ ಆಯ್ತು. ಆ ಶಿಬಿರದಲ್ಲಿ ಒಂದೆರಡು ನಾಟ್ಕ ಮಾಡುದ್ವು. ನೀನಾಸಂನಲ್ಲಿ ಒಂದು ಷೋ ಇತ್ತು ಮತ್ತೆ ಕೊನೆಹಳ್ಳಿ ಅನ್ನೋಕಡೆ ಒಂದು ಷೋ ಇತ್ತು. ಅದಾದ್ಮೇಲೆ ನಾಟಕ ಅಂದ್ರೆ ಸ್ವಲ್ಪ ಇಂಟರೆಸ್ಟ್ ಬಂತು. ಮತ್ತೆ ಸತೀಶ್ ಸಿಕ್ಕಿ ಅವ್ರ ಲೈಬ್ರರಿಗೆ ಕರುದ್ರು. ಅವ್ರ್ ಜೊತೆ ಓಡಾಡ್ಕೊಂಡಿದ್ದೆ. ಒಂದಿನ ಅವ್ರ್ ಲೈಬ್ರರಿನಲ್ಲಿ ಒಂದು ಪುಸ್ತಕ ಸಿಕ್ತು. ಅದ್ರ ಮೇಲೆ ಎನ್.ಕೆ.ಹನುಮಂತಯ್ಯ ಅಂತ ಬರ್ದಿತ್ತು. ಅದಕ್ಕೆ ಯು.ಆರ್.ಅನಂತಮೂರ್ತಿ ಹಿನ್ನುಡಿನೋ ಮುನ್ನುಡಿನೋ ಬರ್ದಿದ್ರು. ನಾನು ಅಯ್ಯೋ ಈಯಪ್ಪ ಇಷ್ಟು ದೊಡ್ಡ ವ್ಯಕ್ತಿ ಅಂತ ಗೊತ್ತೇ ಇರ್ಲಿಲ್ವೆಲ್ಲಪ್ಪ, ದಿನಾ ಸಿಗ್ತಿದ್ರು ಅನ್ಕೊಂಡೆ. ಆದಮೇಲೆ ನೀನಾಸಂ ಒಂದು ವರ್ಷದ ಡಿಪ್ಲೋಮ ಕೋರ್ಸಿಗೆ ಅಪ್ಲಿಕೇಷನ್ ಹಾಕ್ದೆ, ಕೋರ್ಸ್ ಮುಗಿಸಿದೆ. ಅದಾದ್ಮೇಲೆ ಮೂರು ವರ್ಷ ನೀನಾಸಂ ರೆಪರ್ಟರಿನಲ್ಲೆ ತಿರುಗಾಟ ಮಾಡ್ದೆ. ನಾಕನೇ ವರ್ಷಕ್ಕೆ ನಮ್ಮಮ್ಮನಿಗೆ ಹುಷಾರಿಲ್ಲದಾಗೆ ಆಯ್ತು. ಬಾಯಲ್ಲಿ ಗುಳ್ಳೆ ಆಗಿತ್ತು, ಕ್ಯಾನ್ಸರ್ ಅಂದ್ರು. ಬೆಂಗಳೂರು ನಿಮಾನ್ಸಿಗೆ ಕರ್ಕೊಂಡು ಬಂದು ತೋರ್ಸಿ ಅದು ಹುಷಾರಾಗೋ ಹೊತ್ತಿಗೆ ಒಂದು ವರ್ಷ ಆಯ್ತು. ಆಮೇಲೆ ಮತ್ತೆ ಮೂರ್ನಾಕು ವರ್ಷ ನೀನಾಸಮ್ಮು, ಜನಮನದಾಟ ಮತ್ತೆ ಬೇರೆಬೇರೆ ಕಡೆ ನಾಟಕ ಮಾಡ್ಕೊಂಡು ಇದ್ದೆ.

ಪ್ರ: ನೀವು ಆದಿಮದಲ್ಲಿ ರಾಮಯ್ಯನೋರ ಜೊತೆನೂ ಕೆಲಸ ಮಾಡಿದೀರಿ. ಆ ಅನುಭವ ಹೇಗಿತ್ತು?

: ನಾಟ್ಕ ಅಂತಂದ್ರೆ ಪ್ರೊಫೆಷನಲ್ ಆಗಿ ಇರಬೇಕು, ನಾಟಕ ಅಂದ್ರೆ ಹಿಂಗಿರ್ಬೇಕು ಅಂತ ಯೋಚ್ನೆ ಮಾಡೋಕೆ ಶುರು ಮಾಡಿದ್ವಿ. ಹೊರಗಡೆ ನಾಟಕ ಮಾಡಿಸ್ಲಿಕ್ಕೆ ಹೋದಾಗ್ಲು ಅದೇ ಹಳೇದು, ಸ್ಟಾನಿಸ್ಲಾವಿಸ್ಕಿ, ಮತ್ತೆ ಆ ಥಿಯರಿ ಈ ಥಿಯರಿ ಅಂತ ಹಳೇದನ್ನೇ ತಿರುವಿ ಹಾಕಿ ಮಾಡ್ತಿದ್ವಿ. ಆಮೇಲೆ ನಾವೊಂದು ಐದು ಜನ – ಲಕ್ಷ್ಮಣ, ನಾನು, ಗಣೇಶ, ಡಿಂಗ್ರಿ ನರೇಶ, ಚಿದಂಬರ ಎಲ್ಲರು ಆದಿಮಕ್ಕೆ ಹೋಗಣ, ರಾಮಯ್ಯನವರೊಟ್ಟಿಗೆ ಕೆಲಸ ಮಾಡಣ, ಒಂದು ಥಿಯೇಟರ್ ಗ್ರೂಪ್ ಕಟ್ಟಣ ಅಂತ ಹೋದ್ವಿ. ಅಲ್ಲಿ ಪೂರ್ತಿ ಉಲ್ಟಾ ಆಗೋಯ್ತು ಕತೆ. ನಾವು ಥಿಯೇಟರು ಅಂದ್ರೆ ಹಂಗಿರಬೇಕು ಹಿಂಗಿರ್ಬೇಕು ಶಿಸ್ತಿರ್ಬೇಕು ಅಂತಂಕೊಂಡಿದ್ವಿ. ರಾಮಯ್ಯ ಹೇಳಿದ್ದು ಎಷ್ಟೊಂದು ಅರ್ಥವೇ ಆಗ್ತಿರ್ಲಿಲ್ಲ ನಮಗೆ. ಏನೇನೋ ಹೇಳೋರು. ದೊಡ್ಡ ದೊಡ್ಡದಾಗಿ ಕನಸುಗಳನ್ನ ಕಟ್ಟೋರು. ಆವಯ್ಯನ ಜೊತೆ ಒಂದು ನಾಟಕ ಮಾಡುದ್ವಿ. ಅದ್ರ ಹೆಸ್ರೇ ಇನ್ನು ಅರ್ಥ ಆಗಿಲ್ಲ ನಂಗೆ. ಆಮೇಲೆ ತಿರುಗಾಟ ಮಾಡುದ್ವಿ. ಹಳ್ಳಿಹಳ್ಳಿಗೆ ಹೋಗಿ ಸಂಜೆ ನಾಟಕ ಮಾಡೋದು, ಬಂದಿದ್ದ ದುಡ್ಡನ್ನ ಹಂಚ್ಕೊಳ್ಳೋದು, ಮತ್ತೆ ಬೆಳಗ್ಗೆ ಹಾಡು ಹೇಳ್ಕೊಂಡು ಮನೆಮನೆಗೆ ಹೋಗಿ ಅವರು ಕೊಟ್ಟ ದವಸ ಧಾನ್ಯ ತರಕಾರಿ ರಾಗಿ ಅಕ್ಕಿ ಎಲ್ಲ ಕಲೆಕ್ಟ್ ಮಾಡೋದು. ಅದನ್ನ ತುಂಬಿಕೊಳೋದು ಮತ್ತೆ ಮುಂದಿನ ಊರಿಗೆ ಹೋಗೋದು.

ಪ್ರ: ಇತ್ತೀಚೆಗೆ ನೀವು ಹೊರದೇಶದಲ್ಲೆಲ್ಲ ಕೆಲಸ ಮಾಡಿದ್ದೀರಿ. ಆ ಸಂಪರ್ಕ ಹೆಂಗಾಯ್ತು? ಎಲ್ಲೆಲ್ಲೆಲ್ಲ ಷೋ ಮಾಡುದ್ರಿ? ಯಾವದ್ರು ಬಗ್ಗೆ ಮಾಡುದ್ರಿ?

: 2009ರಲ್ಲಿ ನಾನು ನೀನಾಸಂನಲ್ಲಿದ್ದಾಗ ಕೇರಳದರೊಬ್ಬರು ಶಂಕರ್ ವೆಂಕಟೇಶ್ವರನ್ ಅಂತ ನಿರ್ದೇಶಕರು ಬಂದಿದ್ರು. ಅವ್ರು ಓಟೋಶಾಗೋ ಅನ್ನೋ ರೈಟರ್‌ನ ವಾಟರ್ ಸ್ಟೇಷನ್ ಅನ್ನೋ ನಾಟಕ ಮಾಡ್ಸೋಕೆ ಬಂದಿದ್ರು. ಅದು ನಾವು ಮಾಡ್ತಿದ್ದ ನಾಟಕಕ್ಕಿಂತ ವಿಭಿನ್ನವಾಗಿತ್ತು. ತುಂಬಾ ಸ್ಲೋ ಮೂವ್ಮೆಂಟು, ಮ್ಯೂಸಿಕ್ಕು, ಇಡೀ ನಾಟಕದಲ್ಲಿ ಮಾತಿಲ್ಲ. ನಾನು ಬೇರೆ ನಾಟಕಕ್ಕಿಂತ ಇದಕ್ಕೆ ತುಂಬಾ ಡೆಡಿಕೇಶನ್ ಹಾಕಿ ಕೆಲಸ ಮಾಡ್ದೆ. ಶಂಕರ್ ಅವರಿಂದ ತುಂಬಾ ಇನ್‌ಸ್ಪೈರ್ ಆದೆ ನಾನು. ಆ ಶೋನು ತುಂಬಾ ಚೆನ್ನಾಗಾಯ್ತು. 2013ರಲ್ಲಿ ಮಾರುತಿರುಗಾಟ ಅಂತ ಮಾಡ್ದಾಗ ಒಂದು ಹದಿನಾರು ಷೋ ಮಾಡುದ್ವಿ. ಆದ್ರೆ ಇಲ್ಲಿ ಕನ್ನಡ ರಂಗಭೂಮಿನಲ್ಲಿ ಅದನ್ನ ಒಪ್ಕೋಳೋಕೆ ತಯಾರಿರಲಿಲ್ಲ. ಆಮೇಲೆ 2016ರಲ್ಲಿ ಶಂಕರ್ ವೆಂಕಟೇಶ್ವರನ್ ಅವ್ರು ಫೋನ್ ಮಾಡುದ್ರು. ನಾವು ಮತ್ತೆ ವಾಟರ್ ಸ್ಟೇಷನ್ ಮಾಡ್ಬೇಕು ಅಂತಿದೀವಿ. ಜಪಾನಿನಲ್ಲಿ ಷೋ ಇರುತ್ತೆ ಬರ್ತೀಯ ಅಂದ್ರು. ನಾನು ಹ್ಞೂ ಸಾರ್ ಬರ್ತೀನಿ ಅಂತ ಕೇರಳಕ್ಕೆ ರೆಹರ್ಸಲ್‌ಗೆ ಹೋದೆ. ಬೇರೆ ಬೇರೆ ದೇಶ, ಬೇರೆ ಬೇರೆ ಭಾಷೆನಲ್ಲಿ ಕೆಲಸ ಮಾಡೋ ಥಿಯೇಟರ್‌ನೋರು ಒಂದು ಹದಿನಾರು ಜನ ಆ ನಾಟಕಕ್ಕೆ ಕೆಲಸ ಮಾಡ್ತಿದ್ರು. ಅದರಲ್ಲಿ ನಾನು ಒಬ್ಬ. ಬೇರೆಬೇರೆ ನಟರುಗಳು, ಅವರ ಕಲ್ಚರ್‌ಗಳ ಪರಿಚಯ ಆಯ್ತು ನಂಗೆ. ಒಂದೂವರೆ ತಿಂಗಳು ರೆಹರ್ಸಲ್ ಆದ್ಮೇಲೆ ಜಪಾನಿನಲ್ಲಿ ಷೋ ಇತ್ತು. ಆಗ ನಂಗೆ ಮೊದಲನೇ ಬಾರಿಗೆ ವಿದೇಶಕ್ಕೆ ಹೋಗೋ ಅವಕಾಶ ಸಿಕ್ತು.

ಪ್ರ: ಅದಾದ್ಮೇಲೆ ಬೇರೆ ಯಾವಯಾವ ಪ್ರೊಡಕ್ಷನ್ ಮಾಡುದ್ರಿ?

: ನಾನು ಜಪಾನಿಗೆ ಹೋಗೋಕೆ ಮುಂಚೆ ಒಂದು ಇನ್ಸಿಡೆಂಟ್ ನಡೀತು. ಸಂಜೆ ಕೊಯಂಬತ್ತೂರ್‌ನಿಂದ ಪ್ಲೇನ್ ಇತ್ತು. ಅಲ್ಲಿ ಜಪಾನು ಚೀನಾದಲ್ಲೆಲ್ಲ ಹುಳ-ಪಳ ತಿಂತಾರೆ ಅಂತ ನಾವು ಮಾತಾಡ್ಕೋತಿದ್ವು. ಸಂಜೆ ಮಳೆ ಬರೋಹಾಗಿತ್ತು. ಮಳೆ ಹುಳಗಳು ಹಾರಾಡ್ತಿದ್ದವು. ಹೆಂಗಿದ್ರು ಜಪಾನಿನಲ್ಲಿ ಹುಳ ತಿನ್ನದೇ ಅಲ್ಲ್ವಾ ಅಂತ ನಾನು ಮಳೆ ಹುಳಗಳನ್ನ ಹಿಡ್ಕೊಂಡ್ ಹಿಡ್ಕೊಂಡ್ ತಿಂತಿದ್ದೆ. ಎಲ್ಲರು ಒಳಗೆ ಹೋದ್ರು, ನನ್ನ ಬಿಟ್ಟು. ನನ್ನನ್ನ ಚೆಕ್ ಮಾಡೋಕೆ ಶುರು ಮಾಡುದ್ರು. ಬ್ಯಾಗು, ಶೂ ಎಲ್ಲ. ನಮ್ಮ ಡೈರೆಕ್ಟ್ರು ಬಂದು ಯಾಕೆ ಬಿಚ್ಚುಸ್ತಿದೀರಾ ಅಂದ್ರು. ಇಲ್ಲ ಇವ್ನು ಹೊರಗಡೆ ಮಳೆ ಹುಳ ಅದು ಇದು ತಿಂತಿದ್ದ ಅದ್ಕೆ ಸುಮ್ನೆ ಚೆಕ್ ಮಾಡುದ್ವಿ ಅಂದ್ರು. ನಮ್ಮ ಡೈರೆಕ್ಟ್ರು ಇಲ್ಲಇಲ್ಲ ಅವ್ನು ಇರದೇ ಹಂಗೆ ಅಂದ್ರು.

ಅದಾದ್ಮೇಲೆ ಜಪಾನಿನಲ್ಲಿ ಷೋ ಮುಗಸ್ಕೊಂಡ್ ಬಂದಾದ್ಮೇಲೆ, ಕೇರಳದಲ್ಲಿ ಬಿನಾಲೆ ಫೆಸ್ಟಿವಲ್ ನಡಿಯುತ್ತೆ ಮೂರು ತಿಂಗಳು. ಆ ಫೆಸ್ಟಿವಲ್ಲಿಗೆ ಒಂದು ಒನ್ ಮ್ಯಾನ್ ಷೋ ರೆಡಿ ಮಾಡ್ಬೇಕು ಬರ್ತೀಯ ಚಂದ್ರು ಅಂದ್ರು. ಸಮಸ್ಯೆ ಅಂದ್ರೆ ನಂಗೆ ಶಂಕರ್ ಭಾಷೆ ಬರಲ್ಲ ಅವ್ರಿಗೆ ನನ್ನ ಭಾಷೆ ಬರಲ್ಲ. ಹೆಂಗೆ ಇವ್ರ ಜೊತೆ ಒನ್ ಮ್ಯಾನ್ ಶೋ ಮಾಡದು ಅನ್ಕೋತಿದ್ದೆ ಆಗ ಇಲ್ಲ ಬಾ ಒಂದು ತಿಂಗಳು ರೆಹೆರ್ಸಲ್ ಮಾಡಿ ಷೋ ಮಾಡಬೋದು ಅಂದ್ರು. ಸರಿ ಹೋದೆ. ರೆಹರ್ಸಲ್ ಮಾಡುದ್ವಿ. ಆಗ ಅವ್ರು ಹೇಳುದ್ರು ನಾನು ನಿನ್ನ ಯಾಕೆ ಕರ್ದೆ ಅಂತಂದ್ರೆ ನಿಂಗೆ ಅವತ್ತು ಏರ್‌ಪೋರ್ಟ್‌ನಲ್ಲಿ ಇನ್ಸಲ್ಟ್ ಆಯ್ತು. ನೀನು ಕಪ್ಪುಗಿದೀಯ, ಸಾದಾ ಬಟ್ಟೆ ಹಾಕ್ಕೊಂಡಿದ್ದೆ, ಅದುಕ್ಕೆ ನಿನ್ನ ಚೆಕ್ ಮಾಡುದ್ರು. ಅದಲ್ದೆ ನಿನ್ನ ಜೊತೆ ಕೆಲಸ ಮಾಡಿದೀನಿ, ನಿನ್ನ ಡೆಡಿಕೇಶನ್ ಇಷ್ಟ ಆಯ್ತು, ಅದಕ್ಕೆ ನಿನ್ನ ಮತ್ತೆ ಕರ್ದೆ ಅಂದ್ರು. ಅದಾದ್ಮೇಲೆ ಅವ್ರ ಜೊತೆ ಉಡಲ್ ಊರು ಅಂತ ಬಿನಾಲೆಗೆ ನಾಟ್ಕ ಮಾಡ್ದೆ, ಕೇರಳದ ಬೇರೆಬೇರೆ ಯೂನಿವೆರ್ಸಿಟಿಗಳಲ್ಲಿ ಶೋ ಮಾಡುದ್ವಿ, ಕರ್ನಾಟಕದಲ್ಲಿ ಒಂದು ಷೋ ಮಾಡುದ್ವಿ. ಆಮೇಲೆ ಉಚ್ಚಲ್ಲೇ ಅಂತ ನಾಟಕ ಮಾಡ್ತಾಮಾಡ್ತಾ ಅಲ್ಲಿ ಬರೋ ಘಟನೆಗಳು ನನ್ನ ಜೀವನದಲ್ಲೂ ನಡ್ದಿರೋದನ್ನ ಅವ್ರಿಗೆ ಹೇಳ್ದೆ. ಕಳ್ಳತನದ ಇಶ್ಯೂಗಳು, ನಂಗೆ ಹೊಡ್ದಿರೋದು, ದಲಿತರ ಮೇಲಿನ ದೌರ್ಜನ್ಯ ಇದನ್ನೆಲ್ಲಾ ಹೇಳ್ತಿದ್ದೆ. ನನ್ನ ಜೊತೆ ಆಕ್ಟ್ ಮಾಡ್ತಿದ್ದೋನೂ ಅನಿರುಧ್ ನಾಯರ್ ಅಂತ. ಅವ್ನಿಗೆ ಈ ರೀತಿ ಅನುಭವಗಳಿರ್ಲಿಲ್ಲ, ಅವ್ನು ನಾಯರ್. ಅವ್ನು ಹೌದ ಹೀಗೆಲ್ಲ ಇದ್ಯಾ ಅಂತ ಕೇಳೋನು. ಸ್ಕೂಲಿನಲ್ಲಿ, ಊರ್ನಲ್ಲಿ ಹಿಂಗೆಲ್ಲ ಆಗುತ್ತಾ, ದೇವಸ್ಥಾನಕ್ಕೆ ಪ್ರವೇಶ ಇಲ್ವಾ, ಕುಡಿಯೋ ನೀರಿಗೆ ಹೀಗೆಲ್ಲ ಆಗುತ್ತಾ, ಈಗ್ಲೂ ನಿಮ್ಮನ್ನ ಒಳಗಡೆ ಬಿಡಲ್ವ ನಮ್ಮ ಸಿಟಿನಲ್ಲಿ ಇದನ್ನೆಲ್ಲಾ ನಾನು ನೋಡಿಲ್ಲ ನಮ್ಮ ಇಂಡಿಯಾದಲ್ಲಿ ಹಿಂಗೆಲ್ಲ ಇದ್ಯಾ ಅಂತ ಕೇಳೋಕೆ ಶುರು ಮಾಡ್ದ. ಶಂಕರ್ ಅದ್ನೆಲ್ಲ ಒಬ್ಸರ್ವ್ ಮಾಡ್ತಾಮಾಡ್ತಾ ಉಚ್ಚಲ್ಲೇ ನಾಟ್ಕ ಬಿಟ್ಟು ನಮ್ಮಿಬ್ಬರು ಡಿಸ್ಕಶನ್ ಅನ್ನ ಒಂದು ನಾಟ್ಕ ಮಾಡೋಕೆ ಶುರು ಮಾಡುದ್ರು. ಅದನ್ನೇ ಕ್ರಿಯೇಟಿವ್ ಆಗಿ ಕಟ್ಟಿ ಸ್ವಿಟ್ಜರ್ಲ್ಯಾಂಡ್‌ನ ಒಂದು ಫೆಸ್ಟಿವಲ್‌ಗೆ ಕ್ರಿಮಿನಲ್ ಟ್ರೈಬ್ಸ್ ಆಕ್ಟ್ ಅಂತ ಆ ನಾಟಕ ಮಾಡುದ್ವಿ. ತುಂಬಾ ಒಳ್ಳೆ ರೆಸ್ಪಾನ್ಸ್ ಸಿಕ್ತು ಅಲ್ಲಿ ಜನರಿಂದ. ತುಂಬಾ ಡಿಸ್ಕಶನ್ ಆಯ್ತು. ಇದುವರೆಗೂ ಇಪ್ಪತ್ತೊಂದು ಷೋ ಆಗಿದೆ ಅದು. ಕೊರೊನಾ ಆದ್ಮೇಲೆ ಜರ್ಮನಿನಲ್ಲಿ ಮಾಡುದ್ವಿ, ಲೆಬೆನಾನ್ ಅಲ್ಲಿ ಮಾಡುದ್ವಿ, ಕೇರಳದಲ್ಲಿ, ಜಪಾನ್‌ನಲ್ಲಿ, ಬಾಂಬೆನಲ್ಲಿ, ಗೋವಾದಲ್ಲಿ ಎಲ್ಲ ಶೋ ಮಾಡಿದೀವಿ. ಆದ್ಮೇಲೆ ಇಂಡಿಯನ್ ರೋಡ್ ಟ್ರಿಕ್ ಅಂತ ಒಂದು ನಾಟಕ ಮಾಡುದ್ವಿ. ಈ ರೀತಿ ಬೇರೆಬೇರೆ ದೇಶಗಳ, ನಂತರ, ನಿರ್ದೇಶಕರ ಪರಿಚಯ ಆಯ್ತು. ಯಾವ ದೇಶಕ್ಕೆ ಹೋದ್ರು ಈಗ ಫ್ರೆಂಡ್ಸ್ ಇದಾರೆ.

ಪ್ರ: ತಿಪಟೂರಿನಿಂದ ಶುರುವಾಗಿ ಬೇರೆಬೇರೆ ದೇಶದ ರಂಗಭೂಮಿ ನೋಡುದ್ರಿ. ಇಲ್ಲಿ ರಂಗಭೂಮಿನು ನೋಡ್ತಿದೀರಿ. ಇವೆರಡರ ಮಧ್ಯೆ ಸಾಮ್ಯತೆಗಳೇನು, ಮಿತಿಗಳೇನು?

: ಟೆಕ್ನಿಕಲ್ ಆಗಿ ನಾವು ತುಂಬಾ ಹಿಂದಿದೀವಿ. ಇಲ್ಲಿ ನಾಟಕ ಮಾಡ್ತಾ ನಟನೇನೂ ಮಾಡು, ಸೆಟ್ಟು ಹಾಕು, ಲೈಟಿಂಗು ಮಾಡು ಅಂತ ಆಗುತ್ತೆ. ಆದ್ರೆ ಅಲ್ಲಿ ನಟ ನಟನೆ ಮಾತ್ರ ಮಾಡು, ಟೆಕ್ನಿಷಿಯನ್ನು ಆ ಕೆಲಸ ಮಾತ್ರ ಮಾಡು ಅಂತ ಇರುತ್ತೆ. ಆಮೇಲೆ ನಾವು ಇವತ್ತು ಡಿಸೈಡ್ ಮಾಡಿ ನಾಳೆಯಿಂದ ರೆಹರ್ಸಲ್ ಶುರು ಮಾಡ್ತೀವಿ. ಷೋ ಯಾವತ್ತೂ ಅಂತ ಗೊತ್ತಿರಲ್ಲ, ಆದ್ರೆ ಅಲ್ಲಿ ಅವ್ರು ಮೂರು ವರ್ಷದ್ ಮುಂಚೆನೇ ತೀರ್ಮಾನ ಮಾಡಿರ್ತಾರೆ. ನಮ್ಮ ಇಂಡಿಯಾದ ಸಿನಿಮಾ ಇಂಡಸ್ಟ್ರಿ ಇದ್ದಂಗೆ ಅಲ್ಲಿ ನಾಟಕದ ಇಂಡಸ್ಟ್ರಿಗಳು ಅಷ್ಟು ದೊಡ್ಡದಾಗಿ ಬೆಳ್ದಿದೆ. ಅಷ್ಟು ಮರ್ಯಾದೆ ಇದೆ. ನಮಗೆ ಇಲ್ಲಿ ಥೀಯೇಟರ್‌ನೋರಿಗೆ ವ್ಯಾಲ್ಯೂ ಕಮ್ಮಿ. ಥಿಯೇಟರ್‌ನೋರಾ! ಅಂತಾರೆ.

ಪ್ರ: ಕನ್ನಡ ರಂಗಭೂಮಿಯಲ್ಲಿ ಯಾವ ರೀತಿ ಬದಲಾವಣೆಗಳಾಗಬೇಕು?

: ಕನ್ನಡ ರಂಗಭೂಮಿನಲ್ಲಿ ಮೊದ್ಲು ನಿರ್ದೇಶಕರು ಫ್ರೆಂಡ್ಸ್ ಥರ ವರ್ತಿಸಿರೋದು ಕಲಿಬೇಕು. ನಿರ್ದೇಶಕ ಅಂದ್ರೆ ವೇದಾಂತಿ, ಎಲ್ಲ ತಿಳ್ಕೊಂಡ್ಬಿಟ್ಟಿದಾನೆ, ನಿರ್ದೇಶಕರ ಮುಂದೆ ನಟರು ಕಾಲು ಹಾಕಿ ಕೂತ್ಕೊಳಂಗಿಲ್ಲ, ಅವ್ರು ಏನಾರು ತಪ್ಪು ಹೇಳುದ್ರು ಅದನ್ನ ತಪ್ಪು ಅನ್ನಂಗಿಲ್ಲ ಸರಿ ಅಂತ ಒಪ್ಕೋಬೇಕು ಆ ಥರ ಇದೆ. ಬಟ್ ಹೊರಗಡೆ ರಂಗಭೂಮಿಲಿ ನಿರ್ದೇಶಕರು ಯಾರು ಆ ಥರ ಡಿಕ್ಟೇಟರ್‌ಗಳಾಗಿರಲ್ಲ. ನಾರ್ಮಲ್ಲಾಗಿರ್ತಾರೆ. ನಾಟಕದ ಟೈಮ್‌ಅಲ್ಲಿ ನಾಟಕ ಮಾಡುಸ್ತಾರೆ, ಹೊರಗಡೆ ಫ್ರೆಂಡ್ಸಾಗಿರ್ತಾರೆ. ಹೊರಗಡೆ ನಾವು, ಇಲ್ಲ ನೀವು ತಪ್ಪು ಅಂದ್ರೆ ಹೌದ ಅಂತ ಕೇಳ್ಸ್ಕೋತಾರೆ. ಆದ್ರೆ ಇಲ್ಲಿ ಆ ವ್ಯವಧಾನ ಇಲ್ಲ. ನಟನೆನಲ್ಲೂ ಅಷ್ಟೇ, ಅವ್ರು ಹೇಳಿದ್ದೆ ಅಂತಿಮ ತೀರ್ಪು. ನಾವು ಹಿಂಗೆ ಮಾಡಲ್ಲ ಹಿಂಗೇ ಮಾಡ್ತೀವಿ ಅಂದ್ರೆ ಇಲ್ಲಿ ಯಾರು ಒಪ್ಪಲ್ಲ.

ಪ್ರ: ಕ್ರಿಮಿನಲ್ ಟ್ರೈಬ್ಸ್ ಆಕ್ಟ್ ನಾಟಕದ ಮೂಲಕ ಅಂಬೇಡ್ಕರ್ ವಿಚಾರಗಳನ್ನ ಬೇರೆ ದೇಶಗಳಲ್ಲಿ ತಲುಪಿಸಿದೀರಿ. ಅಲ್ಲಿಯ ಜನರ ರೆಸ್ಪಾನ್ಸ್ ಹೇಗಿತ್ತು ಮತ್ತು ಅದನ್ನ ಇಲ್ಲಿ ಇಂಡಿಯಾದಲ್ಲಿ ಮಾಡುದ್ರೆ ಹೇಗಿರ್ಬೋದು?

: ನನಿಗನ್ನಿಸುತ್ತೆ ನಾವೇ ಇನ್ನ ಅಂಬೇಡ್ಕರ್ ಓದ್ಕೊಂಡಿಲ್ಲ ಅಂತ. ನಮ್‌ಗಿಂತ ಚನ್ನಾಗಿ ಹೊರಗಡೆ ಓದ್ಕೊಂಡಿದಾರೆ. ನಮಿಗೆ ಕರ್ನಾಟಕದಲ್ಲಿ ಇನ್ನು ಮೆಟೀರಿಯಲ್ಸ್ ಸಿಕ್ಕಿಲ್ಲ. ಅಂಬೇಡ್ಕರ್‌ರ ಎಷ್ಟೊಂದು ಪುಸ್ತಕಗಳು ಕನ್ನಡದಲ್ಲಿ ಸಿಗೋದೇ ಕಷ್ಟ. ಹುಡಿಕ್ಕೊಂಡ್ ಕೂತ್ಕೋಬೇಕು. ಬಟ್ ಹೊರಗಡೆ ಎಲ್ಲ ಅಂಬೇಡ್ಕರ್ ಬಗ್ಗೆ ಚೆನ್ನಾಗಿ ತಿಳ್ಕೊಂಡಿದಾರೆ. ಒಂದು ಸರ್ತಿ ಕುತ್ಕೊಂಡು ಡಿಸ್ಕಸ್ ಮಾಡ್ತಾ ಒಬ್ಬ ಆಫ್ರಿಕನ್ ಆಕ್ಟರು ಅಂಬೇಡ್ಕರ್ ವಿಚಾರಗಳ ಬಗ್ಗೆ ತುಂಬಾ ಚನ್ನಾಗಿ ಮಾತಾಡಿದ. ನಂಗಿಂತ ಜಾಸ್ತಿ ತಿಳ್ಕೊಂಡಿದ್ದ. ಇಲ್ಲಿ ಏನ್ ಮಾಡ್ತಿದಾರೆ ಅಂದ್ರೆ ಈ ಟೈಮೆಲ್ಲಿ ಅಂಬೇಡ್ಕರ್ ಮತ್ತೆ ದಲಿತ್ ಇಷ್ಯುಸ್ ಎಲ್ಲ ಮಾರ್ಕೆಟಿಂಗ್ ಮಾಡ್ಕಳಕ್ಕೆ ನೋಡ್ತಿದಾರೆ. ಹೊರಗಡೆ ಹಂಗಿಲ್ಲ ಅಂಬೇಡ್ಕರ್ ಓದ್ಕೊಂಡಿದಾರೆ, ತಿಳ್ಕೊಂಡಿದಾರೆ. ಆಮೇಲೆ ನಾವು ಹೊರಗಡೆ ಹೋಗಿ ಷೋ ಮಾಡಿದಾಗ ಹೌದ, ಅಂಬೇಡ್ಕರ್ ಈ ಥರ ಎಲ್ಲ ಅನುಭವಿಸಿದ್ರ, ಅವರ ಪರಿಸ್ಥಿತಿನೇ ಈಗ್ಲೂ ಇಲ್ಲಿದ್ಯಾ, ಜಾತಿ ಈಗಲೂ ಇದ್ಯಾ, ಇಷ್ಟೊಂದು ರೆಸ್ಟ್ರಿಕ್ಷನ್ ಇದ್ಯಾ ಅಂತ ಕೇಳ್ತಾರೆ, ಇನ್ನು ಇದ್ಯಾ ಇನ್ನು ಇದ್ಯಾ ಇನ್ನು ಇದ್ಯಾ ಅಂತಾನೆ ಕೇಳ್ತಾರೆ.

ಪ್ರ: ನಿಮ್ಮೂರಿನಿಂದ ಹೊರಟು ಬೇರೆಬೇರೆ ದೇಶಾನೆಲ್ಲ ತಲ್ಪಿದ ಮೇಲೆ, ಈ ಜರ್ನಿನ ವಾಪಾಸ್ ತಿರುಗಿ ನೋಡುದ್ರೆ ಏನನ್ಸುತ್ತೆ?

: ಇದೊಂಥರಾ ಕನಸಾದಂಗೆ ಆಗ್ಬಿಟ್ಟಿದೆ. ನಾನು ಇಷ್ಟೆಲ್ಲಾ ಹೋಗ್ತೀನಾ, ಓಡಾಡ್ತೀನ ಅನ್ಕೊಂಡೆ ಇರ್ಲಿಲ್ಲ. ಅದ್ಯಾವ್ದೋ ಒಂದು ಆಪರ್ಚುನಿಟಿ ಸಿಕ್ತು. ಅದಾದ್ಮೇಲೆ ಎಂಗೊ ಏನೋ ಇಷ್ಟು ದೇಶ ಸುತ್ತಿದೆ. ನಂಗೊಳ್ಳೇ ಎಕ್ಸ್ಪೀರಿಯೆನ್ಸ್. ಬರಿ ಕೇಳ್ತಿದ್ವಿ ಆ ದೇಶ ಈ ದೇಶ ಅಂತ. ನಾವು ಓದ್ತಾ ಇರ್ವಾಗೆಲ್ಲಾ ನಮ್ಮನೇನಲ್ಲಿ ಬಡತನಗಳು. ಈಗ ಇವೆಲ್ಲ ನೋಡ್ತಿದ್ರೆ ಓದಿದ್ದೆ ದೊಡ್ಡದು. ನಮ್ಗೆ ಓದಕ್ಕೆ ಆಗ್ತಿರ್ಲಿಲ್ವೇನೋ. ಅದೆಂಗೆಂಗೋ… ಅಂಬೇಡ್ಕರ್ ಆ ಕಾಲದಲ್ಲಿ ಸಂವಿಧಾನ ಬರ್ದಿದ್ಕೋ, ನಮ್ಮಪ್ಪಾಮ್ಮ ಸ್ಕೂಲಿಗೆ ಕಳ್ಸಿದ್ಕೊ ಅಥವಾ ನಾವೇನೇ ಹೆಂಗೋ ಬೆಳ್ದಿದ್ಕೋ… ಎಜುಕೇಶನ್ ಆಗಿದ್ಕೆ ನಾವಿವತ್ತು ಇಷ್ಟೆಲ್ಲಾ ಜಗತ್ತು ತಿಳ್ಕೋಣಕ್ಕಾಯ್ತು, ಬಿಟ್ಟರೆ ನಾನು ಎಜುಕೇಷನ್ ಮಾಡಿರ್ಲಿಲ್ಲ ಅಂದ್ರೆ ನಂಗೆ ಏನು ಸಿಗ್ತಿರ್ಲಿಲ್ಲ. ನಾನು ಡಿಗ್ರಿ, ಅದಾದ್ಮೇಲೆ ಎಂ.ಎ. ಮಾಡ್ದೆ. ಎಜುಕೇಷನ್ ಇಂದಾನೆ ನಂಗೊಂಸೊಲ್ಪ ಏನೋ ಬೇರೆ ಥರ ಸಿಗ್ತು.

ಪ್ರ: ಈಗ ವಾಪಾಸ್ ನಿಮ್ಮೂರಿಗೆ ಹೋಗಿ ಅಲ್ಲಿ ಕೆಲಸ ಮಾಡ್ಬೇಕು ಅನ್ಸುತ್ತಾ?

: ನಂಗೇನಂಗ್ ಅನ್ನುಸ್ತಿಲ್ಲ. ಎಲ್ಲ ಹಂಗಂತಾರೆ, ನೀವು ಕಲ್ತಮೇಲೆ ನಿಮ್ಮೂರಿಗೆ ಹೋಗಿ ಮಾಡ್ಬೇಕು, ನಿಮ್ಮೂರಲ್ಲೇನೋ ತಂಡ ಕಟ್ಟಬೇಕು, ಏನೇನೆಲ್ಲ ಅಂತಾರೆ. ಬಟ್ ನಾವಲ್ಲಿ ಮತ್ತೆ ಹೋಗ್ಬೇಕು ಮತ್ತೆ ಇದೇ ಕತೆ ಅನುಭೋಸಬೇಕಾಗತ್ತೆ, ಅದೇ ದೌರ್ಜನ್ಯಗಳು, ಅದೇ ಅಸ್ಪೃಶ್ಯತೆ ಅನುಭೋಸಬೇಕಾಗತ್ತೆ. ನಂಗಿಲ್ಲಿ ಬೆಂಗಳೂರಲ್ಲಿ ಯಾರು ಕೇಳಲ್ಲ. ನಾನು ಫ್ರೀ ಬರ್ಡ್. ನಂಗೇನು ಕೆಲಸ ಬೇಕೋ ಅದನ್ನ ಮಾಡ್ತಿದೀನಿ. ನಾನೇನು ಕೆಲಸ ಮಾಡ್ಬೇಕೊ ಇಲ್ಲೇ ಮಾಡ್ತೀನಿ. ಬೇರೆ ಊರುಗಳಿಗೆ ಹೋಗಿ ಮಾಡ್ತೀನಿ.

ಪ್ರ: ಸಿನಿಮಾ ಅನುಭವ ಹೆಂಗಿತ್ತು? ಅದು ರಂಗಭೂಮಿಗಿಂತ ಹೇಗೆ ಬೇರೆ?

: ನಾನು ಗುರ್ಬಿ ಅಂತ ಒಂದು ಸಿನಿಮಾ ಮಾಡ್ದೆ, ಜೈ ಭಜರಂಗ ಬಲಿ ಅಂತ ಒಂದು ಮಾಡ್ದೆ, ಸೀರಿಯಲ್ಲುಗಳಲ್ಲೂ ಮಾಡ್ದೆ. ಅಲ್ಲಿ ದಿನಕ್ಕೆ ಏಳುನೂರು ರೂಪಾಯಿ ಕೊಡೋರು. ಒಂದು ಶಾರ್ಟ್ ಫಿಲಂ ಮಾಡ್ದೆ ಮಹಾಸಂಪರ್ಕ ಅಂತ. ಅದು ಬಹಳಷ್ಟು ಫೆಸ್ಟಿವಲ್‌ಗಳಿಗೆ ಹೋಗಿತ್ತು. ಸೈಮಾ ಬೆಸ್ಟ್ ಆಕ್ಟರ್ ಅವಾರ್ಡ್ಗೆ ನಾಮಿನೇಟ್ ಆಗಿದ್ದೆ. ಆದ್ರೆ ಅದ್ಯಾಕೋ ಕೊಡ್ಲಿಲ್ಲ. ಬಟ್ ಎರಡು ಬೆಸ್ಟ್ ಆಕ್ಟರ್ ಇಂಟರ್ನ್ಯಾಷನಲ್ ಅವಾರ್ಡ್ ಆಗಿದೆ. ಒಟ್ಟು ಹನ್ನೆರಡು ಅವಾರ್ಡ್ ಆಗಿದೆ. ಇತ್ತೀಚಿಗೆ ಗವಿಸಿದ್ಧ ಅಂತ ಒಂದು ಸಿನಿಮಾ ಮಾಡ್ದೆ. ಅದು ಬೆಂಗ್ಳೂರ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್‌ಗೆ ಸೆಲೆಕ್ಟ್ ಆಗಿತ್ತು.

ಮೊದ್ಲೆಲ್ಲಾ ತುಂಬಾ ಆಡಿಷನ್‌ಗೆ ಹೋಗ್ತಿದ್ದೆ ಯಾವ್ದು ಸಿಗ್ತಿರ್ಲಿಲ್ಲ. ಸುಮ್ನೆ ಹೊಗಳಿ ಕಳಿಸೋರು. ಈಗ ಆಡಿಷನ್‌ಗೆಲ್ಲ ಹೋಗಲ್ಲ. ಗೊತ್ತಿದ್ದೋರು ಯಾರಾದ್ರೂ ಕರ್ದ್ರೆ ಹೋಗ್ತೀನಿ. ದುಡ್ಡುಕೊಟ್ಟರಷ್ಟೇ ಮಾಡೋದು ಅಂತ. ಬದುಕೇ ನಟನೆ ಅಲ್ವಾ ಅದ್ಕೆ.

ಪ್ರ: ಜಂಗಮ ತಂಡ ಶುರು ಮಾಡಿ ಅದಕ್ಕೆ ಕೆಲಸ ಮಾಡ್ತಿದೀರಿ ಬೆಂಗಳೂರಿನಲ್ಲಿ. ಅದರ ಕೆಲಸದ ಬಗ್ಗೆ ಹೇಳಿ.

: 2019ರಲ್ಲಿ ಜಂಗಮ ಕಲೆಕ್ಟಿವ್ ಅಂತ ನಾನು, ಅನಿಲ್ ರೇವೂರು, ಲಕ್ಷ್ಮಣ್ ಕೆ.ಪಿ, ಸಂಧ್ಯಾ, ಶ್ರುತಿ ಮತ್ತೆ ಬಹಳಷ್ಟು ಜನ ಸೇರ್ಕೊಂಡು ನಾವೇ ಒಂದು ತಂಡ ಕಟ್ಟಣ ಅಂದ್‌ಕೊಂಡ್ವಿ. ಒಂದು ಆಲ್ಟರ್ನೇಟಿವ್ ಸ್ಪೇಸು. ಎಲ್ಲ ಥರ ಕೆಲಸ ಮಾಡಣ, ಬುಕ್ ಪಬ್ಲಿಕೇಶನು, ನಾಟ್ಕ ಮಾಡದು… ಮತ್ತೆ ಇಂಟೆನ್ಷನ್ ಏನಿದ್ರುನು, ಸರ್ಕಾರೀ ಶಾಲೆ ಮಕ್ಕಳ ಜೊತೆ ಕೆಲಸ ಶುರು ಮಾಡಣ ಅಂತ ಮಾಡುದ್ವಿ. ಅದಕ್ಕೆ ಮಕ್ಕಳಿಗೆ ವರ್ಕ್‌ಶಾಪ್ ಮಾಡ್ತಾ ಅವರಿಗೆ ಏನು ಪ್ರೆಷರ್ ಹಾಕ್ದಲೇ ಅವ್ರು ಏನ್ ಕಲಿತರೋ ಅದು ಕಲಿಲಿ ಅಂತ. ಕರ್ನಾಟಕದಲ್ಲಿ ಸುಮಾರು ಕಡೆ ಶುರು ಮಾಡುದ್ವಿ. ಬಿಜಾಪುರ, ಕೋಲಾರ, ಮಾಲೂರು, ಉಡುಪಿ, ಮಂಗಳೂರು, ತುಮಕೂರು, ಬೆಂಗಳೂರು, ಸುಮಾರು ಕಡೆ ಸರ್ಕಾರೀ ಶಾಲೆಗಳಲ್ಲಿ ಮಕ್ಕಳ ಶಿಬಿರಗಳನ್ನ ಮಾಡುದ್ವಿ. ನಮಿಗ್ಯಾರೋ ಸಹಾಯ ಮಾಡ್ತಿದ್ರು. ನಾವೇ ಪ್ರತಿ ತಿಂಗ್ಳು ಐನೂರು ರೂಪಾಯಿ ದುಡ್ಡು ಹಾಕ್ತಿದ್ವಿ. ಆ ದುಡ್ಡುನ್ನ ನಿರ್ದೇಶಕರಿಗೆ ಕೊಡ್ತಿದ್ವಿ. ಈ ಕೊರೊನಾ ಬಂದ್ಮೇಲೆ ಎಲ್ರಿಗೂ ಸ್ವಲ್ಪ ಕಷ್ಟ ಆಯಿತು. ಸ್ವಲ್ಪ ದಿಸಾ ನಿಂತ್ಕೊಂತು. ಈಗ ಮತ್ತೆ ಶುರು ಮಾಡುದ್ವಿ. ಈ ವರ್ಷ ಗಿಲ್ಡ್ ಆಫ್ ದಿ ಗೋಟ್ ಅಂತ ದೆಹಲಿನೋರು ಸಹಾಯ ಮಾಡಿದ್ರು. ಆ ದುಡ್ಡಿನಲ್ಲಿ ಒಂದು ನಾಟ್ಕ ಮಾಡುದ್ವಿ. ಚನ್ನರಾಯಪಟ್ಟಣದ ಹತ್ರ ದಿಂಡುಗೂರು ಅಂತ, ಅಲ್ಲಿ ದೇವಸ್ಥಾನ ಪ್ರವೇಶ ಮಾಡಿದ್ ದಲಿತರಿಗೆ ಬಹಿಷ್ಕಾರ ಹಾಕಿದ್ರು, ಮತ್ತೆ ಅವರೆಲ್ಲ ಸೋತಂಗೆ ಆಗಿದ್ರು. ಮತ್ತೆ ಅಲ್ಲಿ ತಂಡದಲ್ಲಿ ಒಬ್ಬರು ಸಂತೋಷ್ ಅಂತ ನೀನಾಸಂ ಡಿಪ್ಲೋಮಾ ಮಾಡಿದ್ರು. ಅವ್ರು ನಾವೆಲ್ಲ ಸೇಕೊಂಡು ಅಲ್ಲಿ ಜನರಿಗೆ ಒಂದು ನಾಟ್ಕ ಮಾಡಣ ಅಂತ ಅಲ್ಲಿ ಅಂಬೇಡ್ಕರ್ ಭವನದಲ್ಲಿ ಒಂದು ತಿಂಗ್ಳು ಅವರದೇ ಅನುಭವದ ಕಥೆಗಳನ್ನ ಇಟ್ಕೊಂಡು ಒಂದು ಪ್ರಯತ್ನ ಮಾಡಿದ್ವಿ. ಅದೀಗ ಬೇರೆ ಕಡೆ ಷೋ ಆಗ್ತಿದೆ. ಜಂಗಮ ತಂಡದಿಂದ. ಹಿಂಗೇ ನಾಟಕದ ಕೆಲಸ ಮಾಡ್ತಿದೀವಿ.

ಕೆ. ಪಿ. ಲಕ್ಷ್ಮಣ್

ಸಂದರ್ಶನ: ಕೆ. ಪಿ. ಲಕ್ಷ್ಮಣ್
ಯುವ ರಂಗ ನಿರ್ದೇಶಕ. ’ವೇಯ್ಟಿಂಗ್ ಫಾರ್ ದಿ ಗಾಡೋ’, ’ಕೋರ್ಟ್ ಮಾರ್ಷಲ್’, ’ವಿ ದ ಪೀಪಲ್ ಆಫ್ ಇಂಡಿಯಾ’ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ನಿಷ್ಠುರತೆಯೊಳಗಿಂದ ಹೊಮ್ಮುವ ಲೋಕದ ಅರಿವು – ವೋಲೆ ಸೋಯಿಂಕಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...