Homeಅಂಕಣಗಳುವಿಜ್ಞಾನದಲ್ಲಿ ಹೂಡಿಕೆ ಮತ್ತು ಸಾಮಾಜಿಕ ನ್ಯಾಯ

ವಿಜ್ಞಾನದಲ್ಲಿ ಹೂಡಿಕೆ ಮತ್ತು ಸಾಮಾಜಿಕ ನ್ಯಾಯ

- Advertisement -
- Advertisement -

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಬಾಹ್ಯಾಕಾಶ ಸಂಶೋಧನೆಯಂತಹ ಸಾಹಸಗಳಿಗೆ ಕೈಹಾಕಿದಾಗಲೆಲ್ಲ ಅವುಗಳ ಅಗತ್ಯತೆಯ ಬಗ್ಗೆ, ಯೋಜನೆಯ ಆರ್ಥಿಕ ಹೂಡಿಕೆಯ ಬಗ್ಗೆ ಪ್ರಶ್ನೆಗಳು ಏಳುತ್ತವೆ. ಈಗ ಭಾರತ ಯಶಸ್ವಿಯಾಗಿ ವಿಕ್ರಂ ಲ್ಯಾಂಡರ್‌ಅನ್ನು ಚಂದ್ರನ ಮೇಲೆ ಇಳಿಸಿದ ಮೇಲೆ, ಆದಿತ್ಯ ಮಿಷನ್ ಕೈಗೊಂಡ ಮೇಲೆ ಕೂಡ ಇಂತಹ ಪ್ರಶ್ನೆ ಎದ್ದಿದೆ.

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಹೆಚ್ಚು ಹೂಡಿಕೆ ಮಾಡುವಷ್ಟು ಪ್ರಬಲವಾಗಿಲ್ಲ; ಅವುಗಳ ಮೊದಲ ಆದ್ಯತೆ ಬಡತನ ನಿರ್ಮೂಲನೆ ಮತ್ತು ಸಾಮಾಜಿಕ ನ್ಯಾಯ ಆಗಿರಬೇಕು; ಸರ್ವರಿಗೂ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಸಾಮಾಜಿಕ ನ್ಯಾಯದಂತಹ ಮಾನವ ಘನತೆಯನ್ನು ರಕ್ಷಿಸುವ ಕೆಲಸ ಪೂರ್ಣವಾಗದ ಹೊರತು ವಿಜ್ಞಾನ ತಂತ್ರಜ್ಞಾನಗಳಲ್ಲಿ ಮಾಡುವ ಹೂಡಿಕೆಗೆ ಅರ್ಥವಿಲ್ಲ ಎಂಬುದಾಗಿ ಈ ವಾದ ಸರಣಿ ಇರುತ್ತದೆ. ಈ ವಾದದ ಮೂಲ ಸಾಮಾನ್ಯವಾಗಿ, ಇಸ್ರೋವನ್ನು ಒಳಗೊಂಡಂತೆ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದೆ ಎನ್ನುವ ಊಹೆಯಲ್ಲಿದೆ. ಆದರೆ ವಾಸ್ತವ ಹಾಗಿಲ್ಲ.

ವಿಜ್ಞಾನ ತಂತ್ರಜ್ಞಾನಕ್ಕೆ 2023-24ರ ಸಾಲಿನ ಭಾರತದ ಹೂಡಿಕೆ ಎಷ್ಟು?

ಅಂಕಿಅಂಶಗಳನ್ನು ನೋಡಿದಾಗ, ಭಾರತ 2023-24 ವಾರ್ಷಿಕ ಆಯವ್ಯಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಮೀಸಲಿಟ್ಟ ಮೊತ್ತ ರೂ.16,361 ಕೋಟಿ; ಇದನ್ನು ಮೂರು ಇಲಾಖೆಗಳಲ್ಲಿ ಭಾಗಿಸಲಾಗುತ್ತದೆ. ವಿಜ್ಞಾನ ತಂತ್ರಜ್ಞಾನ (ರೂ.7931.05 ಕೋಟಿ), ಜೈವಿಕ ತಂತ್ರಜ್ಞಾನ (ರೂ.2683.86 ಕೋಟಿ), ವೈಜ್ಞಾನಿಕ ಮತ್ತು ಕೈಗಾರಿಕಾ ಅನ್ವೇಷಣೆ (ರೂ.5746.51. ಕೋಟಿ). ಬಾಹ್ಯಾಕಾಶ ಸಂಶೋಧನೆ ಪ್ರತ್ಯೇಕ ಇಲಾಖೆಯಾಗಿದ್ದು ಇದಕ್ಕಾಗಿ ರೂ.12543.91 ಕೋಟಿ ಮೀಸಲಿಡಲಾಗಿದೆ. ಈ ಅಂಕಿಗಳು ದೊಡ್ಡದಾಗಿ ಕಂಡರೂ ಆಯವ್ಯಯದ ಒಟ್ಟು ಮೊತ್ತದಲ್ಲಿ (ರೂ. 45,03,397 ಕೋಟಿ) ಇದು ಶೇಕಡಾ ಒಂದಕ್ಕಿಂತ ಕಡಿಮೆ. ಇನ್ನು ದೇಶಗಳು ವಿಜ್ಞಾನ ತಂತ್ರಜ್ಞಾನದಲ್ಲಿ ಮಾಡುವ ಹೂಡಿಕೆಯನ್ನು ಅಳೆಯಲು ಅವುಗಳ ಸಂಶೋಧನೆ ಮತ್ತು ಅಭಿವೃದ್ಧಿಯ ವೆಚ್ಚ ಜಿಡಿಪಿಯ ಎಷ್ಟು ಭಾಗ ಎಂದು ಅಳೆಯುವ ಮಾಪನವೊಂದನ್ನು ಬಳಸಲಾಗುತ್ತದೆ. ಈ ಮಾಪನದಲ್ಲಿ ಇಸ್ರೇಲ್ 5.44%ನೊಂದಿಗೆ ಅಗ್ರಸ್ಥಾನದಲ್ಲಿ ಇದ್ದರೆ, ಕೊರಿಯಾ 4.81% ಅಮೆರಿಕ 3.45%, ಚೀನಾ 2.4%ರೊಂದಿಗೆ ನಂತರದ ಸ್ಥಾನದಲ್ಲಿವೆ. ಈ ಮಾಪನದ ಪ್ರಕಾರ ಭಾರತ (0.66%) ಮೊದಲ 50 ರಾಷ್ಟ್ರಗಳ ಪಟ್ಟಿಯಿಂದಲೂ ಹೊರಗಿದೆ.

ಭಾರತದ ವಾರ್ಷಿಕ ಆಯವ್ಯಯದಲ್ಲಿ ಇಸ್ರೋದ ಪಾಲೆಷ್ಟು?

ಭಾರತದ ವಾರ್ಷಿಕ ಆಯವ್ಯಯದಲ್ಲಿ ಇಸ್ರೋದ ಪಾಲು ಈವರೆಗೂ 0.3-0.4% ದಾಟಿಲ್ಲ. ಚಂದ್ರಯಾನ ಮೂರರ ವೆಚ್ಚ ಕೆಜಿಎಫ್-2 ಒಳಗೊಂಡಂತೆ ಬಹಳಷ್ಟು ಬಾಲಿವುಡ್ ಚಿತ್ರಗಳ ಆದಾಯಕ್ಕಿಂತ ಕಡಿಮೆ. ಪ್ರಥಮ ಪ್ರಯತ್ನದಲ್ಲೇ ಮಂಗಳನ ಕಕ್ಷೆ ತಲುಪಿದ ಭಾರತದ ಮಂಗಳಯಾನ ಪ್ರಾಜೆಕ್ಟ್‌ನ ವೆಚ್ಚ, ಮಂಗಳನಲ್ಲಿ ಮನುಷ್ಯ ಜೀವಿಸುವ ಕಾಲ್ಪನಿಕ ಕಥೆಯನ್ನು ಸಿನಿಮಾ ಪರದೆಯ ಮೇಲೆ ತರಲು ಹಾಲಿವುಡ್‌ನ The Martian ಚಿತ್ರತಂಡ ಮಾಡಿದ ವೆಚ್ಚಕ್ಕಿಂತ ಕಡಿಮೆ. ಇನ್ನು ಇಸ್ರೋದ ಖರ್ಚುವೆಚ್ಚವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದೊಂದಿಗೆ ಹೋಲಿಸಿದರೆ ದೊಡ್ಡ ಅಂತರವೇ ಕಾಣುತ್ತದೆ. ಒಂದು ಅಂದಾಜಿನ ಪ್ರಕಾರ ಇಸ್ರೋ ಸ್ಥಾಪನೆಯಾದಾಗಿನಿಂದ ಈವರೆಗೆ (53 ವರ್ಷಗಳವರೆಗೆ) ಮಾಡಿದ ವೆಚ್ಚ ನಾಸಾದ ಒಂದು ವರ್ಷದ ಖರ್ಚಿಗೆ ಸಮ; ಹಾಗಿದ್ದರೆ ನಾಸಾದ ಬಜೆಟ್ ಹೆಚ್ಚೇ ಎಂದು ಕೇಳಿಕೊಂಡರೆ ಅಮೆರಿಕದ ವಾರ್ಷಿಕ ಬಜೆಟ್ಟಿನಲ್ಲಿ ನಾಸಾದ ಪಾಲು 0.4% ಅಷ್ಟೇ.

ವಿಜ್ಞಾನ ಮತ್ತು ತಂತ್ರಜ್ಞಾನದ ಹೂಡಿಕೆಯನ್ನು ಬೇರೆಡೆ ತಿರುಗಿಸಿದರೆ ಲಾಭವಿದೆಯೇ?

ವಾರ್ಷಿಕ ಆಯವ್ಯಯದಲ್ಲಿ 0.278% (2023-24 ವಾರ್ಷಿಕ ಆಯವ್ಯಯದಲ್ಲಿ ಇಸ್ರೋದ ಪಾಲು) ಪರ್ಸೆಂಟ್‌ಅನ್ನು ಬಾಹ್ಯಾಕಾಶ ಸಂಶೋಧನೆಗಾಗಿ ವಿನಿಯೋಗಿಸುವುದು ಹೆಚ್ಚೇ? ಸಾಮಾಜಿಕ ಅಸಮಾನತೆಯನ್ನು ತೊಲಗಿಸುವ ಉದ್ದೇಶವೊಂದಕ್ಕೆ ಈ ಹೂಡಿಕೆಯನ್ನು ಬಳಸಿ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾದರೆ, ಅದನ್ನು ಒಪ್ಪಬಹುದಾದರು, ಪ್ರಗತಿ ವಿರೋಧಿಯಾದ ಯುದ್ಧ ಸನ್ನದ್ಧತೆಯ ಕಾರಣಕ್ಕಾಗಿ ವಾರ್ಷಿಕ ಆಯವ್ಯಯದ 13% ಡಿಫೆನ್ಸ್‌ಗೆಂದು ವಿನಿಯೋಗಿಸುತ್ತಿರುವ, ಕೆಲವರ್ಗಗಳಿಗಷ್ಟೇ ನೆರವಾಗುವ ಯೋಜನೆಗಳಿಗಾಗಿ ವಿನಿಯೋಗಿಸುವ, ಭ್ರಷ್ಟಾಚಾರ ಮತ್ತು ಯೋಜನೆ ಕಾರ್ಯಗತಗೊಳಿಸುವಲ್ಲಿನ ದೊಡ್ಡ ಸೋರಿಕೆ, ಇವೆಲ್ಲವುಗಳ ಮೊತ್ತವನ್ನು ಗಮನಿಸುವಾಗ ಬಾಹ್ಯಾಕಾಶ ಸಂಶೋಧನೆಯ ಹೂಡಿಕೆಯನ್ನು ನಿಲ್ಲಿಸುವ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ವಿಜ್ಞಾನ ಮತ್ತು ತಂತ್ರಜ್ಞಾನದ ಪಲ್ಲಟಿತ ಅರ್ಥ ವ್ಯಾಖ್ಯಾನಗಳು

ಹೂಡಿಕೆ ಮಾಡಿ ತಕ್ಷಣದ ಉಪಲಬ್ಧಿ ಅಪೇಕ್ಷಿಸಬಹುದಾದ ಪ್ರತ್ಯೇಕ ಕಾರ್ಯಕ್ಷೇತ್ರವಾಗಿ ವಿಜ್ಞಾನವನ್ನು ನೋಡುತ್ತಿರುವುದು ಸಮಸ್ಯಾತ್ಮಕ ಕಲ್ಪನೆಯಾಗಿದೆ. ವಿಜ್ಞಾನವನ್ನು ತಂತ್ರಜ್ಞಾನದಿಂದ ಪ್ರತ್ಯೇಕಿಸಿ ನೋಡದೆ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂವಾದಿಯಾಗಿ ನೋಡುತ್ತಿರುವುದು ಸಮಸ್ಯೆಯನ್ನು ಉಲ್ಬಣಿಸಿದೆ. ತಂತ್ರಜ್ಞಾನದ ಉಪಲಬ್ಧಿಗಳಾದ ಮೊಬೈಲ್, ಕಾರು ಎಲೆಕ್ಟ್ರಿಸಿಟಿ ಮುಂತಾದವುಗಳನ್ನು ಮನುಷ್ಯನ ಜೀವನಮಟ್ಟವನ್ನು ಆರಾಮದಾಯಕವಾಗಿಸುವ ವಿಜ್ಞಾನದ ಉಪಲಬ್ಧಿಗಳೆಂದು ಕಾಣಲಾಗುತ್ತಿದೆ; ವಿಜ್ಞಾನ ಮತ್ತು ತಂತ್ರಜ್ಞಾನದ ಬಗೆಗಿನ ತಪ್ಪು ವ್ಯಾಖ್ಯಾನಗಳನ್ನು ಅದು ಸೂಚಿಸುತ್ತವೆ. ಇದೂ ಕೂಡ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲಿನ ಹೂಡಿಕೆಯನ್ನು ನಿರ್ಧರಿಸುತ್ತಿರುವುದು ಇನ್ನಷ್ಟು ಗೊಂದಲಕ್ಕೆ ಕಾರಣ. ಇಸ್ರೋದಂತಹ ತಂತ್ರಜ್ಞಾನದ ಸಂಸ್ಥೆಗಳನ್ನು ವಿಜ್ಞಾನದ ಸಂಸ್ಥೆಯಾಗಿ ನೋಡುತ್ತಿರುವುದು, ಅಲ್ಲಿನ ಹೂಡಿಕೆ ಮತ್ತು ಯಶಸ್ಸನ್ನು ವಿಜ್ಞಾನದ ಹೂಡಿಕೆಯಾಗಿ ನೋಡುತ್ತಿರುವುದು ಅಪಾರ್ಥಗಳನ್ನು ಕಲ್ಪಿಸಿದೆ. ಹಾಗಾದರೆ ವಿಜ್ಞಾನ ಮತ್ತು ತಂತ್ರಜ್ಞಾನದ ನಿಜವಾದ ಅರ್ಥಗಳೇನು? ಬಳಕೆ ಹೇಗಿರಬೇಕು? ಉಪಯೋಗಗಳೇನು? ಹೂಡಿಕೆಯ ರೂಪರೇಷಗಳು ಹೇಗಿರಬೇಕು?

ವಿಜ್ಞಾನದ ವ್ಯಾಖ್ಯೆ ಹೇಳುವಂತೆ ವಿಜ್ಞಾನ ಎಂದರೆ ವೀಕ್ಷಣೆ, ಪ್ರಯೋಗ, ಪುರಾವೆ, ಸಿದ್ಧಾಂತಗಳ ಪರೀಕ್ಷೆಯ ಮೂಲಕ ಭೌತಿಕ ಮತ್ತು ನೈಸರ್ಗಿಕ ಪ್ರಪಂಚದ ರಚನೆ ಮತ್ತು ನಡವಳಿಕೆಯ ವ್ಯವಸ್ಥಿತ ಅಧ್ಯಯನ. ಹೀಗೆಂದು ವ್ಯಾಖ್ಯಾನಿಸಿದಾಗ, ವಿಜ್ಞಾನ ಹೂಡಿಕೆ ಮಾಡಿ ಉಪಲಬ್ಧಿ ಪಡೆಯುವ ಜ್ಞಾನಶಿಸ್ತಲ್ಲ ಎಂಬುದು ಮನವರಿಕೆಯಾಗುತ್ತದೆ. ಅದೊಂದು ಅಧ್ಯಯನ ಶಿಸ್ತು. ಇದನ್ನು ಒಂದು ಪ್ರತ್ಯೇಕ ಕಾರ್ಯಕ್ಷೇತ್ರವನ್ನಾಗಿ ನೋಡದೆ, ಮಾನವ ಪ್ರಗತಿಗೆ ಬೇಕಾದ ಅಗತ್ಯ ಮತ್ತು ಅರ್ಥಪೂರ್ಣ ದಾರಿಯಾಗಿ ಪರಿಕಲ್ಪಿಸಿಕೊಳ್ಳಬೇಕಾಗುತ್ತದೆ. ವಿಜ್ಞಾನ ಎಂಬುದನ್ನು ಮಾನವನ ಆಲೋಚನಾ ವಿಧಾನವಾಗಿ ಅಂಗೀಕರಿಸಿಕೊಂಡು, ಪ್ರತಿಯೊಂದು ಕ್ಷೇತ್ರದಲ್ಲೂ ನಡೆಸುವ ಅಧ್ಯಯನವನ್ನು, ತೀರ್ಮಾನ ಕೈಗೊಳ್ಳಲು ತೊಡಗುವ ವಿಧಾನವನ್ನು, ಅದರ ಸಫಲತೆಯನ್ನು ಪರೀಕ್ಷಿಸಿಕೊಳ್ಳುವಲ್ಲಿ ಅನುಸರಿಸಬೇಕಾದ ಕಾರ್ಯವಿಧಾನವಾಗಿ ನೋಡಬೇಕಾಗುತ್ತದೆ. ಇದು ನಂಬಿಕೆಯ ಮೇಲೆ ನಡೆಯುವ ವ್ಯವಹಾರವಾಗಿರದೆ ಸಂದೇಹವಿದ್ದಾಗೆಲ್ಲ ಪರೀಕ್ಷಿಸಿ ಸ್ವಯಂ ಸಾಧಿಸಿಕೊಳ್ಳಬಲ್ಲ ವಸ್ತುನಿಷ್ಠವಾದ ವಿಧಾನವಾಗಿದೆ. ಹಾಗೆ ನೋಡಿದಾಗ, ಸ್ವಯಂ ಸಾಧಿಸಿಕೊಳ್ಳಲಾಗದ ಅನೇಕ ಮಾನವ ನಡವಳಿಕೆಗಳಿಂದ ಮತ್ತು ಕಾರ್ಯಕ್ಷೇತ್ರಗಳಿಂದ ಮುಕ್ತಿ ಸಾಧಿಸುವುದು, ವಿಜ್ಞಾನದಲ್ಲಿನ ಹೂಡಿಕೆಯಾಗಿ ತೋರುತ್ತದೆ. ಉದಾಹರಣೆಗೆ ಮೂಢನಂಬಿಕೆ, ಅಂಧಶ್ರದ್ಧೆ ಮತ್ತು ಧರ್ಮಾಂಧತೆಗಳಿಂದ ಮುಕ್ತಿ ಸಾಧಿಸುವುದು. ವಿಜ್ಞಾನದ ಈ ಅರ್ಥದಲ್ಲಿ, ಅವೈಜ್ಞಾನಿಕವಾದದ್ದು ಮಾನವ ವಿರೋಧಿಯಾಗಿರುವುದು ಯಾವುದೆಂದು ತೋರಿಸುತ್ತದೆ. ಹೀಗೆ ವಿಜ್ಞಾನಕ್ಕೆ ಇರುವ ವಿಶಾಲಾರ್ಥವನ್ನು ಸಂಕುಚಿತಗೊಳಿಸಿ ಅದನ್ನು ಕೇವಲ ಭೌತಿಕ ವಸ್ತುಗಳ ಅಧ್ಯಯನದ ವಿಧಾನ ಎಂದು ಪರಿಗಣಿಸುತ್ತಿರುವ ಸೀಮಿತ ಅರ್ಥದಲ್ಲಿ ನೋಡುತ್ತಿರುವುದರಿಂದಲೇ ವಿಜ್ಞಾನದ ಹೆಸರಲ್ಲಿ ಬಹಳಷ್ಟು ಅನರ್ಥಗಳನ್ನು ನಾವಿಂದು ಕಾಣುತ್ತಿದ್ದೇವೆ. ಇದನ್ನು ಮೀರುವುದು ಹೇಗೆ ಎಂಬುದು ಮುಂದೆ ನೋಡೋಣ. ಅದಕ್ಕೆ ಮುಂಚೆ ತಂತ್ರಜ್ಞಾನದ ಅರ್ಥವನ್ನು ವಿವರಿಸಿಕೊಳ್ಳೋಣ.

ಇದನ್ನೂ ಓದಿ: ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಯಶಸ್ವಿಯಾಗಿ ಉಡಾವಣೆ

ತಂತ್ರಜ್ಞಾನ ಎಂದರೆ ಪ್ರಾಯೋಗಿಕ ಉದ್ದೇಶಗಳಿಗಾಗಿ ವೈಜ್ಞಾನಿಕ ಜ್ಞಾನದ ಅನ್ವಯ. ಸರಳವಾಗಿ ಹೇಳಬೇಕೆಂದರೆ ತನ್ನ ಉದ್ದೇಶಗಳಿಗಾಗಿ ಮನುಷ್ಯ ಕಂಡುಕೊಂಡ ವಿಜ್ಞಾನದ ನಕಲು. ಹಕ್ಕಿ ಹಾರುವುದು ನೋಡಿ, ಅದೇ ನೈಸರ್ಗಿಕ ನಿಯಮಗಳ ಮೇಲೆ ಲೋಹದ ವಿಮಾನ ಹಾರಿಸಿದಂತೆ. ಮನುಷ್ಯ ಸಾರಿಗೆಯ ಸಮಯ ಕಡಿತಗೊಳಿಸಲು ಮತ್ತು ಹೆಚ್ಚು ಆರಾಮದಾಯಕ ಮಾಡಲು ವಿಮಾನ ತಯಾರಿಸಿಕೊಂಡಂತೆ. ತಂತ್ರಜ್ಞಾನದ ಪೂರ್ವ ಅಗತ್ಯ ವಿಜ್ಞಾನ- ವೈಜ್ಞಾನಿಕ ಅಧ್ಯಯನದಿಂದ ದೊರೆತ ಜ್ಞಾನ. ಹೀಗೆ ತಂತ್ರಜ್ಞಾನ ಮನುಷ್ಯನಿಗೆ ನೇರವಾಗಿ ದೊರೆಯುವ ಉಪಲಬ್ಧಿಯಾದ್ದರಿಂದ, ಅದನ್ನು ಪ್ರತ್ಯೇಕ ಕಾರ್ಯಕ್ಷೇತ್ರವಾಗಿಸಿ ಮಾನವ ಪ್ರಗತಿಗೆ ತೊಡಕಾಗಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಮತ್ತು ಪ್ರಗತಿಗೆ ಪೂರಕವಾಗಿರುವುದನ್ನು ಸಾಧಿಸಿಕೊಳ್ಳುವಲ್ಲಿ ದುಡಿಸಿಕೊಳ್ಳುವಲ್ಲಿ ಜಾಣ್ಮೆ ಏನೋ ಇದೆ. ಉದಾಹರಣೆಗೆ ಆರೋಗ್ಯ ಕ್ಷೇತ್ರ: ರೋಗ ಪತ್ತೆ, ಎಐ-ಚಾಲಿತ ಡಯಾಗ್ನೋಸ್ಟಿಕ್ಸ್, ಕೃಷಿ (ಎಲ್ಲರಿಗೂ ಆಹಾರ ಭದ್ರತೆಯನ್ನು ಒದಗಿಸಬಲ್ಲ ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಜೈವಿಕ ತಂತ್ರಜ್ಞಾನ), ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಹೀಗೆ.

ಆದರೆ ಈ ಸೀಮಿತ ದೃಷ್ಟಿಕೋನದಿಂದ, ವಿಜ್ಞಾನದಲ್ಲಿ ಹೆಚ್ಚು ಹೂಡಿಕೆ ಮಾಡದೆ, ಉಪಲಬ್ಧಿಯ ದೃಷ್ಟಿಯಿಂದ ಕೇವಲ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದರಲ್ಲಿ ದೊಡ್ಡ ತೊಡಕೊಂದು ಇದೆ. ಕೊಂಬು, ಆಮೆ ಚಿಪ್ಪು ಮತ್ತು ಗುಟ್ಟಾ-ಪರ್ಚಾ ರೇಷ್ಮೆ ಮುಂತಾದ ನೈಸರ್ಗಿಕ ಪ್ಲಾಸ್ಟಿಕ್‌ನ ಉಪಯೋಗಗಳನ್ನು ಕಂಡು, ಅವನ್ನು ನಕಲು ಮಾಡಿ, ಪಾಲಿಮರ್ ಅಧ್ಯಯನದಿಂದ ದೊರೆತ ಜ್ಞಾನವನ್ನು ಈ ಉಪಲಬ್ಧಿಗಾಗಷ್ಟೇ ಬಳಸಿಕೊಂಡಿದ್ದರಿಂದ ಇಂದು ಪ್ಲಾಸ್ಟಿಕ್‌ನ ಭೂತ ಭೂತಾಕಾರವಾಗಿ ಬೆಳೆದಿದೆ. ಸಮಗ್ರ ವೈಜ್ಞಾನಿಕ ಅಧ್ಯಯನವಾಗದೆ ಉಪಲಬ್ಧಿಯ ದೃಷ್ಟಿಯಿಂದ ತಂತ್ರಜ್ಞಾನದಲ್ಲಿ ಮಾಡಿದ ಹೂಡಿಕೆಯ ಪರಿಣಾಮ ಇದು.

ಕೇವಲ ಅರಿವಿನಾಸೆಗೆ ವಿಜ್ಞಾನ ಅಥವಾ ಜ್ಞಾನಕ್ಕಾಗಿ ಜ್ಞಾನ ಎಂಬ ವಾದ ಎಷ್ಟು ಸರಿ? ಪ್ರಗತಿಗಾಗಿ ಬೇಕಾಗುವ ತಂತ್ರಜ್ಞಾನದ ಪೂರ್ವಸಿದ್ಧತೆಗಾಗಿ ಕೈಗೊಳ್ಳುವ ವೈಜ್ಞಾನಿಕ ಅಧ್ಯಯನ ಮುಖ್ಯ; ಆ ಕಾರಣಕ್ಕಾಗಿ ವಿಜ್ಞಾನದಲ್ಲಿ ಹೂಡಿಕೆಯನ್ನು ಬಿಟ್ಟು ಜ್ಞಾನದ ಹಂಬಲದಿಂದ ಮಾಡುವ ಹೂಡಿಕೆಗೆ ಸಮರ್ಥನೆ ಏನು ಎಂಬ ಪ್ರಶ್ನೆ ಎದುರಾಗಬಹುದು. ಉದಾಹರಣೆಗೆ ವಿಶ್ವದ ಹುಟ್ಟು ಮತ್ತು ರಚನೆ, infinity, imaginary numbers ಒಳಗೊಂಡ Pure Mathematics ಅಧ್ಯಯನ, ಪಾರ್ಟಿಕಲ್ ಫಿಸಿಕ್ಸ್ ಹೀಗೆ. ಇಲ್ಲಿ ಜ್ಞಾನಕ್ಕಾಗಿ ಜ್ಞಾನ ಎಂಬ ಉತ್ತರ ತುಂಬಾ ಪೇಲವ ಮತ್ತು ಅಸಮರ್ಥವಾಗಿ ಕೇಳಿಸುತ್ತದೆ. ಈ ಪ್ರಶ್ನೆಯನ್ನು ಇನ್ನೊಂದು ಅಂಚಿನಿಂದ ನೋಡೋಣ. ವೈಜ್ಞಾನಿಕ ಅಧ್ಯಯನದಿಂದ ದೊರೆತ ಜ್ಞಾನ ಪ್ರಗತಿಗೆ ನೆರವಾಗದೆ ಅಪ್ರಯೋಜಕವಾಗಿ ಉಳಿಯುವ ಸಾಧ್ಯತೆ ಎಷ್ಟು ಎಂದು ಕೇಳಿಕೊಂಡರೆ ಕುತೂಹಲಕರ ಸಂಗತಿಗಳು ನಮ್ಮೆದುರಿಗೆ ಬಂದು ನಿಲ್ಲುತ್ತವೆ. ಮೇಲೆ ಹೇಳಿದ ಉದಾಹರಣೆಗಳು ಇಂದು ನೇರ ಉಪಲಬ್ಧಿಗೆ ನೆರವಾಗದಿರಬಹುದು. ಹಾಗೆಯೇ ಸೇಬು ಮರದಿಂದ ಆಗಸಕ್ಕೆ ಹಾರದೆ ನೆಲಕ್ಕೆ ಏಕೆ ಬೀಳುತ್ತದೆ ಎಂದು ನ್ಯೂಟನ್ 1665ರಲ್ಲಿ ಕೇಳಿದ ಪ್ರಶ್ನೆ ಯಾವ ಉಪಲಬ್ಧಿಯನ್ನು ಅಂದು ತೋರಿರಲಾರದು. ಇಂದು ಗುರುತ್ವದ ಬಗೆಗಿನ ಆ ವೈಜ್ಞಾನಿಕ ಅನ್ವೇಷಣೆಯ ನಕಲಿಯಾಗಿ ರಾಕೆಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದೇವೆ. ಟಿವಿ, ಮೊಬೈಲ್ ಸೇರಿದಂತೆ ನಮ್ಮೆಲ್ಲಾ ಸಂಪರ್ಕ ಮಾಧ್ಯಮಕ್ಕೆ ನೆರವಾಗುವ ಸಟಲೈಟ್ ಸಾಧ್ಯವಾಗಲು ತಕ್ಷಣದ ಉಪಲಬ್ಧಿಯ ಹಂಬಲವಿಲ್ಲದೆ ಕೇಳಿದ ಅಂದಿನ ಆ ಪ್ರಶ್ನೆಯೇ ಮುಖ್ಯ ಕಾರಣ. ಪ್ರಕೃತಿಯ ನಡುವೆ ಬದುಕುತ್ತಿರುವ ಮಾನವ ಪ್ರಕೃತಿಯ ಸೃಷ್ಟಿ ರಚನೆ, ಅದರೆ ಸಂಕೀರ್ಣ ಕಾರ್ಯವಿಧಾನದ ಕುರಿತು ನಡೆಸುವ ವೈಜ್ಞಾನಿಕ ಅಧ್ಯಯನದಿಂದ ಪಡೆಯುವ ಜ್ಞಾನ ಪ್ರಕೃತಿಯ ನಡುವೆ ಜೀವಿಸಲು ನೆರವಿಗೆ ಬಂದೇ ಬರುತ್ತದೆ.

ಬಾಹ್ಯಾಕಾಶ ಸಂಶೋಧನೆಗೆ ಮಾಡುವ ಹೂಡಿಕೆಗೆ ಸಮರ್ಥನೆ ಏನು?

ಅನ್ವೇಷಣೆ ಮಾನವ ಸಹಜವಾದ ಸ್ವಭಾವ. ಸಹಜವಾದ ಸ್ವಭಾವಕ್ಕೆ ಹೂಡಿಕೆಯ ಸಮರ್ಥನೆ ಸಲ್ಲ ಎಂಬ ಕೆಲವು ವಾದಗಳು ಇವೆ. ಸದ್ಯಕ್ಕೆ ಅದಿರಲಿ. ಬಾಹ್ಯಾಕಾಶ ಸಂಶೋಧನೆಯನ್ನು ಒಳಗೊಂಡು Large Hadron Collider, Laser Interferometer Gravitational-Wave Observatoryಯಂತಹ ತಂತ್ರಜ್ಞಾನದ ಹೂಡಿಕೆ ವಿಶ್ವದ ಹುಟ್ಟು ರಚನೆ ಕಾರ್ಯ ವಿಧಾನಗಳನ್ನು ಅರ್ಥಮಾಡಿಕೊಳ್ಳುವ ವೈಜ್ಞಾನಿಕ ಅಧ್ಯಯನಕ್ಕೆ ನೆರವಾಗಲು ಮಾಡುವ ಹೂಡಿಕೆಯಾಗಿದೆ. ಈ ವಿಜ್ಞಾನದ ಹೂಡಿಕೆಯ ಸಮರ್ಥನೆಗೆ ಕಾರಣಗಳನ್ನು ಆಗಲೇ ಮೇಲೆ ಹೇಳಲಾಗಿದೆ. ಇವುಗಳನ್ನು ಹೊರತುಪಡಿಸಿ ನೋಡುವುದಾದರೆ, ಈ ತೀವ್ರ ಸವಾಲಿನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಾಗ ಆಗುವ ಟೆಕ್ನಾಲಜಿಕಲ್ ಅಡ್ವಾನ್ಸ್‌ಮೆಂಟ್ ಇಂದ ಬೇರೆಬೇರೆ ಕ್ಷೇತ್ರಗಳಲ್ಲೂ ಸಮಸ್ಯೆ ಬಗೆಹರಿಯುವಿಕೆಯಲ್ಲಿ ನೆರವಾಗುತ್ತದೆ. ಉದಾಹರಣೆಗೆ, ಮಂಗಳನ ಅಂಗಳದಲ್ಲಿ ಸ್ವಯಂ ನಿರ್ಧಾರಗಳನ್ನು ತೆಗೆದುಕೊಂಡು ಕಾರ್ಯನಿರ್ವಹಿಸಲು ಅಭಿವೃದ್ಧಿಪಡಿಸಲಾದ ರೋವರ್ ಟೆಕ್ನಾಲಜಿಯ ಕಲಿಕೆಗಳು ಸ್ವಯಂಚಾಲಿತ ಕಾರು ಚಾಲನೆ ಅಭಿವೃದ್ಧಿಪಡಿಸುವಲ್ಲಿ ನೆರವಾಯಿತು. ಮಂಗಳನ ಕಕ್ಷೆ ಲೆಕ್ಕ ಹಾಕಿ ತಲುಪಲು Mars Orbiter Mission ಭಾಗವಾಗಿ ಭಾರತ ಅಭಿವೃದ್ಧಿ ಪಡಿಸಿದ ಎಐ ತಂತ್ರಜ್ಞಾನ ಸ್ತನ ಕ್ಯಾನ್ಸರ್ ಪತ್ತೆ ಹಚ್ಚಲು ಬಳಸಿಕೊಳ್ಳಬಹುದೆಂಬ ಅಧ್ಯಯನಗಳು ನಡೆಯುತ್ತವೆ. ಇವುಗಳನ್ನು ಹೂಡಿಕೆಗೆ ಸಮರ್ಥನೆಯಾಗಿ ಬಳಸಲಾಗಲಾರದಾದರೂ, ಇವು ತಂತ್ರಜ್ಞಾನದ ಅಭಿವೃದ್ಧಿಗೆ ಸವಾಲೆಸೆದಾಗ ದೊರೆಯುವ ಉಪ ಉತ್ಪನ್ನಗಳೆಂದು ಕರೆಯಬಹುದು.

ಸಣ್ಣ ರಾಷ್ಟ್ರಗಳು ಅಧಿಕ ವೆಚ್ಚ ಬೇಡುವ ವಿಜ್ಞಾನ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದೇಕೆ?

ಅಧಿಕ ವೆಚ್ಚ ಭರಿಸಬಲ್ಲ ಶ್ರೀಮಂತ ರಾಷ್ಟ್ರಗಳು ಹೂಡಿಕೆ ಮಾಡಿ ಕಂಡುಕೊಂಡ ವೈಜ್ಞಾನಿಕ ಜ್ಞಾನ-ತಂತ್ರಜ್ಞಾನವನ್ನು ತಮ್ಮೊಂದಿಗೆ ಹಂಚಿಕೊಳ್ಳದೆ, ತಮ್ಮ ಮೇಲೆ ಅಧಿಪತ್ಯ ಸಾಧಿಸಲು ಬಳಸಿಕೊಳ್ಳಬಹುದೆಂಬ ಆತಂಕದಿಂದ ಸಣ್ಣ ರಾಷ್ಟ್ರಗಳು ತಮ್ಮೆಲ್ಲ ಇತರ ಆದ್ಯತೆಗಳ ನಡುವೆಯೂ ವೈಜ್ಞಾನಿಕ ಸಂಶೋಧನೆಯಲ್ಲಿ ಹೂಡಿಕೆ ಮಾಡುತ್ತವೆ. ಮನುಷ್ಯ ಹೂಡಿಕೆಯ ಜವಾಬ್ದಾರಿ ಮತ್ತು ಬದ್ಧತೆ ತೋರಬೇಕಾದ್ದು ಇಲ್ಲಿಯೇ. ವೈಜ್ಞಾನಿಕ ಅಧ್ಯಯನದಿಂದ ಕಂಡುಕೊಂಡ ಜ್ಞಾನವನ್ನು ಮುಕ್ತವಾಗಿ ಹಂಚಿಕೊಂಡಷ್ಟು, ಈ ಅಧ್ಯಯನ ಶಿಸ್ತಿನಲ್ಲಿ ಹಲವು ದೇಶಗಳ ಸಂಸ್ಥೆಗಳು ಪರಸ್ಪರ ಸಹಕಾರದಿಂದ ತೊಡಗಿಕೊಂಡಷ್ಟು, ವೆಚ್ಚವನ್ನು ಕಡಿಮೆ ಮಾಡುವುದರ ಜೊತೆ ಪರಸ್ಪರ ಪ್ರತಿಸ್ಪರ್ಧಿಗಳಾಗದೆ ಪ್ರಗತಿಗೆ ಕಂಟಕವಾಗಿರುವ ಸಮಸ್ಯೆಗಳನ್ನು (ಉದಾಹರಣೆಗೆ ಸಾಂಕ್ರಾಮಿಕ ಪಿಡುಗು) ಮಣಿಸಲು ಸುಲಭವಾಗುತ್ತದೆ. ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್, ಪರಿಸರ ಸಂರಕ್ಷಣೆಗಾಗಿ (ಕ್ಲೈಮೇಟ್ ಚೇಂಜ್ ನಿಗ್ರಹಿಸುವ ಬಗ್ಗೆ) ಮಾಡಿಕೊಂಡ ಪ್ಯಾರಿಸ್ ಅಗ್ರಿಮೆಂಟ್ ಮುಂತಾದ ಉದಾಹರಣೆಗಳಲ್ಲಿ ಈ ಸಹಕಾರದ ಬದ್ಧತೆಯನ್ನು ಒಂದಷ್ಟು ಕಾಣಬಹುದಾದರೂ, ನಮ್ಮ ಮುಂದಿರುವ ಸವಾಲಿನ ದೃಷ್ಟಿಯಿಂದ ವಿವಿಧ ದೇಶಗಳು ಮತ್ತದರ ಸಂಸ್ಥೆಗಳು ಇನ್ನೂ ಬಹಳಷ್ಟು ಒಟ್ಟಿಗೆ ಹೆಜ್ಜೆ ಹಾಕಬೇಕಿದೆ.

ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಎರಡನ್ನು ಜೊತೆಜೊತೆಗೆ ಸರಿದೂಗಿಸಿಕೊಂಡು ಹೋಗಬೇಕೆ?

ವಿಜ್ಞಾನ, ವೈಜ್ಞಾನಿಕ ಅಧ್ಯಯನ ಮಾನವ ಪ್ರಗತಿಯ ದಾರಿ ಎಂದು ಒಪ್ಪಿಕೊಂಡ ಮೇಲೆ ವಿಜ್ಞಾನವನ್ನು ಸಾಮಾಜಿಕ ನ್ಯಾಯದಿಂದ ಕಳಚಿ ನೋಡುವ ಪ್ರಶ್ನೆಯೇ ಬರುವುದಿಲ್ಲ. ಬದಲಾಗಿ ಸಾಮಾಜಿಕ ನ್ಯಾಯಕ್ಕಾಗಿ, ಮಾನವ ಪ್ರಗತಿಗಾಗಿ ನಾವು ವಿಜ್ಞಾನದ-ವೈಜ್ಞಾನಿಕ ಮನೋಭಾವದ ವಿಶಾಲ ಅರ್ಥದ ದಾರಿ ಹಿಡಿಯಬೇಕಾಗುತ್ತದೆ. ಇನ್ನು ನೈಸರ್ಗಿಕ ವಿಧಾನದ ನಕಲಾದ ತಂತ್ರಜ್ಞಾನವನ್ನು ಮಾನವ ಪ್ರಗತಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಜವಾಬ್ದಾರಿಯಿಂದ ದುಡಿಸಿಕೊಳ್ಳಬೇಕಾಗುತ್ತದೆ.

ರವಿಕುಮಾರ್ ಸಿ ಎಸ್

ರವಿಕುಮಾರ್ ಸಿ ಎಸ್
ಯುಎಸ್‌ಎನ ಶಿಗಾಗೋ ರಾಜ್ಯದ ಇಲಿನಾಯ್ಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...