ನರೇಂದ್ರ ಮೋದಿಯವರ ಆಡಳಿತವನ್ನು ಎರಡು ವರ್ಷ national public broadcasterನ ಮುಖ್ಯಸ್ಥನಾಗಿ ಹತ್ತಿರದಿಂದ ನೋಡುವ ಅವಕಾಶ ನನಗೆ ಬಂದಿತ್ತು. ಇನ್ನು ಸಾಧ್ಯವೇ ಇಲ್ಲ ಅನ್ನಿಸಿ ರಾಜೀನಾಮೆ ಕೊಟ್ಟೆ. ಇಡೀ ಆಡಳಿತ ಯಂತ್ರವೇ ಶಿಥಿಲವಾಗಿ ಕುಸಿದು ಈಗ ಕಾಣುತ್ತಿರುವಂಥಾ ವಿಪತ್ತಿಗೆ ಆಹ್ವಾನ ನೀಡುವ ಪರಿಯನ್ನು ನಾನು ಹತ್ತಿರದಿಂದ ನೋಡಿದ್ದೇನೆ.
ಪರಿಕಲ್ಪನೆಯ ಮಟ್ಟದಲ್ಲಿ ವ್ಯಕ್ತಿಗತ ನಿರ್ವಹಣೆಯ ಮೊಹರುಳ್ಳ ಅಮೆರಿಕ ಅಧ್ಯಕ್ಷೀಯ ಮಾದರಿಯನ್ನು ಬ್ರಿಟಿಶ್ ಮಾದರಿ ಇರುವ ನಮ್ಮಲ್ಲಿ ಹೇರಲಾಯಿತು. ಅಗಾಧ ವೈವಿಧ್ಯತೆಯುಳ್ಳ ಈ ದೇಶವನ್ನು ಫೆಡರಲ್ ಸಮತೋಲನದ ಮೂಲಕವಷ್ಟೇ ನಿರ್ವಹಿಸಬಹುದು ಎಂಬುದನ್ನು ಅರಿಯಲು ಬಹಳ ಐಕ್ಯೂ ಬೇಡ. ಅದು ಬಿಟ್ಟು ಏಕವ್ಯಕ್ತಿ ಶೈಲಿಯನ್ನು ಹೇರಿದರೆ ಅಧಿಕಾರ-ಜವಾಬ್ದಾರಿಯ ಉತ್ತರದಾಯಿತ್ವದ ಮಾದರಿ ಕುಸಿದು ಬೀಳುತ್ತದೆ.
ಪೇಲವ ಸರಕಾರ ಕಂಡು ಬೇಜಾರಾಗಿದ್ದ ಜನರು ನಿರ್ಧಾರ ತೆಗೆದುಕೊಳ್ಳುವ ನಾಯಕತ್ವ ಕಂಡು ಉತ್ಸಾಹ ಪಟ್ಟಿದ್ದಾದ ಬಳಿಕ ಇನ್ನೊಂದು ವಾಸ್ತವ ತಲೆ ಎತ್ತಿತು. ಮೋದಿ ತಾವು ಸಂಶಯಿಸುವ ಎಲ್ಲಾ ಅಧಿಕಾರವನ್ನೂ ಕೇಂದ್ರೀಕರಿಸುವ ಮತ್ತು ಬೇಷರತ್ತು ವಿಧೇಯತೆಯನ್ನು ಬೇಡುವ ಪ್ರವೃತ್ತಿಯನ್ನು ತ್ಯಜಿಸಿಯಾರು ಎಂಬ ಆಶಾ ಭಾವನೆಯಲ್ಲಿ ಹಿರಿಯ ಅಧಿಕಾರಿಗಳಿದ್ದರು. ಅಂತರ್ ಸಚಿವಾಲಯಗಳ ಕ್ಯಾತೆ ಜಗಳಕ್ಕೆ ಅವರು ಅಂತ್ಯ ಹಾಡಿದರೂ ಮೂಲ ಪ್ರವೃತ್ತಿಗಳೇನೂ ಬದಲಾಗಲಿಲ್ಲ. ಯಾವುದೇ ಮಾಹಿತಿಯನ್ನು ಸಾದರಪಡಿಸಲು ಅವರು ಕಾರ್ಯದರ್ಶಿಗಳನ್ನು ಕರೆಸುವ ತೀವ್ರತೆ ತೀರಾ ವಿಚಿತ್ರವಾಗಿತ್ತು. ಯಾವ ಪ್ರಧಾನಿಯೂ ಈ ರೀತಿಯ ಮೈಕ್ರೋ ಮ್ಯಾನೇಜ್ ಮೆಂಟ್ ಮಾಡಿರಲಿಲ್ಲ.
ತನ್ನ ಸಚಿವರನ್ನು ನಿರ್ಲಕ್ಷಿಸಿ ಎಲ್ಲವನ್ನೂ ನಿಯಂತ್ರಿಸುವ ಅವರ ಚಟ ಜಾಹೀರಾಗಿತ್ತು. ಸದಾ ಕೆಕ್ಕರಗಣ್ಣಿಂದ ತನ್ನ ಕಾರ್ಯದರ್ಶಿಗಳನ್ನು ನೋಡುವ ಪರಿಪಾಠದಿಂದಾಗಿ ಅಧಿಕಾರಿಗಳು ಭೀತರಾಗತೊಡಗಿದರು. ಇದರೊಂದಿಗೇ ತನ್ನ ಪ್ರಿಯ ಅಧಿಕಾರಿಗಳ ಮೂಲಕ ಆಡಳಿತ ನಿರ್ವಹಿಸತೊಡಗಿದರು. ಇದು ಇತರ ದಕ್ಷ ಪ್ರತಿಭಾವಂತ ಅಧಿಕಾರಿಗಳ ಮನೋಬಲವನ್ನೇ ಕುಗ್ಗಿಸಿತು. ಇಂಥಾ ಅಧಿಕಾರಿಗಳು ತೆವಳಿ ಹತ್ತಿರವಾಗುವ ಕೆಲಸ ಮಾಡಲಿಲ್ಲ. ಮಿಂಚಿನ ವರ್ಗಾವಣೆಗಳು ನಿತ್ಯದ ಸಂಗತಿಗಳಾದವು. ಪ್ರಧಾನ ಮಂತ್ರಿಗಳ ಕಾರ್ಯಾಲಯವು ಎಲ್ಲಾ ನೇಮಕಾತಿಗಳ ನಿಯಂತ್ರಣ ಹೊಂದಿತ್ತು. ಆರೆಸ್ಸೆಸ್ಸಿನಿಂದ ಮಾಹಿತಿ ಪಡೆದರೂ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಮುಖ್ಯಸ್ಥರೇ ಹೆಚ್ಚು ಪ್ರಭಾವಿಯಾದರು. ಎಷ್ಟೋ ಸಂಸ್ಥೆಗಳು ವರ್ಷಗಟ್ಟಲೆ ನೇಮಕಾತಿ ಇಲ್ಲದೇ ಒದ್ದಾಡಿದವು. ಅಧಿಕಾರಿಗಳು, ಉದ್ಯಮಪತಿಗಳು ನಕಲಿ ವಿಧೇಯತೆ ಕಲಿತರು. ಸಂಘಿಗಳಿಗೆ ಹತ್ತಿರವಾಗುವುದನ್ನೂ ಕಲಿತರು.

ಆದರೆ ಯಾವ ಸರಕಾರಕ್ಕೂ ತನ್ನ ಆಯ್ಕೆಯ ಬೆರಳೆಣಿಕೆಯ ಮಂದಿಯ ಮೂಲಕ ಆಡಳಿತ ನಡೆಸುವುದು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳು ಭಯಭೀತರಾಗಿ ತಮ್ಮ ಜೀವಮಾನದ ಅನುಭವಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದರು. ದಕ್ಷ ಸಚಿವರನ್ನು ತಿರಸ್ಕಾರದಿಂದ ನೋಡುವ ಪರಿಪಾಠ ಆರಂಭವಾಯಿತು. ಪರಿಣಾಮವಾಗಿ ಭಾರತದ ಮಟ್ಟ ಅಂತಾರಾಷ್ಟ್ರೀಯವಾಗಿ ಎಲ್ಲಾ ಮಾನದಂಡಗಳಲ್ಲೂ ಕುಸಿಯಲಾರಂಭಿಸಿತು. ಅಂಕಿ-ಸಂಖ್ಯೆಗಳನ್ನು ತಿರುಚುವುದು ಶುರುವಾಯಿತು. ಅಧಿಕಾರಿಗಳಿಗೆ ತಿರುಳಿನ ಬದಲು ಪ್ರದರ್ಶನವೇ ಮುಖ್ಯ ಎಂದು ಗೊತ್ತಾಯಿತು!
ಅಸ್ತಿತ್ವದಲ್ಲಿದ್ದ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಧಾನ ಮಂತ್ರಿ ಯೋಜನೆ ಎಂದು ಪುನರ್‍ನಾಮಕರಣಗೊಳಿಸಲಾಯಿತು. ದುಬಾರಿ ಜಾಹೀರಾತು ಮಂದಿ ಗಮನ ಸೆಳೆಯುವ ಸಂಕ್ಷಿಪ್ತಾಕ್ಷರಗಳ ಹೆಸರು ನೀಡಿದರು. ಪ್ರಧಾನಿಯೂ ಈ ರೀತಿಯ ಅಕ್ಷರಗಳ ಜೊತೆ ಆಟವಾಡುವುದನ್ನು ಇಷ್ಟಪಟ್ಟರು. ಕೆಲಸವಾಗಲಿಲ್ಲವೆಂದಲ್ಲ. ಆದರೆ ಕಹಿಸತ್ಯವನ್ನು ವರದಿಮಾಡುವುದು ಆತ್ಮಹತ್ಯಾಕಾರಿಯಾಗಿತ್ತು. ನೋಟು ಅಮಾನ್ಯದಂಥಾ ನಿರ್ಧಾರಗಳನ್ನು ಗುಪ್ತವಾಗಿ ನಿರ್ಧರಿಸಿದ್ದಾಯಿತು. ಇದಕ್ಕೆ ಯಾರೂ ತಯಾರಿರಲಿಲ್ಲ. ಯಾವ ಚರ್ಚೆಯೂ ನಡೆದಿರಲಿಲ್ಲ. ನಾಯಕನೋ ನಾಟಕೀಯ ಘೋಷಣೆಗಳ ಮೂಲಕ ದೇಶವನ್ನು ಸ್ತಂಭೀಭೂತಗೊಳಿಸುವ ಖಯಾಲಿಗೆ ಬಿದ್ದಿದ್ದು ಸ್ಪಷ್ಟವಿತ್ತು.
ಆದ್ದರಿಂದಲೇ ಕಳೆದ ವರ್ಷ ಕೋವಿಡ್ ಸ್ಫೋಟವಾದಾಗ ಇವೆಂಟ್ ಮ್ಯಾನೆಜ್ ಮೆಂಟ್ ಮತ್ತು ಇಮೇಜ್ ವರ್ಧನೆ ಮೊದಲ ಆದ್ಯತೆಯಾಗಿತ್ತು. ತಜ್ಞರ ಸಲಹೆ, ಉಳಿದವರ ಅನುಭವ ಪಡೆಯುವುದು, ಪ್ಲಾನಿಂಗ್, ಅಗತ್ಯ ವಸ್ತುಗಳ ವ್ಯವಸ್ಥೆಗಳೆಲ್ಲಾ ಅಮುಖ್ಯವೆನಿಸಿತು. ವಿಪರೀತ ಅಧಿಕಾರ ಕೇಂದ್ರೀಕರಣದಿಂದಾಗಿ ಮಾಸ್ಕ್ , ಪಿಪಿಇ ಕಿಟ್ ಉತ್ಪಾದನೆಯೂ ಪ್ರಧಾನಿಯೇ ನಿರ್ಧರಿಸುವಂತಾಯಿತು. ಕೋವಿಡ್ ಪ್ರಕರಣಗಳು ತೀರಾ ಕಡಿಮೆ ಇದ್ದಾಗ ನಾಟಕೀಯವಾಗಿ ದಿಢೀರನೆ ಲಾಕ್ ಡೌನ್ ಹೇರಿದ್ದು ಅನಗತ್ಯವಾಗಿತ್ತು. ಆದರೆ ಅದು ಅಧಿಕಾರದ ಮಟ್ಟವನ್ನು ತೋರಿಸಿಕೊಟ್ಟಿತ್ತು.
ಆಗಲೇ ಬಾಗಿದ್ದ ದೇಶದ ಆರ್ಥಿಕತೆಯ ಬೆನ್ನೆಲುಬನ್ನೇ ಇದು ಮುರಿಯಿತು. ಗೃಹ ಮಂತ್ರಿ ಮೋದಿಯ ಅತ್ಯಂತ ನಂಬಿಕಸ್ಥ ಬಂಟ ಆಗಿದ್ದರೂ ಅವರ ಸಾಮರ್ಥ್ಯಕ್ಕೆ ಮೀರಿದ ನಿರ್ಧಾರಗಳನ್ನೂ ಗೃಹ ಸಚಿವಾಲಯವೇ ತೆಗೆದುಕೊಂಡಿತು. ಆರೋಗ್ಯ ಸಚಿವಾಲಯ ಅಲ್ಲ! ಯಾವುದೇ ಸಮಾಲೋಚನೆ ಇಲ್ಲದೇ ರೆಗ್ಯುಲರ್ ಆಗಿ ಫರ್ಮಾನುಗಳನ್ನು ಹೊರಡಿಸಲಾಯಿತು. ಪರಿಹಾರ ಕಾರ್ಯ ಎಂಬುದು ಭಾರತದ ಆಡಳಿತದ ಅವಿಭಾಜ್ಯ ಅಂಗ. ಆದರೆ ಈ ಇಬ್ಬರು ನಾಯಕರು ಸ್ಮಶಾನ ಮೌನ ವಹಿಸಿದ ಕಾರಣ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಯಾವ ಪರಿಹಾರವೂ ಸರಿಯಾಗಿ ದೊರಕಲಿಲ್ಲ.

ವಿವೇಕವಿರುವ ಎಲ್ಲಾ ದೇಶಗಳೂ ಲಸಿಕೆ ಮತ್ತು ಆಮ್ಲಜನಕದ ಅಗತ್ಯವನ್ನು ಲೆಕ್ಕ ಹಾಕಿ ಅದರ ಉತ್ಪಾದನೆ, ಆಮದು, ಹಂಚಿಕೆ ಕುರಿತ ಎಲ್ಲವನ್ನೂ ಹಲವಾರು ತಿಂಗಳ ಮೊದಲೇ ಯೋಜನೆ ಸಿದ್ಧಪಡಿಸಿಕೊಂಡಿದ್ದವು. ಆದರೆ ನಮ್ಮ ಸರಕಾರ ಬೆಲೆ ನಿಗದಿ, ಪೂರೈಕೆ, ಅಂತಾರಾಷ್ಟ್ರೀಯ ಜವಾಬ್ದಾರಿ ಇತ್ಯಾದಿ ಬಗ್ಗೆ ಈಗ್ಗೆ ಒಂದೆರಡು ತಿಂಗಳ ಹಿಂದೆ ಎಚ್ಚರವಾಗಿದ್ದು. ಬೇಡಿಕೆ-ಪೂರೈಕೆಯಂಥಾ ಸರಳ ಲೆಕ್ಕಾಚಾರವೂ ಅರ್ಥವಾಗದ ಸ್ಥಿತಿಯಲ್ಲಿ ಆಡಳಿತವಿತ್ತು. ತಜ್ಞರ ಸಲಹೆಗಳಿಗೆ ಕಡಿಮೆ ಆದ್ಯತೆ ನೀಡಲಾಯಿತು. ಭಾರತ ಕೋವಿಡ್ ಯುದ್ಧ ಗೆದ್ದಿದೆ, ಇದೀಗ ಭಾರತ ಜಗತ್ತಿನ ಫಾರ್ಮಸಿಯಾಗಿದೆ ಎಂದು ಬೀಗಿದರು.
ಅಮೂಲ್ಯ ಲಸಿಕೆ ಮತ್ತು ಆಕ್ಸಿಜನ್‍ಅನ್ನು ರಫ್ತು ಮಾಡಲಾಯಿತು. ಕೊನೆಗೆ ಕೋಟಿಗಟ್ಟಲೆ ಮಂದಿ ಭಾಗವಹಿಸಲು ಬಿಟ್ಟ ಕುಂಭ ಮೇಳವೇ ದೇವರ ಆಗ್ರಹಕ್ಕೆ ಕಾರಣವಾಯಿತು. ಎರಡನೇ ಅಲೆ ನಮ್ಮನ್ನು ಅಪ್ಪಳಿಸಲು ಕಾಯುತ್ತಿದ್ದರೆ ಮೋದಿ ಮತ್ತು ಶಾ ಇದಕ್ಕೆ ಗಂಭೀರವಾಗಿ ಪ್ರತಿಕ್ರಿಯಿಸಲು ಸಾಧ್ಯವೇ ಇಲ್ಲದಂತೆ ಚುನಾವಣಾ ರ್ಯಾಲಿಗಳಲ್ಲಿ ಬಿಜಿಯಾಗಿದ್ದರು. ಕಪಿಮುಷ್ಠಿಯ ಕೇಂದ್ರೀಕೃತ ಸರಕಾರ ಕುಸಿಯಿತು. ಜವಾಬ್ದಾರಿ ಹೊರಬೇಕಾದವರು ತಲೆ ತಪ್ಪಿಸಿಕೊಂಡರು. ಅಭೂತಪೂರ್ವ ಅರಾಜಕತೆ ತಾಂಡವವಾಡುತ್ತಿದೆ. ಸಾವು ಮತ್ತು ದುರಂತದ ಚಿತ್ರಗಳನ್ನು ಪ್ರಕಟಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ಮೋದಿಯನ್ನು ಹುರಿದು ಮುಕ್ಕುತ್ತಿವೆ.
ಅಜೇಯ ಎನ್ನುವ ಇಮೇಜ್ ಶಿಥಿಲವಾಗುತ್ತಿದೆ. ಆದರೆ ಈಗ ಸೇಡಿನ ಬದಲು ಬೆಂಕಿ ಆರಿಸುವ ಕೆಲಸ ಆಗಬೇಕಿದೆ.
- ಜವಹರ್ ಸರಕಾರ್
ಸಂಸ್ಕೃತಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಮತ್ತು ಪ್ರಸಾರ ಭಾರತಿಯ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ
(ಕನ್ನಡಕ್ಕೆ): ಕೆ ಪಿ ಸುರೇಶ್


