Homeಅಂಕಣಗಳುಪೊಲೀಸ್ ವ್ಯವಸ್ಥೆಯ ಒಳಹೊರಗು, ಹುಳುಕುಗಳನ್ನು ತೆರೆದಿಡುವ ಕೃತಿ: ’ಭಾರತದಲ್ಲಿ ರಾಜಕೀಯ ಹಿಂಸೆ ಮತ್ತು ಪೊಲೀಸ್'

ಪೊಲೀಸ್ ವ್ಯವಸ್ಥೆಯ ಒಳಹೊರಗು, ಹುಳುಕುಗಳನ್ನು ತೆರೆದಿಡುವ ಕೃತಿ: ’ಭಾರತದಲ್ಲಿ ರಾಜಕೀಯ ಹಿಂಸೆ ಮತ್ತು ಪೊಲೀಸ್’

ಲಾಕ್‌ಡೌನ್ ಸಮಯದಲ್ಲಿ ಪೊಲೀಸ್ ಹಿಂಸಾಚಾರ ಮಿತಿ ಮೀರುತ್ತಿರುವ ಸಂದರ್ಭದಲ್ಲಿ ಅತಿ ಹೆಚ್ಚು ಪ್ರಸ್ತುತವಾಗುವ ಪುಸ್ತಕವಿದು...

- Advertisement -
- Advertisement -

ಓಲ್ಡ್ ಈಸ್ ಗೋಲ್ಡ್ ಎನ್ನುವುದು ಒಂದು ಅಬ್ಸೆಸ್ಸಿವ್ ಡಿಸಾರ್ಡರ್ ಅಥವಾ ಗೀಳಿನ ರೋಗ ಅಂದರೆ ನಮ್ಮ ದೇಶದವರಿಗೆ ಮನನೋಯಿಸುವ ಮಾತು. ಹಳತೆಲ್ಲಾ ಹೊನ್ನು ಎನ್ನುವುದರಲ್ಲಿ ನಮಗೆ ಆನಂದ. ನಮ್ಮ ಹಿರೀಕರು ಬಹಳ ಬುದ್ಧಿವಂತರು, ಅವರ ಮುಂದೆ ನಾವೇನೂ ಇಲ್ಲ ಅಂತೆಲ್ಲಾ ಅಂದುಕೊಂಡು ಕ್ರೆಡಿಟ್ಸ್ ತೆಗೆದುಕೊಳ್ಳೋಕೆ ಯಾರೂ ಜೀವಂತವಾಗಿರದಿದ್ದರೂ ಹಳತರ ವಿಷಯಗಳನ್ನು ವೈಭವೀಕರಿಸಿಕೊಂಡು, ಹೊಸತನಕ್ಕೆ ತೆರೆದುಕೊಳ್ಳದೇ ಪ್ರಸ್ತುತವನ್ನು ಹೀಗಳೆದುಕೊಂಡಿರುವುದು ನಿಜಕ್ಕೂ ಒಂದು ಮನೋರೋಗ. ಇದು ಸಾಮುದಾಯಿಕವಾಗಿಯೂ ಅಂಟಿರುವುದರಿಂದ, ಅದರಿಂದಲೇ ರೂಪಿತವಾದ ವ್ಯವಸ್ಥೆಗಳೂ ಕೂಡಾ ಅದೇ ರೀತಿಯಲ್ಲಿರುತ್ತವೆ.

ಜನಪ್ರತಿನಿಧಿಯಾಗಿ ಚುನಾಯಿತನಾಗುವವನ್ನು ಏಕಮೇವಾದ್ವಿತೀಯ ಚಕ್ರವರ್ತಿ ಎಂಬಂತೆ ಸತ್ಕರಿಸುವುದು, ಚುನಾವಣೆಯನ್ನು ಯುದ್ಧ ಎಂದು ಬಿಂಬಿಸುವುದು, ಪ್ರಜಾಪ್ರಭುತ್ವದ ಕರ್ತವ್ಯ ನಿರ್ವಹಣೆಗಾಗಿ ಪಡೆಯುವ ಪ್ರಮಾಣವಚನವನ್ನು ಪಟ್ಟಾಭಿಷೇಕ ಎಂದು ವೈಭವೀಕರಿಸುವುದು, ಆಳುವ ಅರಸರ ಆಸ್ಥಾನದಲ್ಲಿ ರಾಜಸೇವಾಸಕ್ತರಾಗಿರುವ ವಂದಿಮಾಗಧರ ರಾಜನಿಷ್ಠೆಯನ್ನು ಬಿಂಬಿಸುವಂತಹ ಮಾಧ್ಯಮಗಳಿರುವುದು; ಇಂಥಾ ಹಳತರ ಹಳಸಿದ ಕೊಳೆತ ವಾಸನೆಗಳು ಪ್ರಸ್ತುತದ ಅಡುಗೆಯನ್ನು ಗಮಲನ್ನು ಮೀರುವಷ್ಟಿರುತ್ತವೆ. ಅಂತಹುದೇ ಮತ್ತೊಂದು ವ್ಯವಸ್ಥೆ ನಮ್ಮ ಪೊಲೀಸ್ ಇಲಾಖೆ.

ಪೊಲೀಸ್ ದೌರ್ಜನ್ಯ ಎನ್ನುವುದು ನಮ್ಮ ದೇಶಕ್ಕೇನೂ ಹೊಸತಲ್ಲ. ಪೊಲೀಸರಿಂದ ಮಾನವ ಹಕ್ಕುಗಳ ಉಲ್ಲಂಘನೆಯೂ ನಮಗೆ ಹೊಸತಲ್ಲ. ಈಗ ಲಾಕ್‌ಡೌನ್ ಸಮಯದಲ್ಲಿ ಉರಿಯುತ್ತಿರುವ ಪೊಲೀಸ್ ದೌರ್ಜನ್ಯದ ಜ್ವಾಲೆ, ಈ ಹೊತ್ತಿನಲ್ಲಿ ಹುಟ್ಟಿರುವ ಸಾಂದರ್ಭಿಕ ಶಿಶುವೇನಲ್ಲ.

1857ರಲ್ಲಿ ನಡೆದ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟವು ಬ್ರಿಟಿಷರಿಂದ ಸಿಪಾಯಿ ದಂಗೆ ಅಂತ ಕರೆಯಿಸಿಕೊಂಡಿತು. ಅದರ ಫಲವಾಗಿ ಅನೇಕ ವಿಷಯಗಳ ಬಗ್ಗೆ ಬ್ರಿಟಿಷ್ ರಾಜ್ ಹೊಸ ನಡೆಗಳನ್ನು ರೂಪಿಸಿಕೊಂಡಿತು. ಹಾಗೆ 1861ರಲ್ಲಿ ಪೊಲೀಸ್ ಆಕ್ಟ್ ಬಂತು. 1857ರ ಮುಂಚೆಯೂ ಬ್ರಿಟಿಷರಿಗೆ ಸಿಪಾಯಿಗಳಾಗಿ ನಮ್ಮವರೇ, ನಮ್ಮವರ ವಿರುದ್ಧ ಹೊಡೆದಾಡುತ್ತಿದ್ದದ್ದು. ಆಗ ಹುಟ್ಟಿದ ಕಾರಣಗಳಿಂದಾಗಿ ಸಿಪಾಯಿ ದಂಗೆ ಎನ್ನುವುದು ಒಂದು ರೀತಿಯಲ್ಲಿ ಸರಿಯೇ ಆದರೂ ಅದು ಸ್ವಾತಂತ್ರ್ಯ ಹೋರಾಟದ ಸ್ವರೂಪವನ್ನು ಪಡೆದುಕೊಂಡಿತು. ಬ್ರಿಟಿಷರು ಸ್ಥಳೀಯ ವಸಾಹತುಗಳ ರಕ್ಷಣೆಗೆ ಅನುಕೂಲವಾಗುವಂತೆ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿಕೊಂಡರು. ತಮ್ಮ ಅಧಿಕಾರ ಮತ್ತು ಹಿಡಿತದಿಂದ ಬಿಡುಗಡೆ ಪಡೆದು ಸ್ವತಂತ್ರವಾಗಲು ಯತ್ನಿಸುತ್ತಿರುವ ಜನರನ್ನು, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಆಂದೋಲನಗಳನ್ನು ಬಗ್ಗುಬಡಿಯಲು ಪೊಲೀಸ್ ವ್ಯವಸ್ಥೆ ಅತ್ಯಗತ್ಯ ಎಂಬುದನ್ನು ಬ್ರಿಟಿಷ್ ಮನಗಂಡಿತ್ತು.

ಹಾಗಾಗಿ ವ್ಯವಸ್ಥೆಯ ವಿರುದ್ಧವಾಗಿ ಧ್ವನಿ ಎತ್ತುವ ಜನರ ಚಟುವಟಿಕೆಗಳನ್ನು ಉಗ್ರವಾಗಿ ಹತ್ತಿಕ್ಕುವ ಅಧಿಕಾರ ಪೊಲೀಸ್ ಅಧಿಕಾರಿಗಳಿಗೆ ಇತ್ತು. 1861ರ ಕಾಯಿದೆಯಂತೆ, ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಚಟುವಟಿಕೆಯು ಅವರ ಉನ್ನತ ಅಧಿಕಾರಿಗಳಿಗೆ ಮತ್ತು ಬ್ರಿಟಿಷ್ ಕಲೋನಿಯಲ್ ರಾಜಕೀಯ ಮತ್ತು ಆಡಳಿತ ಅಧಿಕಾರಿಗಳಿಗೆ ಉತ್ತರದಾಯಿಗಳಾಗಿದ್ದರೇ ಹೊರತು ಇನ್ನಾರಿಗೂ ಉತ್ತರಿಸುವಂತೇನಿರಲಿಲ್ಲ. ಮಿಗಿಲಾಗಿ ಪೊಲೀಸ್ ಉನ್ನತ ಅಧಿಕಾರಿಗಳೆಲ್ಲಾ, ನಾಗರಿಕ ಸೇವೆ ಮತ್ತು ಆಡಳಿತ ಅಧಿಕಾರಿಗಳಿದ್ದಂತೆ ಬ್ರಿಟಿಷರೇ ಇರುತ್ತಿದ್ದರು. ಅವರೆಲ್ಲಾ ಒಂದೇ ವರ್ಗದವರಾಗಿದ್ದು ಒಂದೇ ಆಶಯವನ್ನೇ ಹೊಂದಿರುತ್ತಿದ್ದರು. ಸ್ಥಳೀಯರೆಂದರೆ ದಪೇದಾರ್, ಕೋತ್ವಾಲರಂತೆ ಕೆಳವರ್ಗದ ಮೇಲ್ವಿಚಾರಕರು ಮತ್ತು ಪೇದೆಗಳು. ಅವರಲ್ಲಿ ಸಾಮಾನ್ಯ ಜನರಿಗೆ ಸ್ಪಂದಿಸುವ ಸಾಧ್ಯತೆಗಳು ಇರುತ್ತಿರಲಿಲ್ಲ. ಏಕೆಂದರೆ ಅವರೆಲ್ಲಾ ಮೇಲಿನಧಿಕಾರಿಗಳ ಆಜ್ಞಾಧಾರಕರು ಮಾತ್ರ ಆಗಿರುತ್ತಿದ್ದರು.

ಅದು ಪ್ರಜಾಪ್ರಭುತ್ವದ ವ್ಯವಸ್ಥೆ ಅಲ್ಲದೇ ಇದ್ದ ಕಾರಣದಿಂದ ಸಮುದಾಯಗಳಿಗೆ, ಸ್ಥಳೀಯ ಸಂಸ್ಥೆಗಳಿಗೆ, ಸಾಮಾಜಿಕ ಸಾಂಸ್ಥಿಕ ಸ್ವರೂಪಗಳಿಗೆ ಪೊಲೀಸ್ ಹೇಗೇ ನಡೆದುಕೊಂಡರೂ ಉತ್ತರ ಕೊಡುವಷ್ಟೇನಿರಲಿಲ್ಲ. ಮುಂದೆ 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. ನೆಲ ಮತ್ತು ಜನರ ಮೇಲಿನ ಹಿಡಿತದಿಂದ ಬಿಡಿಸಿಕೊಳ್ಳಲು ಜನಾಂದೋಲನಗಳು ರೂಪುಗೊಂಡವು. ವ್ಯಕ್ತಿಗಳ ಹಿನ್ನೆಲೆಗಳ ಮಾನ್ಯತೆಗಳಿಲ್ಲದೇ, ಅಗತ್ಯಗಳಿಲ್ಲದೇ ಸಮರ್ಥವಾಗಿದ್ದ ವ್ಯಕ್ತಿಗಳೆಲ್ಲಾ ಹೋರಾಟದ ಮುಂದಾಳುಗಳಾದರು. ರಾಜಾಡಳಿತದ ವೈಫಲ್ಯಗಳನ್ನು ಕಂಡುಕೊಂಡಿದ್ದ ನಾಯಕರ ಮುಂದಾಲೋಚನೆಗಳಿಂದಲೇ ಪ್ರಜಾಪ್ರಭುತ್ವ ಬಂತು. ಸಂವಿಧಾನ ರೂಪುಗೊಂಡಿತು. ದೇಶದ ನಾಗರಿಕರ ಹಿತರಕ್ಷಣೆಯೇ ಆದ್ಯತೆಯಾಯಿತು. ಆದರೆ ಪೊಲೀಸ್ ಮಾತ್ರ ಆಡಳಿತ ಯಂತ್ರದ ಕೈಗೊಂಬೆಯಾಗಿಯೇ ಉಳಿಯಿತು.

ಇಂತಹ ಪೊಲೀಸ್ ವ್ಯವಸ್ಥೆಯಲ್ಲಿ ಯಾರಾದರೂ ಪ್ರಜಾಪ್ರಭುತ್ವದ ಆಶಯಗಳಿಗೆ ಬದ್ಧವಾಗಿ ಆಡಳಿತ ವ್ಯವಸ್ಥೆಗಳನ್ನು ಎದುರಿಸಿದರೆ ಅವರು ವ್ಯಕ್ತಿಗತವಾಗಿ ’ಪರಿಣಾಮಗಳನ್ನು’ ಎದುರಿಸಬೇಕಾಗುತ್ತದೆ. ನಮ್ಮ ದೇಶವು ಪ್ರಜಾಪ್ರಭುತ್ವದ ಹೊದಿಕೆಯನ್ನು ಮಾತ್ರ ಹೊದ್ದುಕೊಂಡಿದೆ. ನಮ್ಮ ದೇಶದ ಜನತೆಯ ಮನಸ್ಥಿತಿಯು ಇನ್ನೂ ಪುರಾತನ ’ರಾಜಸೇವಾಸಕ್ತ’ ಮನೋಭಾವನೆಯಿಂದ ಹೊರಗೆ ಬಂದೇ ಇಲ್ಲ. ಸಾಮಾನ್ಯ ಜನರೆಲ್ಲಾ ರೂಪಿಸಿದ ಸ್ವಾತಂತ್ರ್ಯ ಹೋರಾಟದ ಫಲ ಈ ನಮ್ಮ ಪ್ರಜಾಪ್ರಭುತ್ವ ತತ್ವಾಧಾರಿತ ಗಣತಂತ್ರ ವ್ಯವಸ್ಥೆ ಎಂಬುದೇ ನಮ್ಮ ಜನಕ್ಕೆ ಮರೆತು ಹೋಗಿದೆ. ಪೊಲೀಸ್ ವ್ಯವಸ್ಥೆಯ ತಾತ್ವಿಕ ತಳಹದಿಯೂ ಬ್ರಿಟಿಷ್ ರಾಜ್ ಸಮಯದಂತೆಯೇ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಹಾಗೆಯೇ ಇದೆ. ಪ್ರಜಾಸತ್ತಾತ್ಮಕ ಆಶಯದಂತೆ ರಾಷ್ಟ್ರವು ರೂಪುಗೊಂಡಾಗ ಪೊಲೀಸ್ ವ್ಯವಸ್ಥೆಯೂ ಕೂಡಾ ತನ್ನ ಆಶಯದಲ್ಲೇನೋ ಬದಲಾಯಿತು. ಆದರೆ, ರಾಜತಾಂತ್ರಿಕವಾಗಿ ಚುನಾಯಿತ ಜನಪ್ರತಿನಿಧಿಗಳು ಅಥವಾ ಅಧಿಕಾರದ ಚುಕ್ಕಾಣಿ ಹಿಡಿದ ಜನನಾಯಕರ ಕೈಯಲ್ಲಿ ನಿಯಂತ್ರಣದ ಅಧಿಕಾರವು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಿಕ್ಕ ಮೇಲೆ ವ್ಯಕ್ತಿಗತವಾಗಿ ಪೊಲೀಸ್ ಅಧಿಕಾರಿಗಳು ಮತ್ತು ಅವರ ಅಧೀನದಲ್ಲಿರುವ ಪರಿವಾರವು ಆಡಳಿತಾರೂಢರ ತಾಳಕ್ಕೆ ಕುಣಿಯುವಂತಹ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡುಬಿಟ್ಟರು. ಹಾಗಾಗಿ ಬ್ರಿಟಿಷ್ ಪೊಲೀಸ್ ಮಾದರಿಯೇ ಉಳಿದುಬಿಟ್ಟಿತು. ಬ್ರಿಟಿಷ್ ಪೊಲೀಸ್ ಅವಧಿ ನಮ್ಮ ದೇಶದಲ್ಲಿ ಸುಮಾರು ಇನ್ನೂರು ವರ್ಷಗಳು.

ಯಾವುದೇ ಆಡಳಿತಾರೂಢ ಪಕ್ಷಗಳು, ಸರಕಾರಗಳು ತಮ್ಮ ಅಧಿಕಾರ ಬಲದಿಂದ ಪೊಲೀಸ್ ವ್ಯವಸ್ಥೆಯನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡೇ ದರ್ಪ ಮೆರೆದವು. ಇದರಿಂದ ಯಾವ ಪಕ್ಷಗಳೂ, ಸರ್ಕಾರಗಳೂ ಹೊರತಲ್ಲ. ಯಾವುದು ಒಳ್ಳೆಯ ಪಕ್ಷ, ಒಳ್ಳೆಯ ಸರ್ಕಾರ ಎನ್ನುವುದಕ್ಕಿಂತ ಯಾವ ಸರ್ಕಾರವು ಕಡಿಮೆ ಕೆಟ್ಟದ್ದು ಎನ್ನುವಷ್ಟರಮಟ್ಟಿಗೆ ಜನತೆಯ ಅನುಭವವು ಅಭಿಪ್ರಾಯಗಳನ್ನು ರೂಪಿಸಿಕೊಳ್ಳುತ್ತದೆ.

PC : The Wire

ಹೀಗೆ ನಮ್ಮ ದೇಶದ ರಾಜಕೀಯದ ಕ್ರೌರ್ಯದ ಮುಖವನ್ನು, ಅದರೊಟ್ಟೊಟ್ಟಿಗೆ ಪೊಲೀಸ್ ವ್ಯವಸ್ಥೆಯು ಅಧಿಕಾರರೂಢರ ತಾಳಕ್ಕೆ ಮಣಿಯುವ ಕುಣಿತವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಹೋಗುತ್ತಾರೆ ಕೆ ಎಸ್ ಸುಬ್ರಹ್ಮಣ್ಯನ್. ಅವರು ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ವ್ಯವಸ್ಥೆಯ ಆಂತರಿಕ ಜಗತ್ತನ್ನೂ ಮತ್ತು ರಾಜಕೀಯದೊಂದಿಗೆ ಅದು ಬೆಸೆದುಕೊಳ್ಳುವ ಹೆಣಿಗೆಯನ್ನು ಕಂಡವರಾಗಿರುವುದರಿಂದ ಅವರ ಬರಹದಲ್ಲಿ ಸ್ಪಷ್ಟತೆ ಇದೆ ಮತ್ತು ತಾಂತ್ರಿಕವಾಗಿಯೂ ವಿಷಯವು ನಿರೂಪಿತವಾಗಿದೆ.

1860ರಿಂದ 1902ರವರೆಗೂ ಪೊಲೀಸ್ ವ್ಯವಸ್ಥೆಯಲ್ಲಿ ಉಂಟಾದ ಎಲ್ಲಾ ಬದಲಾವಣೆಗಳನ್ನೂ, ಅವುಗಳ ಕಾರಣ ಮತ್ತು ಪರಿಣಾಮಗಳನ್ನೂ ಎಳೆಎಳೆಯಾಗಿ ತೆರೆದಿಡುತ್ತಾರೆ ಲೇಖಕರು. ಆಗಿನ ಬ್ರಿಟೀಷ್ ರಾಜ್ ವ್ಯವಸ್ಥೆಯಲ್ಲಿ ಜನ ರಕ್ಷಣೆಗಿಂತ ಜನಾಂದೋಲನವನ್ನು ಹತ್ತಿಕ್ಕುವುದೇ ಪೊಲೀಸರ ಮುಖ್ಯ ಕರ್ತವ್ಯವಾಗಿತ್ತು. ಕಾಂಗ್ರೆಸ್ಸಿನವರಿಗಿಂತ ಕಮ್ಯುನಿಸ್ಟರು ಹೆಚ್ಚು ಅಪಾಯಕಾರಿಯಾಗಿ ಅವರಿಗೆ ಕಂಡಿದ್ದರು.

ಹಾಗಾಗಿ ಆ ಹೊತ್ತಿನ ಆಂದೋಲನ, ತಲ್ಲಣಗಳಲ್ಲಿ ಪೊಲೀಸ್ ಭಾಗಿಯಾಗುತ್ತಾ ಕಾಲಕಾಲಕ್ಕೆ ಪಾಲಿಸಿಗಳು ರೂಪುಗೊಂಡವು. ನ್ಯಾಷನಲ್ ಪೊಲೀಸ್ ಕಮಿಷನ್ 1977ರಲ್ಲಿ ರೂಪುಗೊಂಡಿತು. ಆಗಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ತಮ್ಮ ರಾಜಕೀಯ ಬಲದ ನಿರ್ವಹಣೆಗಾಗಿ ಹೇರಿದ ತುರ್ತು ಪರಿಸ್ಥಿತಿಯ ಪರಿಣಾಮ (1975-77) ಅದು. ಇಂದಿರಾ ಗಾಂಧಿಯವರೂ ಕೂಡಾ ತುರ್ತುಪರಿಸ್ಥಿತಿಯನ್ನು ದೇಶಪೂರ್ತಿ ಹೇರಲು ಬಳಸಿದ್ದು ಇದೇ ಪೊಲೀಸ್ ಬಲವನ್ನು. ಕಾಂಗ್ರೆಸ್ಸಿನ ಕಾಲದಲ್ಲಿಯೂ ಕೂಡಾ ಪೊಲೀಸ್ ಆಳುವವರ ಗುಲಾಮರಂತೆ ವರ್ತಿಸಿ ಜನರ ಮೇಲೆ ದಬ್ಬಾಳಿಕೆಯನ್ನು ಮಾಡದೇ ಏನಿಲ್ಲ.

ಶಾಲಾ ಬಾಲಕನಾಗಿದ್ದ ನಾನು ತುರ್ತುಪರಿಸ್ಥಿತಿಯ ಸಮಯದಲ್ಲಿ ರಸ್ತೆಯಲ್ಲಿನ ಅಮಾಯಕ ಜನರು ಪೊಲೀಸರ ಲಾಟಿಯೇಟಿಗೆ, ಬೂಟಿನೇಟಿಗೆ ಸಿಕ್ಕು ಚದುರಿ, ಹೆದರಿಕೊಂಡು, ಅಳುತ್ತಾ, ಗೋಳಿಡುತ್ತಾ ನಮ್ಮ ಮನೆಯೊಳಗೆಲ್ಲಾ ನುಗ್ಗಿದ್ದರು. ಅವರ ಏಟಿನಿಂದ ತಪ್ಪಿಸಿಕೊಳ್ಳಲು ಚಾಮರಾಜಪೇಟೆಯಲ್ಲಿದ್ದ ನಮ್ಮ ಮನೆಯ ಮಂಚದಡಿಯಲ್ಲೆಲ್ಲಾ ನುಗ್ಗಿ ಬಚ್ಚಿಟ್ಟುಕೊಂಡಿದ್ದರು. ಪೊಲೀಸರು ಮನೆಯೊಳಗೆ ನುಗ್ಗಿದಾಗ ನನ್ನ ಅಜ್ಜಿ ಪಾರ್ವತಮ್ಮನವರು ಅವರನ್ನು ಪ್ರತಿಭಟಿಸಿದರು. ಆದರೆ ಅವರನ್ನು ಪಕ್ಕಕ್ಕೆ ತಳ್ಳಿ ಮನೆಯೊಳಗೆ ನುಗ್ಗಿದ ಪೊಲೀಸರು ಲಾಠಿಗೆ ಹೆದರಿ ಅಡಗಿದ್ದವರನ್ನೆಲ್ಲಾ ದರದರನೆ ಎಳೆದೆಳೆದು ಹೊಡೆದಿದ್ದರು. ರಾಜಕೀಯವಾಗಿರದ, ಚಳವಳಿಯಲ್ಲಿ ಭಾಗಿಯಾಗಿರದಂತಹ ಸಾಮಾನ್ಯ ಮನೆಯೇ ರಣಾಂಗಣವಾಗಿತ್ತು. ಇದಕ್ಕೆ ನಾನೇ ಸಾಕ್ಷಿ.

ಇಂದಿರಾಗಾಂಧಿ ಮತ್ತೆ 1980ರಲ್ಲಿ ಅಧಿಕಾರಕ್ಕೆ ಬಂದಾಗ ನ್ಯಾಷನಲ್ ಪೊಲೀಸ್ ಕಮಿಷನ್ (ಎನ್‌ಪಿಸಿ) ಮತ್ತೆ ತಳಸೇರಿತು. ಏಕೆಂದರೆ ಆ ಪಾಲಿಸಿ ಮಾಡಿದ್ದು ಹಿಂದಿನ ಸರ್ಕಾರ. ಅದು ಜನತಾ ಪಕ್ಷದ್ದು.

ಭಾರತದಲ್ಲಿ ರಾಜಕೀಯ ಹಠಮಾರಿತನದ ದಾಳಕ್ಕೆ ಹುಚ್ಚಾಪಟ್ಟೆ ಉರುಳಬೇಕಾಗಿರುವುದು ನಾಗರಿಕ ಸೇವೆಯ ಇಲಾಖೆಗಳು ಮತ್ತು ಪೊಲೀಸ್ ವ್ಯವಸ್ಥೆ. ಪೊಲೀಸರಿಗೆ ಬೇರೆ ದಾರಿಯೇ ಇಲ್ಲ!

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬೇಕಾಗಿರುವಂತಹ ಪೊಲೀಸ್ ವ್ಯವಸ್ಥೆಯನ್ನು ಸೈನಿಕ ಬಲವನ್ನಾಗಿ ಉಪಯೋಗಿಸಿಕೊಳ್ಳುವಷ್ಟರ ಆಸಕ್ತಿಯಷ್ಟೇ ರಾಜಕೀಯ ಪಕ್ಷಗಳಿಗಿರುವುದು. ನಾಗರಿಕ ಸೇವೆಯ ದೃಷ್ಟಿಯಲ್ಲಿ ಪೊಲೀಸರಿಗೆ ಬೇಕಾದಂತಹ ತರಬೇತಿಗಳನ್ನು, ತಿಳಿವಳಿಕೆಗಳನ್ನು ಕೊಡುವುದೇ ಇಲ್ಲ. ಜೊತೆಗೆ ಪೊಲೀಸ್ ಸಿಬ್ಬಂದಿಗೆ ಅತಿಯಾದಂತಹ ಒತ್ತಡ. ಇದೆಲ್ಲದರ ಜೊತೆಗೆ ಸರ್ಕಾರದ ಇತರೆ ಇಲಾಖೆಗಳಲ್ಲಿರುವಂತೆ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಮೇಲಿನಧಿಕಾರಿಗಳ ಮರ್ಜಿ; ಇತ್ಯಾದಿಗಳ ಸೋಂಕುಗಳು. ಅವರ ಮಾನಸಿಕ ಒತ್ತಡಗಳ ನಿರ್ವಹಣೆಗೆ ಸಮಾಲೋಚನೆ ಮತ್ತು ಇನ್ನಿತರ ಯೋಜನೆಗಳು ವ್ಯವಸ್ಥಿತವಾಗಿ ರೂಢಿಯಲ್ಲಿರುವುದರ ಬಗ್ಗೆ ಸದ್ಯಕ್ಕಂತೂ ಮಾಹಿತಿಯಿಲ್ಲ.

ಇದರ ಜೊತೆಗೆ ಪೊಲೀಸರ ಮತಾಂಧತೆ, ಜನಾಂಗೀಯ ದ್ವೇಷದಂತಹ ವಿಚಾರಗಳಿಂದ ಗೋರಕ್ಷಣೆಯ ನೆಪದಲ್ಲಿ ಮಹಮದ್ ಅಖ್ಲಾಖ್ ಹತ್ಯೆಯಂತಹ ಅನೇಕಾನೇಕ ಉದಾಹರಣೆಗಳಿವೆ. ಹುಸಿ ಎನ್ಕೌಂಟರುಗಳು, ಲಾಕಪ್‌ನಲ್ಲಿ ಸಾವಿನ ಪ್ರಕರಣಗಳೆಲ್ಲಾ ಬೇಕಾದಷ್ಟು ನಡೆದುಹೋಗಿರುವುದು ಪೊಲೀಸ್ ವ್ಯವಸ್ಥೆಯ ನೈತಿಕತೆಯ ಮತ್ತು ತಾತ್ವಿಕತೆಯ ಪತನಕ್ಕೆ ಕನ್ನಡಿಯಾಗಿವೆ.

1990ರ ಆರಂಭದ ಕಾಲದಲ್ಲಿ ಮುಸಲ್ಮಾನ ದ್ವೇಷಾಧಾರಿತ ರಾಜಕೀಯವನ್ನು ಗಟ್ಟಿಗೊಳಿಸಲು ಆರಂಭಿಸಿದಾಗ, ಮುಸಲ್ಮಾನರ ಮೇಲಾದಂತಹ ಎಷ್ಟೆಷ್ಟೋ ಗುಂಪುದಾಳಿಗಳನ್ನು, ಕ್ರೂರ ಹತ್ಯೆಗಳನ್ನು, ನೈತಿಕ ಪೊಲೀಸ್ ಹಲ್ಲೆಗಳನ್ನು ನರೇಂದ್ರ ಮೋದಿಯವರ ಸರ್ಕಾರದ ನಿಯಂತ್ರಣದಲ್ಲಿದ್ದ ಪೊಲೀಸ್ ಇಲಾಖೆಯು ಪರಿಗಣಿಸಲೇ ಇಲ್ಲ. ಲೇಖಕರು ಗುಜರಾತಿನಲ್ಲಿ ನಡೆದ ನರಮೇಧದಲ್ಲಿ ಪೊಲೀಸ್ ಇಲಾಖೆ ಭಾಗಿಯಾಗಿದ್ದ ಸೂಕ್ಷ್ಮವನ್ನು ವಿವರಿಸುತ್ತಾರೆ.

ಅದೇ ರೀತಿ ನಕ್ಸಲ್ ಸಮಸ್ಯೆಯನ್ನು ಗೃಹ ಇಲಾಖೆಯ ಗಮನಕ್ಕೆ ತಂದಾಗ ದಲಿತರ ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯವು ಇದೇ ಪೊಲೀಸ್ ಇಲಾಖೆಗಳಿಂದಾಯಿತು. ನಕ್ಸಲರ ಹುಡುಕುವ, ಬಂಧಿಸುವ ನೆಪದಲ್ಲಿ ಬುಡಕಟ್ಟು ಜನರ ಮತ್ತು ದಲಿತರ ಮೇಲೆ ಆದ ಪೊಲೀಸ್ ದೌರ್ಜನ್ಯಗಳು ಕಡಿಮೆ ಏನಿಲ್ಲ.

ಎಲ್ಲಾ ವಿಷಯಾಧಾರಗಳ ಸಮೇತ ಬಹಳ ಪಾಂಡಿತ್ಯಪೂರ್ಣವಾಗಿ ಕೆ ಎಸ್ ಸುಬ್ರಹ್ಮಣ್ಯನ್ ವಿವರಿಸುತ್ತಾರೆ. ಅದರಲ್ಲೂ ಪೊಲೀಸ್ ಕಾಯಿದೆಗಳನ್ನು ರೂಪಿಸುವ ವಿಷಯವನ್ನಂತೂ ಅತ್ಯಂತ ಅಧಿಕೃತವಾಗಿ ಮಂಡಿಸುತ್ತಾರೆ. ಈ ರೀತಿಯಾಗಿ ಪೊಲೀಸ್ ವ್ಯವಸ್ಥೆಗೆ ಸಂಬಂಧಪಟ್ಟಂತೆ ಇದೊಂದು ಮಹತ್ವದ ದಾಖಲೆಯನ್ನು ಹೊಂದಿರುವಂತಹ ಕೃತಿಯಾಗಿದೆ.

ಲೇಖಕರು ಪೊಲೀಸ್ ವ್ಯವಸ್ಥೆಯಲ್ಲಿ ಕೊಳೆತು ನಾರುತ್ತಿರುವ ವಿಷಯಗಳನ್ನೇನೋ ಹೊರಗಿಡುತ್ತಾರೆ. ಆದರೆ ಅದರ ಆಶಯ ಬರಿಯ ಒಳಗಿರುವುದನ್ನು ಬಗೆದು ತೋರುವ ಧಾವಂತವಷ್ಟೇ ಅಲ್ಲದೇ ವ್ಯವಸ್ಥೆಯನ್ನು ಆರೋಗ್ಯಪೂರ್ಣವಾಗಿ ಸಮಾಜದ ಭಾಗವಾಗಿಸುವುದರ ಬಗ್ಗೆ ಅವರಿಗೆ ಕಾಳಜಿ ಇದೆ.

ಮುಗ್ಧರು, ಮೂರ್ಖರು, ಬುದ್ಧಿವಂತರು, ಅತಿಬುದ್ಧಿವಂತರು, ಮೇಧಾವಿಗಳು, ಸಾತ್ವಿಕರು, ಸಂತರು, ಮೌಢ್ಯದ ದಾಸರು, ವ್ಯಕ್ತಿಪೂಜಕರು; ಹೀಗೆ ನಾನಾ ಕೆಟಗರಿಯಲ್ಲಿರುವ ಜನರು ತುಂಬಿ ತುಳುಕುತ್ತಿರುವಂತಹ ದೇಶ ನಮ್ಮದು. ಇಂತಹ ಸಮಾಜದಲ್ಲಿ ವ್ಯವಸ್ಥೆಯ ಭಾಗವಾಗಿರುವವರಿಗೆ ಸಾಮುದಾಯಿಕ ಮನಶಾಸ್ತ್ರದ ಬಗ್ಗೆ ಅರಿವಿರಬೇಕು. ಕ್ರೌಡ್ ಸೈಕಾಲಜಿಯ ಕಿಂಚಿತ್ತೂ ತಿಳುವಳಿಕೆಯಿಲ್ಲದ, ಜಂಗುಳಿ ನಿರ್ವಹಣೆಯ ಕಿಂಚಿತ್ತೂ ಕೌಶಲ್ಯವಿಲ್ಲದ ಪೇದೆಗಳು ಲಾಠಿಯನ್ನು ಹಿಡಿದುಕೊಂಡು ಸರ್ಕಾರದ ಆದೇಶಗಳನ್ನು ಪಾಲಿಸಲು ಬೀದಿಗಿಳಿದರೆ ಆಗುವ ಎಡವಟ್ಟುಗಳೇ ಈ ಪೊಲೀಸ್ ದೌರ್ಜನ್ಯಗಳು.

ಪೊಲೀಸ್ ಪೇದೆಗಳಿಗೆ ಅಗತ್ಯವಿರುವ ಮನಶಾಸ್ತ್ರದ ಅರಿವು, ಜಂಗುಳಿ ನಿರ್ವಹಣೆಯ ಚತುರತೆ, ಸಮಾಲೋಚನೆ ಮಾಡುವ ಕೌಶಲ್ಯಗಳ ತರಬೇತಿ ಅಗತ್ಯವಾಗಿ ನೀಡಲೇಬೇಕು. ಇಲ್ಲದಿದ್ದರೆ ಮೊಂಡ ಜನರನ್ನು ನಿಭಾಯಿಸಲು ನಾವು ಜಗಮೊಂಡರಾಗಿರಬೇಕು ಎಂದು ವ್ಯವಸ್ಥೆಯ ಅಧಿಕಾರದ ಉನ್ಮತ್ತತೆಯಲ್ಲಿ ಲಾಠಿ ಬೀಸುತ್ತಾ ತಿರುಗಾಡುವ ಪೊಲೀಸರನ್ನು ಕಾಣುತ್ತಲೇ ಇರುವುದು ಅನಿವಾರ್ಯವೇ ಆಗಿರುತ್ತದೆ.


ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ಮರುಕಳಿಸುತ್ತಿದೆ ಧರ್ಮಾಧಾರಿ ಪೊಲೀಸ್‌ಗಿರಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...