Homeಅಂಕಣಗಳು2019 ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವದ ಹಗಲುದರೋಡೆಯೇ?

2019 ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವದ ಹಗಲುದರೋಡೆಯೇ?

- Advertisement -
- Advertisement -

ಯೋಗೇಂದ್ರ ಯಾದವ್ |

ಆಕ್ರಮಣದಿಂದ ಆತಂಕಗೊಳಗಾಗಿರುವವರು ಒಂದನ್ನು ನೆನಪಿಡಬೇಕಿದೆ: ಇದಕ್ಕೆಲ್ಲ ಹೊಣೆ ಹೊರಬೇಕಾಗಿರುವವರು ನಾವೇ ಎನ್ನುವುದು. ಅರ್ಧ ಶತಕದ ಸೈದ್ಧಾಂತಿಕ ಆಲಸ್ಯ/ಮೈಮರೆವು, ದಶಕಗಳ ಸಂಸ್ಥೆಗಳ ನಿರ್ಲಕ್ಷ್ಯ ಹಾಗೂ ಅನೇಕ ವರ್ಷಗಳ ರಾಜಕೀಯ ಜಡತ್ವವು ಪ್ರಜಾಪ್ರಭುತ್ವದ ಇಂತಹ ಆಕ್ರಮಣವನ್ನು ಅನುವು ಮಾಡಿಕೊಡುವ ಈ ಹಂತಕ್ಕೆ ತಂದು ತಲುಪಿಸಿವೆ.

2019ರ ಸಾರ್ವತ್ರಿಕ ಚುನಾವಣೆಗಳು ಈ ವಾರದಿಂದ ಜೋರು ಪಡೆದುಕೊಳ್ಳುತ್ತಿವೆ, ಒಂದು ವಿಷಯದ ಬಗ್ಗೆಯಂತೂ ಎಲ್ಲರೂ ಸ್ಪಷ್ಟತೆಯನ್ನು ಹೊಂದಬೇಕು. ನಾವು ಒಂದು ಸಾಮಾನ್ಯ ಚುನಾವಣಾ ಪ್ರಚಾರವನ್ನು ನೋಡುತ್ತಿಲ್ಲ; ನಾವೆಲ್ಲ, ಒಂದು ಪೂರ್ಣಪ್ರಮಾಣದ ಮತದಾನದ ಕೊಳ್ಳೆಹೊಡೆಯುವ ಪ್ರಕ್ರಿಯೆಯ ನಡುವೆ ಸಿಲುಕಿಕೊಂಡಿದ್ದೇವೆ. ಹೊರನೋಟಕ್ಕೆ ಪ್ರಜಾತಾಂತ್ರಿಕ ಕ್ರಮಗಳಂತೆ ಕಾಣುವ ಕ್ರಮಗಳನ್ನು ಬಳಸಿ ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ತಿರುಚಿ, ನಮ್ಮ ದೇಶದ ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುವ ಯತ್ನ ಇದಾಗಿದೆ. ಚುನಾವಣೆಗಳಲ್ಲಿ ಕಳೆದುಕೊಳ್ಳಲು, ಪಡೆದುಕೊಳ್ಳಲು ಅತ್ಯಂತ ಹೆಚ್ಚಿನ ಪ್ರಮಾಣವಿದ್ದ್ದು, ಆಯ್ಕೆಗಳು ಮಾತ್ರ ತುಂಬಾ ಕಡಿಮೆಯಿವೆ. ಈಗ ಈ ಚುನಾವಣೆಗಳನ್ನು ಆಕ್ರಮಿಸುವುದೇ ಭಾರತದ ಗಣತಂತ್ರವನ್ನು ವಿರೂಪಗೊಳಿಸುವುದಕ್ಕೆ ಮತ್ತು ಭಾರತದ ಸರಕಾರವನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳುವ ಮೊದಲ ಹೆಜ್ಜೆಯಾಗಿದೆ. ಈ ಆಕ್ರಮಣದ ವಿಧಾನವನ್ನು ತಿಳಿದುಕೊಳ್ಳುವುದು ಮತ್ತು ತಡೆಗಟ್ಟುವುದು ಇಂದಿನ ಎಲ್ಲಾ ದೇಶಭಕ್ತರ ಕರ್ತವ್ಯವಾಗಿದೆ.
ಚುನಾವಣೆಗಳು ಇಂತಹ ಸಮಯದಲ್ಲಿ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇರುತ್ತವೆ ಆದರೆ, ರಾಜಕೀಯ ಅದೃಷ್ಟಗಳಲ್ಲಿ ಪುಲ್ವಾಮಾ ಆದ ನಂತರದ ಈ ಹಠಾತ್ ತಿರುವು ಅಂತಹ ಒಂದು ತಿರುವಲ್ಲ. ಮೋದಿ ಅವರು ಪದೇಪದೇ ಮಾಡುವ ಮತ್ತೊಂದು ಚಾಣಾಕ್ಷ ತಿರುವು ಇದಲ್ಲ. ಹಿಂದಿನ ದಿನಗಳಲ್ಲಿ ಆಗುತ್ತಿದ್ದ ಬೂತ್ ಆಕ್ರಮಣದಂತೆ ಇದು ಸ್ಥಳೀಯವಾಗಿಯೂ ಇಲ್ಲ ಮತ್ತು ಚುನಾವಣೆ ಕಳ್ಳತನದ ಪ್ರಯತ್ನಗಳಂತೆ ಒರಟಾದ ಪ್ರಯತ್ನವೂ ಅಲ್ಲ. ಇದು ಭಾರತದ ಸಂಪೂರ್ಣ ಮನಸ್ಥಿತಿಯನ್ನೇ ಬೃಹತ್ ಮಟ್ಟದಲ್ಲಿ ಆಕ್ರಮಿಸುವ ಯತ್ನವಾಗಿದೆ. ಇದು ಜನಾಭಿಪ್ರಾಯದ ಸರಳ ಕಳ್ಳತನವಲ್ಲ. ಇದು ಹಗಲುದರೋಡೆ.
ಈ ಮತಗಟ್ಟೆಯ ಆಕ್ರಮಣ 21ನೇ ಶತಮಾನದ ಒಂದು ಕಾರ್ಯಾಚರಣೆಯ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ. ಬೂತ್ ಆಕ್ರಮಣದ ದಿನಗಳಲ್ಲಿ ಬಳಕೆಯಾಗುತ್ತಿದ್ದ ತೋಳ್ಬಲವನ್ನು ಇಲ್ಲಿ ಬಳಸಿಕೊಳ್ಳುತ್ತಿಲ್ಲ. ಒತ್ತಾಯದ ಮನವೊಲಿಕೆ ಆಗುತ್ತಿದ್ದರೆ ಅದಕ್ಕೆ ತೋಳ್ಬಲವನ್ನು ಬಳಸದೇ, ಸರಕಾರದ ಅಧಿಕಾರದ ದುರ್ಬಳಕೆಯಿಂದ ಆಗುತ್ತಿದೆ. ಈ ಚುನಾವಣಾ ತಿರುಚುವಿಕೆಗೆ ಇವಿಎಮ್‍ಗಳ ದುರ್ಬಳಕೆಯ ಅವಶ್ಯಕತೆ ಇಲ್ಲ. ವಿವೇಚನೆಯಿಲ್ಲದ ಲಕ್ಷಾಂತರ ಬೆಂಬಲಿಗರನ್ನು ಸಜ್ಜುಗೊಳಿಸಲು ಅದರ ವಿನೂತನ ನಿರ್ವಹಣಾ ವಿಧಾನಗಳೊಂದಿಗೆ, ಬಿಜೆಪಿಯ ಸುಪ್ರಸಿದ್ಧ ಸಂಘಟನಾ ಯಂತ್ರದಿಂದಲೇ ಹೆಚ್ಚಿನ ಕೆಲಸ ಆಗಿಬಿಡುತ್ತದೆ. ಹಣಬಲ ಅದೂ ಬೆಟ್ಟದಷ್ಟು, ಎಲೆಕ್ಟೋರಲ್ ಬಾಂಡ್ಸ್‍ಗಳಿಂದ ನ್ಯಾಯಸಮ್ಮತವಾಗಿ ಬಂದ ಹಣಬಲ ತನ್ನ ಕೆಲಸ ಮಾಡುತ್ತಿದೆ. ಕಳೆದ ಐದು ವರ್ಷಗಳಿಂದ, ಮಾಧ್ಯಮವನ್ನು ತಮಗಾಗಿ ಕೆಲಸ ಮಾಡುವಂತೆ ಈಗಾಗಲೇ ನಿಯುಕ್ತಿಗೊಳಿಸಲಾಗಿದೆ, ಲಂಚ ತಿನ್ನಿಸಲಾಗಿದೆ, ಒತ್ತಾಯಿಸಲಾಗಿದೆ, ಶರಣಾಗತಿಯಾಗುವಂತೆ ಹೆದರಿಸಲಾಗಿದೆ. ವರ್ಚಸ್ಸುಳ್ಳ ಒಬ್ಬ ಆಧುನಿಕ ನಾಯಕ, ಜನರನ್ನು ಹುಚ್ಚೆಬ್ಬಿಸುವಂತೆ ಮಾತನಾಡುವ ಒಬ್ಬ ನಾಯಕ, ಸೌಜನ್ಯ ನಾಗರಿಕತೆಯನ್ನು ಗಾಳಿಗೆ ತೂರಬಲ್ಲ ಹಾಗೂ ಸತ್ಯದ ಪ್ರಾಮಾಣ್ಯವನ್ನೂ ಗಾಳಿಗೆ ತೂರಬಲ್ಲ ಒಬ್ಬ ನಾಯಕ ಈ ಆಕ್ರಮಣದ ನಾಯಕತ್ವವನ್ನು ಹೊಂದಲಿದ್ದಾನೆ.
ಹಿನ್ನೆಲೆಯಲ್ಲಿರುವ ಈ ಎಲ್ಲಾ ತಯಾರಿಯ ಹೊರತಾಗಿಯೂ, ಬಿಜೆಪಿಯ 2019ರ ಮಿಷನ್ ಒಂದು ಅಡಚಣೆಯನ್ನು ಎದುರಿಸಲಿದೆ : ಅದು ಸಾರ್ವಜನಿಕರ ಅಭಿಪ್ರಾಯ. ಕಳೆದ ಒಂದು ವರ್ಷದಿಂದ, ವಿಶೇಷವಾಗಿ ಡಿಸೆಂಬರ್ 2018ರಿಂದ ಈ ಆಳ್ವಿಕೆಯ ಜನಪ್ರಿಯತೆ ರಭಸದಿಂದ ಕೆಳಗಿಳಿಯುತ್ತಿತ್ತು. ಹೌದು, ಎಲ್ಲರೂ ನನ್ನ ಮಾತುಗಳನ್ನು ಒಪ್ಪುವುದಿಲ್ಲ, ಆದರೆ ಅನೇಕ ರಾಜಕೀಯ ವಿಶ್ಲೇಷಕರು ಆಡಳಿತ ಪಕ್ಷ ಕನಿಷ್ಠ 100 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಹಾಗೂ ಸರಕಾರ ರಚನೆಗೆ ಬೇಕಾಗುವ ಕನಿಷ್ಠ ಸಂಖ್ಯೆಗಿಂತ ಕಡಿಮೆ ಸಂಖ್ಯೆ ಸಿಗಲಿದೆ ಎಂದು ನನ್ನ ಅಭಿಪ್ರಾಯಕ್ಕೆ ತಮ್ಮ ಸಮ್ಮತಿ ಸೂಚಿಸಿದ್ದರು. ರಾಜಕೀಯ ಕಥನದ ಈ ಸೋಲನ್ನು ತಡೆಗಟ್ಟಲು ಬೃಹತ್ತಾದ ಏನಾದರೂ ಬೇಕಾಗಿತ್ತು.
ವಿಚಿತ್ರವೆಂದರೆ, ಇದೇ ಸಂಕಷ್ಟದ ಸಮಯದಲ್ಲಿ ಪುಲ್ವಾಮಾ ದಾಳಿ ನಡೆಯಿತು. ದಾಳಿಯ ಹೊಣೆಯನ್ನು ಜೈಷ್-ಎ-ಮೊಹಮ್ಮದ್ ಹೊತ್ತಿದೆ ಎಂದು ಎಲ್ಲರಿಗೂ ಗೊತ್ತು, ಆದರೆ ಪುಲ್ವಾಮಾ ದಾಳಿಯನ್ನು ನಿರ್ದಿಷ್ಟವಾಗಿ ಯಾರು ಯೋಜನೆ ಮಾಡಿದ್ದು ಹಾಗೂ ಯಾವ ಉದ್ದೇಶದಿಂದ ಮಾಡಿದ್ದು ಎಂಬುದು ನಮಗೆ ತಿಳಿದಿಲ್ಲ. ಅತ್ಯಂತ ಮಹತ್ವದ ಚುನಾವಣೆಯನ್ನು ಇಂತಹ ಘಟನೆಯೊಂದು ಹಳಿತಪ್ಪಿಸಬಹುದು ಎಂದು ನಮ್ಮೆಲ್ಲರಿಗೂ ಗೊತ್ತು. ಹಾಗೆಯೇ ಆಯಿತು ಕೂಡ. ರೈತರ ಮತ್ತು ನಿರುದ್ಯೋಗಿ ಯುವಜನರ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ಸರಕಾರಕ್ಕೆ ಒಂದು ಹೇಳಿಮಾಡಿಸಿದಂತಹ ಅವಕಾಶವನ್ನಂತೂ ಕಲ್ಪಿಸಿತು.
ಈ ಘಟನೆಯಾದ ನಂತರ ಬಿಜೆಪಿ ಆಡಿದ ಆಟ ಇಂತಿದೆ : ತನ್ನ ಹತೋಟಿಯಲ್ಲಿರುವ ಎಲ್ಲಾ ದಾರಿಗಳನ್ನು ಬಳಸಿ ಮಾಧ್ಯಮಗಳ ಗಮನವನ್ನು ರಾಷ್ಟ್ರೀಯ ಸುರಕ್ಷತೆಯೆಡೆಗೆ ತಳ್ಳುವುದು, ಕೆಲವು ತಥ್ಯಗಳನ್ನು ಬಳಸುವುದು, ಹೆಚ್ಚಿನ ಪ್ರಚಾರ ಮಾಡುವುದು ಮತ್ತು ಕೆಲವು ಹಸಿ ಸುಳ್ಳುಗಳನ್ನು ಹೇಳಿ ಮತ್ತು ಈ ವಿಷಯಕ್ಕೆ ಸಂಬಂಧಪಟ್ಟಂತೆ ಒಡೆತನ ಸಾಧಿಸುವಂತೆ ವಾಸ್ತವವನ್ನು ತಿರುಚುವುದು ಹಾಗೂ ತನ್ನ ಸಂಘಟನಾ ಕಾರ್ಯದ ಬಲವಾದ ಬೆಂಬಲದೊಂದಿಗೆ ಈ ವಿಷಯವನ್ನು ಆಡಳಿತ ಪಕ್ಷಕ್ಕೆ ಮತಗಳನ್ನಾಗಿ ಪರಿವರ್ತನೆ ಮಾಡುವುದು ಬಿಜೆಪಿಯ ಕಾರ್ಯತಂತ್ರ.
ಪುಲ್ವಾಮಾ ಆದ ನಂತರ, ಮಾಧ್ಯಮಗಳ ಮೇಲಿದ್ದ ಈ ಆಳ್ವಿಕೆಯ ಹಿಡಿತ ಉತ್ತುಂಗಕ್ಕೇರಿದೆ. ರಾಷ್ಟ್ರೀಯ ಸುರಕ್ಷತೆಯ ಕಾಳಜಿಗಳು ಮತ್ತು ಯುದ್ಧದಂತಹ ಪರಿಸ್ಥಿತಿಗಳ ಕಾರಣದಿಂದ ಮಾಧ್ಯಮಗಳು ಶರಣಾಗತಿ ಪ್ರಕಟಿಸಿ, ಸ್ವತಃ ತಾವೇ ಸೆನ್ಸಾರ್‍ಷಿಪ್ ಹಾಕಿಕೊಂಡಿವೆ, ಇದರೊಂದಿಗೆ ಈಗಾಗಲೇ ಇದ್ದ ತಂತ್ರಗಳೂ ತೀವ್ರಗೊಂಡಿವೆ, ಅಂದರೆ, ಜಾಹೀರಾತುಗಳು, ಮಾಧ್ಯಮಗಳ ಮಾಲೀಕರ ಮೇಲೆ ಒತ್ತಡ, ಇವರು ತೋರಿಸಿದ ದಾರಿಯನ್ನು ತುಳಿಯದ ಪತ್ರಕರ್ತರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ನೀಡುವುದು, ಇತ್ಯಾದಿ. ಕೆಲವನ್ನು ಹೊರತುಪಡಿಸಿ, ಈ ಆಳ್ವಿಕೆಯನ್ನು ಟೀಕಿಸುತ್ತಿದ್ದ ಎಲ್ಲ ಮಾಧ್ಯಮಗಳೂ ಈಗ ತಟಸ್ಥ ನೀತಿಯನ್ನು ಅನುಸರಿಸುತ್ತಿವೆ.
ಇಂತಹ ಪರಿಸ್ಥಿತಿಗಳಲ್ಲಿ, ಬಿಜೇಪಿಯ ‘ವಿದ್ವಾಂಸ’ರು ವಿವೇಚನೆಯನ್ನೇ ಅಣಕಿಸುವಂತಹ ಒಂದು ವಿಶೇಷ ಹೆಜ್ಜೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ; ಸುರಕ್ಷಾಬಲಗಳಿಗೆ ಟೀಕೆಯಿಂದ ವಿನಾಯಿತಿ ಮುಂಚೆಯಿಂದಲೂ ಇತ್ತು ಆದರೆ ಇಂದು ಆ ವಿನಾಯಿತಿಯನ್ನು ಆಡಳಿತ ಪಕ್ಷಕ್ಕೆ ತಂದುಕೊಂಡಿದ್ದಾರೆ. ಇದನ್ನು ವಾದಗಳ ಚಾಣಾಕ್ಷ ಸಂಯೋಗದಿಂದ ಮಾಡಲಾಗಿದೆ. ಯುದ್ಧದ ಪರಿಸ್ಥಿತಿಗಳಲ್ಲಿ, ರಾಷ್ಟ್ರೀಯ ಸುರಕ್ಷತೆಯ ವಿಷಯಗಳಲ್ಲಿ ಕೂಲಂಕಷ ತನಿಖೆ ಮತ್ತು ಪ್ರಮಾಣ/ಸಾಕ್ಷ್ಯಗಳ ಗುಣಮಟ್ಟಗಳನ್ನು ಬದಿಗಿಡುವುದು ಅವಶ್ಯಕವಾಗಿರುತ್ತದೆ. ಆದರೆ ಇಂತಹ ಒಂದು ಪರಿಸ್ಥಿತಿ ನಿರ್ಮಾಣವಾಗಬೇಕೆಂದರೆ, ಒಂದು ರೀತಿಯ ರಾಷ್ಟ್ರೀಯ ಒಮ್ಮತ ನಿರ್ಮಾಣವಾಗಬೇಕು ಹಾಗೂ ಅದರ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಅಂದರೆ ಯಾರೂ ಆರೋಪ-ಪ್ರತ್ಯಾರೋಪಗಳ ಆಟ ಆಡಬಾರದು, ಯಾರೂ ಪಕ್ಷಪಾತವಾದ ಕ್ರೆಡಿಟ್ ಪಡೆಯಬಾರದು. ಆದರೆ ಚುನಾವಣಾ ಸ್ಪರ್ಧೆಯ ರೂಢಿಗಳು ಒಟ್ಟಾರೆಯಾಗಿ ಬೇರೆಯಾಗಿರುತ್ತವೆ. ಇಲ್ಲಿ ಎಲ್ಲಾ ಹೇಳಿಕೆಗಳಿಗೆ ಅಪರಿಮಿತವಾಗಿ ತನಿಖೆ ಮತ್ತು ಕನಿಕರವೇ ಇಲ್ಲದ ಸಾರ್ವಜನಿಕ ಟೀಕೆಗಳಿಗೆ ಒಳಗಾಗಬೇಕಾಗುತ್ತದೆ.
ಪುಲ್ವಾಮಾ ಘಟನೆಯ ನಂತರ ಬಿಜೆಪಿಯು ರಣಭೂಮಿಯಲ್ಲಿ ಇರಬೇಕಾದ ನೀತಿನಿಯಮಗಳನ್ನು ಚುನಾವಣಾ ಕ್ಷೇತ್ರಕ್ಕೆ ತಂದಿಟ್ಟಿದೆ ಆದರೆ ಇಲ್ಲಿ ವಿರೋಧಪಕ್ಷಗಳಿಗೆ ಮಾತ್ರ ಈ ಎಲ್ಲ ವಿಶೇಷ ಪ್ರತಿಬಂಧಗಳು ಅನ್ವಯವಾಗುತ್ತವೆ. ಪ್ರಧಾನಮಂತ್ರಿಯು ಮಿಲಿಟರಿ ಕ್ರಮಗಳಿಗೆ ಪಕ್ಷಪಾತಿಯಾದ ಮತ್ತು ವೈಯಕ್ತಿಕವಾದ ಪ್ರಚಾರವನ್ನು ಮಾಡುತ್ತ ಹೋಗಬಹುದು ಆದರೆ ಇವರ ವಿರೋಧಿಗಳಿಗೆ ಮಾತ್ರ ಪ್ರತಿಬಂಧವನ್ನು ಪಾಲಿಸಬೇಕಾದ ಹೊರೆ ಇದ್ದಂತಿದೆ. ಚುನಾವಣಾ ಪ್ರಚಾರದ ಮಾರ್ಗದಲ್ಲಿ ಆಡಳಿತ ಪಕ್ಷವು ಎಲ್ಲದಕ್ಕೂ ಕ್ರೆಡಿಟ್ ಪಡೆಯುವ ಹಕ್ಕು ಪಡೆದುಕೊಂಡಿದೆ. ರಾಷ್ಟ್ರೀಯ ಸುರಕ್ಷತೆಯ ವಿಷಯದಲ್ಲಿ ಯಾರೂ ರಾಜಕೀಯ ಮಾಡುವಂತಿಲ್ಲ, ಆಡಳಿತ ಪಕ್ಷವೊಂದನ್ನು ಹೊರತುಪಡಿಸಿ.
ಮುಂದಿನ ಎರಡು ತಿಂಗಳಲ್ಲಿ, ಒಂದು ಆಕ್ರಮಣಕಾರಿ ಪ್ರಚಾರವನ್ನು ನಾವು ನಿರೀಕ್ಷಿಸಬಹುದು. ಅದರ ಒಂದು ಚಿತ್ರಣವನ್ನು ನಾವೀಗಾಗಲೇ ನೋಡಿದ್ದೇವೆ; ಹುತಾತ್ಮ ಯೋಧರ ಚಿತ್ರಗಳನ್ನಿಟ್ಟುಕೊಂಡ ಚುನಾವಣಾ ವೇದಿಕೆ, ಚುನಾವಣಾ ಪೋಸ್ಟರ್‍ಗಳ ಮೇಲೆ ರೈಫಲ್‍ಗಳು ಮತ್ತು ಯುದ್ಧವಿಮಾನಗಳು, ಸೈನಿಕರ ದಿರುಸಿನಲ್ಲಿ ರಾಜಕಾರಣಿಗಳು ಇತ್ಯಾದಿ. ನಾವು ಮುಂದಿನ ದಿನಗಳಲ್ಲಿ ಇನ್ನಷ್ಟನ್ನು ನಿರೀಕ್ಷಿಸಬಹದು: ಬಿರುಸಿನ ಪ್ರಚಾರ, ಮಾಧ್ಯಮಗಳ ಮೇಲಿನ ಒತ್ತಡದಲ್ಲಿ ತೀವ್ರತೆ ಹಾಗೂ ಭಿನ್ನಮತೀಯ ಧ್ವನಿಗಳನ್ನು ಎಡಬಿಡದೇ ಪೀಡಿಸುವುದು ಇದರೊಂದಿಗೆ ಚುನಾವಣಾ ದುವ್ರ್ಯವಹಾರಗಳ ಸಹನೆಗಿರುವ ಚೌಕಟ್ಟನ್ನು ವಿಸ್ತರಿಸಲು ಚುನಾವಣಾ ಆಯೋಗ ವಿಚಾರಮಾಡುತ್ತಿರಬಹುದು. ಇನ್ನೊಂದು ಸರ್ಜಿಕಲ್ ದಾಳಿ ಆಗುವುದಿಲ್ಲ ಎಂದು ಹೇಳಲಾಗದು, ಬಹುಶಃ ಚುನಾವಣೆಯ ದಿನ ತುಂಬಾ ಹತ್ತಿರದಲ್ಲಿದ್ದಾಗ, ಅಥವಾ ಒಂದು ದೊಡ್ಡ ಕೋಮು ಗಲಭೆ. ದಾರಿ ಯಾವುದೇ ಇರಲಿ, ರಾಷ್ಟ್ರೀಯ ಸುರಕ್ಷತೆಗೆ ಆಂತರಿಕ ಮತ್ತು ಬಾಹ್ಯ ಅಪಾಯಗಳ ಮೇಲೆ ಇರುವ ಫೋಕಸ್ ಕಡಿಮೆಯಾಗದಂತೆ ನೋಡಿಕೊಳ್ಳಲಾಗುವುದು.
ಇವೆಲ್ಲವುಗಳ ಅಂತಿಮ ಫಲಿತಾಂಶ ಏನಾಗುವುದು ಎಂದು ಈಗಲೇ ಹೇಳಲು ಸಾಧ್ಯವಿಲ್ಲ. 2014ರಲ್ಲಿ ಎಲ್ಲ ಪ್ರದೇಶಗಳಲ್ಲಿ, ಎಲ್ಲ ವರ್ಗಗಳಲ್ಲಿ ಮತ್ತು ಸಮುದಾಯಗಳಲ್ಲಿ ಒಂದು ಅಲೆ ಬೀಸಿತ್ತು. ಈ ಹಂತದಲ್ಲಿ ಅಂತಹ ಅಲೆಯನ್ನಂತೂ ನಾವು ಕಾಣುತ್ತಿಲ್ಲ, ಉದಾಹರಣೆಗೆ, ಇಂದಿನ ರಾಜಕೀಯ ವಾತಾವರಣವು ತಮಿಳುನಾಡು ಮತ್ತು ಆಂಧ್ರ್ರಪ್ರದೇಶದಲ್ಲಿಯ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತೆ ಎಂದು ಯೋಚಿಸುವುದು ಮೂರ್ಖತನವಾದೀತು. ಈ ಮತದಾನದ ಆಕ್ರಮಿಸುವಿಕೆ ಮುಖ್ಯವಾಗಿ ಹಿಂದಿ ಪ್ರದೇಶಗಳಿಗೆ ಗುರಿಯಾಗಿ ಮಾಡಿದೆ ಅದರೊಂದಿಗೆ ಮಹಾರಾಷ್ಟ್ರ, ಗುಜರಾತ್‍ನಲ್ಲಿ ಸ್ವಲ್ಪ ಪರಿಣಾಮವಿದ್ದು, ಒರಿಸ್ಸಾ ಮತ್ತು ಬಂಗಾಳದಲ್ಲಿಯೂ ಸಾಧ್ಯತೆ ಇರಬಹುದಾಗಿದೆ. ಇವರ ಗುರಿಯೇನೆಂದರೆ, 22 ರಿಂದ 50 ಹೆಚ್ಚುವರಿ ಸ್ಥಾನಗಳನ್ನು ಗೆದ್ದುಕೊಡುವಂತೆ 2 ರಿಂದ 5% ಮತಗಳನ್ನು ಬಿಜೆಪಿ ಪರ ತಿರುಗಿಸಬೇಕು. ಅಧಿಕಾರವನ್ನು ಹಿಡಿದಿಟ್ಟುಕೊಳ್ಳಲು ಇವರು ಮಾಡಬೇಕಾಗಿದ್ದು ಇಷ್ಟೇ.
ಈ ಆಕ್ರಮಣದಿಂದ ಆತಂಕಗೊಳಗಾಗಿರುವವರು ಒಂದನ್ನು ನೆನಪಿಡಬೇಕಿದೆ: ಇದಕ್ಕೆಲ್ಲ ಹೊಣೆ ಹೊರಬೇಕಾಗಿರುವವರು ನಾವೇ ಎನ್ನುವುದು. ಅರ್ಧ ಶತಕದ ಸೈದ್ಧಾಂತಿಕ ಆಲಸ್ಯ/ಮೈಮರೆವು, ದಶಕಗಳ ಸಂಸ್ಥೆಗಳ ನಿರ್ಲಕ್ಷ್ಯ ಹಾಗೂ ಅನೇಕ ವರ್ಷಗಳ ರಾಜಕೀಯ ಜಡತ್ವವು ಪ್ರಜಾಪ್ರಭುತ್ವದ ಇಂತಹ ಆಕ್ರಮಣವನ್ನು ಅನುವು ಮಾಡಿಕೊಡುವ ಈ ಹಂತಕ್ಕೆ ತಂದು ತಲುಪಿಸಿವೆ.
ಭಾರತದ ಪರಿಕಲ್ಪನೆಯಲ್ಲಿ ನಂಬಿಕಯಿಟ್ಟವರಿಗೆ, ಈ ಆಕ್ರಮಣವನ್ನು ವಿರೋಧಿಸುವುದು ಮತ್ತು ತಡೆಗಟ್ಟುವುದು ಇಂದಿನ ಮೊಟ್ಟಮೊದಲ ಕರ್ತವ್ಯ; ಆಪತ್‍ಧರ್ಮವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...