ಅವಿಭಜಿತ ದಕ್ಷಿಣ ಕನ್ನಡ ಹೇಳಿಕೇಳಿ ಸಂಘಪರಿವಾರದ ಪುಂಡ-ಪೋಕರಿಗಳ ಆಡಂಬೋಲ. ಹಿಂದುತ್ವದ ಪ್ರಯೋಗ ಶಾಲೆಯೆಂಬ ಭೀಭತ್ಸ ’ಅಡ್ಡ’ ಹೆಸರು ದಕ್ಷಿಣ ಕನ್ನಡಕ್ಕೆ ಬಿದ್ದು ಅದ್ಯಾವುದೋ ಕಾಲವಾಗಿ ಹೋಗಿದೆ! ಕೊರೊನಾದ ಆತಂಕದಿಂದ ಒಂಚೂರು ಹಿಮ್ಮೆಟ್ಟಿದ್ದ ಸಂಘಪರಿವಾರದ ಅನೈತಿಕ ಪೊಲೀಸ್‌ಗಿರಿ ಈಗ ಮತ್ತೆ ಬಾಲ ಬಿಚ್ಚಿದೆ. ಸಂಘ ಪರಿವಾರದ ಸರದಾರರು ರೋಡ್ ರೌಡಿಗಳು, ಭೂಗತ ಪಾತಕಿಗಳು, ಬೀದಿ ಕಾಮಣ್ಣರು ಮತ್ತು ಕ್ರಿಮಿನಲ್ ಪುಂಡರಿಗೆ ಹಿಂದುತ್ವ ದೀಕ್ಷೆಕೊಟ್ಟು ಧರ್ಮಕಾರಣದ ಹಿಡನ್ ಅಜೆಂಡಾ ಈಡೇರಿಸಿಕೊಳ್ಳಲು ಹವಣಿಸುತ್ತಿದ್ದಾರೆಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಮಡುಗಟ್ಟಿದೆ.

ಈ ಹಿಂದುತ್ವದ ಯಜ್ಞಕ್ಕೆ ಗೋಪ್ರಾಣ ಮತ್ತು ಹಿಂದೂ ಹೆಣ್ಣಿನ ಮಾನವೇ ಹವಿಸ್ಸು! ಮುಸ್ಲಿಮ್ ಹುಡುಗ ಮತ್ತು ಹಿಂದೂ ಹುಡುಗಿ ಸಹಪಾಠಿಗಳೆಂಬ ನೈತಿಕ ನೆಲೆಯಲ್ಲಿ ಒಡನಾಡಿದರೂ ಸಾಕು, ಧರ್ಮ “ದಂಡ” ಎತ್ತಿಕೊಂಡು ಅಟ್ಟಾಡಿಸಿ-ಅವಮಾನಿಸಿ ದಾಳಿ ಮಾಡುವ ಸಂಘಪರಿವಾರದ ತರಹೇವಾರಿ ತಂಡಗಳ ಹಾವಳಿ ಈಗಿತ್ತಲಾಗಿ ಮಿತಿಮೀರುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಕೇಸರಿ ಸರ್ಕಾರವೇ ಇರುವುದು ಪರಿವಾರದ ಹಲ್ಲೆಕೋರರ ಹಾರಾಟವನ್ನು ಹೆಚ್ಚಿಸಿಬಿಟ್ಟಿದೆ. ಕಳೆದ ಕೆಲವು ದಿನಗಳಿಂದ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಲವೆಡೆ ಹಿಂದೂ ರಕ್ಷಕ ಮುಖವಾಡದಲ್ಲಿ ಪಕ್ಕ ರೌಡಿಗಳು ಅನೈತಿಕ ಪೊಲೀಸ್‌ಗಿರಿಯನ್ನು ನಿರಂತಕವಾಗಿ ಪ್ರದರ್ಶಿಸುತ್ತಿದ್ದಾರೆ.

ಲವ್ ಜಿಹಾದ್‌ನಿಂದ ಹಿಂದೂ ಹೆಣ್ಣುಮಕ್ಕಳನ್ನು ಸಂರಕ್ಷಿಸುವ ಹುಸಿ ಪೋಸು ಕೊಡುತ್ತ ಪೂರ್ವಾಪರ ಯೋಚಿಸಿದೆ ಅಮಾಯಕ ಹಿಂದೂ ಹುಡುಗಿಯರನ್ನು ಸಾರ್ವಜನಿಕವಾಗಿ ಅಡ್ಡಹಾಕಿ ಅಶ್ಲೀಲವಾಗಿ ನಿಂದಿಸಿ, ದೈಹಿಕ ಕುಚೇಷ್ಟೆ ಮತ್ತು ಹಲ್ಲೆ ಮಾಡಿ ಮಾನ ಹರಾಜು ಹಾಕುವ ’ಧರ್ಮಕಾರ್ಯ ದಕ್ಷಿಣ ಕನ್ನಡದಲ್ಲಿ ಜೋರಾಗಿದೆ. ಕಳೆದೆರಡು ತಿಂಗಳಲ್ಲಿ ಮಂಗಳೂರಿನ ಬೀಚು, ಪಾರ್ಕುಗಳಲ್ಲಿ ಅನ್ಯಧರ್ಮೀಯ ಹುಡುಗ-ಹುಡುಗಿಯರ ಚಾರಿತ್ರ್ಯವಧೆ-ಹಲ್ಲೆ ನಡೆದುಹೋಗಿದೆ. ನೈತಿಕತೆ ಹೆಸರಲ್ಲಿ ಈ ಪಡೆಗಳು ಕಾನೂನು ಕೈಗೆತ್ತಿಕೊಂಡ ಪ್ರಕರಣ ಕಳೆದ ವಾರ ಸುರತ್ಕಲ್ ಮತ್ತು ಬೆಳ್ತಂಗಡಿಯಲ್ಲಾಗಿದೆ. ದೇಶವನ್ನು ಕಾಡುತ್ತಿರುವ ಆರ್ಥಿಕ ಹಿಂಜರಿತ ಮತ್ತು ಕೊರೊನಾ ಆರ್ಭಟದಿಂದ ಮಂಗಳೂರಿನ ವ್ಯಾಪಾರ-ವಹಿವಾಟಿಗೆ ದೊಡ್ಡ ಹೊಡೆತ ಬಿದ್ದಿರುವ ಈ ಕಾಲಘಟ್ಟದಲ್ಲಿ ಅನೈತಿಕ ಪೊಲೀಸ್‌ಗಿರಿ ಭುಗಿಲೇಳುತ್ತಿರುವುದು ಜನರನ್ನು ಕಂಗಾಲಾಗಿಸಿಬಿಟ್ಟಿದೆ.

ಈ ಹಿಂದೆಯೂ ಸಂಘಪರಿವಾರದ ಅನೈತಿಕ ಪೊಲೀಸ್‌ಗಿರಿಯಿಂದ ದಕ್ಷಿಣ ಕನ್ನಡದ ಆರ್ಥಿಕ ವಲಯ ಘಾಸಿಗೊಂಡಿತ್ತು; ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಮಂಗಳೂರು ಮತ್ತು ದಕ್ಷಿಣ ಕನ್ನಡದ ಇನ್ನಿತರ ಪಟ್ಟಣಗಳಿಗೆ ಬರಲು ಉದ್ಯಮಿಗಳು ಬಂಡವಾಳಗಾರರು, ವರ್ತಕರು ಹಾಗೂ ಗ್ರಾಹಕರು ಹೆದರುತ್ತಿದ್ದರು. ಆ ಕಳಂಕದಿಂದ ಹೊರಬರುತ್ತಿರುವ ಹೊತ್ತಲ್ಲೇ ಮಂಗಳೂರು ಮತ್ತದರ ಸುತ್ತಮುತ್ತ ಅನೈತಿಕ ಪೊಲೀಸ್‌ಗಿರಿ ಪ್ರವರ ಪ್ರಾರಂಭವಾಗಿರುವುದು ಸ್ಥಳೀಯ ಆರ್ಥಿಕತೆಯನ್ನೂ ಬುಡಮೇಲಾಗಿಸುತ್ತಿದೆ. ಕಳೆದ ಗುರುವಾರ (ಏಪ್ರಿಲ್ 1, 2021) ರಾತ್ರಿ ಅಸ್ವಿದ್ ಅನ್ವರ್ ಮುಹಮ್ಮದ್ ಎಂಬ 24 ವರ್ಷದ ಸಾಬರ ಪೋರ ಮತ್ತಾತನ ಹಿಂದೂ ಸಹಪಾಠಿಯಾದ ಕೊಂಕಣಿ ಹುಡುಗಿಯ ಮೇಲೆ ಭಜರಂಗಿಗಳು ಮಾರಣಾಂತಿಕ ದಾಳಿ ಮಾಡಿ ಸುಖಾಸುಮ್ಮನೆ ಅವರ ಮಾನ ಬೀದಿಪಾಲು ಮಾಡಲು ಹವಣಿಸಿದ್ದಾರೆ.

ಅಸ್ವಿದ್ ಮತ್ತು ಆ ಕೊಂಕಣಿ ಹುಡುಗಿ ಕ್ಲಾಸ್‌ಮೇಟ್‌ಗಳು. ಇತ್ತೀಚೆಗಷ್ಟೆ ಡಿಗ್ರಿ ಮುಗಿಸಿದ್ದ ಈ ಸಹಪಾಠಿಗಳು ಉದ್ಯೋಗ ಹುಡುಕುತ್ತಿದ್ದರು. ಹುಡುಗಿಗೆ ಬೆಂಗಳೂರಿನ ಕಂಪನಿಯೊಂದು ಸಂದರ್ಶನಕ್ಕೆ ಕರೆದಿತ್ತು. ಬೆಂಗಳೂರು ಅಷ್ಟಾಗಿ ಪರಿಚಯವಿಲ್ಲದ ಆಕೆ ಆ ಮಾಯಾನಗರಿಯ ಬಗ್ಗೆ ಗೊತ್ತಿದ್ದ ಅಸ್ವಿದ್‌ನನ್ನು ತನ್ನೊಂದಿಗೆ ಬರುವಂತೆ ಹೇಳಿದ್ದಳು. ಗುರುವಾರ ರಾತ್ರಿ ಬೆಂಗಳೂರಿಗೆ ಹೋಗಲೆಂದು ಖಾಸಗಿ ಬಸ್ ಹತ್ತಿದ್ದರು. ಬಸ್ಸು ಪಂಪ್‌ವೆಲ್ ಬಳಿ ಬರುತ್ತಿದ್ದಂತೆ ಹಲವು ಕ್ರಿಮಿನಲ್ ಕೇಸ್‌ಗಳಲ್ಲಿ ಆರೋಪಿಗಳಾದ ಆರೆಂಟು ಮಂದಿ ಅಡ್ಡಗಟ್ಟಿದ್ದಾರೆ. ತಮ್ಮ ಸಂಬಂಧಿ ಪ್ರಯಾಣಿಕರೊಬ್ಬರಿಗೆ ಹುಷಾರಿಲ್ಲ; ಅವರನ್ನು ಉಪಚರಿಸಬೇಕಿದೆ ಎಂದು ಹೇಳಿ ಬಸ್ಸಿಗೆ ನುಗ್ಗಿದ್ದಾರೆ.

ಬಸ್‌ನಲ್ಲಿ ಅಸ್ವಿದ್ ಮತ್ತಾತನ ಕ್ಲಾಸ್‌ಮೇಟ್ ಹುಡುಗಿಯನ್ನು ದರದರನೆ ಎಳೆದು ಕೆಳಗೆ ಇಳಿಸಿದ್ದಾರೆ. ಹಿಂದೆ ಮುಂದೆ ನೋಡದೆ ಧರ್ಮೋನ್ಮಾದದ ವಿಚಾರಣೆ ನಡೆಸಿದ್ದಾರೆ. ಹೀಗೆ ಸಾಬರ ಹುಡುಗನ ಜತೆ ಹೋಗುವುದು ಧರ್ಮ ವಿರೋಧಿ ಎಂದೆನ್ನುತ್ತ ಹಿಂದೂ ಹುಡುಗಿಗೆ ಹೊಡೆಯತೊಡಗಿದ್ದಾರೆ. ಹುಡುಗನಿಗೂ ರೌಡಿಗಳು ಹಿಗ್ಗಾಮುಗ್ಗಾ ಹೊಡೆಯಲಾರಂಭಿಸಿದ್ದಾರೆ. ಆಗ ಆಕೆ ಈ ಹಲ್ಲೆಯನ್ನು ವಿರೋಧಿಸಿದ್ದಾಳೆ. ತಾನೇ ಆತನನ್ನು ಬರುವಂತೆ ಕರೆದಿದ್ದೇನೆ. ಇದು ಅನೈತಿಕ ಪ್ರಯಾಣವಲ್ಲ; ಬೆಂಗಳೂರಿನ ಪರಿಚಯ ಆತನಿಗಿರುವುದರಿಂದ ಜತೆಯಾಗಿ ಹೊರಟಿದ್ದೇನೆಂದು ಪರಿಪರಿಯಾಗಿ ಹೇಳಿದ್ದಾರೆ. ಆದರೆ “ದೆವ್ವ” ಮೈಮೇಲೆ ಬಂದಂತಿದ್ದ ಭಜರಂಗಿಗಳು ಇದ್ಯಾವುದನ್ನೂ ಕೇಳಿಲ್ಲ! ಹಿಂದೂ ಹೆಣ್ಣಿನ ರಕ್ಷಣೆಯ ಹೆಸರಲ್ಲಿ ಹಿಂದೂ ಹುಡುಗಿ ಮೈಮೇಲೆ ಕೈ ಮಾಡಿದ್ದಾರೆ. ಸಹಪಾಠಿಯ ಸಹಾಯಕ್ಕೆಂದು ಬೆಂಗಳೂರಿಗೆ ಹೊರಟ್ಟಿದ್ದ “ತಪ್ಪಿಗೆ” ಅಸ್ವಿದ್‌ಗೆ ಭಜರಂಗಿಗಳು ಚೂರಿಯಿಂದ ಕಂಡಕಂಡಲ್ಲಿ ಇರಿದಿದ್ದಾರೆ.

ಅಸ್ವಿದ್ ಹಲ್ಲೆಯಿಂದ ಜರ್ಜರಿತನಾಗಿ ಆಸ್ಪತ್ರೆ ಪಾಲಾಗಿದ್ದಾನೆ. ಹುಡುಗಿ ಇದ್ದದ್ದು ಇದ್ದಂತೆ ಪೊಲೀಸ್ ಕಂಪ್ಲೇಟು ಕೊಟಿದ್ದಾಳೆ. ಹಲ್ಲೆಕೋರ ಭಜರಂಗಿಗಳಲು “ಹಿಂದೂ ಹೀರೊ” ಇಮೇಜಿಗಾಗಿ ತಾವು ಹಿಂದೂ ಹುಡುಗಿ-ಸಾಬರ ಹುಡುಗನ ಮಾನ-ಪ್ರಾಣಕ್ಕೆ ಹಿಂಸೆ ಕೊಡುವುದನ್ನು, ಬೈದು ಕೇಕೆ ಹಾಕುವುದನ್ನು ವೀಡಿಯೋ ಮಾಡಿ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅಲ್ಲಿಗೆ ಅಮಾಯಕ ಹಿಂದೂ ಹುಡುಗಿಯ ಮಾನ ಹರಾಜು ಹಾಕಿದ ಕಿರಾತಕರ ಅಸಲಿ ಉದ್ದೇಶವೂ ಜಗಜ್ಜಾಹೀರಾಗಿದೆ! ಹಿಂದೂ ಹೆಣ್ಣಿನ ರಕ್ಷಣೆ-ಧರ್ಮ ರಕ್ಷಣೆ ಹೆಸರಲ್ಲಿ ಹೆಣ್ಣುಮಕ್ಕಳ ಮೇಲೆ ಹಲ್ಲೆ ಮಾಡುವ ಮತ್ತು ಅವರ ಚಾರಿತ್ರ್ಯವಧೆ ಮಾಡುವ ಪುಂಡರ ಉದ್ದೇಶ, ಸಂಘ ಪರಿವಾರದ ದೊರೆಗಳನ್ನು ಸಂಪ್ರೀತಗೊಳಿಸಿ ರಾಜಕೀಯ ಸ್ಥಾನಮಾನ ಅಥವಾ ಆರ್ಥಿಕ ಲಾಭ ಗಿಟ್ಟಿಸುವುದೇ ಹೊರತು ಹಿಂದೂ ಹುಡುಗಿಯರನ್ನು ಅಥವಾ ಧರ್ಮವನ್ನು ಕಾಪಾಡುವುದಲ್ಲ ಎಂಬುದು ಜನರಿಗೀಗ ಖಾತ್ರಿಯಾಗಿ ಹೋಗಿದೆ.

ಈ ಅನೈತಿಕ ಪೊಲೀಸ್‌ಗಿರಿ ಪ್ರಕರಣದಲ್ಲಿ ಮಂಗಳೂರು ಪೊಲೀಸ್ ಬಂಧಿಸಿರುವ ನಾಲ್ವರ “ಮಹಿಮೆ” ನೋಡಿದರೆ ಸಂಘ ಪರಿವಾರದ ರಿಂಗ್‌ಮಾಸ್ಟರ್‌ಗಳು ಹಿಂದುತ್ವ ಪ್ರಚಾರಕ್ಕೆ ಕ್ರಿಮಿನಲ್ ಪಾತಕಿಗಳನ್ನು ಬಳಸುತ್ತಿರುವುದು ನಿಸ್ಸಂಶಯವಾಗಿ ಸಾಬೀತಾಗುತ್ತದೆ. ಬಂಧಿಸಲಾಗಿರುವ ಅತ್ತಾವರ ಬಾಬುಗುಡ್ಡೆಯ ಬಾಲಚಂದ್ರ(28) ಕಂದಕದ ಧನುಷ್ ಭಂಡಾರಿ(25), ಶಕ್ತಿನಗರದ ಜಯಪ್ರಕಾಶ್(27) ಮತ್ತು ಉರ್ವದ ಅನಿಲ್‌ಕುಮಾರ್(38) ನಾಲ್ವರೂ ಕ್ರಿಮಿನಲ್ ಹಿನ್ನೆಲೆಯವರು. ಹಲವು ಪಾತಕದಲ್ಲಿ ಭಾಗಿಯಾಗಿರುವ ಈ ನಾಲ್ವರ ಮೇಲೆ ಒಂದಲ್ಲ; ಎರಡೆರಡು ಮತ್ತು ಮೂರುಮೂರು ಕೇಸುಗಳಿವೆ! ಇವರೆಲ್ಲರ ಮೇಲೆ ಕೊಲೆ ಯತ್ನ ಮತ್ತು ಹಲ್ಲೆ ಕೇಸು ಜಡಿಯಲಾಗಿದೆಯಾದರೂ, ಆಳುವ ಪಕ್ಷದ ಸಂಸದ, ಶಾಸಕ, ಮಂತ್ರಿಗಳ ಕೃಪಾಕಟಾಕ್ಷ ಭಜರಂಗಿಗಳಿಗೆ ಇರುವುದರಿಂದ ಕೇಸು ಹಳ್ಳ ಹಿಡಿಯುವುದು ಖಂಡಿತ ಎಂದು ಮಂಗಳೂರಿನಲ್ಲೀಗ ಚರ್ಚೆಯೂ ನಡೆದಿದೆ!

ಮಂಗಳೂರಿಗೆ ಮುಂದೆ ಇನ್ನೂ ಅದೆಂಥ ಕೇಡು ಕಾದಿದೆಯೋ?!


ಇದನ್ನೂ ಓದಿ: ಗೌರಿ ಕಾರ್ನರ್: ಕೋಮುವಾದಿಗಳ ನಡುವೆ ಇಂಥವರೂ ಉಂಟು; ಧರ್ಮಗಳ ನಡುವಿನ ಬಾಂಧವ್ಯಕ್ಕೆ ಉದಾಹರಣೆಗಳು ಅಸಂಖ್ಯಾತ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಶುದ್ಧೋಧನ
+ posts

LEAVE A REPLY

Please enter your comment!
Please enter your name here