Homeಅಂಕಣಗಳುಕಂಡದ್ದನ್ನು ಕಂಡಹಾಗೆ ಹೇಳಿದವರು....

ಕಂಡದ್ದನ್ನು ಕಂಡಹಾಗೆ ಹೇಳಿದವರು….

- Advertisement -
- Advertisement -

 ಗೌರಿ ಲಂಕೇಶ್
ಅಕ್ಟೋಬರ್ 26, 2005 (`ಕಂಡಹಾಗೆ’ ಸಂಪಾದಕೀಯದಿಂದ) |

ಅಮೆರಿಕಾ ಸರ್ಕಾರ ಕೊತಕೊತ ಕುದಿಯುತ್ತಿದೆ. ಯಾವ ದೇಶದ ಮೇಲೆ ಬೇಕಾದರು ದಾಳಿ ಮಾಡಿ ಮಾಡುವ ದೈವಾಜ್ಞೆ ತನಗಿದೆ ಎಂದು ಹೇಳುವ ಅದರ ಅಧ್ಯಕ್ಷ ಜಾರ್ಜ್ ಬುಷ್‍ಗೆ ಕಪಾಳಮೋಕ್ಷವಾಗಿದೆ.
ಸ್ವೀಡನ್ ದೇಶದಲ್ಲಿನ ನೊಬೆಲ್ ಸಮಿತಿ ಈ ವರ್ಷ ಮೊಹ್ಮದ್ ಎಲ್‍ಬರದೈಗೆ ಶಾಂತಿ ಪ್ರಶಸ್ತಿ ಪ್ರಕಟಿಸಿ ಬುಷ್‍ಗೆ ಸೆಡ್ಡು ಹೊಡೆದಿತ್ತಲ್ಲದೆ, ಈ ವಾರ ಹೆರಾಲ್ಡ್ ಪಿಂಟರ್ ಎಂಬ ಬ್ರಿಟಿಷ್ ನಾಟಕಕಾರನಿಗೆ ಪ್ರಶಸ್ತಿ ನೀಡಿ ಅಮೆರಿಕಕ್ಕೆ ಅವಮಾನಿಸಿದೆ. ನೊಬೆಲ್ ಪ್ರಶಸ್ತಿಗಳು ರಾಜಕೀಯ ಪ್ರೇರಿತಗೊಂಡು ಹಲವು ದಶಕಗಳೇ ಕಳೆದಿವೆ. ಹಾಗಾಗಿ ಅಮೆರಿಕಾಕ್ಕೆ ಎದುರಾಗಿ ಈ ಪ್ರಶಸ್ತಿಗಳನ್ನು ಘೋಷಿಸಿರುವುದು ರಾಜಕೀಯ ಕಾರಣಕ್ಕೂ ವಿಪರೀತ ಕುತೂಹಲ ಮೂಡಿಸಿವೆ.
2003ರಲ್ಲಿ ಇರಾಕ್‍ನಲ್ಲಿ weapons of mass destruction ಇದೆ ಎಂಬ ನೆಪವೊಡ್ಡಿ, ಸದ್ದಾಂ ಹುಸೇನ್‍ನಿಂದ ಜಗತ್ತನ್ನೇ ರಕ್ಷಿಸಬೇಕಿದೆ ಎಂದುಹೇಳಿ ಆ ದೇಶದ ಮೇಲೆ ಅಮೆರಿಕಾ ಹರಿಹಾಯ್ದುಹೋಗಲು ಸಜ್ಜಾಗುತ್ತಿದ್ದಾಗ, ಇಂಟರ್‍ನ್ಯಾಶನಲ್ ಅಟೋಮಿಕ್ ಎನರ್ಜಿ ಅಸೋಸಿಯೇಷನ್‍ನ ಮುಖ್ಯಸ್ಥರಾಗಿರುವ ಬರದೈರವರು `ಇರಾಕ್‍ನಲ್ಲಿ ಯಾವ weapons of mass destruction ಇಲ್ಲ’ ಎಂದೇಳಿ ಬುಷ್‍ಗೆ ಸವಾಲೊಡ್ಡಿದ್ದರು. ಆದರೂ ಬುಷ್ ಇರಾಕ್ ಮೇಲೆ ದಾಳಿಯಿಟ್ಟು ಬ್ರಿಟಿಷ್ ಸೈನ್ಯದ ಜೊತೆಗೂಡಿ ಸಾವಿರಾರು ಇರಾಕಿಗಳನ್ನು ಕೊಂದುಹಾಕಿ, ಆ ದೇಶದ ಆತ್ಮವನ್ನೇ ಸರ್ವನಾಶ ಮಾಡಿದ ತರುವಾಯ ಬುಷ್ ಮತ್ತು ಬ್ರಿಟನ್ನಿನ ಬ್ಲೇರ್ ಹೇಳಿದ್ದು ಅಪ್ಪಟ ಸುಳ್ಳು, ಬರದೈ ಹೇಳಿದ್ದೇ ಸತ್ಯ ಎಂದು ಇಡೀ ಜಗತ್ತಿಗೇ ಗೊತ್ತಾಗಿತ್ತು. ತನ್ನ ಕಪಟತನವನ್ನು ಬಹಿರಂಗಪಡಿಸಿದ ಬರದೈಗೆ ಶಾಂತಿ ಪ್ರಶಸ್ತಿ ಸಿಕ್ಕರೆ ಬುಷ್ ಸರ್ಕಾರಕ್ಕೆ ಅವಮಾನವಾಗದೇ ಮತ್ತಿನ್ನೇನು?
ಇನ್ನು ತನ್ನ ಬರಹಗಳಲ್ಲಿ ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ಅನ್ಯಾಯವನ್ನು ವಿಶ್ಲೇಷಿಸುವ ನಾಟಕಕಾರ ಹೆರಾಲ್ಡ್ ಪಿಂಟರ್ ಅದೆಂತಹ ಅಗ್ರಸ್ಥಾನದಲ್ಲಿದ್ದಾರೆಂದರೆ ಶೇಕ್ಸ್‍ಪಿರಿಯನ್, ಶೆಕಾವಿಯನ್ ಎಂಬ ಪದಗಳು ಗುಣವಾಚಕಗಳಾಗಿವೆಯೋ ಹಾಗೆ ಪಿಂಟರೆಸ್ಕ್ ಎಂಬ ಪದವೂ ಇಂಗ್ಲಿಷ್ ಭಾಷೆಯ ಅಂಗವಾಗಿ ಹೋಗಿದೆ. ಇವರು ಕಳೆದ ಮೂರು ವರ್ಷದಿಂದ ಬುಷ್‍ರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಬುಷ್ ಹೇಳಿದ್ದಕ್ಕೆಲ್ಲ ತಲೆದೂಗುವ ತನ್ನ ದೇಶದ ಪ್ರಧಾನಿ ಬ್ಲೇರ್‍ಗೂ ಕ್ಯಾಕರಿಸಿ ಉಗಿದಿದ್ದಾರೆ. ಅಮೆರಿಕಾದಲ್ಲಿ ಅಧಿಕಾರ ಹಿಡಿದಿರುವವರನ್ನು ಕ್ರಿಮಿನಲ್‍ಗಳ ಗ್ಯಾಂಗ್ ಎಂದೂ, ಬ್ಲೇರ್ ಅನ್ನು ಅಮೆರಿಕಾ ಸರ್ಕಾರದ ಬಾಡಿಗೆಗೆ ಹಿಡಿದಿರುವ ಕ್ರಿಶ್ಚಿಯನ್ ಗೂಂಡಾ ಎಂದೂ ಲೇವಡಿ ಮಾಡಿದ್ದರು. ಅಮೆರಿಕಾ ಮತ್ತು ಬ್ರಿಟನ್ ಸರ್ಕಾರಗಳಿಗೆ ಕಡಿವಾಣ ಹಾಕದಿದ್ದರೆ ಇಡೀ ಜಗತ್ತನ್ನೇ ಮುಳುಗಿಸಿಬಿಡುತ್ತಾರೆ ಎಂಬುದು ಅವರ ಪ್ರಾಮಾಣಿಕ ಆತಂಕ.
ಇಲ್ಲಿ ಬುಷ್ ಮತ್ತು ಬ್ಲೇರ್ ಬಗ್ಗೆ ಪಿಂಟರ್‍ರವರು ನೀಡಿರುವ ಹೇಳಿಕೆಯ ಸ್ಯಾಂಪಲ್‍ಗಳಿವೆ ನೋಡಿ; “ಇರಾಕ್ ಮೇಲೆ ನಡೆದದ್ದು ಭಯೋತ್ಪಾದನೆ. ಆದ್ದರಿಂದ ಬುಷ್ ಮತ್ತು ಬ್ಲೇರ್ ಭಯೋತ್ಪಾದಕರು. ಅವರಿಬ್ಬರನ್ನು ಬಂಧಿಸಿ ಯುದ್ಧಕೋರರೆಂದು ವಿಚಾರಣೆಗೊಳಪಡಿಸಿ ಶಿಕ್ಷಿಸಬೇಕು…..”, “ಅಮೆರಿಕಾ ಈಗ ನಾಜಿಗಳ ಜರ್ಮನಿಯನ್ನು ಹೋಲುತ್ತಿದೆ”, “ಜಗತ್ತಿನ ಅತಿ ಅನಾಹುತಕಾರಿ ಅಸ್ತ್ರಗಳು ಅತಿ ಅನಾಹುತಕಾರಿ ನಾಯಕರ ಕೈಯಲ್ಲಿರದಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾನೆ ಬುಷ್. ಆದ್ದರಿಂದ ಅತಿ ಅನಾಹುತಕಾರಿ ನಾಯಕ ಯಾರೆಂದು ತಿಳಿದುಕೊಳ್ಳಲು ಆತ ಒಮ್ಮೆ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಳ್ಳಲಿ”, “ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಬಿಡುಗಡೆಯ ಬಗ್ಗೆ ಮಾತಾಡುವ ಬುಷ್ ಹಾಗೂ ಬ್ಲೇರ್ ನಿಜವಾಗಲೂ ಹೇಳುತ್ತಿರುವುದು ಸಾವು, ನಾಶ ಮತ್ತು ಅಭದ್ರತೆಯ ಬಗ್ಗೆ”…..
ಇವೆಲ್ಲ ಇಂದು ಅಮೆರಿಕಾ ಸರ್ಕಾರ ಕೊತಕೊತ ಕುದಿಯುವಂತೆ ಮಾಡಿರುವುದು ಅಚ್ಚರಿಯೇನಲ್ಲ. ಭಿನ್ನಮತ, ವಾಕ್ ಸ್ವಾತಂತ್ರ್ಯ, ಮಾನವಹಕ್ಕುಗಳು, ದಬ್ಬಾಳಿಕೆ ವಿರೋಧಗಳು ನಿಜಕ್ಕೂ, `ನೋಬಲ್’, ಅಲ್ಲವೇ!?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...