Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಧುಗಿರಿ: ಕೆ.ಎನ್. ರಾಜಣ್ಣ, ವೀರಭದ್ರಯ್ಯ ನಡುವಿನ ಹಣಾಹಣಿಗೆ ಬಿಜೆಪಿ ಎಂಟ್ರಿ

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಧುಗಿರಿ: ಕೆ.ಎನ್. ರಾಜಣ್ಣ, ವೀರಭದ್ರಯ್ಯ ನಡುವಿನ ಹಣಾಹಣಿಗೆ ಬಿಜೆಪಿ ಎಂಟ್ರಿ

- Advertisement -
- Advertisement -

ತುಮಕೂರು ಜಿಲ್ಲಾ ಕೇಂದ್ರದಿಂದ ಸ್ವಲ್ಪ ಹೆಚ್ಚೇ ದೂರವಿರುವ, ಆಂಧ್ರ ಗಡಿಗೆ ಅಂಟಿಕೊಂಡಿರುವ ಮಧುಗಿರಿಯನ್ನು ಜಿಲ್ಲೆಯನ್ನಾಗಿ ಮಾಡಬೇಕೆಂಬ ಕೂಗು ಹಿಂದಿನಿಂದಲೂ ಕೇಳಿಬರುತ್ತಿದೆ. ಈ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ 15 ಚುನಾವಣೆಗಳಲ್ಲಿ 13 ಬಾರಿ ಕ್ಷೇತ್ರದ ಹೊರಗಿನವರೇ ಗೆಲುವು ಸಾಧಿಸಿದ್ದಾರೆ. ಜೊತೆಗೆ 2008ರಿಂದ ಸಾಮಾನ್ಯ ಕ್ಷೇತ್ರವಾದ ಮಧುಗಿರಿಯಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ಕೆ.ಎನ್. ರಾಜಣ್ಣ 2013ರಲ್ಲಿ ಗೆದ್ದಿದ್ದರು. ಇಂತಹ ವಿಶೇಷತೆಗಳುಳ್ಳ ಕ್ಷೇತ್ರವಾದ ಮಧುಗಿರಿಯಲ್ಲಿ 2023ರ ಚುನಾವಣಾ ಹಣಾಹಣಿ ಜೋರಾಗಿದೆ.

ರಾಜಕೀಯ ಇತಿಹಾಸ

ಮೈಸೂರು ಪ್ರಾಂತ್ಯದ ಭಾಗವಾಗಿದ್ದಾಗ ಮಧುಗಿರಿ-ಕೊರಟಗೆರೆ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿತ್ತಲ್ಲದೆ ದ್ವಿಸದಸ್ಯತ್ವ ಹೊಂದಿತ್ತು. 1952ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆರ್. ಚನ್ನಿಗರಾಮಯ್ಯ ಮತ್ತು ಮುದ್ದುರಾಮಯ್ಯನವರು ಆಯ್ಕೆಯಾಗಿದ್ದರು. 1957ರಲ್ಲಿಯೂ ದ್ವಿಸದಸ್ಯತ್ವ ಸ್ಥಾನ ಮುಂದುವರೆದರಿಂದ ಕಾಂಗ್ರೆಸ್ ಪಕ್ಷದ ಆರ್. ಚನ್ನಿಗರಾಮಯ್ಯನವರು ಪ್ರಜಾ ಸೋಷಿಯಲಿಸ್ಟ್ ಪಕ್ಷದ ಎಸ್. ಅಂಜಯ್ಯನವರ ಎದುರು ಜಯಗಳಿಸಿದರೆ, ಮಾಲೀ ಮರಿಯಪ್ಪನವರು ಪ್ರಜಾ ಸೋಷಿಯಲಿಸ್ಟ್ ಪಕ್ಷದ ಟಿ.ಎಸ್. ಶಿವಣ್ಣನವರನ್ನು ಮಣಿಸಿದ್ದರು.

1962ರ ವೇಳೆಗೆ ಮಧುಗಿರಿಯನ್ನು ಸಾಮಾನ್ಯ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಲಾಯ್ತು. ಆಗ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಟಿ.ಎಸ್ ಶಿವಣ್ಣನವರು ಕಾಂಗ್ರೆಸ್‌ನ ಗೋವಿಂದ ರೆಡ್ಡಿಯವರ ಎದುರು ಜಯ ಕಂಡರು. 1967ರಲ್ಲಿ ಕಾಂಗ್ರೆಸ್‌ನ ಗೋವಿಂದ ರೆಡ್ಡಿಯವರು ಸ್ವತಂತ್ರ ಅಭ್ಯರ್ಥಿ ಟಿ.ಎಚ್. ಹನುಮಂತರಾಯಪ್ಪನವರನ್ನು ಮಣಿಸಿದರು. 1972ರಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದ ಆರ್. ಚಿಕ್ಕಯ್ಯನವರು ಸಂಸ್ಥಾ ಕಾಂಗ್ರೆಸ್‌ನ ಎಂ.ಎನ್ ನಾಗಭೂಷಣ್‌ರವರ ಎದುರು ಜಯ ಸಾಧಿಸಿದರು. ಗೋವಿಂದ ರೆಡ್ಡಿ ಮತ್ತು ಆರ್. ಚಿಕ್ಕಯ್ಯನವರು ಮಾತ್ರವೇ ಮಧುಗಿರಿಯಿಂದ ಆಯ್ಕೆಯಾದ ಸ್ಥಳೀಯರೆನಿಸಿಕೊಂಡಿದ್ದಾರೆ. ಉಳೆದೆಲ್ಲಾ ಬಾರಿ ಶಾಸಕರಾದವರು ಮಧುಗಿರಿ ತಾಲ್ಲೂಕಿನ ಹೊರಗಿನವರೇ ಆಗಿದ್ದಾರೆ.

ಗಂಗಹನುಮಯ್ಯ

1978ರ ವೇಳೆಗೆ ಮಧುಗಿರಿಯನ್ನು ಪುನಃ ಪರಿಶಿಷ್ಟ ಜಾತಿ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಲಾಯ್ತು. ಆಗ ಇಂದಿರಾ ಕಾಂಗ್ರೆಸ್ ಪಕ್ಷದ ಗಂಗಹನುಮಯ್ಯನವರು ಜನತಾ ಪಕ್ಷದ ಗಂಗಬೋವಿಯವರನ್ನು ಮಣಿಸಿ ಶಾಸಕರಾದರು. ಆದರೆ 1983 ಮತ್ತು 1985ರಲ್ಲಿ ಜನತಾ ಪಕ್ಷದ ರಾಜವರ್ಧನ್‌ರವರು ಕಾಂಗ್ರೆಸ್‌ನ ಗಂಗಹನುಮಯ್ಯನವರನ್ನು ಸತತ ಎರಡು ಬಾರಿಗೆ ಸೋಲಿಸಿದರು. ಅಲ್ಲದೆ ಸಚಿವರೂ ಆದರು.

ಜಿ.ಪರಮೇಶ್ವರ್ ಆಗಮನ

1989ರಲ್ಲಿ ಜಿ.ಪರಮೇಶ್ವರ್‌ರವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜನತಾದಳದ ಸಿ.ರಾಜವರ್ಧನ್ ವಿರುದ್ಧ ಗೆಲುವು ಸಾಧಿಸಿದರು. ವೀರಪ್ಪ ಮೊಯ್ಲಿ ಸಂಪುಟದಲ್ಲಿ ರೇಷ್ಮೆ ಸಚಿವರಾಗಿ ಕೆಲಸ ಮಾಡಿದರು. 1994ರ ಚುನಾವಣೆಯಲ್ಲಿ ಜನತಾದಳಕ್ಕೆ ಹೋಗಿದ್ದ ಗಂಗಹನುಮಯ್ಯನವರು 3 ಸಾವಿರ ಮತಗಳ ಅಂತರದಿಂದ ಪರಮೇಶ್ವರ್‌ರವರನ್ನು ಸೋಲಿಸಿದರು. ಆದರೆ 1999ರಲ್ಲಿ ಪರಮೇಶ್ವರ್‌ರವರು ಅದೇ ಗಂಗಹನುಮಯ್ಯನವರನ್ನು 55,802 ಮತಗಳ ದಾಖಲೆಯ ಅಂತರದಲ್ಲಿ ಸೋಲಿಸಿದರು. ಅಂದಿನ ಎಸ್.ಎಂ. ಕೃಷ್ಣರವರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಮತ್ತು ತುಮಕೂರು ಉಸ್ತುವಾರಿ ಖಾತೆ ನಿಭಾಯಿಸಿದ್ದರು. 2004ರಲ್ಲಿಯೂ ಪರಮೇಶ್ವರ್‌ರವರು ಜೆಡಿಎಸ್‌ನ ಎಚ್.ಕೆಂಚಮಾರಯ್ಯನವರ ಎದುರು ಗೆಲುವು ಕಂಡರು.

ಮತ್ತೆ ಸಾಮಾನ್ಯ ಕ್ಷೇತ್ರ

2008ರಿಂದ ಮಧುಗಿರಿಯನ್ನು ಮತ್ತೆ ಸಾಮಾನ್ಯ ಕ್ಷೇತ್ರವನ್ನಾಗಿ ಮಾಡಲಾಯ್ತು. ಆ ಚುನಾವಣೆಯಲ್ಲಿ ಮೂರು ಬಾರಿ ಶಾಸಕರಾಗಿದ್ದ ಒಕ್ಕಲಿಗ ಸಮುದಾಯದ ಚೆನ್ನಿಗಪ್ಪನವರ ಪುತ್ರ ಡಿ.ಸಿ ಗೌರಿಶಂಕರ್ ಮತ್ತು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ವಾಲ್ಮೀಕಿ/ನಾಯಕ ಸಮುದಾಯದ ಕೆ.ಎನ್. ರಾಜಣ್ಣ ಪರಸ್ಪರ ಎದುರಾಳಿಗಳಾದರು. ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡಿದ್ದ ಮತ್ತು ಹಲವು ಸಹಕಾರಿ ಬ್ಯಾಂಕುಗಳ ಅಧ್ಯಕ್ಷರಾಗಿದ್ದ ಕ್ಯಾತ್ಸಂದ್ರ ಎನ್. ರಾಜಣ್ಣನವರು 1988-2002ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. 2004ರಲ್ಲಿ ಬೆಳ್ಳಾವಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಬೆಳ್ಳಾವಿ ರದ್ದಾದರಿಂದ ಅವರು ಮಧುಗಿರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದರು. ಆಗ ತೀವ್ರ ಪೈಪೋಟಿ ನಡೆದು ಕೇವಲ 563 ಮತಗಳ ಅಂತರದಲ್ಲಿ ಗೌರಿಶಂಕರ್ ಗೆಲುವು ಕಂಡರು.

ಆದರೆ ಕೆಲವೇ ದಿನಗಳಲ್ಲಿ ಶಾಸಕ ಗೌರಿಶಂಕರ್ ಬಿಜೆಪಿಯ ಆಪರೇಷನ್‌ಗೆ ಒಳಗಾದರು. ಹಾಗಾಗಿ ಇಲ್ಲಿ ಉಪ ಚುನಾವಣೆ ನಡೆಯಿತು. ಆಗ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿಯವರು ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ, ಬಿಜೆಪಿಯ ಸಿ.ಚೆನ್ನಿಗಪ್ಪನವರ ಎದುರು ಜಯ ಸಾಧಿಸಿದರು.

ಜಿ.ಪರಮೇಶ್ವರ್

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ ಮತ್ತು ಐಎಎಸ್ ಅಧಿಕಾರಿಯಾಗಿದ್ದು ನಂತರ ರಾಜೀನಾಮೆ ನೀಡಿ ಜೆಡಿಎಸ್‌ನಿಂದ ಕಣಕ್ಕಿಳಿದ ಒಕ್ಕಲಿಗ ಸಮುದಾಯದ ವೀರಭದ್ರಯ್ಯನವರ ನಡುವೆ ಹಣಾಹಣಿ ನಡೆಯಿತು. ರಾಜಣ್ಣನವರು 75,086 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ವೀರಭದ್ರಯ್ಯ 60,027 ಮತಗಳನ್ನು ಪಡೆದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಸುಮಿತ್ರದೇವಿ ಕೇವಲ 1,741 ಮತ ಗಳಿಸಿದ್ದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೊರಟಗೆರೆ: ಜಿ.ಪರಮೇಶ್ವರ್-ಸುಧಾಕರ್ ಲಾಲ್ ನಡುವೆ ಮತ್ತೆ ಫೈಟ್; ಲೆಕ್ಕಕ್ಕಿಲ್ಲದ ಬಿಜೆಪಿ ಆಟ

2018ರಲ್ಲಿ ಮತ್ತೆ ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ ಮತ್ತು ಜೆಡಿಎಸ್ ಪಕ್ಷದ ವೀರಭದ್ರಯ್ಯನವರ ನಡುವೆಯೇ ಪೈಪೋಟಿ ನಡೆಯಿತು. ಈ ಬಾರಿ ವೀರಭದ್ರ ಯ್ಯನವರು ಗೆದ್ದು ಬಂದರು. ಅವರು 88,521 ಮತಗಳನ್ನು ಪಡೆದರೆ, ರಾಜಣ್ಣ 69,947 ಮತಗಳನ್ನು ಪಡೆದರು. ಬಿಜೆಪಿಯ ರಮೇಶ್ ರೆಡ್ಡಿ ಕೇವಲ 2,911 ಮತಗಳನ್ನು ಪಡೆದರು.

ಅಂದಾಜು ಜಾತಿವಾರು ಮತಗಳು

ಒಟ್ಟು ಮತಗಳು: 2,00,000; ಪರಿಶಿಷ್ಟ ಜಾತಿ: 50,000; ಒಕ್ಕಲಿಗ: 36,000; ಪರಿಶಿಷ್ಟ ಪಂಗಡ: 26,000; ಗೊಲ್ಲ ಸಮುದಾಯ: 20,000; ಮುಸ್ಲಿಂ: 13,000; ಲಿಂಗಾಯಿತ: 10,000; ಇತರೆ: 45,000

ಹಾಲಿ ಪರಿಸ್ಥಿತಿ

ಹಾಲಿ ಶಾಸಕ ಎಂ.ವಿ. ವೀರಭದ್ರಯ್ಯನವರು ಶಾಸಕರಾದ ನಂತರ ಒಂದಷ್ಟು ಚೆಕ್ ಡ್ಯಾಂಗಳನ್ನು ಕಟ್ಟಿಸಿದ್ದಾರೆ. ಇತ್ತೀಚೆಗೆ ಮಧುಗಿರಿ ಟೌನ್ ಅಭಿವೃದ್ದಿಗೆ ಹಣ ಬಿಡುಗಡೆ ಮಾಡಿಸಿದ್ದು ಕೆಲವು ಕಾಮಗಾರಿಗಳು ಆರಂಭವಾಗಿವೆ. ಅದು ಬಿಟ್ಟರೆ 68 ವರ್ಷದ ಅವರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಅದೇ ಸಂದರ್ಭದಲ್ಲಿ ಅವರು ಆರೋಗ್ಯ ಸಮಸ್ಯೆಯ ನೆಪ ಹೇಳಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು 2022ರ ಅಕ್ಟೋಬರ್‌ನಲ್ಲಿ ಘೋಷಿಸಿದ್ದರು. ಕಾರ್ಯಕರ್ತರ ಪ್ರೀತಿಯ ಒತ್ತಾಯಕ್ಕೆ ಬೆಲೆ ಕೊಡುತ್ತೇನೆ, ಆದರೆ ಕುಟುಂಬದವರ ಆಗ್ರಹಕ್ಕೆ ಮಣಿಯಬೇಕಿದೆ, ಹಾಗಾಗಿ ಸ್ಪರ್ಧಿಸುವುದಿಲ್ಲ ಎಂದಿದ್ದರು. ಒಂದಷ್ಟು ಕಾರ್ಯಕರ್ತರು ವೀರಭದ್ರಯ್ಯನವರು ಮತ್ತೆ ಸ್ಪರ್ಧಿಸಬೇಕು ಎಂದು ಎಚ್.ಡಿ. ಕುಮಾರಸ್ವಾಮಿಯವರ ಬಳಿ ದುಂಬಾಲುಬಿದ್ದರು. ಆನಂತರ ಜೆಡಿಎಸ್ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಅವರ ಹೆಸರಿತ್ತು. ಆಗಿನಿಂದ ಮತ್ತೆ ಕ್ಷೇತ್ರ ಸುತ್ತುತ್ತಿರುವ ವೀರಭದ್ರಯ್ಯನವರು ತಯಾರಿ ನಡೆಸುತ್ತಿದ್ದಾರೆ. ಆದರೆ, ’ದೇವಾಸ್ಥಾನಕ್ಕೆ ಹಣ ನೀಡುವ ಬದಲು ಶಾಲೆ-ಕಾಲೇಜಿಗೆ ನೀಡಿ, ನೀವು ಮಾಡಿದ ಅಬಿವೃದ್ಧಿ ಕೆಲಸಗಳ ಪಟ್ಟಿ ನೀಡಿ’ ಎಂದು ಹಲವು ಗ್ರಾಮಸ್ಥರು ಪ್ರಶ್ನೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.

ಮತ್ತೆ ಕಣಕ್ಕೆ ಕೆ.ಎನ್. ರಾಜಣ್ಣ

ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಕೆ.ಎನ್. ರಾಜಣ್ಣನವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. 2018ರ ಚುನಾವಣೆಯಲ್ಲಿ ಸೋತರೂ ಅವರು ಕ್ಷೇತ್ರಕ್ಕೆ ಬೆನ್ನು ಹಾಕದೆ, ಅಲ್ಲಿಯೇ ಇದ್ದುಕೊಂಡು ಉತ್ತಮ ಜನಸಂಪರ್ಕ ಸಾಧಿಸಿದ್ದಾರೆ. ಇನ್ನು ಅವರು ಸಹಕಾರ ಬ್ಯಾಂಕುಗಳ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೆಲ್ಲ ರೈತರಿಗೆ, ಸಾಮಾನ್ಯ ಜನರಿಗೆ ಸಾಲ ಕೊಡಿಸಿರುವುದನ್ನು ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅಲ್ಲದೆ ಮಧುಗಿರಿಗೆ ಹೊಸ ಆರ್‌ಟಿಒ ಕಚೇರಿ, ಡಿಡಿಪಿಐ ಕಚೇರಿ, ಹೊಸ ಕೋರ್ಟ್ ಕಟ್ಟಡ, ಬಸ್ ಡಿಪೋ ಹೀಗೆ ಜಿಲ್ಲಾ ಕೇಂದ್ರದಲ್ಲಿ ಇರಬೇಕಾದ ಹಲವು ಮೂಲಸೌಕರ್ಯಗಳನ್ನು ತರುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಅವರ ಶಿಷ್ಯರೆ ಆದ ಕೊಂಡವಾಡಿ ಚಂದ್ರಶೇಖರ್ ಅವರು ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಗುರುವಿಗೆ ಟಿಕೆಟ್ ನೀಡಿದೆ.

ಬಿಜೆಪಿ ಸ್ಥಿತಿ

ಇದುವರೆಗೂ ಯಾವುದೇ ನೆಲೆ ಹೊಂದಿರದ ಬಿಜೆಪಿ ಪಕ್ಷವು ಈ ಬಾರಿ ಐಎಂಎ ಹಗರಣದ ಪ್ರಮುಖ ಆರೋಪಿ, ನಿವೃತ್ತ ಕೆಎಎಸ್ ಅಧಿಕಾರಿ ಎಲ್.ಸಿ. ನಾಗರಾಜುರವರಿಗೆ ಟಿಕೆಟ್ ನೀಡಲು ಮುಂದಾಗಿದೆ ಎಂಬ ಸುದ್ದಿ ಜೋರಾಗಿದೆ.

ಎಲ್.ಸಿ. ನಾಗರಾಜು

ಅವರು ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿಯಾಗಿದ್ದ ಸಮಯದಲ್ಲಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಐಎಂಎ ಪರ ವರದಿ ನೀಡಲು 4.5 ಕೋಟಿ ರೂ.ಗಳನ್ನು ಮೂರು ಕಂತುಗಳಲ್ಲಿ ಲಂಚ ಪಡೆದ ಆರೋಪದ ಮೇಲೆ ಬಂಧಿತರಾಗಿದ್ದರು. ಆನಂತರ ಅವರ ಮನೆ ಮೇಲೆ ಎಸಿಬಿ ದಾಳಿ ಮಾಡಿದಾಗಲೂ ಹಣ ಪತ್ತೆಯಾಗಿತ್ತು. ಹಾಗಾಗಿ ಅವರನ್ನು ಅಮಾನತುಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಅವರು ಜೆಡಿಎಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು. ಆದರೆ ಅವರ ರಾಜೀನಾಮೆಯನ್ನು ಬಿಜೆಪಿ ಸರ್ಕಾರ ಅಂಗೀಕರಿಸುವುದಿಲ್ಲವೆಂದು ತಿಳಿದು ಒಲ್ಲದ ಮನಸ್ಸಿನಿಂದ ಬಿಜೆಪಿ ಸೇರಿ ಇತ್ತೀಚೆಗಷ್ಟೆ ತಮ್ಮ ರಾಜೀನಾಮೆ ಅಂಗೀಕಾರವಾಗುವಂತೆ ಮಾಡಿದ್ದಾರೆ. ನಾಯಕ/ವಾಲ್ಮೀಕಿ ಸಮುದಾಯದ ಇವರು ಮಧುಗಿರಿಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರಲ್ಲದೆ ಚಿತ್ರದುರ್ಗ ಬಿಜೆಪಿ ಯುವ ಮೋರ್ಚಾದ ಹನುಮಂತೇಗೌಡ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಇನ್ನು ಬಿಜೆಪಿ ಟಿಕೆಟ್ ಕೇಳುತ್ತಿದ್ದ ಮಾಜಿ ಜಿ.ಪಂ. ಅಧ್ಯಕ್ಷ ಸಿ.ಎನ್ ಮಧುರವರು ಟಿಕೆಟ್ ಸಿಗುವುದಿಲ್ಲ ಎಂದು ತಿಳಿಯುತ್ತಲೇ ಬಿಎಸ್‌ಪಿ ಸೇರಿ ಕಣಕ್ಕಿಳಿಯಲು ತಯಾರಾಗುತ್ತಿದ್ದಾರೆ.

2023ರ ಸಾಧ್ಯತೆ

ಇದುವರೆಗೂ ಕೆ.ಎನ್. ರಾಜಣ್ಣ ಮತ್ತು ವೀರಭದ್ರಯ್ಯನವರ ನಡುವಿನ ನೇರಾನೇರಾ ಪೈಪೋಟಿ ಕಂಡುಬರುತ್ತಿತ್ತು. ಅದರೊಟ್ಟಿಗೆ ಈಗ ಬಿಜೆಪಿಯ ಎಲ್.ಸಿ. ನಾಗರಾಜುರವರು ಸಹ ಜೊತೆಗೂಡಿದ್ದರಿಂದ ತ್ರಿಕೋನ ಹಣಾಹಣಿಯಾಗಿ ಮಾರ್ಪಾಡಾಗಲಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಆಡಳಿತ ವಿರೋಧಿ ಅಲೆ, ಹೆಚ್ಚಿನ ಜನಸಂಪರ್ಕವಿಲ್ಲದಿರುವುದು, ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದು ವೀರಭದ್ರಯ್ಯನವರಿಗೆ ತೊಡಕಾಗುವ ಸಾಧ್ಯತೆಯಿದೆ. ಆದರೂ ಒಕ್ಕಲಿಗ ಮತಗಳು ತನ್ನ ಕೈಹಿಡಿಯುತ್ತವೆ ಎಂದು ಅವರು ನಂಬಿದ್ದಾರೆ.

ಕೆ.ಎನ್. ರಾಜಣ್ಣನವರು ದೇವೇಗೌಡರ ಕುರಿತಾಗಿ ಲಘುವಾಗಿ ಮಾತನಾಡಿದರು ಎಂಬ ಆರೋಪದಿಂದ ಕ್ಷೇತ್ರದ ಒಕ್ಕಲಿಗ ಮತಗಳು ಸಾರಾಸಗಟಾಗಿ ವೀರಭದ್ರಯ್ಯನವರಿಗೆ ವರ್ಗಾವಣೆಯಾದಲ್ಲಿ ಅದು ರಾಜಣ್ಣನವರಿಗೆ ಮುಳುವಾಗುವ ಸಾಧ್ಯತೆಯಿದೆ. ಆದರೂ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿರುವ ದಲಿತ ಮತ್ತು ಹಿಂದುಳಿದ ವರ್ಗದ ಮತಗಳು ತನ್ನನ್ನು ಗೆಲುವಿನ ದಡ ಸೇರಿಸುತ್ತವೆ ಎಂಬ ನಂಬಿಕೆ ಅವರದು.

ಇನ್ನು ಬಿಜೆಪಿಯ ಎಲ್.ಸಿ. ನಾಗರಾಜುರವರು ಸಾಕಷ್ಟು ಹಣ ಖರ್ಚು ಮಾಡುತ್ತಾ ಚುನಾವಣೆಗೆ ಧುಮುಕಿದ್ದಾರೆ. ಅವರು ಎಷ್ಟು ಎಸ್‌ಟಿ ಓಟುಗಳನ್ನು ಪಡೆಯುತ್ತಾರೋ ಅಷ್ಟು ರಾಜಣ್ಣನವರಿಗೆ ಡ್ಯಾಮೇಜ್ ಆಗಬಹುದು. ಆದರೆ ಅವರ ಮೇಲಿನ ಭ್ರಷ್ಟಾಚಾರದ ಆರೋಪಗಳು ಚುನಾವಣೆಯಲ್ಲಿ ಮುಖ್ಯ ಚರ್ಚೆಯಾಗುವ ಸಂಭವವಿದೆ. ಈ ರೀತಿಯಾಗಿ ದಿನೇದಿನೇ ಮಧುಗಿರಿ ರಾಜಕಾರಣ ಬಿರುಸು ಪಡೆಯುತ್ತಿದೆ. ಹಾಗಾಗಿ ಗೆಲುವು ಸೋಲನ್ನು ಈಗಲೇ ನಿರ್ಧರಿಸಲಾಗುವುದಿಲ್ಲ ಎಂಬುದು ಕ್ಷೇತ್ರದಲ್ಲಿ ಕೇಳಿ ಬರುತ್ತಿರುವ ಮಾತುಗಳು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...