ಐಪಿಎಲ್ ಇತಿಹಾಸದಲ್ಲಿಯೇ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ, ಪಂದ್ಯದ ನಡುವೆ ಮಂಡಿಯೂರಿ ‘Black Lives Matter’ ಚಳವಳಿಗೆ ಐಕ್ಯಮತ್ಯ ಸೂಚಿಸಿ ಗಮನ ಸೆಳೆದಿದ್ದಾರೆ. ನಿನ್ನೆ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸಿದ ಪಾಂಡ್ಯ 19ನೇ ಓವರ್‌ನಲ್ಲಿ ಅರ್ಧಶತಕ ಗಳಿಸಿದ ವೇಳೆ ಮಂಡಿಯೂರಿ ಜನಾಂಗೀಯವಾದದ ವಿರುದ್ಧ ನಡೆಯುತ್ತಿರುವ ಚಳವಳಿಗೆ ಬೆಂಬಲ ಘೋಷಿಸಿದ್ದಾರೆ.
27 ವರ್ಷದ ಹಾರ್ದಿಕ್ ಕೇವಲ 21 ಎಸೆತಗಳಲ್ಲಿ 60 ರನ್ ಗಳಿಸಿ ಮುಂಬೈ ಸವಾಲಿನ ಮೊತ್ತ ಪೇರಿಸಲು ಸಹಾಯ ಮಾಡಿದರು. 2 ಫೋರ್ ಮತ್ತು 6 ಸಿಕ್ಸ್‌ಗಳನ್ನು ಸಿಡಿಸಿದ ಅವರು ಪಂದ್ಯದ ನಂತರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಂಡಿಯೂರಿ ಕುಳಿತ ಫೋಟೊ ಹಾಕಿ Black Lives Matter ಎಂದು ಬರೆದುಕೊಂಡಿದ್ದಾರೆ.
#BlackLivesMatter pic.twitter.com/yzUS1bWh7F
— hardik pandya (@hardikpandya7) October 25, 2020
ಅಮೆರಿಕದಲ್ಲಿ 2020ರ ಮೇ ತಿಂಗಳಿನಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ಜನಾಂಗದ ವ್ಯಕ್ತಿಯನ್ನು ಪೊಲೀಸ್ ಓರ್ವ ಕತ್ತಿನ ಮೇಲೆ ತುಳಿದು ಅಮಾನವೀಯವಾಗಿ ಕೊಂದ ಘಟನೆ, ಅಲ್ಲಿ ದೊಡ್ಡ ಹೋರಾಟಕ್ಕೆ ಕಾರಣವಾಗಿತ್ತು. ತದನಂತರ ಜನಾಂಗೀಯವಾದದ ವಿರುದ್ಧ ಅಮೆರಿಕ ಸೇರಿದಂತೆ ಪ್ರಪಂಚದಾದ್ಯಂತ Black Lives Matter ಹೆಸರಿನಲ್ಲಿ ಪ್ರತಿಭಟನೆಗಳು ಸಿಡಿದು, ದೊಡ್ಡ ಹೋರಾಟಕ್ಕೆ ನಾಂದಿಯಾಡಿದ್ದರು. ಆ ಸಂದರ್ಭದಲ್ಲಿ ಮಿನ್ನಿಯಾಪೊಲಿಸ್‌ನ ಪೊಲೀಸರು ಮಂಡಿಯೂರಿ ಕ್ಷಮೆಯಾಚಿಸಿದ್ದರು. ಅಂದಿನಿಂದ ಹಲವಾರು ಕ್ರೀಡಾತಾರೆಯರು ಮಂಡಿಯೂರುವ ಮೂಲಕ ಈ ಚಳವಳಿಗೆ ಬೆಂಬಲ ಘೋಷಿಸಿದ್ದರು.
ಇದನ್ನೂ ಓದಿ: ‘ಮೇಕ್ ಅಮೆರಿಕ ಗ್ರೇಟ್ ಅಗೈನ್’ v/s ‘ಬ್ಲ್ಯಾಕ್ಸ್ ಲೈವ್ಸ್ ಮ್ಯಾಟರ್’


