ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಆಂಧ್ರ ಪ್ರದೇಶ ಈಗಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೇಲಿನ ಪ್ರಕರಣಗಳ ತನಿಖೆಯ ಉಸ್ತುವಾರಿ ವಹಿಸಿದ್ದ ಐಪಿಎಸ್ ಅಧಿಕಾರಿ ಎನ್. ಸಂಜಯ್ ಅವರನ್ನು ಸರ್ಕಾರ ಮಂಗಳವಾರ (ಡಿ.4) ಅಮಾನತು ಮಾಡಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಸಂಜಯ್ ಅವರನ್ನು ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.
ಸಂಜಯ್ ಅವರು ಜಗನ್ ಮೋಹನ್ ರೆಡ್ಡಿ ಸಿಎಂ ಆಗಿದ್ದ ಈ ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಂಧ್ರ ಪ್ರದೇಶ ಸಿಐಡಿಯ ಮುಖ್ಯಸ್ಥರಾಗಿದ್ದರು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಚಂದ್ರಬಾಬು ನಾಯ್ಡು ವಿರುದ್ದದ ಆಂಧ್ರ ಪ್ರದೇಶ ಕೌಶಲ್ಯ ಅಭಿವೃದ್ಧಿ ನಿಗಮದ ಹಗರಣ ಮತ್ತು ಅಮರಾವತಿ ಒಳವರ್ತುಲ ರಸ್ತೆಯ ಜೋಡಣೆ ಹಗರಣದ ತನಿಖೆಯ ಉಸ್ತುವಾರಿ ವಹಿಸಿದ್ದರು. ಸಂಜಯ್ ಅವರ ಉಸ್ತುವಾರಿಯಲ್ಲಿ ನಡೆದ ಸಿಐಡಿ ತನಿಖೆ ಚಂದ್ರಬಾಬು ನಾಯ್ಡು ಜೈಲು ಸೇರುವಂತೆ ಮಾಡಿತ್ತು.
1993ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಸಂಜಯ್ ಅವರು, ರಾಜ್ಯ ವಿಪತ್ತು ನಿರ್ವಹಣೆ ಮತ್ತು ಅಗ್ನಿಶಾಮಕ ಸೇವೆಗಳ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ಕೆಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ.
ಈ ಹಿನ್ನೆಲೆ ಅವರನ್ನು ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು, 1969 ರ ನಿಯಮ 3 (1) ಅಡಿಯಲ್ಲಿ ಅಮಾನತುಗೊಳಿಸಿ ರಾಜ್ಯ ಸರ್ಕಾರದ ಸಾಮಾನ್ಯ ಆಡಳಿತ ಇಲಾಖೆಯು ಆದೇಶ ಹೊರಡಿಸಿದೆ. ಪೊಲೀಸ್ ಪ್ರಧಾನ ಕಚೇರಿ ಬಿಟ್ಟು ತೆರಳದಂತೆ ಸೂಚಿಸಿದೆ.
ಟಿಡಿಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ಚಂದ್ರಬಾಬು ನಾಯ್ಡು ಸಿಎಂ ಆದ ಬೆನ್ನಲ್ಲೇ, ಈ ವರ್ಷದ ಜೂನ್‌ನಲ್ಲಿ ಸಂಜಯ್ ಅವರನ್ನು ಸಿಐಡಿ ಮುಖ್ಯಸ್ಥ ಹುದ್ದೆಯಿಂದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿತ್ತು.
ಸಂಜಯ್ ಅವರ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ವಿಜಿಲೆನ್ಸ್ ಮತ್ತು ಎನ್‌ಫೋರ್ಸ್‌ಮೆಂಟ್ (ವಿ ಮತ್ತು ಇ) ಇಲಾಖೆಗೆ ಸರ್ಕಾರ ಆದೇಶಿಸಿದೆ.
ಸಂಜಯ್ ಅವರು ನಿಯೋಜಿತ ಕೆಲಸದಲ್ಲಿ ಯಾವುದೇ ಪ್ರಗತಿ ಮಾಡಿಲ್ಲ. ತನ್ನ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ಸೌತ್ರಿಕಾ ಟೆಕ್ನಾಲಜೀಸ್ ಮತ್ತು ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಗಳಿಗೆ 1 ಕೋಟಿ ರೂಪಾಯಿಗಳನ್ನು ಪಾವತಿಸಲು ಅನುಕೂಲವಾಗುವಂತೆ ಕೆಲಸ ಮಾಡಿದ್ದಾರೆ ಎಂದು ವಿ & ಇ ಇಲಾಖೆ ಆರೋಪಿಸಿದೆ.
ಸಂಜಯ್ ಅವರು ಟೆಂಡರ್ ನೀಡುವಾಗ ಬಿಡ್ ವಂಚನೆ ಮಾಡಿದ್ದಾರೆ. ಕಂಪನಿಗಳ ಪರ ಒಲವು ತೋರಿದ್ದಾರೆ. ಟೆಂಡರ್ ಪ್ರಕ್ರಿಯೆಯ ಸಮಗ್ರತೆಯಲ್ಲಿ ರಾಜಿ ಮಾಡಿಕೊಂಡಿದ್ದಾರೆ ಮತ್ತು ಸಾರ್ವಜನಿಕ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ದೂರಿದೆ.
ವಿಜಿಲೆನ್ಸ್ ವರದಿಯು ಕಂಪನಿಯ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲು ಮತ್ತು ಕೇಂದ್ರ ಸೇವಾ ನೀತಿ ನಿಯಮಗಳ ಅಡಿಯಲ್ಲಿ ಸಂಜಯ್ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ವಹಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಟಿಡಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಡಿಜಿಪಿ ಶ್ರೇಣಿಯ ಅಧಿಕಾರಿಗಳಾದ ಪಿ.ಎಸ್.ಆರ್.ಆಂಜನೇಯುಲು ಮತ್ತು ಪಿ.ವಿ.ಸುನೀಲ್ ಕುಮಾರ್, ಹೆಚ್ಚುವರಿ ಡಿಜಿಪಿ ಎನ್.ಸಂಜಯ್, ಐಜಿಪಿಗಳಾದ ಕಂಠಿ ರಾಣಾ ಟಾಟಾ, ಜಿ.ಪಾಲ ರಾಜು ಮತ್ತು ಕೆ.ರಘುರಾಮರೆಡ್ಡಿ ಮತ್ತು ಡಿಐಜಿ ಶ್ರೇಣಿಯ ಅಧಿಕಾರಿಗಳಾದ ಆರ್.ಎನ್. ಅಮ್ಮಿ ರೆಡ್ಡಿ, ಚಿ. ವಿಜಯರಾವ್ ಮತ್ತು ವಿಶಾಲ್ ಗುನ್ನಿ ಅವರನ್ನು ವರ್ಗಾಯಿಸಿದೆ.
ಈ ಕೆಲವು ಅಧಿಕಾರಿಗಳು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಚಂದ್ರಬಾಬು ನಾಯ್ಡು ಸೇರಿದಂತೆ ಟಿಡಿಪಿ ನಾಯಕರನ್ನು ಗುರಿಯಾಗಿಸಿಕೊಂಡ ಆರೋಪವನ್ನು ಎದುರಿಸಿದ್ದರು.
ಇದನ್ನೂ ಓದಿ : ಮದ್ಯ ನಿಷೇಧ ಕಾನೂನನ್ನು ಪರಿಶೀಲಿಸಲಿರುವ ಬಿಹಾರ ಸಿಎಂ ನಿತೀಶ್ ಕುಮಾರ್ – ವರದಿ


