ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಐದನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ, ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯನ್ನು ತಡೆಯುವ ಒಪ್ಪಂದವನ್ನು ಇರಾನ್ ತಿರಸ್ಕರಿಸಿದೆ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟೆಹ್ರಾನ್‌ನ ಜನತೆಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿಯಿಂದಾಗಿ, ಟ್ರಂಪ್ ಸೋಮವಾರ ಕೆನಡಾದಲ್ಲಿ ಪ್ರಾರಂಭಗೊಂಡಿರುವ ಗ್ರೂಪ್ ಆಫ್ ಸೆವೆನ್ ಶೃಂಗಸಭೆಯಿಂದ ಒಂದು ದಿನ ಮುಂಚಿತವಾಗಿ ಹೊರಟಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಟ್ರಂಪ್ ತಮ್ಮ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ಕರೆಯಲಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.
“ನಾನು ಸಹಿ ಹಾಕಲು ಹೇಳಿದ ಒಪ್ಪಂದಕ್ಕೆ ಇರಾನ್ ಸಹಿ ಹಾಕಬೇಕಿತ್ತು. ಎಂತಹ ನಾಚಿಕೆಗೇಡಿನ ಸಂಗತಿ ಮತ್ತು ಮಾನವ ಜೀವ ವ್ಯರ್ಥ. ಸರಳವಾಗಿ ಹೇಳುವುದಾದರೆ, ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ. ನಾನು ಅದನ್ನು ಮತ್ತೆ ಮತ್ತೆ ಹೇಳಿದ್ದೇನೆ! ಎಲ್ಲರೂ ತಕ್ಷಣ ಟೆಹ್ರಾನ್‌ನಿಂದ ಸ್ಥಳಾಂತರಗೊಳ್ಳಬೇಕು” ಎಂದು ಟ್ರಂಪ್ ತಮ್ಮ ಟ್ರೂತ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.
ಅಮೆರಿಕ ಪ್ರಸ್ತಾಪಿಸಿದ್ದ ಕದನ ವಿರಾಮಕ್ಕೆ ಇಸ್ರೇಲ್ ಮತ್ತು ಇರಾನ್ ಒಪ್ಪಿಗೆ ನೀಡುವುದು ತಕ್ಷಣದ ಉದ್ದೇಶವಾಗಿರುವುದರಿಂದ, ಟ್ರಂಪ್ ಜಿ7 ನಿಂದ ಬೇಗನೆ ನಿರ್ಗಮಿಸಿರುವುದು ಸಕಾರಾತ್ಮಕವಾಗಿದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.
“ವಿಶೇಷವಾಗಿ ಕದನ ವಿರಾಮ ಮತ್ತು ವಿಶಾಲ ಚರ್ಚೆಗಳನ್ನು ಪ್ರಾರಂಭಿಸುವ ಪ್ರಸ್ತಾಪವನ್ನು ಮಾಡಲಾಗಿದೆ. ಇದು ತುಂಬಾ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಈಗ ಪಾಲುದಾರರು (ಪಕ್ಷಕಾರರು) ಏನು ಮಾಡುತ್ತಾರೆ ಎಂಬುದನ್ನು ನೋಡಬೇಕಾಗಿದೆ” ಎಂದಿದ್ದಾರೆ.
ಮಂಗಳವಾರ ಮುಂಜಾನೆ ಟೆಹ್ರಾನ್‌ನಲ್ಲಿ ಸ್ಫೋಟಗಳು ಮತ್ತು ಭಾರೀ ವಾಯು ರಕ್ಷಣಾ ಗುಂಡಿನ ದಾಳಿ ನಡೆದಿದೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ. ಟೆಹ್ರಾನ್‌ನ 320 ಕಿಮೀ (200 ಮೈಲುಗಳು) ದೂರದಲ್ಲಿರುವ ಪ್ರಮುಖ ಪರಮಾಣು ನೆಲೆಯಾದ ನಟಾಂಜ್‌ನಲ್ಲಿಯೂ ವಾಯು ರಕ್ಷಣಾ ಕಾರ್ಯವನ್ನು ಸಕ್ರಿಯಗೊಳಿಸಲಾಗಿದೆ ಎಂದು ಅಸ್ರಿರಾನ್ ಸುದ್ದಿ ವೆಬ್‌ಸೈಟ್ ವರದಿ ಮಾಡಿದೆ.
ಅಮೆರಿಕ ಇರಾನ್ ಮೇಲೆ ದಾಳಿ ಮಾಡುತ್ತಿದೆ ಎಂಬುದು ನಿಜವಲ್ಲ ಎಂದು ಶ್ವೇತಭವನದ ಸಹಾಯಕರೊಬ್ಬರು ಹೇಳಿದ್ದಾರೆ. ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, “ಟ್ರಂಪ್ ಇನ್ನೂ ಇರಾನ್ ಜೊತೆ ಪರಮಾಣು ಒಪ್ಪಂದ ಮಾಡಿಕೊಳ್ಳುವ ಗುರಿಯನ್ನು ಹೊಂದಿದ್ದಾರೆ ಮತ್ತು ಅಮೆರಿಕವು ಈ ಪ್ರದೇಶದಲ್ಲಿನ ತನ್ನ ಆಸ್ತಿಗಳನ್ನು ರಕ್ಷಿಸಿಕೊಳ್ಳುತ್ತದೆ ಎಂದಿದ್ದಾರೆ.
ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ ಸೋಮವಾರ ಮಧ್ಯರಾತ್ರಿಯ ನಂತರ ವಾಯುದಾಳಿ ಸೈರನ್‌ಗಳು ಮೊಳಗಿವೆ. ಇರಾನ್ ಕ್ಷಿಪಣಿಗಳು ಮತ್ತೆ ದೇಶವನ್ನು ಗುರಿಯಾಗಿಸಿಕೊಂಡಿದ್ದು ಸ್ಫೋಟದ ಶಬ್ದಗಳು ಕೇಳಿ ಬಂದಿವೆ ಎಂದು ವರದಿಯಾಗಿದೆ.
ಐದು ದಿನಗಳಲ್ಲಿ ಇರಾನಿನ ಅಧಿಕಾರಿಗಳು 224 ಸಾವುಗಳನ್ನು ವರದಿ ಮಾಡಿದ್ದಾರೆ. ಇಸ್ರೇಲ್ 24 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಇರಾನಿನ ದಾಳಿಯಿಂದ ಹಾನಿಗೊಳಗಾದ ಸ್ಥಳಗಳಿಂದ ಸುಮಾರು 3,000 ಇಸ್ರೇಲಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಇಸ್ರೇಲ್ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಕ್ಷಣದ ಕದನ ವಿರಾಮ ಒಪ್ಪಿಕೊಳ್ಳುವಂತೆ ಮಾಡಲು ಟ್ರಂಪ್ ಮೇಲೆ ಒತ್ತಡ ಹೇರುವಂತೆ ಒಮಾನ್, ಕತಾರ್ ಮತ್ತು ಸೌದಿ ಅರೇಬಿಯಾವನ್ನು ಇರಾನ್ ಕೇಳಿಕೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಸುದ್ದಿ ಓದುತ್ತಿರುವಾಗಲೇ ಇರಾನ್ ಸರ್ಕಾರಿ ಚಾನೆಲ್ ಮೇಲೆ ಇಸ್ರೇಲ್ ದಾಳಿ; ನೇರ ಪ್ರಸಾರದಲ್ಲಿ ದಾಖಲು


