ತುಮಕೂರು ಮಹಾನಗರ ಪಾಲಿಕೆ-ಸ್ಮಾರ್ಟ್ ಸಿಟಿ ಲಿಮಿಟೆಡ್ ಜಂಟಿಯಾಗಿ ನಡೆಸಿರುವ ಕಾಮಗಾರಿಗಳಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿದ್ದು ಕೋಟ್ಯಂತರ ರೂಪಾಯಿಗಳನ್ನು ಕೊಳ್ಳೆಹೊಡೆಯಲಾಗಿದೆ ಎಂದು ಪಾಲಿಕೆ ಸದಸ್ಯ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಏಳು ವರ್ಷಗಳಲ್ಲಿ ಸುಮಾರು 49 ಕೋಟಿ ರೂಗಳಿಗೂ ಹೆಚ್ಚು ಮೊತ್ತದ ಅವ್ಯವಹಾರ ನಡೆದಿದೆ ಎಂದಿದ್ದಾರೆ. ಕಾಮಗಾರಿ ಗುತ್ತಿಗೆ ಪಡೆದಿರುವ ವೈಬ್ರೈಟ್ ವೈಪ್ಲೆಟ್ ಟೆಕ್ನಾಲಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಂತಹ ಕಂಪನಿಗೆ ಕಾಮಗಾರಿ ಗುತ್ತಿಗೆ ನೀಡಿದೆ ಇದು ಒಪ್ಪಂದದ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಪಾಲಿಕೆಯವರು ಹಣಕಾಸು ಅನುಮೋದನೆಗೆ ಯಾವುದೇ ಸಭೆ ಮಾಡಿಲ್ಲ ಎಂದು ಉತ್ತರ ನೀಡಿದ್ದಾರೆ. ಆದರೆ ಸಭೆ ನಡೆದಿದೆ. ಸಭೆಯಲ್ಲಿ 45 ಕೋಟಿ ರೂಪಾಯಿ ಹೆಚ್ಚುವರಿ ಅನುಮೋದನೆ ಪಡೆದಿರುವ ಬಗ್ಗೆ ಪ್ರಸ್ತಾಪವಾಗಿದೆ. ಇದೊಂದು ಹಗರಣ. ಇಷ್ಟೊಂದು ಪ್ರಮಾಣದ ಹಣವನ್ನು ದುರ್ಬಳಕೆ ಮಾಡಲಾಗಿದೆ. ಪ್ರಗತಿ ವರದಿ ಪಡೆದುಕೊಂಡಿಲ್ಲ. ಇದು ಒಪ್ಪಂದದ ಸ್ಪಷ್ಟ ಉಲ್ಲಂಘನೆ ಮಾಡಿದಂತಾಗಿದೆ ಎಂದು ಆಪಾದಿಸಿದ್ದಾರೆ.
ಸರ್ಕಾರದ ಆದೇಶದ ಪ್ರಕಾರ 50 ಲಕ್ಷ ರೂಪಾಯಿಗೂ ಹೆಚ್ಚಿನ ಕಾಮಗಾರಿಗೆ ಅನುಮೋದನೆ ಪಡೆಯಬೇಕಾದರೆ ಟೆಂಡರ್ ಕರೆಯಬೇಕು. ಆದರೆ ಅಧಿಕಾರಿಗಳು ಈ ನಿಯಮಗಳನ್ನು ಅನುಸರಿಸಿಲ್ಲ. ಲೈಟ್ ಬಿಲ್ 85 ಲಕ್ಷ ರೂ ಬರುತ್ತದೆ. ಬೀದಿದೀಪ ನಿರ್ವಹಣೆಗೆ 24 ಲಕ್ಷ ರೂ ನಿಗದಿಪಡಿಸಿದೆ. ಒಟ್ಟಾರೆ 1.06 ಕೋಟಿ ರೂಪಾಯಿ ವೆಚ್ಚ ಬರುತ್ತದೆ. ಪಾಲಿಕೆ-ಸ್ಮಾರ್ಟ್ ಸಿಟಿ ಎಂಡಿ ಕೇಳಿದರೆ 1.44 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ಹೇಳುತ್ತಾರೆ ಎಂದು ಕಿಡಿಕಾರಿದ್ದಾರೆ.
ಮಾಹಿತಿ ಹಕ್ಕಿನಡಿ ಪಡೆದಿರುವ ದಾಖಲೆಗಳಲ್ಲಿ ತಿಂಗಳಿಗೆ 1.66 ಕೋಟಿ ವೆಚ್ಚವಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ. ಅಂದರೆ 60 ಲಕ್ಷ ರೂಪಾಯಿ ಹೆಚ್ಚುವರಿ ಲೆಕ್ಕ ತೋರಿಸಲಾಗಿದೆ. ಈ ಹಣದಲ್ಲಿ ಶೇಕಡ 50 ರಷ್ಟು ಉಳಿತಾಯವನ್ನು ತೋರಿಸಬೇಕು. ಅದನ್ನು ತೋರಿಸಿಲ್ಲ. ತಿಂಗಳಿಗೆ 60 ಲಕ್ಷ ಹೆಚ್ಚುವರಿಯಾದರೆ ವಾರ್ಷಿಕ 7 ಕೋಟಿ ರೂಪಾಯಿ ಆಗುತ್ತದೆ. 7 ವರ್ಷಕ್ಕೆ 49 ಕೋಟಿ ರೂ ಹೆಚ್ಚುವರಿ ಹಣ ಖರ್ಚು ಮಾಡಿದ್ದು ಇದೊಂದು ದೊಡ್ಡ ಹಗರಣವಾಗಿದೆ ಎಂದು ದೂರಿದ್ದಾರೆ.
ಸ್ಟ್ರೀಟ್ ಲೈಟ್ ಕಂಟ್ರೋಲ್ ಸಿಸ್ಟಂ ಮಾಡಿದೆ. ಇದು ತುಮಕೂರು ನಗರದಲ್ಲಿ ಅಳವಡಿಸಿದೆ. ಇದಕ್ಕೆ ಇಷ್ಟೊಂದು ವೆಚ್ಚ ಮಾಡಿ ಹಣ ಲೂಟಿ ಮಾಡಲಾಗಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಯತ್ನಾಳ್‌ಗೆ ಗುಲಾಮಗಿರಿ ಬಿಟ್ಟು ಬೇರೇನೂ ಗೊತ್ತಿಲ್ಲ ಎಂದು ಒಪ್ಪಿಕೊಳ್ಳುತ್ತಾರೆಯೇ?: ಕರವೇ ಪ್ರಶ್ನೆ


