“ಮುಸ್ಲಿಮರಿಗೆ ಮೀಸಲಾತಿ ನೀಡಲು ನಾವು ಸಂವಿಧಾನ ಬದಲಾಯಿಸುತ್ತೇವೆ” ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿರುವುದಾಗಿ ಬಿಜೆಪಿ ಆರೋಪಿಸಿದ್ದು, ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿದೆ.
ಇಂದು (ಮಾ.24) ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು,”ಸ್ಪೀಕರ್ ಸರ್, ನಾನು ಬಹಳ ಗಂಭೀರವಾದ ವಿಷಯವನ್ನು ಪ್ರಸ್ತಾಪಿಸಲು ಎದ್ದು ನಿಂತಿದ್ದೇನೆ. ಎನ್‌ಡಿಎ ಸಂಸದರು ನನ್ನನ್ನು ಭೇಟಿಯಾಗಿ ಬಹಳ ಪ್ರಮುಖವಾದ ಈ ವಿಷಯವನ್ನು ಸಂಸತ್‌ನಲ್ಲಿ ಪ್ರಸ್ತಾಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಸರ್..ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಬಹಳ ಜವಾಬ್ದಾರಿಯುತ ಕಾಂಗ್ರೆಸ್ ನಾಯಕ, ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವವರು ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ಭಾರತದ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ನಾವು ಹಗುರವಾಗಿ ತೆಗೆದುಕೊಳ್ಳುವುದಿಲ್ಲ” ಎಂದರು.
“ಈ ಹೇಳಿಕೆಯನ್ನು ಯಾವುದಾದರು ಸಾಮಾನ್ಯ ವ್ಯಕ್ತಿ ನೀಡಿದ್ದರೆ ನಾವು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ನಾವು ಸಂಸತ್ತಿನ ಹೊರಗೆ ಪ್ರತಿಕ್ರಿಯಿಸುತ್ತಿದ್ದೆವು. ಇದು ಒಬ್ಬರು ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ನೀಡಿರುವ ಹೇಳಿಕೆ. ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಮೀಸಲಾತಿ ನೀಡಲಿದೆ, ಅದಕ್ಕಾಗಿ ಸಂವಿಧಾನ ಬದಲಾಯಿಸಲಿದೆ ಎಂದು ಹೇಳಿದ್ದಾರೆ. ಇದು ಅತ್ಯಂತ ಗಂಭೀರ ವಿಚಾರ, ಇದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇದು ಭಾರತದ ಸಂವಿಧಾನದ ಮೇಲಿನ ದಾಳಿ. ಡಾ.ಬಿಆರ್ ಅವರು ಕೊಟ್ಟಿರುವ ಸಂವಿಧಾನದ ಮೇಲಿನ ದಾಳಿ” ಎಂದು ಕಿಡಿಕಾರಿದರು.
“ಈ ಜನರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋ ಹಿಡಿದುಕೊಂಡು ಬರುತ್ತಾರೆ. ಅದೇ ಜನರು ಭಾರತದ ಸಂವಿಧಾನವನ್ನು ಬದಲಾಯಿಸುವುದಾಗಿ ಅಧಿಕೃತ ಹೇಳಿಕೆ ನೀಡುತ್ತಾರೆ. ಇಲ್ಲಿ ಕುಳಿತಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಈ ವಿಚಾರದ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಬೇಕೆಂದು ನಾನು ಆಗ್ರಹಿಸುತ್ತೇನೆ. ಮುಸ್ಲಿಮರಿಗೆ ಮೀಸಲಾತಿ ನೀಡಲು ನೀವು ಹೇಗೆ ಮತ್ತು ಯಾವ ಕಾರಣಕ್ಕೆ ಭಾರತದ ಸಂವಿಧಾನ ಬದಲಾಯಿಸಲು ಬಯಸುತ್ತಿದ್ದೀರಿ? ನನಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಂದ ಅವರ ನಿಲುವಿನ ಕುರಿತು ಸ್ಪಷ್ಟವಾದ ಪ್ರತಿಕ್ರಿಯೆ ಬೇಕು” ಎಂದು ಒತ್ತಾಯಿಸಿದರು.
#WATCH | Ruckus breaks out in Rajya Sabha as Minister of Parliamentary Affairs, Kiren Rijiju raises the issue of Karnataka Deputy CM DK Shivakumar's reported remarks on Constitution pic.twitter.com/MhWTAlt7IA
— ANI (@ANI) March 24, 2025
ಡಿ.ಕೆ ಶಿವಕುಮಾರ್ ಅವರ ಹೇಳಿಕೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, “ಕರ್ನಾಟಕದ ಉಪಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಅವರು ಮುಸ್ಲಿಮರಿಗೆ ಮೀಸಲಾತಿ ನೀಡಲು ಕಾಂಗ್ರೆಸ್ ಸಂವಿಧಾನವನ್ನು ತಿದ್ದುಪಡಿ ಮಾಡಲಿದೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ” ಎಂದಿದ್ದಾರೆ.
“ಸ್ವಯಂ ಘೋಷಿತ ಸಂವಿಧಾನದ ರಕ್ಷಕ ರಾಹುಲ್ ಗಾಂಧಿ ಈಗ ಎಲ್ಲಿದ್ದಾರೆ? ಕಾಂಗ್ರೆಸ್ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗಿಂತ ಸಮಾಧಾನಕ್ಕೆ ಆದ್ಯತೆ ನೀಡಿದೆ. ಅವರು ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು ಹಿಂಜರಿಯಲಿಲ್ಲ ಮತ್ತು ಅದರ ನಂತರವೂ ಮುಸ್ಲಿಮರು ಹಿಂದೆ ಉಳಿಯುವಂತೆ ನೋಡಿಕೊಂಡರು. ಇದಕ್ಕಿಂತ ದೊಡ್ಡ ದ್ರೋಹ ಇನ್ನೊಂದಿಲ್ಲ”ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಎಂದಿಗೂ ಹಿಂದೂಗಳಿಗೆ ನ್ಯಾಯಯುತವಾಗಿ ವರ್ತಿಸಿಲ್ಲ – ಮತ್ತು ಅದು ಎಂದಿಗೂ ಆಗುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.
Karnataka Deputy Chief Minister and senior Congress leader DK Shivakumar openly declares that the Congress will amend the Constitution to grant reservations to Muslims.
Where is Rahul Gandhi, the self-proclaimed savior of the Constitution now? The Congress has always prioritized… pic.twitter.com/jMyPiRAfWg
— Amit Malviya (@amitmalviya) March 23, 2025
ಬಿಜೆಪಿಗರ ಆರೋಪದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, “ನಾನು ನಡ್ಡಾ ಅವರಿಗಿಂತ ಸಂವೇದನಾಶೀಲ, ಹಿರಿಯ ರಾಜಕಾರಣಿ. ನಾನು ಕಳೆದ 36 ವರ್ಷಗಳಿಂದ ವಿಧಾನಸಭೆಯಲ್ಲಿದ್ದೇನೆ. ನನಗೆ ಸಾಮಾನ್ಯ ಜ್ಞಾನವಿದೆ. ವಿವಿಧ ತೀರ್ಪುಗಳ ನಂತರ ಹಲವು ಬದಲಾವಣೆಗಳಾಗುತ್ತವೆ ಎಂದು ನಾನು ಸಾಂದರ್ಭಿಕವಾಗಿ ಹೇಳಿದ್ದೇನೆ. ಹಿಂದುಳಿದ ವರ್ಗಗಳ ಕೋಟಾದ ಪ್ರಕಾರ ಮೀಸಲಾತಿ ನೀಡಲಾಗಿದೆ. ನಾವು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ನಾನು ಹೇಳಿಲ್ಲ. ಅವರು ಏನು ಉಲ್ಲೇಖಿಸುತ್ತಾರೋ ಅದು ತಪ್ಪು. ಅವರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಾವು ರಾಷ್ಟ್ರೀಯ ಪಕ್ಷ… ಈ ದೇಶಕ್ಕೆ ಸಂವಿಧಾನವನ್ನು ತಂದಿದ್ದು ನಮ್ಮ ಪಕ್ಷ… ನಾನು ಇದರ ಮೇಲೆ ಹಕ್ಕುಚ್ಯುತಿ ನೋಟಿಸ್ ನೀಡುತ್ತೇನೆ. ನಾನು ಪ್ರಕರಣದ ವಿರುದ್ಧ ಹೋರಾಡುತ್ತೇನೆ. ಅವರು ನನ್ನನ್ನು ತಪ್ಪಾಗಿ ಉಲ್ಲೇಖಿಸುತ್ತಿದ್ದಾರೆ…” ಎಂದಿದ್ದಾರೆ.
#WATCH | Bengaluru: Amid the row over his remarks on Constitution, Karnataka Deputy CM DK Shivakumar says, "I am a sensible, senior politician, than Mr Nadda. I have been in the Assembly since the last 36 years. I have a basic common sense. I have said casually that there will be… pic.twitter.com/LSctB7qf2T
— ANI (@ANI) March 24, 2025
ಡಿ.ಕೆ ಶಿವಕುಮಾರ್ ಸಂವಿಧಾನ ಬದಲಾಯಿಸುವುದಾಗಿ ಹೇಳಿದ್ದು ನಿಜಾನಾ?
ನ್ಯೂಸ್ 18 ಇಂಡಿಯಾ ಸುದ್ದಿ ಸಂಸ್ಥೆ ಆಯೋಜಿಸಿದ್ದ ‘ಡೈಮಂಡ್ ಸ್ಟೇಟ್ಸ್ ಸಮ್ಮಿಟ್’ ಎಂಬ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಭಾಗವಹಿಸಿದ್ದರು. ಅಲ್ಲಿ ರಾಜಕೀಯ, ಸರ್ಕಾರ, ಕಾಂಗ್ರೆಸ್ ಪಕ್ಷ ಹಾಗೂ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿಗೆ ಡಿ.ಕೆ ಶಿವಕುಮಾರ್ ಉತ್ತರಿಸಿದ್ದಾರೆ.
ಕಾರ್ಯಕ್ರಮದ ನಿರೂಪಕ ಇತ್ತೀಚೆಗೆ ಕರ್ನಾಟಕ ಸರ್ಕಾರ ಮಸೂದೆ ಮಂಡಿಸಿದ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಖಡ 4ರಷ್ಟು ಮೀಸಲಾತಿ ನೀಡುವ ವಿಚಾರವನ್ನು ಡಿ.ಕೆ ಶಿವಕುಮಾರ್ ಮುಂದೆ ಪ್ರಸ್ತಾಪಿಸಿ, “ಸಂವಿಧಾನದಲ್ಲಿ ಧರ್ಮಧಾರಿತ ಮೀಸಲಾತಿಗೆ ಅವಕಾಶ ಇಲ್ವಲ್ಲಾ”? ಎಂದಿದ್ದಾರೆ. ಅದಕ್ಕೆ ಉತ್ತರಿಸಿದ ಡಿಕೆಶಿ, “ಹೌದು, ನಾನು ಒಪ್ಪುತ್ತೇನೆ..ನೋಡೋಣ, ಕಾದು ನೋಡೋಣ. ನ್ಯಾಯಾಲಯದಲ್ಲಿ ಏನು ಬರುತ್ತದೆ ಎಂದು ಕಾದು ನೋಡೋಣ. ನಾವು ಏನೋ ಒಂದು ಪ್ರಾರಂಭಿಸಿದ್ದೇವೆ. ಎಲ್ಲರೂ ನ್ಯಾಯಾಲಯಕ್ಕೆ ಹೋಗುತ್ತಾರೆ ಎಂದು ನನಗೆ ಗೊತ್ತಿದೆ. ಶುಭದಿನಕ್ಕೆ ನಾವೆಲ್ಲ ಸ್ವಲ್ಪ ಕಾಯೋಣ.. ಶುಭದಿನ ಬರಲಿದೆ. ತುಂಬಾ ಬದಲಾವಣೆಗಳಿವೆ, ಸಂವಿಧಾನ ಬದಲಾಗಲಿದೆ. ಸಂವಿಧಾನದಲ್ಲಿ ಬದಲಾವಣೆಗಳನ್ನು ತಂದ ಕಾನೂನುಗಳಿವೆ” ಎಂದಿದ್ದಾರೆ.


