ಜಾರ್ಖಂಡ್‌ನಲ್ಲಿ ಬಿಜೆಪಿ ಸೋತಿದೆ. ಹಿಂದೂ ಮುಸ್ಲಿಮ್ ಧ್ರುವೀಕರಣ ಫಲ ನೀಡಿಲ್ಲ. ಬಹುಮತ ಸಿಗದಿದ್ದರೂ ಇತರೆ ಪಕ್ಷಗಳನ್ನು ಒಡೆದು, ಬೆದರಿಸಿ, ಬ್ಲ್ಯಾಕ್‌ಮೇಲ್ ಮಾಡಿ ಸರ್ಕಾರ ರಚಿಸುವ ತಂತ್ರಕ್ಕೂ ಸೋಲಾಗಿದೆ. ಈ ಜನವಿರೋಧಿ ಹುನ್ನಾರಗಳು ಸದಾಕಾಲ ರಾಜಕೀಯ ಲಾಭ ನೀಡುವುದಿಲ್ಲ ಎಂಬ ಸತ್ಯವನ್ನು ಜಾರ್ಖಂಡ್ ಚುನಾವಣಾ ಫಲಿತಾಂಶಗಳು ಮರು ದೃಢೀಕರಿಸಿವೆ. ಜಾರ್ಖಂಡ್ ಮುಕ್ತಿ ಮೋರ್ಚಾ ನಡೆಸಿದ ಸುದೀರ್ಘ ಹೋರಾಟದ ನಂತರ ಜಾರ್ಖಂಡ್ ಪ್ರತ್ಯೇಕ ಸ್ವತಂತ್ರ ರಾಜ್ಯವಾಯಿತು. ಇಲ್ಲಿನ ಆದಿವಾಸಿಗಳ ಮತಗಳು, ಒಟ್ಟು ಮತಗಳ ಮೂರನೆಯ ಒಂದಕ್ಕಿಂತ ಕಡಿಮೆ ಹೌದು. ಆದರೂ ಭಾವನಾತ್ಮಕವಾಗಿ ಜಾರ್ಖಂಡ್ ಆದಿವಾಸಿ ಸೀಮೆಯೆಂದೇ ಹೆಸರಾದದ್ದು.
ಬಿಜೆಪಿಯ ಸರ್ವಶಕ್ತ ಜೋಡಿಯಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ 2014ರಲ್ಲಿ ಜಾರ್ಖಂಡ್ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಆರಿಸಿದ್ದು ಆದಿವಾಸಿ ಅಲ್ಲದ ರಘುಬರದಾಸ್ ಅವರನ್ನು. ದಾಸ್ ಐದು ವರ್ಷಗಳ ಕಾಲ ನಡೆಸಿದ ಸರ್ಕಾರದ ಸ್ವರೂಪ ಆದಿವಾಸಿ ವಿರೋಧಿ ಎನಿಸಿಕೊಂಡಿತ್ತು. ಭೂಸ್ವಾಧೀನ ಕಾಯಿದೆಗೆ ದಾಸ್ ಸರ್ಕಾರ ತಂದಿದ್ದ ತಿದ್ದುಪಡಿ ಮತ್ತು ಆದಿವಾಸಿ ಸೀಮೆಯನ್ನು ವ್ಯಾಪಿಸಿದ ಸ್ವಯಮಾಡಳಿತದ ‘ಪತ್ತಲ್ ಗಡಿ’ ಆಂದೋಲನ ಹಾಗೂ ಮತಾಂತರ ತಡೆ ವಿಧೇಯಕ ಚುನಾವಣೆಯಲ್ಲಿ ಬಿಜೆಪಿಗೆ ಮುಳುವಾದವು. ಕಳೆದ ಎರಡು ವರ್ಷಗಳಲ್ಲಿ ಜಾರ್ಖಂಡ್‌ನಲ್ಲಿ ಗುಂಪು ಬೀದಿಬೀದಿಗಳಲ್ಲಿ ಬಡಿದು ಜಜ್ಜಿ ಕೊಂದ ಗುಂಪು ಹತ್ಯೆ ಪ್ರಕರಣಗಳ ಸಂಖ್ಯೆ 20. ಹತ್ಯೆಗೆ ಈಡಾದವರ ಪೈಕಿ 11 ಮಂದಿ ಮುಸಲ್ಮಾನರಾಗಿದ್ದರು.
ಸ್ವಾಭಾವಿಕವಾಗಿಯೇ ರಘುಬರದಾಸ್ ಅವರು ಆದಿವಾಸಿಗಳ ವಿಶ್ವಾಸ ಕಳೆದುಕೊಂಡರು. ಬಿಜೆಪಿಯಿಂದ ದೂರ ಸರಿದು ಜಾರ್ಖಂಡ್ ಮುಕ್ತಿ ಮೋರ್ಚಾದ ಜೊತೆ ಕೈಕಲೆಸಿದರು.
2017ರಲ್ಲಿ ಅಧಿಕಾರ ಗಳಿಕೆಯಲ್ಲಿ ಯಶಸ್ಸಿನ ಶಿಖರ ಮುಟ್ಟಿದ್ದ ಬಿಜೆಪಿ ದೇಶದ ಶೇ.71ರಷ್ಟು ಭೂ ಭಾಗವನ್ನು ಆಳತೊಡಗಿತ್ತು. ಇದೀಗ ಜಾರ್ಖಂಡ್ ಸೋಲಿನ ನಂತರ ಈ ಪ್ರಮಾಣ ಶೇ.35ಕ್ಕೆ ಕುಸಿದಿದೆ. ಜನಸಂಖ್ಯೆಯ ಲೆಕ್ಕ ಹಿಡಿದು ಹೇಳುವುದಾದರೆ ಈ ಪ್ರಮಾಣ ಶೇ.69ರಿಂದ ಶೇ.43ಕ್ಕೆ ತಗ್ಗಿದೆ.
2019 ಬಿಜೆಪಿಯ ಪಾಲಿಗೆ ಗೆಲುವು ಮತ್ತು ಸೋಲಿನ ಸಂಗಮವಾಗಿತ್ತು. ಲೋಕಸಭಾ ಚುನಾವಣೆಗಳಲ್ಲಿ 303 ಸೀಟುಗಳು ಮತ್ತು ಶೇ.37ರಷ್ಟು ವೋಟುಗಳ ಧಾರಾಳ ಬಹುಮತ ಗಳಿಸಿತು. ಆದರೆ ಈ ಆತ್ಮವಿಶ್ವಾಸದ ಗೆಲುವಿನ ಬೆನ್ನಿನಲ್ಲೇ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಕೈಬಿಟ್ಟಿವೆ. ಹರಿಯಾಣದಲ್ಲಿ ಬಹುಮತ ದೊರೆಯಲಿಲ್ಲ.
ಮಹಾರಾಷ್ಟ್ರದಲ್ಲಿ ಕೈಗೆ ಬಂದ ತುತ್ತನ್ನು ಬಾಯಿಗೆ ಇರಿಸಿಕೊಳ್ಳುವಲ್ಲಿ ತಾನು ಎದುರಿಸಿದ ವೈಫಲ್ಯ ಮತ್ತು ಜಾರ್ಖಂಡ್‌ದ ನಿರ್ಣಾಯಕ ಸೋಲು ಕೇಸರಿ ಪಕ್ಷದ ವಿರೋಧಿಗಳ ಕೈಗೆ ಬಡಿಗೆ ನೀಡಿದೆ. ಬಿಜೆಪಿ ಇಳಿಜಾರಿನ ಹಾದಿ ಹಿಡಿದಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ದೇಶಾದ್ಯಂತ ಭುಗಿಲೆದ್ದಿರುವ ಪೌರತ್ವ ತಿದ್ದುಪಡಿ ಕಾಯಿದೆಯ ವಿರೋಧ ಕೂಡ ಈ ಸಂದೇಹದ ಸಾಲು ಸೇರಿದೆ.
ಇತ್ತೀಚೆಗೆ ಜಾರ್ಖಂಡ್‌ನಲ್ಲಿ ನಡೆಸಲಾದ ಲೋಕನೀತಿ- ಸಿ.ಎಸ್.ಡಿ.ಎಸ್ ಸಮೀಕ್ಷೆಯ ಪ್ರಕಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಭಾವ ತಗ್ಗಿದೆ. ಆದರೆ ಕೇವಲ ಇಷ್ಟು ಮಾತ್ರದಿಂದಲೇ ಅವರ ಪ್ರಭಾವ ಸರ್ವವ್ಯಾಪಿಯಾಗಿ ರಾಷ್ಟ್ರಮಟ್ಟದಲ್ಲಿ ತಗ್ಗಿದೆ ಎಂದು ಹೇಳಲು ಬರುವುದಿಲ್ಲ ಎನ್ನುತ್ತಾರೆ ಈ ಸಮೀಕ್ಷೆ ನಡೆಸಿರುವ ಸಿ.ಎಸ್.ಡಿ.ಎಸ್.ನ ಸಂಜಯಕುಮಾರ್. ಮಧ್ಯಪ್ರದೇಶ, ಛತ್ತೀಸಗಢ ಹಾಗೂ ರಾಜಸ್ತಾನ ವಿಧಾನಸಭಾ ಚುನಾವಣೆಗಳಲ್ಲಿ ಸೋತಿದ್ದರೂ, ಆ ನಂತರ ಜರುಗಿದ ಲೋಕಸಭಾ ಚುನಾವಣೆಗಳಲ್ಲಿ ಈ ಮೂರೂ ರಾಜ್ಯಗಳ 65 ಸೀಟುಗಳ ಪೈಕಿ 62ನ್ನು ಬಿಜೆಪಿ ಗೆದ್ದುಕೊಂಡ ಕುರಿತು ಕುಮಾರ್ ಗಮನ ಸೆಳೆದಿದ್ದಾರೆ.
ಸದ್ಯಕ್ಕೆ ಜಾರ್ಖಂಡ್ ರಾಜ್ಯಕ್ಕೆ ಸೀಮಿತವಾಗಿರುವ ಈ ಕುಸಿತ ಮುಂಬರುವ ದಿನಗಳಲ್ಲಿ ವಿಶೇಷವಾಗಿ ಪೌರತ್ವ ಕಾಯಿದೆ ತಿದ್ದುಪಡಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಾರ್ಖಂಡ್‌ನ ಆಚೆಗೂ ಹಬ್ಬಲಿದೆಯೇ ಅಥವಾ ಕೇಂದ್ರ ಸರ್ಕಾರ ಅದನ್ನು ತಡೆಹಿಡಿಯುವುದೇ ಎಂಬುದನ್ನು ಕಾದು ನೋಡಬೇಕಿದೆ ಎಂಬ ಅಡ್ಡ ಗೀಟನ್ನು ಕುಮಾರ್ ಎಳೆದಿದ್ದಾರೆ.
2018ರಿಂದ ಬಿಜೆಪಿ ಹಲವು ಪ್ರಮುಖ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. ಏಳು ರಾಜ್ಯಗಳಲ್ಲಿ (ಅರುಣಾಚಲ ಪ್ರದೇಶ, ತ್ರಿಪುರ, ಉತ್ತರಪ್ರದೇಶ, ಹಿಮಾಚಲ, ಉತ್ತರಾಖಂಡ, ಗುಜರಾತ್ ಹಾಗೂ ಕರ್ನಾಟಕ) ಸ್ವತಂತ್ರವಾಗಿ ಅಧಿಕಾರ ಹಿಡಿದಿದೆ. ಒಂಬತ್ತು ರಾಜ್ಯಗಳಲ್ಲಿ ಮಿತ್ರಪಕ್ಷಗಳ ನೆರವಿನೊಂದಿಗೆ ಸರ್ಕಾರಗಳನ್ನು ನಡೆಸಿದೆ.
ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಅತಿಹೆಚ್ಚು ಸೀಟು ಗೆದ್ದ ಪಕ್ಷವಾಗಿ ಹೊರಹೊಮ್ಮಿತ್ತು. ಜಾರ್ಖಂಡ್‌ನಲ್ಲಿ ಸೋತರೂ ಶೇ.33ರಷ್ಟು ಮತಗಳನ್ನು ಗಳಿಸಿತು ಎಂಬುದು ಅವರ ವಾದ. ಮತದಾರರ ಆಯ್ಕೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಭಿನ್ನ ಭಿನ್ನ ಎಂಬುದು ನಿರ್ವಿವಾದಿತ ಅಂಶ. ರಾಜ್ಯ ಸರ್ಕಾರಗಳ ಮಾತು ಬಂದಾಗ ಮತದಾರರು ಬಿಜೆಪಿಯ ಆಚೆಗೂ ನೋಡಿದ್ದಾರೆ. ಮೋದಿಯವರ ವೈಫಲ್ಯ ಇಲ್ಲಿ ಎದ್ದು ಕಂಡಿದೆ.
2020ರ ಅರಂಭದಲ್ಲೇ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆ ಮತ್ತು ಅಂತ್ಯದಲ್ಲಿ ಜರುಗುವ ಬಿಹಾರ ವಿಧಾನಸಭಾ ಚುನಾವಣೆಗಳು ಮೋದಿಯವರ ಜನಪ್ರಿಯತೆಯನ್ನು ಮತ್ತಷ್ಟು ಪರೀಕ್ಷಿಸಲಿವೆ. 2021ರಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಮ್ ವಿಧಾನಸಭೆಗಳಿಗೆ ಚುನಾವಣೆ ಜರುಗಲಿದೆ. ಈ ಎರಡೂ ರಾಜ್ಯಗಳು ಪೌರತ್ವ ತಿದ್ದುಪಡಿ ಕಾಯಿದೆ ಹುಟ್ಟಿಸಿರುವ ಭೂಕಂಪದ ಬಹುಮುಖ್ಯ ಕಂಪನ ಕೇಂದ್ರಗಳು. ಹೀಗಾಗಿ ಈ ರಾಜ್ಯಗಳು ಮೋದಿಯವರ ಕೈಹಿಡಿಯುವುವೇ ಇಲ್ಲವೇ ಕೆಡವಲಿವೆಯೇ ಎಂಬುದು ಕಾದು ನೋಡಬೇಕಿರುವ ಅಗ್ನಿಪರೀಕ್ಷೆ.
ಈ ನಡುವೆ ಮಣ್ಣುಪಾಲಾಗಿದ್ದ ಕಾಂಗ್ರೆಸ್ ಪಕ್ಷ ಚೇತರಿಕೆಯ ಸೂಚನೆಗಳನ್ನು ತೋರತೊಡಗಿದೆ. ಕಾಂಗ್ರೆಸ್ಸಿನ ನಿಜವಾದ ಶಕ್ತಿಯ ಅಂದಾಜು ಅದರ ಟೀಕಾಕಾರರಿಗಿಂತ ಹೆಚ್ಚಾಗಿ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಇದ್ದಂತಿದೆ. ಸಂಘ ಪರಿವಾರ ಕಾಂಗ್ರೆಸ್ಸಿನ ಮೇಲೆ ದಶದಿಕ್ಕುಗಳಿಂದ ನಡೆಸುತ್ತಿರುವ ದಾಳಿಯೇ ಈ ಮಾತಿಗೆ ಸಾಕ್ಷಿ. ಕಾಂಗ್ರೆಸ್ ಪಕ್ಷದ ದಿನಗಳು ಮುಗಿದುಹೋದವೆಂದು ತಾನು ಹಗಲಿರುಳು ಚೀರಿ ಹೇಳುತ್ತಿದೆ. ಮುಗಿದುಹೋಗಿದ್ದೇ ನಿಜವಾಗಿದ್ದರೆ ಆ ಮಾತನ್ನು ಹಗಲಿರುಳು ಚೀರಿ ಹೇಳುವ ಅಗತ್ಯ ಇರಲಿಲ್ಲ. ಕಾಂಗ್ರೆಸ್ಸಿಗೆ ತನ್ನಲ್ಲೇ ತನಗೆ ನಂಬಿಕೆ ಕಳೆದುಹೋಗಿದ್ದರೂ, ಮತದಾರರಲ್ಲಿ ಈ ನಂಬಿಕೆಯ ಬೇರು ಸಂಪೂರ್ಣವಾಗಿ ಅಳಿದಿಲ್ಲ ಎಂಬ ಸುಳಿವನ್ನು ಅರಿಯುವಷ್ಟು ಜಾಣತನ ಬಿಜೆಪಿಗೆ ಇದ್ದೇ ಇದೆ. ಇತ್ತೀಚಿನ ದಿನಗಳಲ್ಲಿ ತಾನು ಕಳೆದುಕೊಂಡಿರುವ ಮೂರು ಮುಖ್ಯ ರಾಜ್ಯಗಳು ಕಾಂಗ್ರೆಸ್ ಪಾಲಾಗಿವೆ ಮತ್ತು ಉಳಿದೆರಡರ ಅಧಿಕಾರವನ್ನು ಕಾಂಗ್ರೆಸ್ ತನ್ನ ಮಿತ್ರಪಕ್ಷಗಳೊಂದಿಗೆ ಹಂಚಿಕೊಂಡಿದೆ ಎಂಬ ಅಂಶಕ್ಕೆ ಬಿಜೆಪಿ ಕುರುಡಾಗುವುದು ಹೇಗೆ ತಾನೇ ಸಾಧ್ಯ?



sir
once EVEM Stops see BJP will not win in the country, all parties must see that evm must be banned at any cost, They can loose purpsefully Jarkand to get get little confidence on EVM on public