ಒಬ್ಬರು ವ್ಯಕ್ತಿಯ ಮೇಲೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಲು ಪ್ರತಿಭಟನೆ ಆಯೋಜನೆ ಕಾರಣವಷ್ಟೆ ಸಾಕಾ? ಎಂದು ದೆಹಲಿ ಹೈಕೋರ್ಟ್ ಬುಧವಾರ (ಜ.8) ದೆಹಲಿ ಪೊಲೀಸರನ್ನು ಪ್ರಶ್ನಿಸಿದೆ.
2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ವಿರೋಧಿಸುತ್ತಿದ್ದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಅಮಿತ್ ಪ್ರಸಾದ್ ಅವರಿಗೆ ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಪ್ರಶ್ನೆಯನ್ನು ಕೇಳಿದೆ.
ಯುಎಪಿಎ ಅಡಿ ಪ್ರಕರಣ ದಾಖಲಿಸಲು ಪ್ರತಿಭಟನಾ ಸ್ಥಳ ನಿಗದಿ ಮಾಡುವುದು ಅಥವಾ ಪ್ರತಿಭಟನೆ ಆಯೋಜಿಸಿದ ಕಾರಣವಷ್ಟೇ ಸಾಕಾ? ಇಲ್ಲಾ ಆ ಪ್ರತಿಭಟನಾ ಸ್ಥಳದಲ್ಲಿ ಹಿಂಸಾಚಾರ ನಡೆದಿರಬೇಕಾ? ನಿಮ್ಮ ವಾದ ಏನು? ಈಗ ಯಾವುದನ್ನು ಯುಎಪಿಎ ಅಡಿ ಪರಿಗಣಿಸಬೇಕು? ಎಂದು ನ್ಯಾಯಪೀಠ ಪ್ರಶ್ನಿಸಿದೆ.
ಆರೋಪಿಗಳು ಗಲಭೆಗೆ ಸಂಚು ರೂಪಿಸಿದ್ದರು ಮತ್ತು ಅದನ್ನು ವಾಟ್ಸಾಪ್ ಚಾಟ್‌ಗಳ ಮೂಲಕ ಕಾರ್ಯಗತಗೊಳಿಸಿದ್ದಾರೆ ಎಂದು ಎಸ್‌ಪಿಪಿ ಪ್ರಸಾದ್ ನ್ಯಾಯಾಲಯಕ್ಕೆ ಹೇಳಿದ್ದಾರೆ. ಅಲ್ಲದೆ, ಇಬ್ಬರು ಆರೋಪಿಗಳು ಯಾರು, ಯಾರಿಗೆ, ಏನು ಸಂದೇಶ ಕಳಿಸಿದ್ದರು ಎಂದು ಓದಲು ಶುರು ಮಾಡಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಾಲಯ, “ಯುಎಪಿಎ ವಿಧಿಸಲು ಪ್ರತಿಭಟನೆ ಆಯೋಜಿಸುವುದಷ್ಠೇ ಸಾಕಾ? ಆರೋಪಿಗಳು ಹಿಂಸಾತ್ಮಕ ಕೃತ್ಯವನ್ನು ಯೋಜಿಸಿ ಅದನ್ನು ಕಾರ್ಯಗತಗೊಳಿಸಿದ್ದಾರೆ ಎಂಬುವುದಕ್ಕೆ ಪುರಾವೆಗಳಿದ್ದರೆ, ಭಯೋತ್ಪಾದನಾ ವಿರೋಧಿ ಕಾನೂನಿನ ನಿಬಂಧನೆಗಳನ್ನು ಅನ್ವಯಿಸಬಹುದು. ಆದರೆ ವಾಟ್ಸಾಪ್ ಗುಂಪು ಮೂಲಕ ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದಾರೆ ಎಂಬುದು ನಿಮ್ಮ ವಾದವಾಗಿದೆ, ಅದು ಯುಎಪಿಎ ದಾಖಲಾತಿಗೆ ಸಾಕಾ? ಎಂದು ಕೇಳಿದೆ.
ಈ ವೇಳೆ ಶಾಹೀನ್ ಬಾಗ್ ಪ್ರತಿಭಟನೆಯನ್ನು ಉಲ್ಲೇಖಿಸಿದ ಎಸ್‌ಪಿಪಿ ಪ್ರಸಾದ್, ಆ ಪ್ರತಿಭಟನೆ ಕೂಡ ಅದಾಗಿಯೇ ನಡೆದಿರುವುದಲ್ಲ. ಅದರ ಹಿಂದೆ ದೊಡ್ಡ ಯೋಜನೆ ರೂಪಿಸಲಾಗಿತ್ತು. ಸ್ಥಳೀಯರು ಕೂಡ ಬೆಂಬಲಿಸದಿದ್ದಾಗ ಅದು ಹೇಗೆ ಅದಾಗಿಯೇ ಆದ ಪ್ರತಿಭಟನೆಯಾಗಲು ಸಾಧ್ಯ ಎಂದು ಹೇಳಿದ್ದಾರೆ.
ಯಾವ ಆರೋಪಿ, ಯಾವ ನಿರ್ದಿಷ್ಟ ವಾಟ್ಸಾಪ್ ಗುಂಪಿನ ಸದಸ್ಯನಾಗಿದ್ದಾನೆ ಎಂಬುವುದನ್ನು ತೋರಿಸುವ ಚಾರ್ಟ್ ರಚಿಸಲು ಎಸ್‌ಪಿಪಿಗೆ ಸೂಚಿಸಿದ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.
ಇದನ್ನೂ ಓದಿ : ಶೀಶ್ ಮಹಲ್ to ರಾಜ್‌ಮಹಲ್ : ಏನಿದು ದೆಹಲಿಯ ಬಂಗಲೆ ಗಲಾಟೆ?


