Homeಮುಖಪುಟಮೀಸಲಾತಿಯ ಶೇ.50ರ ಗರಿಷ್ಠ ಮಿತಿ: ಶಾಸಕಾಂಗದ ಮೇಲೆ ನ್ಯಾಯಾಂಗದ ಸವಾರಿಯೇ?

ಮೀಸಲಾತಿಯ ಶೇ.50ರ ಗರಿಷ್ಠ ಮಿತಿ: ಶಾಸಕಾಂಗದ ಮೇಲೆ ನ್ಯಾಯಾಂಗದ ಸವಾರಿಯೇ?

ಶೇ.50 ರಷ್ಟು ಮೀಸಲಾತಿ ಅಂದರೆ, ಸಾಪೇಕ್ಷವಾಗಿ ಅಲ್ಪಸಂಖ್ಯಾತರಾದ (ಜನಸಂಖ್ಯೆಯಲ್ಲಿ ಎಸ್‌ಸಿ-ಎಸ್‌ಟಿ-ಒಬಿಸಿಗಳಿಗಿಂತ ಕಡಿಮೆ ಇರುವ) ಮುಂದುವರೆದ ಮೇಲ್ವರ್ಗ ಮತ್ತು ಮೇಲ್ಜಾತಿಗಳಿಗೆ ಉಳಿದ ಶೇ. 50ರಷ್ಟು ಮೀಸಲಾತಿ ನೀಡಿದಂತೆ ಆಗುತ್ತದೆ ಎಂಬ ವಾದವೂ ಇದೆ.

- Advertisement -
- Advertisement -

ಕಳೆದ ವಾರ ಸುಪ್ರೀಂಕೋರ್ಟ್ ಮಹಾರಾಷ್ಟ್ರದ ಮರಾಠಾ ಮೀಸಲಾತಿಯನ್ನು ರದ್ದುಗೊಳಿಸಿದ್ದು, ಈ ಸಂದರ್ಭದಲ್ಲಿ, ’ಅಸಾಮಾನ್ಯ ಸಂದರ್ಭ/ಸನ್ನಿವೇಶಗಳಲ್ಲಿ ಮಾತ್ರ ಶೇ. 50ರ ಗರಿಷ್ಠ ಮಿತಿಯನ್ನು ದಾಟಲು ಅವಕಾಶವಿದೆ’ ಎಂದು ಹೇಳಿದೆ.

ನ್ಯಾಯಾಲಯದ ಈ ಆದೇಶ ಅಥವಾ ನಿರ್ಬಂಧ ಹಲವು ಪ್ರಶ್ನೆಗಳನ್ನು ಎತ್ತಿದೆ. ಕರ್ನಾಟಕ ಸೇರಿದಂತೆ, ಗುಜರಾತ್, ಜಾರ್ಖಂಡ್, ರಾಜಸ್ತಾನ್, ಮಹಾರಾಷ್ಟ್ರ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ, ಹಲವು ಸಮುದಾಯಗಳಿಂದ ಪ್ರತ್ಯೇಕ ಮೀಸಲಾತಿಯ ಹೋರಾಟಗಳು ನಡೆಯುತ್ತಿವೆ.

’ಅಸಾಮಾನ್ಯ ಸಂದರ್ಭ-ಸನ್ನಿವೇಶ’ಗಳಲ್ಲಿ ಮಾತ್ರ ಶೇ.50ರ ಮಿತಿ ದಾಟಬಹುದು ಎಂಬ ಕೋರ್ಟ್ ಆದೇಶದಲ್ಲಿ, ಈ ’ಅಸಾಮಾನ್ಯ ಸಂದರ್ಭ-ಸನ್ನಿವೇಶಗಳ’ ಬಗ್ಗೆ ಸ್ಪಷ್ಟ ವ್ಯಾಖ್ಯಾನವಿಲ್ಲ. ಹಾಗೆಯೇ ಇದು ಶಾಸಕಾಂಗದ ಮೇಲೆ ನಡೆಯುತ್ತಿರುವ ಸವಾರಿಯೇ ಅಥವಾ ಸಂವಿಧಾನವನ್ನು ಮೀರುವ ವಿದ್ಯಮಾನವೇ ಎಂಬ ಪ್ರಶ್ನೆಗಳು ಎದ್ದಿವೆ.

ರಾಜ್ಯ ಸರ್ಕಾರವೊಂದು ಯಾವುದೋ ಸಮುದಾಯಕ್ಕೆ ಹೊಸ ಮೀಸಲಾತಿ ಕಲ್ಪಿಸಲು ಅಥವಾ ಮೀಸಲಾತಿ ಪ್ರಮಾಣ ಹೆಚ್ಚಿಸಲು ಬಯಸಿದರೆ, ಆ ಸಮುದಾಯಗಳು ಐತಿಹಾಸಿಕವಾಗಿ ಅನ್ಯಾಯಕ್ಕೆ ಒಳಗಾಗಿವೆ ಎಂಬುದನ್ನು ಹಲವು ಅಧ್ಯಯನಗಳು ಮತ್ತು ಆಧಾರಗಳ ಸಮೇತ ನಿರೂಪಿಸಬೇಕು.

ಶಾಸಕಾಂಗ-ಕಾರ್ಯಾಂಗದ ವ್ಯಾಪ್ತಿಗೆ ಬಿಡಬೇಕಾದ ಈ ವಿವೇಚನೆಯನ್ನು ಈಗ ನ್ಯಾಯಾಲಯ ನಿರ್ಣಯಿಸುತ್ತಿದೆಯೇ? ಅಥವಾ ಈ ವಿಷಯದಲ್ಲಿ ನಮ್ಮ ಶಾಸಕಾಂಗ ಬೇಜವಾಬ್ದಾರಿ ತೋರುತ್ತಿದೆಯೇ?

ಪಂಚಮಸಾಲಿಗಳು, ಕುರುಬರಿಗೆಷ್ಟು ಮೀಸಲಾತಿ?

“ಸಂವಿಧಾನದ ಪ್ರಕಾರ, ಇಲ್ಲಿ ಮೀಸಲಾತಿಗೆ ಆಗ್ರಹ ಮಾಡುವ ಹಕ್ಕು ಎಲ್ಲರಿಗೂ ಇದೆ. ಪಂಚಮಸಾಲಿಗಳು ಮತ್ತು ಕುರುಬರು ಮೀಸಲಾತಿ ಹೆಚ್ಚಿಸಲು ಕೇಳಿದರೆ, ಅದಕ್ಕೆ ವಿರೋಧ ಮಾಡಲಾಗುವುದಿಲ್ಲ. ಆದರೆ, ಸರ್ಕಾರಗಳು ಒಂದು ಸ್ಪಷ್ಟ, ವೈಜ್ಞಾನಿಕ ಮೀಸಲಾತಿ ನೀತಿ ರೂಪಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವುದಕ್ಕೆ ಆದ್ಯತೆ ನೀಡಬೇಕು” ಎಂದು ಮೀಸಲಾತಿ ಕುರಿತು ಅಧ್ಯಯನ ಮಾಡಿರುವ, ತಳ ಸಮುದಾಯಗಳ ಸಂಕಷ್ಟಗಳನ್ನು ಅಧ್ಯಯನ ಮಾಡಿರುವ ಪ್ರೊಫೆಸರ್ ಒಬ್ಬರು ನ್ಯಾಯಪಥಕ್ಕೆ ತಿಳಿಸಿದರು.

“ಸಂವಿಧಾನದಲ್ಲಿ ಎಲ್ಲೂ ಮೀಸಲಾತಿ ಬಡತನ ನಿರ್ಮೂಲನಾ ಕ್ರಮ ಎಂದು ಹೇಳಿಲ್ಲ. ಶತಮಾನಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡುವ, ಪ್ರಾತಿನಿಧ್ಯ ಒಂದು ಉಪಕ್ರಮವಷ್ಟೇ. ಎಲ್ಲಿವರೆಗೂ ಈ ಹಿಂದುಳಿದಿರುವಿಕೆ ಇರುತ್ತದೆಯೋ ಅಲ್ಲಿವರೆಗೆ ಮೀಸಲಾತಿ ಪರಿಷ್ಕರಣೆ ಆಗಬೇಕು ಎಂಬುದು ಸಂವಿಧಾನದ ಧ್ಯೇಯ” ಎನ್ನುತ್ತಾರೆ ಅವರು.

ಅಲೆಮಾರಿಗಳು ಮತ್ತು ಮುಸ್ಲಿಮರ ವಿಚಿತ್ರ ಸಂದಿಗ್ಧತೆ

ಇಲ್ಲಿ ಲಿಂಗಾಯತರಲ್ಲಿ ಬಹುಸಂಖ್ಯಾತರು ಎನ್ನಲಾದ ಪಂಚಮಸಾಲಿಗಳು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ವಾಲ್ಮೀಕಿ ಜನಾಂಗ ಕೂಡ ಹಕ್ಕೊತ್ತಾಯ ಮಂಡಿಸುತ್ತಿದೆ. ಕುರುಬ ಸಮುದಾಯ ಎಸ್‌ಟಿ ಪಂಗಡಕ್ಕೆ ಸೇರಿಸಲು ಆಗ್ರಹ ಮಾಡುತ್ತಿದೆ. ಇದಕ್ಕೆ ಶೇ. 50ರ ಗರಿಷ್ಠ ಮಿತಿ ಅಡ್ಡವಾಗುತ್ತಿದೆ ಎಂಬುದು ಒಂದು ಮೇಲ್ನೋಟದ ಹೇಳಿಕೆ. ಈಗಾಗಲೇ ಒಂಭತ್ತು ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಶೇ. 50ರ ಗರಿಷ್ಠ ಮಿತಿ ದಾಟಿದೆ ಮತ್ತು ಇದನ್ನು ಸಂಸತ್ತು ಮತ್ತು ಕೋರ್ಟ್ ಕೂಡ ಒಪ್ಪಿವೆ.

ಆದರೆ ಇಲ್ಲಿನ ಅಲೆಮಾರಿಗಳು, ಆದಿವಾಸಿಗಳು ಮತ್ತು ಮುಸ್ಲಿಂ ಸಮುದಾಯದ ಕೆಳಜಾತಿಗಳು ಕೂಡ ಅವರ ಜನಸಂಖ್ಯೆಗೆ ಅರ್ಹವಾದ ಮೀಸಲಾತಿ ಪಡೆಯಲೇಬೇಕು ಅಲ್ಲವೇ? ಆದರೆ ಅವರ ಧ್ವನಿ ’ದೊಡ್ಡದಾಗಿಲ್ಲ’ ಎನ್ನುವ ಕಾರಣಕ್ಕೆ ಅದು ಸರ್ಕಾರಗಳು ಮತ್ತು ನ್ಯಾಯಾಲಯಗಳನ್ನು ತಲುಪುತ್ತಿಲ್ಲವೇ?

PC : YouTube, (ಡಾ. ಮುಜಾಫರ್ ಅಸ್ಸಾದಿ)

ಮುಸ್ಲಿಂ ಸಮುದಾಯ, ಅದರೊಳಗಿನ ಶೈಕ್ಷಣಿಕ ಹಿನ್ನೆಲೆ ಮತ್ತು ರಾಜಕೀಯ ಹಿನ್ನೆಲೆಯ ಕಾರಣಕ್ಕೆ ತಮ್ಮ ಪಾಲು ಕೇಳಲು ಸಂಘಟಿತವಾಗುತ್ತಿಲ್ಲ. “ಮುಸ್ಲಿಮರಲ್ಲಿ ಚಪ್ಪರ್‌ಬಂದಿಗಳು, ಪಿಂಜಾರರು ಪ್ರತ್ಯೇಕ ಮೀಸಲಾತಿಯ ಆಗ್ರಹ ಮಾಡುತ್ತ ಬಂದಿದ್ದಾರೆ. ಆದರೆ, ಅವರ ಧ್ವನಿ ಯಾರಿಗೂ ಕೇಳುತ್ತಿಲ್ಲ” ಎನ್ನುತ್ತಾರೆ ರಾಜಕೀಯ ಚಿಂತಕ ಡಾ. ಮುಜಾಫರ್ ಅಸ್ಸಾದಿ.

ಈ ಕುರಿತು ನ್ಯಾಯಪಥದ ಜೊತೆಗೆ ಮಾತನಾಡಿದ ಯುವ ಕಾಂಗ್ರೆಸ್ ಮುಖಂಡ ಶಾಕೀರ್ ಸನದಿ, “ನಾವು ಮತಾಂತರಗೊಂಡ ಮುಸ್ಲಿಮರು ನಗರಗಳನ್ನು ಸೇರಿಬಿಟ್ಟೆವು. ಹಳ್ಳಿಗಳಲ್ಲೇ ಉಳಿದ ಪಿಂಜಾರ ಸಮುದಾಯವನ್ನು ನಾವು ಅಸ್ಪೃಶ್ಯರ ತರಹ ನೋಡುತ್ತ ಬಂದು ಐತಿಹಾಸಿಕ ದ್ರೋಹ ಬಗೆದೆವು. ಹಳ್ಳಿಗಳಲ್ಲಿ ಉಳಿದ ಸಮುದಾಯಗಳಿಗೆ ಅರಬ್ಬಿ ಅಥವಾ ಉರ್ದು ಗೊತ್ತಿಲ್ಲ ಎಂಬ ಕಾರಣಕ್ಕೂ ನಾವು ಅವರನ್ನು ದೂರ ಇಟ್ಟೆವು. ಈಗಲೂ ಅವರು ಪೂಜೆ ಮತ್ತು ನಮಾಜ್ ಎರಡನ್ನೂ ಮಾಡುತ್ತ ಪರಿಶುದ್ಧ ಸೆಕ್ಯುಲರ್ ಮನೋಭಾವ ಹೊಂದಿದ್ದಾರೆ. ನಮ್ಮನ್ನು ನಾವು ವೈಟ್ ಕಾಲರ್ ಮುಸ್ಲಿಮರು ಎಂಬಂತೆ ಭಾವಿಸುತ್ತ, ನಮ್ಮಲ್ಲೇ ಇರುವ ಬಡ ಸಮುದಾಯಗಳನ್ನು ಪರಿಗಣನೆ ಮಾಡಲೇ ಇಲ್ಲ. ಈಗಲಾದರೂ ಇದು ಸರಿಯಾಗಬೇಕು. ಅವರಿಗೆ ಅಗತ್ಯ ಸಾಂವಿಧಾನಿಕ ನೆರವು ಸಿಗಬೇಕು” ಎಂದರು.

ಜನಸಂಖ್ಯೆ ಆಧಾರಿತ ಮೀಸಲಾತಿಯ ಅಗತ್ಯ

ಶೈಕ್ಷಣಿಕ ಪ್ರವೇಶ ಮತ್ತು ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಮರಾಠ ಮೀಸಲಾತಿಯನ್ನು ರದ್ದು ಮಾಡಿರುವ ಸುಪ್ರೀಂಕೋರ್ಟ್, ಹೀಗೆ ಮೀಸಲಾತಿ ನೀಡುವುದು ಅಸಂವಿಧಾನಿಕ ಎಂದು ಕಳೆದವಾರ ಹೇಳಿತ್ತು. ಶೇ. 50ರ ಗರಿಷ್ಠ ಮಿತಿಯನ್ನು ಮತ್ತೆ ಪರಿಶೀಲಿಸುವ ಅಗತ್ಯ ಇಲ್ಲ ಎಂದೂ ಕೋರ್ಟ್ ಅಭಿಪ್ರಾಯ ಪಡುತ್ತ ಬಂದಿದೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐದು ನ್ಯಾಯಾಧೀಶರ ಪೀಠವು, ಮಹಾರಾಷ್ಟ್ರ ಸರ್ಕಾರವು ಮೀಸಲಾತಿಯ ಶೇ. 50ರ ಗರಿಷ್ಠ ಮಿತಿಯನ್ನು ಮುರಿಯಲು ಯಾವುದೇ ಅಸಾಮಾನ್ಯ ಸನ್ನಿವೇಶಗಳಿಲ್ಲ ಎಂದು ಹೇಳಿದೆ.

ಕರ್ನಾಟಕದಲ್ಲೂ ಹಲವು ಸಮುದಾಯಗಳು ಪ್ರತ್ಯೇಕ ಮೀಸಲಾತಿಗಾಗಿ ಹೋರಾಟ ಮಾಡಿದ್ದು, ಮಾಡುತ್ತಿದ್ದು, ರಾಜ್ಯ ಸರ್ಕಾರ ಈ ಬೇಡಿಕೆಗಳನ್ನು ಪರಿಶೀಲಿಸುವ ಭರವಸೆ ನೀಡಿದೆ. ಇದನ್ನು ಸಾಧಿಸಲು ಶೇ. 50ರ ಗರಿಷ್ಠ ಮಿತಿಯನ್ನು ಉಲ್ಲಂಘಿಸಬೇಕಾಗುತ್ತದೆ. ನ್ಯಾಯಾಲಯಗಳ ಈ ನಿರ್ಬಂಧನೆಯಿಂದ ಪಾರಾಗಲು ಸಂಸತ್ತಿನ ಅನುಮೋದನೆ ಪಡೆಯಬೇಕಾಗುತ್ತದೆ. ಈ ಹಿಂದೆ ಈ ಸಾಹಸ ಮಾಡಿ ಯಶಸ್ವಿಯಾದ ತಮಿಳುನಾಡು ಅಲ್ಲಿ ಶೇ.69 ಪ್ರಮಾಣದ ಮೀಸಲಾತಿ ನಿಗದಿ ಮಾಡಿದೆ. ಇತರ ಎಂಟು ರಾಜ್ಯಗಳು ’ಅಸಾಮಾನ್ಯ ಸಂದರ್ಭ-ಸನ್ನಿವೇಶ’ಗಳನ್ನು ಸುಪ್ರೀಂಕೋರ್ಟಿಗೆ ಮನವರಿಕೆ ಮಾಡಿ ಶೇ. 50ರ ಮಿತಿ ದಾಟಿ ಮೀಸಲಾತಿ ನೀಡಿವೆ.

ದೇಶದ ಜನಸಂಖ್ಯೆಯ ಶೇ. 25 ರಷ್ಟಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಈಗ ಶೇ. 18 ಮೀಸಲಾತಿ ಸಿಗುತ್ತಿದೆ. ಇತರೆ ಹಿಂದುಳಿದ ವರ್ಗದ (ಒಬಿಸಿ) ಸಮುದಾಯಗಳಿಗೂ ನ್ಯಾಯಯುತ ಪಾಲು ಸಿಕ್ಕಿಲ್ಲ ಎಂದು ಹಲವಾರು ಸಂವಿಧಾನ ತಜ್ಞರು, ವಕೀಲರು ಮತ್ತು ಪ್ರಗತಿಪರ ಸಂಘಟನೆಗಳ ನಾಯಕರು ಆಕ್ಷೇಪ ಎತ್ತುತ್ತಲೇ ಬಂದಿದ್ದಾರೆ. ಆದರೆ ಬಲಿಷ್ಠ ಜಾತಿಯ ಸಮುದಾಯಗಳು ಹಿಂದುಳಿದ ಹೆಸರಿನಲ್ಲಿ ಮೀಸಲಾತಿಯನ್ನು ಕಬಳಿಸಲು ಹೊಂಚುಹಾಕುತ್ತಿವೆ ಎಂಬ ಪ್ರತಿವಾದವೂ ಇದೆ.

ಶೇ. 50 ರಷ್ಟು ಮೀಸಲಾತಿ ಅಂದರೆ, ಸಾಪೇಕ್ಷವಾಗಿ ಅಲ್ಪಸಂಖ್ಯಾತರಾದ (ಜನಸಂಖ್ಯೆಯಲ್ಲಿ ಎಸ್‌ಸಿ-ಎಸ್‌ಟಿ-ಒಬಿಸಿಗಳಿಗಿಂತ ಕಡಿಮೆ ಇರುವ) ಮುಂದುವರೆದ ಮೇಲ್ವರ್ಗ ಮತ್ತು ಮೇಲ್ಜಾತಿಗಳಿಗೆ ಉಳಿದ ಶೇ. 50ರಷ್ಟು ಮೀಸಲಾತಿ ನೀಡಿದಂತೆ ಆಗುತ್ತದೆ ಎಂಬ ವಾದವೂ ಇದೆ.

ಕಳೆದ ವರ್ಷ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10 ಮೀಸಲು ಕಲ್ಪಿಸಿದ್ದು, ಶೇ.3ರಷ್ಟು ಇರುವ ಬ್ರಾಹ್ಮಣರಿಗೇ ಹೆಚ್ಚು ಅನುಕೂಲವಾಗುತ್ತಿದೆ ಎಂಬ ಆರೋಪಗಳಿವೆ.

ಹೀಗಾಗಿ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂಬ ವಾದವೂ ಈಗ ಸೇರಿಕೊಂಡಿದೆ.

’ಅಸಾಮಾನ್ಯ ಸಂದರ್ಭಗಳಲ್ಲಿ ಗರಿಷ್ಠ ಮಿತಿ ದಾಟಬಹುದು ಎಂಬ ಸುಪ್ರೀಂಕೋರ್ಟ್ ನಿಲುವು ಕೂಡ ಗೊಂದಲಕ್ಕೆ ಕಾರಣವಾಗಿದೆ ಎನ್ನುವ ಕೆಲವು ತಜ್ಞರು, ಈ ’ಅಸಾಮಾನ್ಯ ಸಂದರ್ಭ-ಸನ್ನಿವೇಶ’ದ ವ್ಯಾಖ್ಯಾನವೇ ಆಗಿಲ್ಲ ಎನ್ನುತ್ತಾರೆ.

ಹೊಸ 10% ಕೋಟಾ ಯಾರಿಗೆ ಅನ್ವಯಿಸುತ್ತದೆ?

ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದ ಶೇ.10ರ ಮೀಸಲಾತಿ ಆರ್ಥಿಕವಾಗಿ ಹಿಂದುಳಿದ ಎಲ್ಲ ಸಮುದಾಯಗಳಿಗೂ ಅನ್ವಯ ಆಗುತ್ತದೆ. ಆದರೆ, ಇದು ಬ್ರಾಹ್ಮಣ ಸಮುದಾಯಕ್ಕೆ ಹೆಚ್ಚಿನ ನೆರವು ನಿಡುವ ಉದ್ದೇಶ ಹೊಂದಿದೆ ಎಂಬ ಆಕ್ಷೇಪಗಳು ಇವೆ.

ಆರ್ಥಿಕ ಹಿಂದುಳಿದಿರುವಿಕೆಯನ್ನು ಮೀಸಲಾತಿಗಾಗಿ ಒಂದು ಮಾನದಂಡವಾಗಿ ಸೇರಿಸಲು ಸಂವಿಧಾನವನ್ನು ತಿದ್ದುಪಡಿ ಮಾಡಿದ ನಂತರ, ಅದು ನ್ಯಾಯಾಂಗ ಪರಿಶೀಲನೆಯ ಪರೀಕ್ಷೆಯಲ್ಲಿ ನಿಲ್ಲಬೇಕಾಗಿತ್ತು ಅಲ್ಲವೇ? ಅದು ಶೇ. 50ರ ಮಿತಿಯ ಪರೋಕ್ಷ ಉಲ್ಲಂಘನೆ ಆಗಿದೆಯಲ್ಲವೇ?

ಈ ಕ್ರಮವು ಬಿಜೆಪಿ ದುರ್ಬಲವಾಗಿರುವ ರಾಜ್ಯಗಳಲ್ಲಿನ ಮೇಲ್ಜಾತಿಯವರನ್ನು ಸಂಪ್ರೀತಗೊಳಿಸುವ ಉದ್ದೇಶ ಹೊಂದಿದೆ ಅಲ್ಲವೇ?

ಇಲ್ಲಿ ರಾಷ್ಟ್ರವಾದದ ಹೆಸರಲ್ಲಿ ವೈದಿಕಶಾಹಿ ಆಡಳಿತ ಮಾಡುತ್ತಿರುವ ಪಕ್ಷದ ನಿಲುವುಗಳಿಗೆ ಮಾತ್ರ ಹೆಚ್ಚಿನ ಮಾನ್ಯತೆ ಸಿಗುತ್ತಿದೆಯೇ?

ಪಂಚಮಸಾಲಿ, ಕುರುಬ ಸಮುದಾಯಗಳ ಬೇಡಿಕೆ ನ್ಯಾಯಯುತವೇ?

’ಸಾಂವಿಧಾನಿಕ ನೆಲೆಯಲ್ಲಿ ನೋಡಿದಾಗ, ಪಂಚಮಸಾಲಿಗಳು ಮತ್ತು ಕುರುಬರು ಇಡುತ್ತಿರುವ ಬೇಡಿಕೆ ನ್ಯಾಯಯುತ ಅನಿಸುವುದಿಲ್ಲ. ಪಂಚಮಸಾಲಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿದ ಸ್ವಾಮೀಜಿ ಕುರುಬರ ಸಭೆಯಲ್ಲಿ ಭಾಗಿಯಾಗಿ, ನೀವು ಎಸ್‌ಟಿ ಗುಂಪಿಗೆ ಸೇರಿ, ನಾವು ನಿಮ್ಮ ಜಾಗಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ಇವರೆಲ್ಲ ನಮ್ಮ ಸಂವಿಧಾನ, ಮೀಸಲಾತಿಯ ಉದ್ದೇಶವನ್ನು ಯಾವಾಗ ಅರ್ಥಮಾಡಿಕೊಳ್ಳುತ್ತಾರೆ? ರಾಜಕೀಯ ಇಚ್ಛಾಶಕ್ತಿಯೇ ಇಲ್ಲದ ನಮ್ಮ ರಾಜಕೀಯ ಪಕ್ಷಗಳಿಂದ ಅಲಕ್ಷಿತ ಸಮುದಾಯಗಳಿಗೆ ನ್ಯಾಯ ಸಿಗುವ ಭರವಸೆ ಇಲ್ಲ. ಇದಕ್ಕೆ ಒಂದು ವಿಶಾಲ ಹೋರಾಟ ನಡೆಯಲೇಬೇಕು…’
– ಭೀಮನಗೌಡ ಕಾಶಿರೆಡ್ಡಿ, ಎಡಪಂಥೀಯ ಕಾರ್ಯಕರ್ತ, ಬೆಂಗಳೂರು.

ಅಸ್ಮಿತೆ ಇಲ್ಲದ ಜಾತಿಗಳನ್ನು ಹುಡುಕುತ್ತ…..

(ಪ್ರಕಟಣೆಗೆ ಸಿದ್ಧವಾಗಿರುವ ಡಾ. ಮುಜಾಫರ್ ಅಸ್ಸಾದಿ ಅವರ ಸಂಶೋಧನಾ ಕೃತಿ, ’ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆಯ ಒಳನೋಟಗಳು’- ಇದರಿಂದ ಆಯ್ದ ಭಾಗವನ್ನು ಪ್ರಕಟಿಸುತ್ತಿದ್ದೇವೆ. ಇದು ಮೀಸಲಾತಿ ಕುರಿತು ಹೊಸ ಬಗೆಯ ಚರ್ಚೆಗೆ ದಾರಿ ಮಾಡಲಿ ಎಂಬುದು ನಮ್ಮ ಆಶಯ.)

ಈ ಹಿಂದೆ ಹಲವು ಸಲ ಪ್ರಸ್ತಾಪ ಆದಂತೆ, ಕೆಲವು ಜಾತಿಗಳು ಇತಿಹಾಸದಲ್ಲಿ ಮತ್ತು ಜಾತಿಯ ಕಥನಗಳಲ್ಲಿ ಹೇಗೆ ಕಣ್ಮರೆಯಾದವು? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. 1871ರ ಕೊಡಗಿನ ಜನಗಣತಿಯಲ್ಲಿದ್ದ ಕಂದಟಾ, ಗುಳಿಗ, ಕಕಾರಿ, ಯೆನ್ನೆ ಗೌಳಿಗ ಜಾತಿಗಳು ಎಲ್ಲಿಗೆ ಹೋದವು? 1951ರ ಜನಗಣತಿ ಸಂದರ್ಭದಲ್ಲಿ ಅಂದಿನ ಮೈಸೂರಿನಲ್ಲಿ ಗುರುತಿಸಲ್ಪಟ್ಟ ಆದರೆ ದಾಖಲೆಯೊಳಗೆ ಶಾಶ್ವತವಾಗಿ ಸೇರಿಕೊಳ್ಳದ ಅವನ್, ಬಬುಹಿ, ಗುಜರ್, ಜಾಮ್, ಜಂಜುವ, ಖರಲ್, ಖಂಡಾರಿ, ನೆಮನ್, ನಯತ್ (ನವಾಯತ್?) ಜಾತಿಗಳು ಎಲ್ಲಿಗೆ ಹೋದವು? 1931ರ ಬಾಂಬೆ ಪ್ರೆಸಿಡೆನ್ಸಿಯ ಜನಗಣತಿಯಲ್ಲಿ ಬರುವ ವ್ಯಾಪಾರಸ್ಥರಾದ ಬಹೋರಿ, ವೈಶ್ಯರಾದ ಸುಳೆರ್, ಜಡಮಾಲಿಗಳಾದ ಮೆತ್ರಿ ಕೊಟ್ಲಿವ ಇತ್ಯಾದಿಗಳು ಎಲ್ಲಿಗೆ ಹೋದವು? ಇವೆಲ್ಲ ಒಂದು ಕಾಲದಲ್ಲಿ ಕರ್ನಾಟಕದ ವಿವಿಧ ಕಾಲಘಟ್ಟದ ಜನಗಣತಿಯಲ್ಲಿ ದಾಖಲಾದ ಜಾತಿಗಳು. ಇವುಗಳ ಹುಡುಕಾಟ ಅತೀ ಜರೂರು ಎಂದರೂ ತಪ್ಪಾಗಲಿಕ್ಕಿಲ್ಲ. ಇವುಗಳ ಅರ್ಥ ಜಾತಿಯ ಅಸ್ಮಿತೆ ರಾಜಕಾರಣ ಮತ್ತು ಮೀಸಲಾತಿ ರಾಜಕಾರಣ ಹೊಸ ರೂಪವನ್ನು ಪಡೆಯಬೇಕಾಗಿದೆ ಎಂಬರ್ಥ. ಇತಿಹಾಸದಲ್ಲಿ ಕಣ್ಮರೆಯಾಗಿರುವ ಜಾತಿಗಳನ್ನು ಹುಡುಕಾಡಿ ಪತ್ತೆ ಮಾಡದಿದ್ದರೆ ಈ ಅಸ್ಮಿತೆ ಇಲ್ಲದ ಜಾತಿಗಳು ಮತ್ತೆಮತ್ತೆ ಅಂಚಿಗೆ ತಳ್ಳಲ್ಪಡುತ್ತದೆ. ಕೊನೆಯದಾಗಿ, ಜಾತಿಯ ಗುರುತಿಸುವಿಕೆಯನ್ನು ಧಾರ್ಮಿಕ ನೆಲೆಯಲ್ಲಿ ಒಪ್ಪದಿದ್ದರೂ, ಸಾಮಾಜಿಕ ಮತ್ತು ರಾಜಕೀಯ ನೆಲೆಯಲ್ಲಿ ಒಪ್ಪಬೇಕಾದ ತುರ್ತು ಅಗತ್ಯತೆ ಇದೆ. ಇಲ್ಲದಿದ್ದರೆ ಇಡೀ ಸಮುದಾಯದ ಅಸ್ಮಿತೆ ಮತ್ತೊಮ್ಮೆ ಗಂಭೀರವಾದ ತುಮುಲಗಳಿಗೆ, ತಿಕ್ಕಾಟಗಳಿಗೆ ಸಿಲುಕುವ ಸಾಧ್ಯತೆ ಇದೆ. ಅಲ್ಲದೇ ಶಾಶ್ವತವಾಗಿ “ತಳ ಸಮುದಾಯವಾಗಿ” ಅಥವಾ ಸಬಾಲ್ಟರ್ನ್‌ಗಳಾಗಿ ಉಳಿಯುವ ಅಪಾಯ ಹೆಚ್ಚಿದೆ.

  • ಪಿ.ಕೆ ಮಲ್ಲನಗೌಡರ್

(ಅನುಭವಿ ಪತ್ರಕರ್ತರಾದ ಮಲ್ಲನಗೌಡರ್ ಮುಲತಃ ಗದಗ ಜಿಲ್ಲೆಯವರು. ಸದ್ಯಕ್ಕೆ ನ್ಯಾಯಪಥ ಮತ್ತು ನಾನುಗೌರಿ.ಕಾಂಗೆ ಬರೆಯುತ್ತಿದ್ದಾರೆ.)


ಇದನ್ನೂ ಒದಿ: “ಮೋದಿ ಮೀನ್ಸ್ ಬ್ಯುಸಿನೆಸ್” ನಿಂದ “ಇಂಡಿಯ ಇನ್ ಕ್ರೈಸಿಸ್” ತನಕ ಹೊರಗೆ ಸಿಂಗಾರ? ಒಳಗೆ ಗೋಳಿಸೊಪ್ಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಪಂಗಡಗಳ ಮಂದಿಎಣಿಕೆಗೆಗೆ ಮೀಸಲಾತಿ(ಒಳ ಹಣಕಾಸು ಮಾನದಂಡ ಸೇರಿದಂತೆ) ಕೊಡಬೇಕು.
    ಮುಸ್ಲಿಮರ ಮಂದಿಎಣಿಕೆ ಹೆಚ್ಚುತ್ತಿರುವುದರಿಂದ ಇದರ ಎದುರು ಸನಾತನವಾದಿಗಳು ಸದ್ದೆತ್ತಲು/ಕೂಡಣದ ದಾರಿ ತಪ್ಪಿಸಲು ಎಡೆಯಾಗುತ್ತದೆ.
    ಹಾಗಾಗಿ, ೧೯೫೧ ರ ಮಂದಿಯೆಣಿಕೆಯ ತಳಗಟ್ಟಿನ ಮೇಲೆ ಪಂಗಡವಾರು ಮೀಸಲಾತಿ ಕೊಡುವಂತಾಗಬೇಕು. ೧೯೫೧ ತರುವಾಯ ಆಯಾ ಪಂಗಡಗಳಲ್ಲಿ ಯಾವುದೋ ನೆಲೆಯಿಂದ ಮಂದಿಎಣಿಕೆ ಹೆಚ್ಚಾದರೂ, ಅದನ್ನು ಈ ಹೊತ್ತಿಗೆ ಲೆಕ್ಕಕ್ಕೆ ತೆಗೆಕೊಳ್ಳಬಾರದು.
    ಮೀಸಲಾತಿ ಎದುರು ಸೊಲ್ಲೆತ್ತುವವರ ಹುನ್ನಾರಗಳನ್ನು ಕಡೆಗಣಿಸಬಾರದು.

  2. ಯಾವುದೇ ಜಾತಿಗೆ ಮೀಸಲಾತಿ ಯನ್ನು ಸರಕಾರ ಸಮಾnತೆ ಯಿಂದ ನೀಡುವ ಪಾಲಿಸಿ ಜಾರಿಗೆ ತರಬೇಕು

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...