ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ದುರ್ಬಳಕೆ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಶಿಕ್ಷಿಸುವಂತಹ ಯಾವುದಾದರೂ ಕಾನೂನು ಇದೆಯಾ? ಎಂದು ಭಾರತೀಯ ಚುನಾವಣಾ ಆಯೋಗವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಶ್ನಿಸಿದೆ.
ಕಠಿಣ ಶಿಕ್ಷೆಯ ಭಯ ಇಲ್ಲದಿದ್ದರೆ ಮತಯಂತ್ರಗಳನ್ನು ತಿರುಚುವ ಸಾಧ್ಯತೆ ಇರುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ವೋಟರ್-ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್) ಚೀಟಿಗಳನ್ನು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳ (ಇವಿಎಂ) ಮೂಲಕ ಚಲಾಯಿಸಿದ ಮತಗಳೊಂದಿಗೆ ತಾಳೆ ಮಾಡಬೇಕು ಎಂದು ನಿರ್ದೇಶನ ನೀಡುವಂತೆ ಕೋರಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿರುವ ಅರ್ಜಿ ಸೇರಿದಂತೆ, ಈ ಕುರಿತಾದ ಇತರ ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ನಡೆಸಿದೆ.
ವಿಚಾರಣೆ ವೇಳೆ, ಇವಿಎಂ ತಿರುಚುವುದು ಗಂಭೀರ ವಿಚಾರ. ಒಂದು ವೇಳೆ ಆ ರೀತಿ ಮಾಡಿದರೆ ಕಠಿಣ ಶಿಕ್ಷೆಯಾಗುತ್ತದೆ ಎಂಬ ಭಯ ಇರಬೇಕು. ಹಾಗಾಗಿ, ಇವಿಎಂ ದುರ್ಬಳಕೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ಏನಾದರು ಕಾನೂನು ಇದೆಯಾ? ಎಂದು ನ್ಯಾಯಪೀಠ ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿದ ಚುನಾವಣಾ ಆಯೋಗ, ‘ಹುದ್ದೆಯಿಂದ ವಜಾಗೊಳಿಸುವ ಶಿಕ್ಷೆಯಿದೆ’ ಎಂದು ಹೇಳಿದೆ.
“ನಾವು ಕಾರ್ಯವಿಧಾನದ ಬಗ್ಗೆ ಹೇಳುತ್ತಿಲ್ಲ. ತಿರುಚುವಿಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಸೆಕ್ಷನ್ ಇಲ್ಲವೇ ಇಲ್ಲ” ಎಂದು ನ್ಯಾ. ಖನ್ನಾ ಹೇಳಿದ್ದಾರೆ ಮತ್ತು ವ್ಯವಸ್ಥೆಯನ್ನು ಅನುಮಾನಿಸಬಾರದು ಎಂದಿದ್ದಾರೆ.
ಇದಕ್ಕೆ ದನಿಗೂಡಿಸಿದ ನ್ಯಾ. ದತ್ತಾ ಅವರು “ನನ್ನ ತವರು ರಾಜ್ಯ ಪ. ಬಂಗಾಳದಲ್ಲಿ ಜರ್ಮನಿಗಿಂತಲೂ ಅಧಿಕ ಜನಸಂಖ್ಯೆ ಇದೆ. ನಾವು ಯಾರ ಮೇಲಾದರೂ ಸ್ವಲ್ಪ ನಂಬಿಕೆ ಇಡಬೇಕು. ಈ ರೀತಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ಯತ್ನಿಸದಿರಿ” ಎಂದು ಅರ್ಜಿದಾರರಿಗೆ ಕಿವಿಮಾತು ಹೇಳಿದ್ದಾರೆ.
ಪ್ರಸ್ತುತ, ಪ್ರತಿ ಕ್ಷೇತ್ರದ ಐದು ಮತಗಟ್ಟೆಗಳಲ್ಲಿ ಮಾತ್ರ ವಿವಿಪ್ಯಾಟ್ ಚೀಟಿಗಳನ್ನು ತಾಳೆ ನೋಡಲಾಗುತ್ತಿದ್ದು, ಅದರ ಬದಲಿಗೆ ಪ್ರತಿ ಕ್ಷೇತ್ರದ ಎಲ್ಲಾ ಮತಗಟ್ಟೆಗಳ ಇವಿಎಂ- ವಿವಿಪ್ಯಾಟ್ ತಾಳೆ ಕಾರ್ಯ ನಡೆಯಬೇಕು ಎಂಬುವುದು ಅರ್ಜಿದಾರರ ಕೋರಿಕೆಯಾಗಿದೆ.
ಇವಿಎಂಗಳ ಬದಲಿಗೆ ಮತ ಪ್ರತಗಳ ಮೂಲಕ ಚುನಾವಣೆ ನಡೆಸುವ ಹಳೆಯ ಕ್ರಮವೇ ಇರಲಿ ಎಂಬ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.
ಎಡಿಆರ್ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್ ಅವರು, ಇವಿಎಂಗಳ ಬದಲಿಗೆ ಮತ ಪ್ರತಗಳ ಮೂಲಕ ಚುನಾವಣೆ ನಡೆಸಬೇಕು. ಎಲ್ಲಾ ವಿವಿಪ್ಯಾಟ್ ಸ್ಲಿಪ್‌ಗಳನ್ನು ಇವಿಎಂ ಮತಗಳೊಂದಿಗೆ ತಾಳೆ ಮಾಡಬೇಕು. ವಿವಿಪ್ಯಾಟ್ ಚೀಟಿಗಳನ್ನು ಪಡೆದು ಮತಪೆಟ್ಟಿಗೆಗೆ ಹಾಕಲು ಮತದಾರರಿಗೆ ಅವಕಾಶ ನೀಡಬೇಕು. ಈ ಹಿಂದೆ ಇದ್ದ ಪಾರದರ್ಶಕ ಗಾಜಿನ ಬದಲಾಗಿ ವಿವಿಪ್ಯಾಟ್ ಯಂತ್ರಕ್ಕೆ 7 ಸೆಕೆಂಡ್‌ಗಳ ಕಾಲ ಬೆಳಕು ಇದ್ದಾಗ ಮಾತ್ರ ಕಾಣುವ ಅಪಾರದರ್ಶಕ ಗಾಜನ್ನು ಅಳವಡಿಸಲಾಗಿದೆ ಇತ್ಯಾದಿ ಕೋರಿಕೆಗಳನ್ನು ನ್ಯಾಯಾಲಯದ ಮುಂದಿಟ್ಟಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 18ರಂದು ನಡೆಯಲಿದೆ.
ಇದನ್ನೂ ಓದಿ : ‘ನಾವು ಬ್ಯಾಲೆಟ್ ಪೇಪರ್‌ಗೆ ಹಿಂತಿರುಗಬಹುದು..’: ಸುಪ್ರೀಂ ಮುಂದೆ ವಾದಿಸಿದ ಪ್ರಶಾಂತ್ ಭೂಷಣ್



Definitely Law to be made as criminal offence