1936ಮೇ 31ರಂದು ಬಾಂಬೆ ಪ್ರೆಸಿಡೆನ್ಸಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ‘ಮಹರ್’ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ್ದರು. ಅಂಬೇಡ್ಕರ್ ಭಾಷಣ ಮಾಡಿ 85 ವರ್ಷ ಕಳೆದರೂ ದೇಶದಲ್ಲಿಂದಿಗೂ ಅದೇ ಸ್ಥಿತಿ ಇದೆ. ಅವರು ಅಂದು, ’ಸಾರ್ವಜನಿಕ ಸ್ಥಳಗಳಲ್ಲಿ ಕೆರೆ-ಕುಂಟೆಗಳಲ್ಲಿ ಸ್ನಾನ ಮಾಡುತ್ತಿದ್ದರೆ, ಅದು ಹಸುಗೂಸಾಗಿದ್ದರೂ ಅದನ್ನು ತೆಗೆದು ಬಿಸಾಡಲಾಗುತ್ತದೆ. ಅಸ್ಪೃಶ್ಯರು ಉತ್ತಮವಾದ ಬಟ್ಟೆ-ಬರೆ ಧರಿಸಿದರೆ ಅವರನ್ನು ಥಳಿಸಲಾಗುತ್ತದೆ. ಬೇಸಾಯ ಮಾಡಲು ಭೂಮಿ ಖರೀದಿಸಿದರೆ ಅವರ ಮನೆಗೆ ಬೆಂಕಿ ಇಟ್ಟು ಸುಡಲಾಗುತ್ತದೆ. ಅಪ್ಪಿತಪ್ಪಿ ದೇಹದ ಮೇಲೆ ದಾರದ ಎಳೆ ಹಾಕಿಕೊಂಡರೆ ಅವರನ್ನು ಜೀವಂತವಾಗಿ ಸುಡಲಾಗುತ್ತದೆ. ಸತ್ತ ಪ್ರಾಣಿಗಳನ್ನು ಹೊತ್ತೊಯ್ಯದಿದ್ದರೆ ಥಳಿಸಲಾಗುತ್ತದೆ. ಅಲ್ಲದೆ ಸಾಕ್ಸು, ಬೂಟ್ಸು ಧರಿಸಿ ಹಳ್ಳಿಯ ರಸ್ತೆಯಲ್ಲಿ ಸಾಗಿದರೂ ಥಳಿಸಲಾಗುತ್ತದೆ. ಹಿಂದೂಗಳ ಎದುರಲ್ಲಿ ಬಾಗಿ ನಡೆಯದಿದ್ದರೂ ಥಳಿಸಲಾಗುತ್ತದೆ’ ಎಂದು ಆರ್ದತೆಯಿಂದ ನುಡಿದಿದ್ದರು.
ಅದು 1938 ಮಾರ್ಚ್ 31, ಲಂಡನ್ ಆಲ್ಬರ್ಟ್ ಹಾಲ್‌ನಲ್ಲಿ ಸಭೆ ನಡೆಯುತ್ತಿತ್ತು. ಸಭೆಯಲ್ಲಿ ವಿನ್‌ಸ್ಟನ್ ಚರ್ಚಿಲ್ ಭಾಗವಹಿಸಿದ್ದರು. ಅಂದಿನ ಸಭೆಯಲ್ಲಿ ಅಂಬೇಡ್ಕರ್ ’ಒಂದು ದೇಶದ ಜನಸಂಖ್ಯೆಗೆ ಬೇಕಾಗುವಷ್ಟು ಅಂದರೆ ಮಕ್ಕಳು, ಯುವಕರು, ವಯೋವೃದ್ಧರು, ಮಹಿಳೆಯರು ಭಾರತದಲ್ಲಿ ಸ್ಥಾನಮಾನ ಮತ್ತು ಮಾನವತೆಯಿಂದ ವಂಚಿತರಾಗಿದ್ದಾರೆ. ಈ ಸಮುದಾಯದ ಜನರ ಸಂಕಷ್ಟ ಗುಲಾಮರಿಗಿಂತ ಕಡೆಯಾಗಿದೆ. ಕಾರಣ, ಅವರು ದೈಹಿಕ ಹಿಂಸೆಯೊಂದಿಗೆ ಮಾನಸಿಕ ವೇದನೆಯನ್ನು ಸಹಿಸಿಕೊಳ್ಳಬೇಕಿದೆ’ ಎಂದಿದ್ದರು. ’ಇಂತಹ ಸಮುದಾಯಕ್ಕೆ ‘ಕಾನೂನಿನ ಸಮಾನತೆ’ ಒದಗಿಸಬೇಕು. ನಿರಾಕರಿಸಿದ್ದಲ್ಲಿ ಬ್ರಿಟನ್ ಕ್ಷಮಿಸಲಾರದ ಅಪರಾಧ ಎಸಗಿದಂತಾಗುತ್ತದೆ’ ಎಂದು ಸಭೆಗೆ ವಿವರಿಸಿದ್ದರು. ಇದರಂತೆಯೇ ಮನು ಸಂವಿಧಾನ ಇದ್ದ ಜಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಬಂತು.
ಡಾ. ಬಿ.ಆರ್. ಅಂಬೇಡ್ಕರ್ ಮುಂದಾಳತ್ವದಲ್ಲಿ ರಚನೆಯಾದ ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರ ಜಾತಿ ದಬ್ಬಾಳಿಕೆ ನಿಂತಿದೆಯೇ? ಖಂಡಿತವಾಗಿಯೂ ಇಲ್ಲ. ಒಡಿಶಾದ ದೆಂಕನಾಲ್ ಜಿಲ್ಲೆಯ ಕಾಂತಿಯೊ ಕಟಿನಿ ಎಂಬ ಗ್ರಾಮದಲ್ಲಿ ಮೇಲ್ಜಾತಿಗೆ ಸೇರಿದ ವ್ಯಕ್ತಿಯ ತೋಟದಲ್ಲಿ ಸೂರ್ಯಕ್ರಾಂತಿ ಹೂ ಕಿತ್ತಿದ್ದಕ್ಕೆ 40 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ವಿಜಯಪುರ ಜಿಲ್ಲೆ, ಸಿಂದಗಿ ತಾಲ್ಲೂಕಿನ, ಬೂದಿಹಾಳ ಪಿ.ಎಚ್. ಗ್ರಾಮದ ದೇಗುಲದ ಕಟ್ಟೆಯ ಮೇಲೆ ಸಿದ್ದು ಬಿರಾದಾರ, ಸಂತೋಶ ಹಿರ್ಲಾಕುಂಡ ಅವರೊಂದಿಗೆ ಸರಿಸಮನಾಗಿ ಕುಳಿತದಕ್ಕೆ 28 ವರ್ಷದ ಅನಿಲ ಶರಣಪ್ಪ ಇಂಗಳಗಿಯನ್ನು ಚೂರಿಯಿಂದ ಇರಿದು ಕೊಂದಿದ್ದರು. ತುಮಕೂರು ಜಿಲ್ಲೆಯ, ಕುಣಿಗಲ್ ತಾಲ್ಲೂಕಿನ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮೇಗೌಡನ ಕಾಲೋನಿಯ ಪರಿಶಿಷ್ಟ ಜಾತಿಯ ಜನ ಸವರ್ಣೀಯರ ಜಮೀನಿನಲ್ಲಿ ಕೂಲಿಗೆ ಹೋಗದೆ, ಗೂಡ್ಸ್ ಆಟೋ ಖರೀದಿಸಿ ತರಕಾರಿ ವ್ಯಾಪಾರ ಪ್ರಾರಂಭಿಸಿದಕ್ಕೆ, ಊರೂರು ಅಲೆದು ಕೊರೋನಾ ಸೋಂಕು ತರುತ್ತೀರಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಜೊತೆಗೆ ಕಾಲೋನಿ ಸಂಪರ್ಕ ರಸ್ತೆಗೆ ಮುಳ್ಳಿನ ಬೇಲಿಯನ್ನು ಹಾಕಿ, ಬಹಿಷ್ಕಾರದ ಬೆದರಿಕೆ ಹಾಕಿದ್ದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಮಹಿಳೆ ಮೀಸಲು ಸ್ಥಾನವನ್ನು 7 ಲಕ್ಷ 50 ಸಾವಿರಕ್ಕೆ ಹರಾಜು ಹಾಕಲಾಗಿತ್ತು. ಇಲ್ಲಿಂದ ಸ್ಪರ್ಧಿಸಲು ಮುಂದಾದ ಮಹಿಳೆಯ ಕುಟುಂಬದವರು ನಡೆದಾಡುವ ರಸ್ತೆಯನ್ನು ಬಂದ್ ಮಾಡುವುದಾಗಿ ಅಲ್ಲಿದ್ದ ಜಮೀನಿನ ಮಾಲೀಕರು ಬೆದರಿಸಿದ್ದರು. ಇವಲ್ಲದೆ ಮಾರಿಗುಡಿ ಅಂಗಳಕ್ಕೆ ಈಕೆಯ ಪತಿಯನ್ನು ಕರೆಸಿ ರೂ. 25 ಸಾವಿರ ದಂಡ ವಿಧಿಸಿ, ‘ಸಾಮಾಜಿಕ ಬಹಿಷ್ಕಾರ’ ಹಾಕುವುದಾಗಿಯೂ ಬೆದರಿಸಿದ್ದ ಘಟನೆಯೂ ನಡೆದಿತ್ತು. ಒತ್ತುವರಿ ತೆರೆವುಗೊಳಿಸುವ ನೆಪದಲ್ಲಿ ಮಧ್ಯಪ್ರದೇಶದ, ಗುನಾ ಜಿಲ್ಲೆಯಲ್ಲಿ ದಲಿತ ದಂಪತಿಯ ಮೇಲೆ ಪೊಲೀಸರು ತೀವ್ರವಾಗಿ ಹಲ್ಲೆ ನಡೆಸಿದ್ದರು. ಈ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದರಿಂದ ಅಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಎತ್ತಂಗಡಿ ಮಾಡಲಾಗಿತ್ತು.
ಉತ್ತರ ಪ್ರದೇಶದ, ಬಾಂದಾ ಜಿಲ್ಲೆಯ ತೆಂಡೂರ ಗ್ರಾಮದಲ್ಲಿ ರಾಮಚಂದ್ರ ರೈ ದಾಸ್ ಸರ್ಕಾರಿ ಹ್ಯಾಂಡ್ ಪಂಪ್ ಮುಟ್ಟಿದ್ದಕ್ಕಾಗಿ, ರಾಮ್ ದಯಾಳ್ ಯಾದವ್ ಕುಟುಂಬದ ಸದಸ್ಯರು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದರು. ತಮಿಳುನಾಡಿನ ಕಡಲೂರಿನ ತೆರ್ಕುತಿಟ್ಟೈ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್. ರಾಜೇಶ್ವರಿ ಕೆಳವರ್ಗಕ್ಕೆ ಸೇರಿದ್ದರಿಂದ, ಸಭೆಗಳಲ್ಲಿ ನೆಲದ ಮೇಲೆ ಕೂರಿಸಿ ಅಮಾನವೀಯತೆ ಮೆರೆಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಚಿತ್ರ ವೈರಲ್ ಆದ ನಂತರ ಅಲ್ಲಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯನ್ನು ಅಮಾನತು ಮಾಡಲಾಗಿತ್ತು. ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರ ಧ್ವಜಾರೋಹಣಕ್ಕೂ ಅವಕಾಶ ನೀಡದೆ ಅವಮಾನಿಸಲಾಗಿದೆ. ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲೆಯ ರೋಡಾ ಗ್ರಾಮದಲ್ಲಿ ಅಮರ್ ಎಂಬ ದಲಿತ ವೃದ್ಧರೊಬ್ಬರಿಗೆ ಸೋನು ಯಾದವ್ ಮೂತ್ರ ಕುಡಿಯುವಂತೆ ಒತ್ತಾಯಿಸಿ, ಕೊಡಲಿಯಿಂದ ಹಲ್ಲೆ ನಡೆಸಿದ್ದರು.
ಇದೇ ರಾಜ್ಯದ ಗೊಂಡಾ ಜಿಲ್ಲೆಯ ಪಾಸ್ಕಾ ಗ್ರಾಮದಲ್ಲಿ ಮಹಡಿಯ ಮೇಲೆ ಮಲಗಿದ್ದ ರಾಮ್ ಅವತಾರ್ ಅವರ ಕಾಜಲ್, ಮಹೀಮಾ, ಸೋನಮ್ ಎಂಬ ಮೂರು ಜನ ಅಪ್ರಾಪ್ತ ದಲಿತ ಸಹೋದರಿಯರ ಮೇಲೆ ಕೆಮಿಕಲ್ ದಾಳಿ ನಡೆಸಲಾಗಿತ್ತು. ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯ ದಲಿತ ಕುಟುಂಬದ ಸಂದೀಪ್ ದೋಹರೆ ಮತ್ತು ಸಂತ್ರಾಮ್ ದೋಹರೆ ದೂರನ್ನು ಹಿಂಪಡೆಯದ ಕಾರಣ ಪವನ್ ಯಾದವ್ ಕುಟುಂಬ ರೈಫಲ್ ಬಟ್‌ಗಳಿಂದ ಹೊಡೆದು ಅವರ ಗುಡಿಸಿಲಿಗೆ ಬೆಂಕಿ ಹಚ್ಚಿದ್ದರು. ತೆಲಂಗಾಣದ ಸಂಗ್ಯಮ್ ಶ್ರೀರಾಂಪುರ ಗ್ರಾಮದಲ್ಲಿ 24 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ಕಾರಣ ಗ್ರಾಮ ಪಂಚಾಯಿತಿಯಿಂದ ಬಿಡುಗಡೆಯಾಗುವ ಅನುದಾನದಲ್ಲಿ ಬಿಡಿಗಾಸನ್ನು ದಲಿತ ಕುಟುಂಬಗಳು ವಾಸಿಸುವ ಪ್ರದೇಶಗಳಲ್ಲಿ ಬಳಸಿಲ್ಲವೆಂದು ಇವರುಗಳು ಗ್ರಾಮೀಣ ಅಭಿವೃದ್ಧಿ ಸಮಿತಿ ಸದಸ್ಯರ ವಿರುದ್ಧ ಪ್ರಕರಣ ಹೂಡಿದ್ದರು. ಗುಜರಾತ್‌ನ ಅರವಲ್ಲಿ ಜಿಲ್ಲೆಯ ಬಯಾದ್ ಪಟ್ಟಣದ ಲಿಂಚ್ ಗ್ರಾಮದಲ್ಲಿ ದಲಿತ ಕುಟುಂಬವೊಂದರ ಮದುವೆ ಮೆರವಣಿಗೆಯ ವೇಳೆ ಮದುಮಗ ತಲೆಗೆ ಪೇಟ ಅಂದರೆ ‘ಸಫಾ’ ಧರಿಸಿದಕ್ಕೆ ಹಾಗೂ ಡಿಜೆ ಸಂಗೀತ ಬಳಸಿದಕ್ಕೆ ಕಲ್ಲು ತೂರಿ, ಹಲ್ಲೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ರಜಪೂತ ಸಮುದಾಯದ 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇವೆಲ್ಲ ಎಂದೋ ನಡೆದವಲ್ಲ. ಕಳೆದ ಒಂದೆರಡು ವರ್ಷಗಳಲ್ಲಿ ನಡೆದ ಘಟನೆಗಳಿವು.
ಇವು ಗ್ರಾಮೀಣ ಭಾರತದ ದೌರ್ಜನ್ಯದ ಪ್ರಕರಣಗಳೆಂದು ಸಮಾಧಾನಗೊಳ್ಳುವಂತಿಲ್ಲ. ಸರ್ಕಾರದ ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವವರು ಕೂಡ ಅವಮಾನ, ಅವಕಾಶ ವಂಚನೆಗಳಿಗೆ ಒಳಗಾಗಿದ್ದಾರೆ. ರಾಜ್ಯ ಶಿಕ್ಷಣ ಇಲಾಖೆಯ ಬೆಳಗಾವಿ, ವಿಭಾಗ ಮಟ್ಟದ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್ 1994ರಿಂದ 20 ಬಾರಿ ವರ್ಗಾವಣೆಯಾಗಿದ್ದಾರೆ. “ಅಸ್ಪೃಶ್ಯನಾಗಿ ಜನಿಸಿದೆ, ಅಸ್ಪೃಶ್ಯನಾಗಿ ಬೆಳೆದೆ. ರಾಜ್ಯಮಟ್ಟದ ಅಧಿಕಾರಿ ಆದರೂ ರಾಕ್ಷಸರ ನಡುವೆ ಗುಲಾಮ ಅಸ್ಪೃಶ್ಯನಾಗಿ ಬದುಕುತ್ತಿದ್ದೇನೆ. ಎರಡು ವರ್ಷಗಳಿಂದ ಜಾತಿ ಎಂಬ ಕ್ಯಾನ್ಸರ್ ನನ್ನನ್ನು ಬಾಧಿಸಿದೆ. ನಾನು ಅವಮಾನಕ್ಕೀಡಾಗಿದ್ದೇನೆ. ಹೀಗಿದ್ದರೂ ಜಾತಿ ರಾಕ್ಷಸರತ್ತ ನನ್ನ ಪ್ರೀತಿ ಇದ್ದೇ ಇದೆ” ಎಂದು ಫೇಸ್‌ಬುಕ್‌ನಲ್ಲಿ ಅನಿಸಿಕೆ ಹಂಚಿಕೊಂಡಿದ್ದರು.

“ನನ್ನನ್ನು ಅಸ್ಪೃಶ್ಯನೆಂದು ಘೋಷಿಸಿದ್ದು, ಯಾವುದೇ ಜವಾಬ್ದಾರಿಗಳನ್ನು ನೀಡುತ್ತಿಲ್ಲ. ಹೈದರಾಬಾದ್ ಕೇಂದ್ರೀಯ ವಿ.ವಿ. ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದಂತಹ ಸನ್ನಿವೇಶವನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ” ಎಂದು ಮಧ್ಯಪ್ರದೇಶದ ಐಎಎಸ್ ಅಧಿಕಾರಿ ರಮೇಶ್ ಥೆಟಿ ದೂರಿದ್ದರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೆಚ್ಚುವರಿ ಹೊಣೆ ಹೊತ್ತಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆರ್.ಎಸ್. ಜುಲಾನಿಯ ಅವರು ನನ್ನ ಅಧಿಕಾರ ಕಿತ್ತುಕೊಂಡಿದ್ದು, ಅಸ್ಪೃಶ್ಯ ಎಂದು ಹೀಯಾಳಿಸಿದ್ದಾರೆಂದು ಅವಲತ್ತುಕೊಂಡಿದ್ದರು. ’ರಾಜ್ಯದಲ್ಲಿ ಒಬ್ಬ ದಲಿತ ಶಾಸಕನ ಮನೆಗೆ ರಕ್ಷಣೆ ನೀಡಲು ನಿಮಗೆ ಸಾಧ್ಯವಾಗಿಲ್ಲ. ಇನ್ನು ಕೋಟ್ಯಂತರ ಸಂಖ್ಯೆಯ ಬಡ ಅಸಹಾಯಕ ದಲಿತರ ಮನೆಗಳಿಗೆ ರಕ್ಷಣೆ ನೀಡಲು ಹೇಗೆ ಸಾಧ್ಯವೆಂದು ಅಖಂಡ ಶ್ರೀನಿವಾಸಮೂರ್ತಿ ಮನೆಯ ಮೇಲಿನ ದಾಳಿ ಪ್ರಕರಣದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.
ಇಂತಹ ನಿಂದನೆ, ಬಹಿಷ್ಕಾರ, ಅವಕಾಶ ವಂಚನೆ, ಹಲ್ಲೆ ಘಟನೆಗಳು ನಮ್ಮ ರಾಜ್ಯ ಮತ್ತು ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಜಾಗತಿಕ ಪಿಡುಗಾಗಿಯೂ ಕಾಡುತ್ತಿದೆ. ‘ಬಯೋ ಸೆಕ್ಯೂರ್’ ನಿಯಮ ಉಲ್ಲಂಘಿಸಿ ಬೈಟನ್‌ನಲ್ಲಿರುವ ತಮ್ಮ ನಿವಾಸಕ್ಕೆ ಹೋಗಿದ್ದರಿಂದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್‌ನಿಂದ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್‌ನನ್ನು ಕೈಬಿಡಲಾಗಿತ್ತು. ’ಆಡದೇ ಇದ್ದದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಜನಾಂಗೀಯ ನಿದಂನೆಗೆ ಒಳಗಾಗಿದ್ದೆ ಮತ್ತು ಮಾನಸಿಕ ದೌರ್ಜನ್ಯವನ್ನು ಅನುಭವಿಸಿದ್ದೆ’ ಎಂದು ಜೋಫ್ರಾ ಆರ್ಚರ್ ಹೇಳಿಕೊಂಡಿದ್ದರು.
1827-28 ಮತ್ತು 1830ರಲ್ಲಿ ಬ್ರಿಟಿಷರು ಮೊದಲ ಜನಗಣತಿಯನ್ನು ನಡೆಸಿದ್ದರು. ಮೊದಲ ಜನಗಣತಿಯನ್ನು ವಾರಣಾಸಿ, ಅಲಹಬಾದ್ ಮತ್ತು ಢಾಕಾದಲ್ಲಿ ನಡೆಸಲಾಗಿತ್ತು. ಅಂದಿನ ಜನಗಣತಿ 132 ಜಾತಿ ಆಧಾರಿತ ವೃತ್ತಿಗಳನ್ನು ಗುರುತಿಸಿದ್ದವು. ಇದರ ನಂತರ, 1850 ಮತ್ತು 1860ರಲ್ಲಿಯೂ ಜನಗಣತಿ ನಡೆಯಿತು. ಆಗಲೂ 132 ವರ್ಗಗಳು ಜಾತಿ ಆಧಾರದ ವೃತ್ತಿಗಳಲ್ಲಿಯೇ ಮುಂದುವರೆದಿದ್ದವು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಆಸಕ್ತಿಯಿಂದಾಗಿ 2015ರಲ್ಲಿ ಕಾಂತರಾಜು ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗ ಜಾತಿ ಜನಗಣತಿ ನಡೆಸಿತು. ಇದರಲ್ಲಿ ಜಾತಿ ಆಧಾರಿತ ವೃತ್ತಿಯಲ್ಲಿ ತೊಡಗಿರುವ ಸಮುದಾಯಗಳ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಪ್ರಗತಿಯ ಅಂಕಿಸಂಖ್ಯೆಗಳು ಲಭ್ಯ ಆಗುವುದರಲ್ಲಿತ್ತು. ಇದನ್ನು ಸಹಿಸದ ಕೆಲವು ಬಲಾಢ್ಯ ಶಕ್ತಿಗಳು ಕಾಂತರಾಜು ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಕೆಂಪು ಪಟ್ಟಿಯಲ್ಲಿ ಕಟ್ಟಿ ಇಟ್ಟಿದೆ. ದುರಾದೃಷ್ಟ ಎಂದರೆ, ಮೊದಲ ಜನಗಣತಿ ನಡೆದು 193 ವರ್ಷಗಳು ಕಳೆದರೂ ಬಹುತೇಕ ಇಂದಿಗೂ 132 ಜಾತಿ ಆಧಾರಿತ ವೃತ್ತಿಗಳು ಮತ್ತು ವೃತ್ತಿಕಾರರು ಹಾಗೆಯೇ ಇದ್ದಾರೆ.
ಇದಕ್ಕೆ ಹಲವು ಕಾರಣಗಳಿವೆ. ಆಸೆಯೇ ದುಃಖಕ್ಕೆ ಮೂಲ ಎಂದು ಭಗವಾನ್ ಬುದ್ಧ ವ್ಯಕ್ತಿಪೂಜೆ ವಿರೋಧಿಸಿದ್ದರು. ಆದರೆ, ಬುದ್ಧನ ಅನುಯಾಯಿಗಳು ರಾಜಾಶ್ರಯ ದೊರೆತೊಡನೆ ಸರಳತೆಯನ್ನು ಮರೆತು, ವಿಲಾಸಿ, ವೈಭೋಗದ ಬದುಕಿನಲ್ಲಿ ಮುಳುಗಿದ್ದಾರೆ. ವ್ಯಕ್ತಿ ಪೂಜೆಯನ್ನು ವಿರೋಧಿಸಿದ್ದ ಬುದ್ಧನನ್ನು ಆತನ ಕಾಲಾನಂತರ, ವಿವಿಧ ಭಂಗಿಗಳಲ್ಲಿ ವಿಗ್ರಹಗಳನ್ನು ಕೆತ್ತಿಸಿದ್ದಾರೆ. ಇದರಂತೆಯೇ ‘ಜಾತಿಪದ್ಧತಿ’ ವಿರೋಧಿಸಿ ಬಸವಣ್ಣನವರು ಶರಣ ಸಂಸ್ಕೃತಿಯನ್ನು ಕಟ್ಟಿದರು. ಬಸವ ತತ್ವಗಳು ಹೊಸ ಭರವಸೆಯನ್ನು ಮೂಡಿಸಿದವು. ನಂತರ, ಇದು ಒಂದು ಸಾಂಸ್ಥಿಕ ಸಂರಚನೆಯಾಗಿ ಪರಮ ಮಡಿವಂತಿಕೆಯ ‘ವೀರಶೈವ’ ಧರ್ಮವಾಗಿ ಪರಿವರ್ತನೆಯಾಗಿ ಕೂತಿದೆ. ಇದನ್ನು ಹಲವು ಘಟನೆ ಮತ್ತು ಹೋರಾಟಗಳಲ್ಲೂ ಕಾಣಬಹುದು. ಹೀಗೆಯೇ ಕನಕದಾಸರು ಕುಲ, ಕುಲ, ಕುಲವೆಂದು ಹೊಡೆದಾಡದಿರಿ ಎಂದು ಜಾಗೃತಿ ಪ್ರಜ್ಞೆ ಮೂಡಿಸಿದರು. ಇದರಿಂದ ಓರ್ವ ಸಿದ್ದರಾಮಯ್ಯ, ಓರ್ವ ಎಚ್.ಎಂ. ರೇವಣ್ಣ ರೂಪುಗೊಂಡರೇ ಹೊರತು, ಉಳಿದವರು ಅಲ್ಲಿಯೇ ಉಳಿದುಬಿಟ್ಟರು.
ಹೀಗಿರುವಾಗ ನಮ್ಮಲ್ಲಿ ಜಾತಿ ಎಂಬುದು ಎಷ್ಟು ಪ್ರಬಲವಾಗಿ ಬೇರೂರಿದೆ ಎಂಬುದನ್ನು ಕೂಡ ಗಮನಿಸಬೇಕಿದೆ. ಹೌದು. ಮನುಜರೆಲ್ಲರೂ ಒಂದೇ. ಆದರೆ, ಕೆಲವರು ಇತರರಿಗಿಂತ ಹೆಚ್ಚು ಸಮಾನರು. ಜೊತೆಗೆ ಜಾತಿಯು ಅವರ ಹೆಸರಿನೊಂದಿಗೆ ಸೇರಿಕೊಂಡುಬಿಟ್ಟರೆ ಅವರ ತೂಕ ಹೆಚ್ಚಾಗುತ್ತದೆ. ಅದು ನ್ಯಾಯಾಲಯದ ಪ್ರಕರಣಗಳಲ್ಲೂ ಕೂಡ ಸತ್ಯವಾಗಿದೆ. ಇಂತಹದ್ದೊಂದು ಪುರಾತನ, ಕಪಟ ವ್ಯವಸ್ಥೆಯನ್ನು ಪಂಜಾಬ್ ಮತ್ತು ಹರಿಯಾಣ ನ್ಯಾಯಾಲಯ ರದ್ದುಪಡಿಸಿತ್ತು. ನ್ಯಾಯದಾನ ಸಂದರ್ಭದಲ್ಲಿ ಜಾತಿ ಪರಿಣಾಮ ಬೀರಬಾರದು, ಪೂರ್ವಾಗ್ರಹಕ್ಕೊಳಗಾಗಿ ಹೆಚ್ಚು ಪ್ರಾಶಸ್ತ್ಯ ನೀಡಬಾರದೆಂಬುದು ನ್ಯಾಯಾಲಯದ ಆಶಯವಾಗಿತ್ತು. ಇಂತಹ ತೀರ್ಪು ನೀಡಿ, ದೇಶದ ಸಂವಿಧಾನದಂತೆ ‘ಕಾನೂನಿನ ಮುಂದೆ ಎಲ್ಲರೂ ಸಮಾನರು’ ಎಂಬುದನ್ನು ನ್ಯಾಯಾಲಯ ಇಲ್ಲಿ ಹೇಳಿದೆ. ಪ್ರಕರಣಗಳಲ್ಲಿ ಜಾತಿ ದಾಖಲಿಸುವುದರಿಂದ ತನಿಖೆಯ ದಿಕ್ಕು ಬದಲಾಗುತ್ತದೆ. ಹಾಗೆಯೇ ಪ್ರಕರಣ ನಿರ್ವಹಿಸುವ ಅಧಿಕಾರಿಗಳು ಕೂಡ ಪೂರ್ವಾಗ್ರಹಪೀಡಿತರಾಗುತ್ತಾರೆ.
ಇಂತಹದ್ದೊಂದು ದಬ್ಬಾಳಿಕೆಯ ವ್ಯವಸ್ಥೆಯನ್ನು 1934ರಲ್ಲಿ ಆಂಗ್ಲರು ಜಾರಿಗೆ ತಂದಿದ್ದರು. ದೇಶಕ್ಕೆ ಸ್ವಾತಂತ್ರ ದೊರೆತು 74 ವರ್ಷ ಕಳೆದರೂ ಹಾಗೆಯೇ ಉಳಿಸಿಕೊಂಡು ಬರಲಾಗುತ್ತಿದೆ. ದೇಶದ ನ್ಯಾಯಾಲಯವೊಂದು ಮಹತ್ತರ ತೀರ್ಪು ನೀಡಿದ್ದರೂ, ಅದು ಗೌಣವಾಗಿದೆ. ಕಾರಣ, ಬ್ರಿಟಿಷ್ ಪರಂಪರೆಯ ಸಂರಕ್ಷಣೆಯಾಗಿದೆ. ಜೊತೆಗೆ ಇದು ವಸಾಹತುಶಾಹಿಯ ತಪ್ಪು ನಡೆಯನ್ನು ಮುಂದುವರೆಸುವುದಾಗಿದೆ. ಹಿಂದಿನ ಒಂದು ಪ್ರಕರಣದಲ್ಲಿಯೂ ಉಚ್ಚ ನ್ಯಾಯಾಲಯವೊಂದು ದೂರುದಾರ ಮತ್ತು ಆಪಾದಿತನ ಸಾಮಾಜಿಕ ಗುಂಪು ಯಾವುದೆಂಬುದನ್ನು ದಾಖಲಿಸುವ ಬಗ್ಗೆ ಪರಿಶೀಲಿಸಬೇಕೆಂದು ನಿರ್ದೇಶನ ನೀಡಿತ್ತು. ಇಂತಹ ವ್ಯವಸ್ಥೆಯಿಂದ ರೋಸಿಹೋದ ವಕೀಲರೊಬ್ಬರು ಪಂಜಾಬ್‌ನ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಎಫ್‌ಐಆರ್ ದಾಖಲಿಸುವಾಗ ಜಾತಿಯನ್ನು ನಮೂದಿಸುವ ಪುರಾತನ ಪದ್ಧತಿಯನ್ನು ಕೈಬಿಡಬೇಕೆಂದು ಕೋರಿದ್ದರು. ಇದಕ್ಕಾಗಿ ಪೊಲೀಸ್ ಮ್ಯಾನ್ಯುಯಲ್‌ಗೆ ತಿದ್ದುಪಡಿ ತರಬೇಕೆಂದು ಸಹ ಕೋರಿದ್ದರು.

ಇದೇ ಸಂದರ್ಭದಲ್ಲಿ ನ್ಯಾಯಾಲಯವು 300 ವರ್ಷಗಳ ಹಿಂದೆಯೇ ಸಿಖ್ ಗುರುಗಳು ಜಾತಿ ವ್ಯವಸ್ಥೆ ವಿರುದ್ಧ ಶಾಸನ ಹೊರಡಿಸಿರುವುದನ್ನು ಪ್ರಸ್ತಾಪಿಸಿ, ಪಂಜಾಬ್, ಹರಿಯಾಣ ರಾಜ್ಯಗಳು ಪೊಲೀಸ್ ದಾಖಲೆಗಳಲ್ಲಿ ಮತ್ತು ಎಫ್‌ಐಆರ್ ಹಾಕುವಾಗ ಜಾತಿ ನಮೂದಿಸುವುದನ್ನು ಕೈಬಿಡಲು ಒಪ್ಪಿದ್ದವು. ಆದರೂ ಹಿಂದಿನಿಂದ ಬಂದ ಆಚರಣೆ ಹಾಗೆಯೇ ಮುಂದುವರೆದಿದೆ. ಪಂಜಾಬ್‌ನ ಉಚ್ಚ ನ್ಯಾಯಾಲಯ ಕ್ರಿಮಿನಲ್ ಪ್ರಕರಣಗಳಲ್ಲಿ ಜಾತಿ ನಮೂದಿಸುವುದು ಕಡ್ಡಾಯವಾಗಿದೆ. ಇದನ್ನು ಕೈಬಿಡಲು ಹೊಸ ಸೂಚನೆ ಕೊಡಬೇಕೆ ಎಂಬುದರ ಬಗ್ಗೆ ಸಲಹೆಯನ್ನು ಬಯಸಿತ್ತು. ‘ಜಾತಿಮುಕ್ತ’ ಯುಗದತ್ತ ಸಾಗಲು ‘ನ್ಯಾಯ ಹಾಗೂ ಸಮಾನತೆ’ಯ ಮೊಹರಿನೊಂದಿಗೆ ಮಾನವಹಕ್ಕುಗಳನ್ನು ಗೌರವಯುತವಾಗಿ ಕಾಪಾಡಲು ತೀರ್ಪು ನೀಡುತ್ತಿರುವುದಾಗಿ ತಿಳಿಸಿತ್ತು.
ಇರಲಿ, ಇದೀಗ ಹೆಸರಿನಲ್ಲಿ ಜಾತಿ ಸೇರಿಸುವ ಬದಲು ‘ದೈವನಾಮ’ ಸೇರಿಸುವ ಹೊಸ ಟ್ರೆಂಡ್‌ನ್ನು ಸರ್ಕಾರವೇ ಹುಟ್ಟುಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹೆಸರಲ್ಲಿ ಅಂತಹುದ್ದೇನಿದೆ ಎನ್ನುವಿರಾ? ಬಹಳಷ್ಟಿದೆ. ಇದರ ಉಪಯೋಗವನ್ನು ಡಾ. ಸುಬ್ರಹ್ಮಣ್ಯಸ್ವಾಮಿಯಂತಹ ಚಾಣಾಕ್ಷ ಬುದ್ಧಿಯುಳ್ಳವರು! ಹೀಗಾಗಿಯೇ ಇವರು ಸೋನಿಯಾ ಗಾಂಧಿಯನ್ನು ಸೋನಿಯಾ ಮೈನೋ ಎಂದು ಕರೆದಿದ್ದರು. ಇಲ್ಲಿ ಸೋನಿಯಾ ಗಾಂಧಿ ಹೆಸರಿಗೆ ‘ಮೈನೋ’ ಸೇರಿಸಿ ಪರಕೀಯಳೆಂಬುದನ್ನು ಬಿತ್ತುವ ಹುನ್ನಾರವಿದೆ. ಇದೇ ರೀತಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನೊಂದಿಗೆ ‘ರಾಮ್‌ಜಿ’ಯನ್ನು ಸೇರಿಸುವುದು ಮತ್ತು ಅವರ ಅನುಯಾಯಿಗಳನ್ನು ಹಿಂದೂಧರ್ಮೀಯರೊಂದಿಗೆ ಸಮೀಕರಿಸಿ ‘ಘರ್ ವಾಪ್ಸಿ’ ಕಾರ್ಯಕ್ರಮವನ್ನು ಯಶಸ್ವಿಗಳಿಸುವ ಉದ್ದೇಶವೂ ಇದೆ.
ಬಾಬಾಸಾಹೇಬರು ಬೌದ್ಧ ಮತಕ್ಕೆ ಮತಾಂತರ ಹೊಂದುವ ಮುನ್ನ “ನಾನು ಹಿಂದೂ ಆಗಿ ಜನಿಸಿರಬಹುದು. ಆದರೆ, ಹಿಂದೂ ಆಗಿ ಸಾಯಲಾರೆ” ಎಂದಿದ್ದರು. ಆದರೆ ಅಂಬೇಡ್ಕರ್ ಇಲ್ಲದೆ 63 ವರ್ಷಗಳು ಕಳೆದರೂ, ಅವರ ಹೆಸರಲ್ಲಿ ರಾಜಕೀಯ ಮಾಡಲಾಗುತ್ತಿದೆ. ‘ಘರ್ ವಾಪ್ಸಿ’ ಹೆಸರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಹಿಂದೂ ಧರ್ಮದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಇದಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಬದುಕಿದ್ದಾಗ ಎಂದಿಗೂ ತಮ್ಮ ಹೆಸರಿನೊಂದಿಗೆ ರಾಮ್‌ಜಿ ಎಂದು ಬಳಸಲು ಬಯಸಿರಲಿಲ್ಲ. ಆದರೆ ಉತ್ತರ ಪ್ರದೇಶ ಸರ್ಕಾರ ಮಾಡಲು ಹೊರಟಿದ್ದು ಬಾಬಾಸಾಹೇಬರ ಇಚ್ಚೆಗೆ ವಿರುದ್ಧವಾಗಿತ್ತು. ಇದೊಂದು ರೀತಿಯ ಅಕ್ಷರಲೋಪ. ಇದನ್ನು ಹೇರುವುದು ಸರಿಯಲ್ಲ.
ಭಾರತ ಸಂವಿಧಾನದ 2ನೇ ಪುಟದ ಅಧ್ಯಾಯ 8ನೇ ಷೆಡ್ಯೂಲ್‌ನಲ್ಲಿ ಹಿಂದಿಯಲ್ಲಿ ಸಹಿ ಮಾಡಿರುವಂತೆ ಪರಿಗಣಿಸಲಾಗಿದೆ ಎಂಬುದು ಉತ್ತರ ಪ್ರದೇಶ ಸರ್ಕಾರದ ವಾದವಾಗಿತ್ತು. ಆದರೆ, ಇದೇ ಸಂವಿಧಾನದಲ್ಲಿ ಅಮೃತ್ ಕೌರ್, ವಲ್ಲಭಬಾಯಿ ಪಟೇಲ್ ಹಾಗೂ ಜಗಜೀವನರಾಮ್ ಅವರ ಸಹಿಯ ಕೆಳಭಾಗದಲ್ಲಿ ಮತ್ತೆ ಇಂಗ್ಲಿಷಿನಲ್ಲಿ ಬಿ.ಆರ್. ಅಂಬೇಡ್ಕರ್ ಎಂದು ಸಹಿ ಮಾಡಿದ್ದಾರೆ.
ಇದಿರಲಿ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲಿಗೆ ದೆಹಲಿಯ ಡಾ. ಬಿ.ಆರ್. ಅಂಬೇಡ್ಕರ್ ಸ್ಮಾರಕವನ್ನು ಉದ್ಘಾಟಿಸಿದ್ದರು. ಇದಕ್ಕೂ ಮುಂಚಿತವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ತೆರೆದರು. ಸಾಲದಕ್ಕೆ ಬಾಬಾಸಾಹೇಬರನ್ನು ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್‌ಗೆ ಸಮೀಕರಿಸಿ ಸರಿಸಮ ಎಂದಿದ್ದರು. ಅಲ್ಲದೆ ತಾವು ಬಾಬಾಸಾಹೇಬರಂತೆ ದೇಶಭಕ್ತನೆಂದು ಹೇಳಿಕೊಂಡರು.
ಇಷ್ಟಕ್ಕೂ ರಾಜ್ಯಪಾಲ ರಾಮನಾಯಕ್ ಅವರಿಗೆ ಆಗಿರುವ ತೊಂದರೆಯಾದರೂ ಏನು? ಬಾಬಾಸಾಹೇಬರು ಇಂಗ್ಲಿಷಿನಲ್ಲಿ Abedkar ಎಂದು ಹಿಂದಿಯಲ್ಲಿ Aambedkar ಎಂದು ಸಹಿ ಮಾಡಿರುತ್ತಾರೆ. ಇದಕ್ಕೇಕೆ ಅಲ್ಲಿನ ಸರ್ಕಾರ ನರಕ ಯಾತನೆ ಅನುಭವಿಸಿತೋ ಗೊತ್ತಾಗುತ್ತಿಲ್ಲ. ಉದಾಹರಣೆಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಕೂಡ ಅವುಲ್ ಫಕೀರ್ ಜೈನುಬ್ದೀನ್ ಅಬ್ದುಲ್ ಕಲಾಂ ಎಂದೇ ಕರೆಯಬೇಕಾಗುತ್ತದೆ.

ಬಹುಶಃ ಇಂತಹದ್ದೊಂದು ಓಲೈಕೆ ಮತಬ್ಯಾಂಕ್‌ಗಾಗಿ ಅಲ್ಲದೆ, ಮತ್ತೊಂದು ಕಾರಣವೂ ಇರಬಹುದು. ಇದೇ ಹೊತ್ತಲ್ಲಿ ಐಐಟಿ ಖಾನ್‌ಪುರ್‌ನಲ್ಲಿ ನಾಲ್ವರು ಪ್ರಾಧ್ಯಾಪಕರು ತಮ್ಮ ದಲಿತ ಸಹೋದ್ಯೋಗಿಯನ್ನು ಕಿರುಕುಳಕ್ಕೀಡುಮಾಡಿ ಅಪರಾಧಿಗಳೆನಿಸಿಕೊಂಡಿದ್ದರು. ಹಾಗೆಯೇ ಅಮೆರಿಕದ ’ಸಮಾನತೆಯ ಪ್ರಯೋಗಾಲಯ’ ಕೂಡ ಜಾತಿ ಸಮೀಕ್ಷೆ ಮಾಡಿ, ಕಾರ್ಯನಿರ್ವಹಿಸುವ ಸ್ಥಳದಲ್ಲಿ ಮೂವರು ದಲಿತರಲ್ಲಿ, ಕನಿಷ್ಠ ಇಬ್ಬರಿಗಾದರೂ ಅನ್ಯಾಯ ಎಸಗಲಾಗುತ್ತಿದೆ ಎಂದು ಹೇಳಿತ್ತು. ಅಲ್ಲದೆ ಮೂವರಲ್ಲಿ ಒಬ್ಬರು ಶೈಕ್ಷಣಿಕ ಸಂದರ್ಭದಲ್ಲಿ ತಾರತಮ್ಯಕ್ಕೆ ಒಳಗಾಗುವುದನ್ನು ಒಪ್ಪಿಕೊಂಡಿತ್ತು.
ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ‘ಸುಧಾರಣೆ’ ಮತ್ತು ‘ಬಂಡಾಯ’ ಎಂಬ ರೋಮಾಂಚಕ ಪರಂಪರೆಯನ್ನು ನಮ್ಮ ದೇಶ ಹೊಂದಿದೆ. ಇದು ವಿಶ್ವದ ನಾಗರಿಕತೆಯಲ್ಲೇ ವಿಶಿಷ್ಟವಾದದ್ದಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಜೀವನದ ಅಂತಿಮ ಘಟ್ಟದಲ್ಲಿ ಬೌದ್ಧಧರ್ಮಕ್ಕೆ ಮತಾಂತರ ಹೊಂದಿದ್ದರು. ಮತಾಂತರ ಹೊಂದಲು ಹಿಂದೂ ಧರ್ಮದೊಳಗಿನ ‘ಅಸಮಾನತೆ’ ಕಾರಣವಾಗಿತ್ತು. ಇದೇ ಅವರ ಬಂಡಾಯದ ಗುಣ ಹೊರಬರಲು ಕಾರಣವಾಗಿತ್ತು. ಬಿಟ್ಟುಹೋದ ಧರ್ಮದವರು ಈಗ ಅಂಬೇಡ್ಕರ್ ಬಳಸಿಕೊಳ್ಳಲು ಮುಂದಾದರಲ್ಲ ಎಂಬುದೇ ವ್ಯಥೆಯಾಗಿದೆ.
ಖ್ಯಾತ ಅಂಕಣಕಾರ ರಾಮಚಂದ್ರ ಗುಹಾ ಅವರ ಪ್ರಕಾರ 1949ರ ಒಂದು ವರ್ಷದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂಬೇಡ್ಕರ್ ಮತ್ತು ನೆಹರು ಅವರ ಪ್ರತಿಮೆಗಳನ್ನು ನಾಶಪಡಿಸಲು 79 ರ್‍ಯಾಲಿಗಳನ್ನು ಉಪಯೋಗಿಸಿಕೊಂಡಿತ್ತಂತೆ. ಒಂದು ಕಡೆ ‘ಹಿಂದೂರಾಜ್’ ಎಂಬುದು ವಾಸ್ತವ. ಇದು ನಿಸ್ಸಂಶಯವಾಗಿ ದೇಶದ ಪಾಲಿಗೆ ‘ಮಹಾನ್ ವಿಪತ್ತು’ ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದರೆಂದು ಹೇಳಿರುತ್ತಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರು ನೆಹರು ಸಂಪುಟದಲ್ಲಿ ಕಾರ್ಮಿಕ ಮಂತ್ರಿಯಾಗಿದ್ದರೂ, ಕಾಂಗ್ರೆಸ್ ಕೂಡ ಅವರನ್ನು ಮಹಾನ್ ವ್ಯಕ್ತಿ ಎಂದು ಭಾವಿಸಿರಲಿಲ್ಲ. ಅಲ್ಲದೆ ಅವರನ್ನು ಹಿಂದೂವಿನಂತೆಯೂ ನೋಡಿರಲಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಕೂಡ ಸಂವಿಧಾನಿಕ ಸಭೆ ಪ್ರವೇಶಿಸಿದಾಗ ಮೊದಲಿಗೆ ಬೆಂಗಾಳದ ‘ಮುಸ್ಲಿಂ ಲೀಗ್’ಗೆ ಧನ್ಯವಾದಗಳನ್ನು ಸಮರ್ಪಿಸಿದ್ದರು. ಕಾರಣ, ಸಂವಿಧಾನಿಕ ಸಭೆಗೆ ಅಂಬೇಡ್ಕರ್ ಅವರನ್ನು ಆರಿಸಿದ್ದು ‘ಮುಸ್ಲಿಂ ಲೀಗ್.’
ಭಾರತೀಯ ಸಮಾಜದೊಳಗಿರುವ ‘ಜಾತಿವ್ಯವಸ್ಥೆ’ ನಮ್ಮ ನೆಲದ ಇತಿಹಾಸದೊಳಗಿನ ನಾಚಿಕೆಗೇಡಿನ ಅಧ್ಯಾಯವಾಗಿದೆ. ನಾವು ಪ್ರಜಾಪ್ರಭುತ್ವವಾದಿಗಳಾಗುವುದಕ್ಕೂ ಮುಂಚಿತವಾಗಿಯೇ ‘ಜಾತಿ’ಯ ಕರಿನೆರಳನ್ನು ಹಿಂಡಿ, ಹಿಪ್ಪೆ ಮಾಡಬೇಕಿತ್ತು. ಇದು ಪ್ರಜಾಪ್ರಭುತ್ವ ಉಗಮವಾದರೂ ದೂರ ಸರಿದಿಲ್ಲ. ಮನುಜರ ಮೇಲೆ ದಟ್ಟವಾಗಿ ಬಿದ್ದು ಕಾಡುತ್ತಿದೆ. ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ಹಾಸುಹೊಕ್ಕಾಗಿ ಪೀಡಿಸುತ್ತಿದೆ. ಇದೊಂದು ನಾಚಿಕೆಗೇಡಿನ ವಿಷಯ. ಹಾಗಂತ ಅಳುತ್ತಾ ಕೂರುವುದು ಕೂಡ ಅವಮಾನ. ಆದರೆ, ಇಲ್ಲಿ ಧ್ವನಿ ಎತ್ತಿದರೆ ‘ದೇಶದ್ರೋಹ’, ‘ಮಾನಹಾನಿ’ ಎಂಬ ಆಯುಧಗಳನ್ನು ಬಳಸಿ ಬೆದರಿಸಲಾಗುತ್ತಿದೆ.
ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ ಪುಸ್ತಕಗಳು ಪ್ರಕಟವಾಗಿದೆ. ಮನುಭಾರತ ಬಿಡುಗಡೆಗೆ ಸಿದ್ಧವಾಗಿದೆ.



I read completely. This is very good useful information.