Homeಮುಖಪುಟಒಡಲಿನಾಳದಿಂದ ಬಂದ ಅರಿವಿನ ಆಸ್ಫೋಟವೇ; ದಲಿತ ಚಳುವಳಿ ಮತ್ತು ಅಂಬೇಡ್ಕರ್

ಒಡಲಿನಾಳದಿಂದ ಬಂದ ಅರಿವಿನ ಆಸ್ಫೋಟವೇ; ದಲಿತ ಚಳುವಳಿ ಮತ್ತು ಅಂಬೇಡ್ಕರ್

- Advertisement -
- Advertisement -

ಇತ್ತೀಚಿನ ಕೆಲವು ವರ್ಷಗಳ ಕೆಳಗೆ ’ದಕ್ಷಿಣ ಭಾರತದ ದಲಿತ ಬರಹಗಳು’ (New Dalit Writings) ಎಂಬ ಸಂಶೋಧನೆಯ ಭಾಗವಾಗಿ ಈ ಯೋಜನೆಯ ಸಂಪಾದಕರಲ್ಲೊಬ್ಬರಾದ ಪ್ರೊ. ಸೂಸಿಥಾರು ಅವರು ಕವಿ ಕೆ.ಬಿ ಸಿದ್ದಯ್ಯ ಅವರನ್ನು ತುಮಕೂರಿನ ಅವರ ಮನೆಯಲ್ಲಿ ಸಂದರ್ಶಿಸುತ್ತಾ “ಪ್ರೊ. ಸಿದ್ದಯ್ಯ ನಿಮ್ಮ ದೃಷ್ಟಿಯಲ್ಲಿ ಕರ್ನಾಟಕದ ದಲಿತ ಚಳವಳಿಯನ್ನು ಹೇಗೆ ವಿವರಿಸುತ್ತೀರಾ?” ಎಂಬ ಪ್ರಶ್ನೆಯನ್ನು ಕೇಳಿದಾಗ; ಕೆ.ಬಿ ಸಿದ್ದಯ್ಯನವರು ಕೊಟ್ಟ ಉತ್ತರ: “ದಲಿತ ಚಳವಳಿಯೊಂದು ಬೃಹತ್ ವಿಶ್ವವಿದ್ಯಾಲಯ. ನಾವೆಲ್ಲ ಅದರ ವಿದ್ಯಾರ್ಥಿಗಳು” ಎಂದು. ಈ ಯೋಜನೆಯ ಸಹಾಯಕನಾಗಿ ಈ ಸಂದರ್ಶನದ ಭಾಗವಾಗಿದ್ದ ನನಗೆ ಆ ಮಾತಿನಲ್ಲಿ ಯಾವ ಉತ್ಪ್ರೇಕ್ಷೆಯೂ ಕಾಣಲಿಲ್ಲ. ಏಕೆಂದರೆ ಕರ್ನಾಟಕದ ದಲಿತ ಚಳುವಳಿ ಒಂದು ವಿಶ್ವವಿದ್ಯಾಲಯದಂತೆ ಕೆಲಸ ಮಾಡಿದೆ ಎಂಬುದನ್ನು ಗುರುತಿಸಲು ಅದು ಸೃಷ್ಟಿಸಿದ ಹೋರಾಟಗಳು, ಹೋರಾಟಗಾರರು, ಬರಹಗಾರರು, ವಿದ್ವಾಂಸರು, ಹಾಡುಗಾರರು ಮತ್ತು ದಲಿತ ಸಮುದಾಯಗಳಲ್ಲಿ ಮೂಡಿಸಿದ ಪ್ರಜ್ಞೆ, ಆ ಮೂಲಕ ಕನ್ನಡದಲ್ಲಿ ಸೃಷ್ಟಿ ಯಾದ ಜನಪರ ಸಾಹಿತ್ಯ ಮತ್ತು ಚಿಂತನೆಗಳೇ ಸಾಕ್ಷಿ.

ಜಗತ್ತಿನ ಯಾವುದೇ ಮೂಲೆಯಲ್ಲಿ ಒಂದು ಜನಪರ ಹೋರಾಟ ಅಥವಾ ಆಂದೋಲನಗಳು ರೂಪುಗೊಂಡದುದರ ಹಿಂದಿನ ನಿರ್ದಿಷ್ಟವಾದ ಕಾರಣಗಳನ್ನು ನಿಕಟವಾಗಿ ಹೇಳಲು ಸಾಧ್ಯವಿಲ್ಲವಾದರೂ, ಒಂದು ಚಳವಳಿ, ಒಬ್ಬ ಸಾಮಾಜಿಕ ನಾಯಕ ರೂಪುಗೊಳ್ಳುವುದರ ಹಿಂದೆ ಆಯಾಕಾಲ ಮತ್ತು ಸಂದರ್ಭಗಳ ಒತ್ತಡ ಪ್ರಮುಖ ಪಾತ್ರ ವಹಿಸುತ್ತದೆ. ಈ ಮಾತನ್ನು ಬುದ್ಧನಿಂದ ಬಸವಣ್ಣನಾದಿಯಾಗಿ ಅಂಬೇಡ್ಕರ್ ಅವರವರೆಗೂ ನಾವು ಅನ್ವಯಿಸಿ ನೋಡಬಹುದು.

ಕರ್ನಾಟಕದ ದಲಿತ ಚಳವಳಿಯು ’ಬೂಸಾ’ ಚಳವಳಿಯ ಕೂಸು. ಇದಕ್ಕೆ ಕಾರಣಕರ್ತರು ಕರ್ನಾಟಕದ ಮಾಜಿ ಮಂತ್ರಿಗಳಾದ ಬಸವಲಿಂಗಪ್ಪನವರು. ಇವರು ದೇವರಾಜು ಅರಸು ಮಂತ್ರಿಮಂಡಲದಲ್ಲಿ ಪೌರಾಡಳಿತ ಸಚಿವರಾಗಿದ್ದ ಅತ್ಯಂತ ಕ್ರಾಂತಿಕಾರಿ ಬಂಡಾಯಗಾರ ಮತ್ತು ಬಹಳ ದೊಡ್ಡ ಅಂಬೇಡ್ಕರ್‌ವಾದಿ. ’ಬೂಸಾ’ ಸಾಹಿತ್ಯ ಘಟನೆಯ ಕುರಿತು ಬಸವಲಿಂಗಪ್ಪನವರು ’ದಲಿತ’ ಎಂಬ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಗಮನಿಸುವುದಾದರೆ;

’ಮೈಸೂರಿನಲ್ಲಿ ದಿನಾಂಕ 18-11-1973ರಂದು ನಡೆದ New Wave (ಹೊಸ ಅಲೆ) ಎಂಬ ವಿಚಾರಗೋಷ್ಟಿಯಲ್ಲಿ ವಿದ್ಯಾರ್ಥಿ ಯುವಸಮೂಹವನ್ನು ಕುರಿತು ಮಾತನಾಡುತ್ತಾ ಈ ಸಂಪ್ರದಾಯಬದ್ಧ ಸಾಮಾಜಿಕ ವ್ಯವಸ್ಥೆಯು ಕೆಲವು ಜನರಿಗೆ ಮಾತ್ರ ಲಾಭದಾಯಕವಾಗುವಂಥದ್ದು. ಅವರ ಸ್ವಂತಕ್ಕೆ ಉಪಯೋಗವಾಗುವಂತೆ ಇರುವ ವ್ಯವಸ್ಥೆಯಿಂದ ಇತರರಿಗೆ ಲಾಭವೇನು? ಆದ್ದರಿಂದ ಅಂತಹ ಅನುಪಯುಕ್ತ ಸಾಮಾಜಿಕತೆಯಿಂದ ಪಾರಾಗುವುದೇ ಹೊಸ ಅಲೆ. ಆ ನಿಟ್ಟಿನಲ್ಲಿ ಸಮ್ಮ ಸಾಹಿತ್ಯ ಶ್ರೀಮಂತವಾಗಬೇಕಾದರೆ ನಮ್ಮ ಪಠ್ಯಪುಸ್ತಕಗಳು ಬದಲಾಗಬೇಕು. ಜೊತೆಗೆ ನಮ್ಮ ವಿದ್ಯಾರ್ಥಿಗಳು ಬೇರೆ ಬೇರೆ ದೇಶಗಳ, ಭಾಷೆಗಳ ಕ್ರಾಂತಿಕಾರಕ ಸಾಹಿತ್ಯ ಪುಸ್ತಕಗಳನ್ನು ಓದಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಬೇಕು. ಈ ರೀತಿಯಲ್ಲದ್ದು ಬೂಸಾ ಸಾಹಿತ್ಯ ಎಂದು ಸಾಂದರ್ಭಿಕವಾಗಿ ನುಡಿದ ಮಾತನ್ನು ಸುಮಾರು ಹತ್ತು ದಿನಗಳ ನಂತರ ಪತ್ರಿಕೆಗಳಲ್ಲಿ ಸುದ್ದಿ ಮಾಡಿ ಆ ಮೂಲಕ ನನ್ನ ವಿರುದ್ಧ ಜನರನ್ನು ಎತ್ತಿಕಟ್ಟಲಾಯಿತು. (ದಲಿತ-2, ಅನಿಯತ ಕಾಲಿಕೆ ಮೇ-1974) ಬಸವಲಿಂಗಪ್ಪನವರ ಈ ಮಾತು ಒಟ್ಟು ಕನ್ನಡ ಸಾಹಿತ್ಯದ ಪುನರಾವಲೋಕನಕ್ಕೆ ಕಾರಣವಾಯಿತು.

ಬಸವಲಿಂಗಪ್ಪ

ಬಸವಲಿಂಗಪ್ಪನವರ “ಬೂಸಾ” ಹೇಳಿಕೆಯು ಕರ್ನಾಟಕದಲ್ಲಿ ದೊಡ್ಡ ರಾಜಕೀಯ ಸಂಚಲನಕ್ಕೆ ಕಾರಣವಾಗಿ ಅವರು ಮಂತ್ರಿ ಪದವಿಯನ್ನು ಕಳೆದುಕೊಳ್ಳಬೇಕಾಯಿತು. ಈ ಕಾಲಘಟ್ಟದಲ್ಲಿ ಬಸವಲಿಂಗಪ್ಪನವರ ಪರ ಮತ್ತು ವಿರೋಧದ ಹೋರಾಟಗಳು ಶುರುವಾದವು. ಆಗ ನಾಡಿನ ಪ್ರಜ್ಞಾವಂತ ಯುವ ಬರಹಗಾರರು ಬಸವಲಿಂಗಪ್ಪನವರ ಹೇಳಿಕೆಯನ್ನು ಸಮರ್ಥಿಸಿ ನಡೆಸಿದ ಹೋರಾಟ ಮತ್ತು ಜಾಥಾಗಳೇ ಮುಂದೆ ದೊಡ್ಡ ಪ್ರಮಾಣದಲ್ಲಿ ದಲಿತ ಚಳವಳಿ ರೂಪುಗೊಳ್ಳಲು ಸಾಧ್ಯವಾಯಿತು ಎನ್ನುವುದು ಚಾರಿತ್ರಿಕ ಸತ್ಯ. ಜೊತೆಗೆ ಸಾವಿರಾರು ವರುಷಗಳ ಕ್ರೂರ ದಬ್ಬಾಳಿಕೆ ಮತ್ತು ಶೋಷಣೆಯ ನೋವುಂಡ ಅಸ್ಪೃಶ್ಯ ಸಮುದಾಯಗಳ ಆಕ್ರೋಶ ಈ ಚಳವಳಿಯ ಮೂಲಕ ಸ್ಫೋಟವಾಯಿತು.

ಆ ಮೂಲಕ ಸೃಷ್ಟಿಯಾದ ಕನ್ನಡ ದಲಿತ ಸಾಹಿತ್ಯ ಸಮಾಜದ ಸ್ಥಗಿತತೆಗೆ ಒಂದು ಚಲನೆಯನ್ನು ನೀಡಿತು. ಡಾ. ಸಿದ್ದಲಿಂಗಯ್ಯನವರ “ದಲಿತರು ಬರುವರು ದಾರಿಬಿಡಿ’ – “ದಲಿತರ ಕೈಗೆ ರಾಜ್ಯ ಕೊಡಿ” ಎಂಬ ಪದ್ಯದ ಸಾಲು ಸಾವಿರಾರು ವರ್ಷಗಳಿಂದ ಅಸ್ಪೃಶ್ಯ ಸಮುದಾಯಗಳನ್ನು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ವಂಚಿಸಲಾಗಿದ್ದ ವ್ಯವಸ್ಥೆಯ ಹುನ್ನಾರಗಳನ್ನು ಬಯಲುಮಾಡಿತು.

ಸಾಮಾನ್ಯವಾಗಿ ದಲಿತ ಚಳವಳಿಯ ಬೇರುಗಳನ್ನು ಬುದ್ಧನ ಕಾಲದಿಂದಲೇ ಗುರುತಿಸುವ ಚರ್ಚೆಗಳನ್ನು ಕನ್ನಡದ ಪರಂಪರೆಯಲ್ಲಿ ನೋಡಬಹುದು. ಆದರೆ, ಕರ್ನಾಟಕದ ದಲಿತ ಚಳವಳಿಗೆ ಬುದ್ಧನಾದಿಯಾಗಿ ಬಸವ, ಫುಲೆ ದಂಪತಿಗಳು, ಪೆರಿಯಾರ್, ನಾರಾಯಣಗುರು ಜೊತೆಗೆ ಅಮೆರಿಕದ ಕಪ್ಪು ಚಳವಳಿ ಮುಂತಾದವುಗಳ ಪ್ರೇರಣೆ ಇರುವುದನ್ನು ಗುರುತಿಸಬಹುದು. ಇದರ ಜೊತೆಗೆ ದಲಿತ ಚಳವಳಿಯ ಮೊದಲ ತಲೆಮಾರಿನ ನಾಯಕರಲ್ಲಿ ಬೇರೆ-ಬೇರೆ ಸಿದ್ಧಾಂತಗಳನ್ನು ಒಪ್ಪುವವರು ಇದ್ದರು. ಮಾರ್ಕ್ಸ್‌ವಾದಿಗಳು, ಸಮಾಜವಾದಿಗಳು, ಕ್ರಾಂತಿಕಾರಿಗಳು ಇತ್ಯಾದಿ. ಈ ಕಾರಣಕ್ಕೆ ಆರಂಭದ ದಲಿತ ಚಳವಳಿಯಲ್ಲಿ ಸಹಜವಾಗಿಯೇ ಆಕ್ರೋಶವನ್ನು ಕಾಣಬಹುದು. ಆದರೆ, ಆ ಆಕ್ರೋಶ ನ್ಯಾಯಯುತವಾದದ್ದು, ಅನ್ಯಾಯ-ಅಸಮಾನತೆ-ದೌರ್ಜನ್ಯ-ವಂಚನೆಯ ವಿರುದ್ಧದ ಆಕ್ರೋಶ ಅದಾಗಿತ್ತು. ಆದರೆ, ಈ ಎಲ್ಲಾ ಸಿಟ್ಟು ಪ್ರತಿರೋಧದ ಹಿಂದೆ ಬೇರೆಬೇರೆ ಪ್ರಭಾವ, ಪ್ರೇರಣೆಗಳು ತಾತ್ವಿವಾಗಿ ಇದ್ದರೂ ಕೂಡ ದಲಿತ ಚಳವಳಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಹಿಂಸಾತ್ಮಕ ಹೋರಾಟ ಮತ್ತು ಚಿಂತನೆಗಳು ಮೂಲ ಪ್ರೇರಣೆಯಾಗಿದ್ದವು ಎಂಬುದನ್ನು ಯಾರೂ ನಿರಾಕರಿಸಲಾರರು.

ಚನ್ನಣ್ಣ ವಾಲಿಕಾರರ –
ನೀ ಹೋದ ಮರುದಿನ
ಮೊದಲಂಗ ನಮ ಬದುಕು
ಹಾಗ್ಯಾದೋ ಬಾಬಾ ಸಾಹೇಬ
ನಿನ್ನಂಗ ದುಡಿವವರು ಕಳಕಳಿಯ ಪಡುವವರು
ಇನ್ನು ತನ ಬರಲಿಲ್ಲ ಒಬ್ಬ……
ಎಂಬ ಪದ್ಯ

ಡಾ.ಸಿದ್ದಲಿಂಗಯ್ಯನವರ
ನಾಡ ನಡುವಿನಿಂದ ಸಿಡಿದ
ನೋವಿನ ಕೂಡ
ಆಕಾಶದ ಅಗಲಕ್ಕೆ ನಿಂತ ಆಲವೆ…….
ಮಲಗಿದವರ ಕೂರಿಸಿದೆ
ನಿಲಿಸುವವರು ಯಾರೋ……?
ಹಾಗೂ

ಡಾ. ಎಲ್ ಹನುಮಂತಯ್ಯನವರ
ಶತಮಾನದ ಸೇಡಿಕಿಡಿ ಜಗದೊಲವಿನ ಜ್ಯೋತಿಯೇ
ಒಡಲಿನಾಳದಿಂದ ಬಂದ ಅರಿವಿನ ಆಸ್ಫೋಟವೇ
ಕನಸ್ಸುಗಳಾ ಕಡೆದವನೆ ಮನಸ್ಸುಗಳ ಮಿಡಿದವನೆ
ಮನೆ ಮನೆಯಲಿ ತುಂಬಿರುವ ಮೌನಕೆ
ಮಾತಾದವನೆ…………

ಎಂಬ ಸಾಲುಗಳನ್ನು ಗಮನಿಸಿದರೆ ಕನ್ನಡ ದಲಿತ ಚಳವಳಿ ಅಂಬೇಡ್ಕರ್ ಅವರ ಚಿಂತನೆ ಮತ್ತು ಹೋರಾಟವನ್ನು ಜೀವಿಸಿದ ಪರಿಯನ್ನು ತಿಳಿಯಬಹುದು. ಈ ಕಾರಣಕ್ಕೆ ದಲಿತ ಚಳುವಳಿಯಲ್ಲಿ ಸಾವಿರಾರು ದಲಿತೇತರರು ಮುಕ್ತವಾಗಿ ಪಾಲ್ಗೊಳ್ಳಲು ಸಾಧ್ಯವಾಯಿತು.

ಅಂಬೇಡ್ಕರ್ ಅವರ ಪ್ರಖರ ಪ್ರೇರಣೆಯಿಂದ ಹುಟ್ಟಿದ ದಲಿತ ಚಳವಳಿ ಈ ಸಮಾಜಕ್ಕೆ, ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದೆ ಎನ್ನುವುದರಲ್ಲಿ ಯಾವ ಅನುಮಾನವು ಇಲ್ಲ. ಆದರೆ, ಇಂದು ಹುಟ್ಟುವ ಪ್ರಶ್ನೆ ಆ ಎಪ್ಪತ್ತರ ದಶಕದ ದಲಿತ ಚಳವಳಿ ಯಾಕೆ ತನ್ನ ಧ್ವನಿ ಕಳೆದುಕೊಂಡಿತು ಎಂಬುದು. ಅದಕ್ಕೆ ಉತ್ತರವನ್ನು ಅಷ್ಟು ಸುಲಭವಾಗಿ ಪಡೆಯಲು ಸಾಧ್ಯವಿಲ್ಲ. ಆದರೆ, ಒಂದು ಕ್ಲೀಷೆಯ ಮಾತನ್ನಂತು ಹೇಳಬಹುದು – ಜಗತ್ತಿನ ಮಹಾನ್ ಕ್ರಾಂತಿಗಳನ್ನು, ಹೋರಾಟಗಳನ್ನು ಕಾಲವೇ ಸೃಷ್ಟಿಸುತ್ತದೆ. ಮತ್ತು ಕಾಲವೇ ಹೊಸಕಿಹಾಕುವ ಕೆಲಸ ಮಾಡುತ್ತದೆ. ಯಾರಿಗೆ ಗೊತ್ತು ಈ ಕಾಲವು ಹೊಸ ಚಳವಳಿ ಮತ್ತು ಆಂದೋಲನಕ್ಕೆ ಸದ್ದಿಲ್ಲದೆ ಸಜ್ಜಾಗುತ್ತಿರಬಹುದು. ಒಟ್ಟಿನಲ್ಲಿ ಎಲ್ಲವನ್ನು ಆಯಾ ಸಂದರ್ಭ, ಕಾಲವೇ ನಿರ್ಧರಿಸಲಿದೆ. ಕಾದು ನೋಡಬೇಕಷ್ಟೇ..

ಡಾ. ನಾರಾಯಣ್ ಕ್ಯಾಸಂಬಳ್ಳಿ

ಡಾ. ನಾರಾಯಣ್ ಕ್ಯಾಸಂಬಳ್ಳಿ
ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರು. ಹಲವು ಚಳವಳಿ ಮತ್ತು ಹೋರಾಟಗಳ ಸಂಗಾತಿ.


ಇದನ್ನೂ ಓದಿ: ಬಾಬಾಸಾಹೇಬರ ಪುಸ್ತಕಗಳ ಪ್ರಕಟನೆಗೂ ಅವರ ಜೀವನದಷ್ಟೇ ಕಲ್ಲು ಮುಳ್ಳಿನ ಹಾದಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...