Homeಮುಖಪುಟ‘ಒಂದು ದಹನದ ಕಥೆ!’ - ಸುರೇಶ ಎನ್ ಶಿಕಾರಿಪುರ

‘ಒಂದು ದಹನದ ಕಥೆ!’ – ಸುರೇಶ ಎನ್ ಶಿಕಾರಿಪುರ

ಸುರೇಶ್ ಕುಮಾರ್ ಎಂಬ ಮಂತ್ರಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸುಟ್ಟುಹೋದ ಗ್ರಂಥಾಲಯದಲ್ಲಿ ‘ಮೂರು ಸಾವಿರ ಭಗವದ್ಗೀತೆ ಪ್ರತಿಗಳು ಇದ್ದವಂತೆ’ ಎಂದು ಪ್ರಸ್ತಾಪಿಸಿ ನೆರವು ನೀಡುವುದಾಗಿ ಹೇಳಿದ್ದಾರೆ. ಒಂದು ವೇಳೆ ಆ ಗ್ರಂಥಾಲಯದಲ್ಲಿ ಭಗವದ್ಗೀತೆಯ ಪ್ರತಿಗಳು ಇರದೇ ಹೋಗಿದ್ದರೆ ಆ ಮಂತ್ರಿಯ ಪ್ರತಿಕ್ರಿಯೆ ಹೇಗಿರುತ್ತಿತ್ತು?

- Advertisement -
- Advertisement -

ನಮ್ಮ ಪುಸ್ತಕಗಳನ್ನು ಯಾರಾದರೂ ಎರವಲು ಪಡೆದುಕೊಂಡು ನಮ್ಮ ಎದುರೇ ಆ ಪುಸ್ತಕವನ್ನು ಸುರುಳಿ ಸುತ್ತಿ ಓದಲು ಆರಂಭಿಸಿದರೆ ಅವರು ನಮ್ಮ ಹೃದಯವನ್ನೇ ಹಿಂಡುತ್ತಿದ್ದಾರೇನೋ ಎನಿಸುವಷ್ಟು ಯಾತನೆಯಾಗುತ್ತದೆ‌. ಹೊಸ ಪುಸ್ತಕವನ್ನು ಓದಿದ್ದೇವೋ ಇಲ್ಲವೊ ಎನ್ನುವಷ್ಟು ನಾಜೂಕಾಗಿ ಬಳಸಿ ಹೊಸತು ಹೊಸತಾಗಿಯೇ ಇರುವಂತೆ ರ್‍ಯಾಕ್‌ನಲ್ಲಿ ಜೋಪಾವಿಡುತ್ತೇವೆ. ಆದರೆ ಅದೇ ಪುಸ್ತಕವನ್ನು ಓದಲು ತೆಗೆದುಕೊಂಡು ಹೋಗುವ ಯಾರಾದರೂ ಪರಿಚಯದವರು ಮಿತ್ರರು ಮರಳಿ ಕೊಡುವಾಗ ಮೊದಲು ಪುಸ್ತಕವನ್ನು ತೆರೆದು ನೋಡುತ್ತೇವೆ.

ಓದಿದ ಮಹಾಶಯರು ಎಲ್ಲೆಂದರಲ್ಲಿ ಹಾಳೆಯ ತುದಿಗಳನ್ನು ಮಡಚಿ ಮುಖಪುಟವನ್ನು ಗಲೀಜುಮಾಡಿ ಮುರಿದೋ ಇಲ್ಲವೇ ತಾವು ಓದಿದ ಪ್ರತಿ ಹಾಳೆಯ ಮೇಲೆ ಪೆನ್ಸಿಲಿನಿಂದ ಗೆರೆ ಎಳೆದೋ ತಂದುಕೊಟ್ಟಾಗ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗುತ್ತದೆ. ಪುಸ್ತಕಗಳನ್ನು ಮುದ್ದಿನ ಮಕ್ಕಳಂತೆ ಅತ್ಯಂತಿಕವಾಗಿ ಬಾಳ ಸಂಗಾತಿಯನ್ನು ಪ್ರೀತಿಸುವಂತೆ ಪ್ರೀತಿಸುತ್ತೇವೆ, ಜತನ ಮಾಡುತ್ತೇವೆ, ಯಾರಿಗಾದರೂ ಕೊಡುವಾಗ ಅವರು ಪುಸ್ತಕ ವಾಪಸ್ ಕೊಡುತ್ತಾರೊ ಇಲ್ಲವೋ ಎಂಬುದಕ್ಕಿಂತ ಪುಸ್ತಕವನ್ನೆಲ್ಲಿ ಹಾಳುಮಾಡಿಬಿಡುತ್ತಾರೋ ಎಂದು ಸಣ್ಣದೊಂದು ಆತಂಕವನ್ನಿರಿಸಿಕೊಂಡೇ ಕೊಟ್ಟಿರುತ್ತೇವೆ.

ಇದನ್ನೂ ಓದಿ: ಕೂಲಿ ಕಾರ್ಮಿಕ ಸೈಯದ್ ಇಸಾಕ್‌ರ ಗ್ರಂಥಾಲಯಕ್ಕೆ ಬೆಂಕಿಯಿಟ್ಟ ಕಿಡಿಗೇಡಿಗಳು: 11 ಸಾವಿರ ಪುಸ್ತಕಗಳು ಭಸ್ಮ

ನನ್ನ ವಿದ್ಯಾರ್ಥಿನಿಯೋರ್ವಳು ಒಮ್ಮೆ ನನ್ನ ಬಳಿ ಹಲವು ಪುಸ್ತಕಗಳನ್ನು ಓದಲು ತೆಗೆದುಕೊಂಡಳು. ಆರು ತಿಂಗಳ ಬಳಿಕ ವಾಪಸ್ಸು ಮಾಡುವಾಗ ಎರಡು ಪುಸ್ತಕದ ಮುಖಪುಟಗಳೇ ಹರಿದುಹೋಗಿದ್ದವು. ಆಕೆ ಖಾಕಿ ಬಣ್ಣದ ಪ್ಲಾಸ್ಟರ್ ಹಚ್ಚಿಕೊಂಡು ಮುಖ ಹಿಂಡಿಕೊಂಡು ನನಗೆ ಪುಸ್ತಕ ಒಪ್ಪಿಸಿದಳು. ಆಗ ನನಗೆ ಉರಿದು ಹೋಯಿತು. ಹೀಗೇ ಮತ್ತೋರ್ವ ವಿದ್ಯಾರ್ಥಿನಿ ಪುಸ್ತಕ ಕೇಳಿ ಒಯ್ದವಳು ವಾಪಸ್ ಕೊಡುವಾಗ ಆ ಪುಸ್ತಕವೇ, “ಈಕೆಯ ಕೈಗೆ ನಾನೇಕೆ ಸಿಕ್ಕಿದ್ದೇನೆ..? ಎಂದು ರೋದಿಸಿದಂತಿತ್ತು. ಆಕೆ ಆ ಪುಸ್ತಕದ ಮೇಲೆ ತಲೆ ಇಟ್ಟು ಮಲಗಿ ತಲೆ ಹಚ್ಚಿದ್ದ ಎಣ್ಣೆ ಪುಸ್ತಕಕ್ಕೂ ಮೆತ್ತಿ ಜಿಡ್ಡಾಗಿತ್ತು. ಚಹಾ ಚೆಲ್ಲಿ ಹಾಳೆಗಳೆಲ್ಲ ಕೆಂದು ಬಣ್ಣವಾಗಿ ಅಕ್ಷರಷಃ ಹುಚ್ಚು ಹಿಡಿದ ಅನಾಥ ಭಿಕ್ಷುಕನಂತಾಗಿತ್ತು.

ಇಂತವುಗಳನ್ನು ಎದುರುಗೊಳ್ಳುವಾಗ ಒಬ್ಬ ಪುಸ್ತಕ ಪ್ರೇಮಿಗೆ ಹೇಗಾಗಬೇಡ? ಯಾರಾದರೂ “ನನ್ನ ಬಳಿ ಹಳೆ ಪುಸ್ತಕವಿದೆ ನನಗೆ ಬೇಡ. ನಿಮಗೆ ಕೊಡುತ್ತೇನೆ ಒಯ್ರಿ” ಎಂದರೆ ಹಿಗ್ಗಿನಿಂದ ತೆಗೆದುಕೊಂಡು ಬಂದು ಅವುಗಳು ಅಸ್ತವ್ಯಸ್ತವಾಗಿದ್ದರೆ ರೀ ಬೈಂಡ್ ಮಾಡಿಸಿಯೋ ಜೆರಾಕ್ಸ್ ಮಾಡಿಸಿ ಹಾರ್ಡ್ ಬೈಂಡ್ ಮಾಡಿಸಿಯೋ ಆ ಪುಸ್ತಕವನ್ನು ನಮ್ಮಲ್ಲಿ ಉಳಿಸಿಕೊಳ್ಳುತ್ತೇವೆ. ಇಷ್ಟೆಲ್ಲಾ ಕಾಳಜಿಗಳಿಟ್ಟುಕೊಂಡು ನಮ್ಮ ಪುಸ್ತಕಗಳನ್ನು ಕಾಪಿಟ್ಟರೂ ನಮ್ಮ ಜವಾಬ್ದಾರಿ ಕಾಳಜಿಯನ್ನು ಎರವಲು ಪಡೆದವರು ಇಟ್ಟುಕೊಂಡಿರುವುದಿಲ್ಲ. ಪುಸ್ತಕಗಳನ್ನು ಹಾಳುಮಾಡಿ ಕೊಡುತ್ತಾರೆಂಬ ಆತಂಕಗಳಿದ್ದರೂ. ಜ್ಞಾನ ಪ್ರಸಾರದ ಅರಿವಿನ ಸಮಾಜ ನಿರ್ಮಿಸುವ ಜವಾಬ್ದಾರಿಯೂ ಒಬ್ಬ ಓದುಗ ಬರೆಹಗಾರನ ಮೇಲೆ ಇರುತ್ತದಲ್ಲಾ? ಹಾಗಾಗಿ ಓದುವವರಿಗೆ ಪುಸ್ತಕ ಕೊಡಲು ನಿರಾಕರಿಸುವುದೂ ಸರಿಯಲ್ಲ.

ಕೇವಲ ಒಂದೋ ಎರಡೋ ಪುಸ್ತಕಗಳನ್ನು ಯಾರಾದರೂ ಎರವಲು ಪಡೆದು ವಾಪಸು ಕೊಡುವಾಗ ಹಾಳು ಮಾಡಿದ್ದರೆ ಚಡಪಡಿಸುತ್ತೇವೆ, ಒಳಗೊಳಗೇ ಬೇಸರ ಇದ್ದರೂ ಹೊರಗೆ ತೋರ್ಗೊಡದೆ ನಕ್ಕಂತೆ ನಟಿಸುತ್ತೇವೆ‌. ಆದರೆ ತಾನು ಸಂಗ್ರಹಿಸಿದ್ದ ಹನ್ನೊಂದು ಸಾವಿರ ಪುಸ್ತಕಗಳಿಗೆ ಉದ್ಧೇಶಪೂರ್ವಕವಾಗಿ ಯಾರಾದರೂ ಬೆಂಕಿ ಹಚ್ಚಿ ಸುಟ್ಟರೆಂದರೆ? ಖಂಡಿತವಾಗಿಯೂ ನಮ್ಮನ್ನೇ ಜೀವಂತವಾಗಿ ಯಾರದರೂ ದಹಿಸಿದರೆ ಎಷ್ಟು ಜೀವಹಿಂಸೆಯಾಗಬಹುದೋ ಅಷ್ಟೇ ಜೀವಹಿಂಸೆಯಾಗುತ್ತದೆ.

ಇದನ್ನೂ ಓದಿ: ಸರ್ವಾಧಿಕಾರಿ ಹಿಡಿತದಲ್ಲಿ ನಲುಗುತ್ತಿರುವ ಆಫ್ರಿಕಾದ ಎರಿಟ್ರಿಯಾ ದೇಶದ ಪತ್ರಕರ್ತರು, ಬರಹಗಾರರು

ತಾನು ಯಾವುದೇ ಲಾಭಾಪೇಕ್ಷೆ ಇಲ್ಲದೆ ಜನರು ಓದಲಿಕ್ಕಾಗಿ ಕನ್ನಡದ ಸೇವೆಗಾಗಿ ಸಾರ್ವಜನಿಕ ಗ್ರಂಥಾಲಯ ತೆರೆದು ಅದರಲ್ಲೇ ಆತ್ಮಸಂತೃಪ್ತಿ ಕಂಡುಕೊಳ್ಳುತ್ತಿದ್ದ ಆ ಪುಸ್ತಕ ಪ್ರೇಮಿ ಸಯ್ಯದ್ ಇಸಾಕ್ ಅವರಿಗೆ ಅದೆಷ್ಟು ಹಿಂಸೆಯಾಗಿರಬಹುದು? ಅವರು ಗ್ರಂಥಾಲಯಕ್ಕಾಗಿ ಯಾವ ಬ್ಯಾಂಕಿನಿಂದಲೂ ಲಕ್ಷಾಂತರ ಸಾಲ ಪಡೆದಿಲ್ಲ. ಒಬ್ಬ ಪುಸ್ತಕಪ್ರೇಮಿ ‘ನಾನು ಗ್ರಂಥಾಲಯ ಮಾಡುತ್ತೇನೆ ಸಾಲ ಕೊಡಿ’ ಎಂದರೆ ನಕ್ಕುಬಿಡುತ್ತಾರೆ ಬ್ಯಾಂಕಿನವರು ತನ್ನ ಸ್ವಂತ ಶ್ರಮ ಆಸಕ್ತಿ ಪ್ರೀತಿಯಿಂದ ಕೊಂಡೋ ಯಾರಿಂದಲಾದರೂ ಪಡೆದೋ ನೆಡೆಸುತ್ತಿದ್ದ ಒಂದು ಗ್ರಂಥಾಲಕ್ಕೆ ಬೆಂಕಿ ಇಡುವ ಜನರು ಇದ್ದಾರೆಂದರೆ ಈ ಸಮಾಜ ಈ ದೇಶ ಯಾವ ಸ್ಥಿತಿ ತಲುಪಿದೆ ಎಂದು ಕಳವಳವಾಗುತ್ತಿದೆ.

ಈ ಸುದ್ಧಿ ಕೇಳಿದಾಗಿನಿಂದ ಮನಸ್ಸು ಮುದುಡಿಹೋಗಿದೆ. ಈ ದೇಶದಲ್ಲಿ ಯಾವುದೂ ಸುರಕ್ಷಿತವಲ್ಲ‌. ಒಂದು ಹುಲ್ಲು ಕಡ್ಡಿಯ ಮೇಲೂ ದ್ವೇಷ ಕಾರುವ ಜನರಿದ್ದಾರೆ. ಇನ್ನು ಪುಸ್ತಕಗಳು ಗುಡಿಸಲುಗಳು ಜೋಪಡಿಗಳು ಯಾವ ಲೆಕ್ಕ. ಇಲ್ಲಿ ಮತ್ತೂ ಬೇಸರವಾದದ್ದು ಕೆಲವರಿಗೆ ಅಲ್ಲಿಯ ಪುಸ್ತಕಗಳು ದಹನವಾದದ್ದಕ್ಕಲ್ಲ‌. ಅಲ್ಲಿ ಸಂಗ್ರಹದಲ್ಲಿದ್ದ ಗ್ರಂಥಗಳಲ್ಲಿ ಹಲವು ‘ಭಗವದ್ಗೀತೆ’ ಕೃತಿಗಳೂ ಇದ್ದವು ಎಂಬುದಕ್ಕೆ. ಸುರೇಶ್ ಕುಮಾರ್ ಎಂಬ ಮಂತ್ರಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸುಟ್ಟುಹೋದ ಸಯ್ಯದ್ ಇಸಾಕ್ ಅವರ ಗ್ರಂಥಾಲಯದಲ್ಲಿ “ಮೂರು ಸಾವಿರ ಭಗವದ್ಗೀತೆ ಪ್ರತಿಗಳು ಇದ್ದವಂತೆ” ಎಂದು ಪ್ರಸ್ತಾಪಿಸಿ ಸಂತ್ರಸ್ತರಿಗೆ ಅಗತ್ಯ ನೆರವು ಸಾಂತ್ವನ ನೀಡುವುದಾಗಿ ಹೇಳಿದ್ದಾರೆ.

ಒಂದು ವೇಳೆ ಆ ಗ್ರಂಥಾಲಯದಲ್ಲಿ ಭಗವದ್ಗೀತೆಯ ಪ್ರತಿಗಳು ಇರದೇ ಹೋಗಿದ್ದರೆ ಆ ಮಂತ್ರಿಯ ಪ್ರತಿಕ್ರಿಯೆ ಹೇಗಿರುತ್ತಿತ್ತು? ಇಂಥ ಕ್ಷುಲ್ಲಕ ಮನಸ್ಥಿತಿಯ ಮತೀಯ ಮನಸ್ಸುಗಳು ಇನ್ನೇನು ಯೋಚಿಸಲಿಕ್ಕೆ ಸಾಧ್ಯ? ಪಠ್ಯ ಪುಸ್ತಕ, ಉಡುವ ಬಟ್ಟೆ, ಆಡುವ ಭಾಷೆ, ಓದುವ ಪುಸ್ತಕ, ತಿನ್ನುವ ಆಹಾರ, ಎಲ್ಲದರಲ್ಲೂ ಬ್ರಾಹ್ಮಣ್ಯವಿರಬೇಕು, ಹಿಂದುತ್ವವಿರಬೇಕು ಎಂದು ಯೋಚಿಸುವ, ಧರ್ಮವನ್ನು ಹುಡುಕುವ ಇಂತ ಜನರು ಕನಿಷ್ಠ ಮನುಷ್ಯ ಸಂವೇದನೆಯನ್ನೂ ಉಳಿಸಿಕೊಂಡಿರುವುದಿಲ್ಲ.

ಇದನ್ನೂ ಓದಿ: ನವ ಉದಾರವಾದಿ ಭಾರತದಲ್ಲಿ ದಲಿತರು: ಮೇಲ್ಚಲನೆಯೋ ಅಥವಾ ಮೂಲೆಗುಂಪೋ? – ಪುಸ್ತಕ ಸಂವಾದ

ಸುಟ್ಟುಹೋದ ಗ್ರಂಥಾಲಯದಲ್ಲಿ ಗೀತೆಯ ಜೊತೆಗೆ ಪವಿತ್ರ ಕುರ್‌ಆನ್, ಬೈಬಲ್, ರಾಮಾಯಣ, ಮಹಾಭಾರತ, ಬುದ್ಧ, ಮಹಾವೀರರ ಬಸವಣ್ಣರ ಕುರಿತ ಕೃತಿಗಳು, ಅಂಬೇಡ್ಕರ್ ಬರೆಹ ಭಾಷಣ, ಕುವೆಂಪು, ಗಾಂಧಿ, ಲೋಹಿಯಾ, ವಿವೇಕಾನಂದ, ಸಾವಿತ್ರಿ ಫುಲೆ, ಜ್ಯೋತಿಭಾ, ಫುಲೆ ತಿಲಕ್, ದೇವರಾಜ ಅರಸು, ಟಿಪ್ಪು ಸುಲ್ತಾನ, ಮದಕರಿ ನಾಯಕ, ರಾಣಿ ಚನ್ನಮ್ಮ ಹೀಗೆ ಎಲ್ಲ ತರಹದ ಎಲ್ಲ ವ್ಯಕ್ತಿತ್ವಗಳ ಹೋರಾಟ, ಚಳುವಳಿ, ಶಿಕ್ಷಣ, ಪರಿಸರ ಏನೆಲ್ಲಾ ಪುಸ್ತಕಗಳು ಸುಟ್ಟು ಹೋಗಿರಬಹುದು!.

ಪುಸ್ತಕಗಳು ಪುಸ್ತಕಗಳೇ, ಈ ಮಂತ್ರಿಗಳಿಂದ ಈ ವಿಶಾಲ ದೃಷ್ಠಿಯನ್ನು ನಿರೀಕ್ಷಿಸಲಾಗದು. ಗ್ರಂಥಾಲಯದ ಮಾಲಕ ಸಯ್ಯದ್ ಇಸಾಕ್ ನನ್ನ ಪ್ರಕಾರ ಮುಸ್ಲಿಮ್ ಎನ್ನುವುದರಾಚೆ ಅವರೊಬ್ಬ ಕನ್ನಡಿಗ. ಅಮೇಲೆ ಮುಸ್ಲಿಮ ಇತರೆ. ಕನ್ನಡಕ್ಕಾಗಿ ಅವರು ದುಡಿಯುತ್ತಿದ್ದರೆಂಬುದು ಅವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ಮಾತುಗಳಗಳಲ್ಲಿ ನಾಡಿನ ಜನತೆಯ ಗಮನಕ್ಕೆ ಬಂದಿದೆ. ಸಂತ್ರಸ್ತರ ನೋವಿಗೆ ಸ್ಪಂದಿಸಬೇಕಾದುದು ಮನುಷ್ಯರಾದವರ ಕರ್ತವ್ಯ. ಅಲ್ಲಿ ಯಾವ ಗ್ರಂಥ ಸುಟ್ಟಿದೆ ಯಾವ ಗ್ರಂಥ ಸುಟ್ಟಿಲ್ಲ ಎಂದು ‘ಉಚ್ಚೆಯಲ್ಲಿ ಮೀನು ಹುಡುಕುವ’ ಮಾತನಾಡುವುದಲ್ಲ.

ಇಸಾಕ್ ಅವರ ಗ್ರಂಥಾಲಯವನ್ನು ಹಿಂದೂ ಅಥವಾ ಮುಸ್ಲಿಮ್ ಈ ಎರಡೂ ಧರ್ಮದಲ್ಲಿರುವ ಯಾವುದಾದರೂ ಒಂದು ಮೂಲಭೂತವಾದಿಗಳ ಗುಂಪು ಸುಟ್ಟು ಹಾಕಿರಬಹುದು. ಅಥವಾ ಭೂ ಕಬಳಿಕೆಗೆ ಹೊಂಚುಹಾಕಿರುವ ಯಾರೋ ಭೂಗಳ್ಳರು ಸುಟ್ಟಿರಬಹುದು. ಸಾಧ್ಯತೆಗಳೇನೇ ಇರಲಿ. ಗ್ರಂಥಾಲಯವನ್ನು ಸುಡುವ ಮನಸ್ಥಿತಿ ಮತೀಯ ಕ್ರಿಮಿಗಳು ಬಾಬರಿ ಮಸೀದಿ ಒಡೆದುದಕ್ಕಿಂತ, ಐಸಿಸ್ ಉಗ್ರರು ಇರಾಕಿನ ಪಲ್ ಮೈರಾದ ಪ್ರಾಚ್ಯ ಅವಶೇಷಗಳನ್ನು, ಅಫ್ಘಾನಿನ ಬಾಲ್ಕನ್ ಕಣಿವೆ ಬುದ್ಧದೇವನ ಬೃಹತ್ ಪ್ರತಿಮೆಗಳನ್ನು ಸಿಡಿಸಿದ್ದಕ್ಕಿಂತಲೂ ಭಿನ್ನವೇನಲ್ಲ.

ಇದನ್ನೂ ಓದಿ: ಪುಸ್ತಕ ವಿಮರ್ಶೆ: ಸ್ತ್ರೀ ಸಂವೇದನೆಯ ಕವಿತೆಗಳ ಹೊಸ ಓದು

ಸಂತ್ರಸ್ತನಿಗೆ ಗ್ರಂಥಾಲಯ ಮರು ನಿರ್ಮಾಣಕ್ಕೆ ನಾಡಿನ ಮೂಲೆ ಮೂಲೆಯಿಂದ ನೆರವಿನ ಮಹಾಪೂರ ಹರಿಯುತ್ತಿದೆ‌. ಅನೇಕ ಮಾನವೀಯರು ಪುಸ್ತಕ ಪ್ರೇಮಿಗಳು ಪ್ರಕಾಶಕರು ವಿದ್ಯಾರ್ಥಿಗಳು ಸಂಘಟನೆಗಳು ಇಸಾಕರಿಗೆ ಪುಸ್ತಕಗಳನ್ನು ಕಳಿಸಿಕೊಡುವ, ಧನ ಸಹಾಯ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಂಥಾಲಯ ದಹನದಿಂದ ಬಹಳ ಜನ ಕನಲಿದ್ದಾರೆ ಬೇಸರಗೊಂಡು ನೊಂದಿದ್ದಾರೆ.

ಸಾಫ್ಟ್‌ವೇರ್ ಎಂಜಿನಿಯರ್ ಫತೇನ್ ಮಿಸ್ಬಾ ಎಂಬ ಹೆಣ್ಣುಮಗಳೊಬ್ಬರು ಆನ್‌ಲೈನ್ ಕ್ರೌಡ್ ಫಂಡಿಗ್ ಮೂಲಕ ಆರು ಲಕ್ಷ ರೂಪಾಯಿ ಹಣ ಸಂಗ್ರಹಿಸಿದ್ದಾರೆ. ಸಂತ್ರಸ್ತನಿಗೆ ಈಗ ಬೆಂಕಿಯೇ ಬೆಳಕಾಗಿ ಬಂದಂತಾಗಿದೆ. ಈಗ ಸಯ್ಯದ್ ಇಸಾಕ್ ಅವರ ಮಡಿಲಿಗೆ ಹನ್ನೊಂದು ಸಾವಿರವಲ್ಲ, ಅದರ ನಾಲ್ಕುಪಟ್ಟು ಪುಸ್ತಕಗಳು ಸೇರಬಹುದು. ಅದನ್ನು ನಿಭಾಯಿಸುವುದು ನಿರ್ವಹಿಸುವುದು ಪುಸ್ತಕಗಳ ಮೇಲೆ ಅಪಾರ ಪ್ರೇಮವಿರುವ ಅವರಿಗೆ ಕಷ್ಟವಾಗದೆಯೂ ಇರಬಹುದು. ಆದರೆ ಈ ಪುಸ್ತಕ ದಾನ, ಧನಸಹಾಯ ಇವು ವ್ಯರ್ಥವಾಗಬಾರದು. ಸದುಪಯೋಗವಾಗಬೇಕು. ನಾಶದಲಿ ನವಸೃಷ್ಠಿ ಪವಡಿಸಿದೆ ಎಂದೆನ್ನುತ್ತಾರೆ ಕುವೆಂಪು. ಸುಟ್ಟ ಬೂದಿಗುಡ್ಡೆಯಿಂದ ನವ ಚೈತನ್ಯ ಮೊಳೆತು ಚಿಗುರುತ್ತದೆ. ಸುಟ್ಟ ಗ್ರಂಥಾಲಯದ ಜಾಗದಲ್ಲೇ ಬೆಳಗುವ ಮತ್ತೊಂದು ಗ್ರಂಥಾಲಯ ಎದ್ದೇಳಲಿ.

ಇದನ್ನೂ ಓದಿ: ಇಲ್ಲೊಂದು ಓದು ಕ್ರಾಂತಿ: ಓದಿನ ಮೂಲಕ ವಿಚಾರಪರ ತಿಳುವಳಿಕೆಯ ಬೆನ್ನು ಬಿದ್ದಿರುವ ಬಳಗ

ವಿಡಿಯೊ ನೋಡಿ: ವಿದ್ಯಾರ್ಥಿಗಳಿಬ್ಬರ ನೃತ್ಯಕ್ಕೆ ಕೋಮು ಬಣ್ಣ ಹಚ್ಚಿದ ಬಲಪಂಥೀಯರಿಗೆ ಕೇರಳ ಪ್ರತಿರೋಧಿಸಿದ್ದು ಹೇಗೆ ಗೊತ್ತೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನನ್ನ ವೈಯುಕ್ತಿಕ ಸಂಗ್ರಹದಲ್ಲಿರುವ 400-500 ಪುಸ್ತಕಗಳನ್ನು ಸಯ್ಯದ್‌ ಇಸಾಕ್‌ ರವರಿಗೆ ನೀಡುವುದೆಂದು ತೀರ್ಮಾನಿಸಿದ್ದೇನೆ. ಕನ್ನಡ ಪುಸ್ತಕ ಆರಿಸುವ, ಜೋಡಿಸುವ ತಲುಪಿಸುವ ಕೆಲಸ ಮಾಡುತ್ತೇನೆ. ದಯವಿಟ್ಟು ಅವರಿಗೆ ತಲುಪಿಸಲು ಅವರ ಮೊಬೈಲ್‌ ಸಂಖ್ಯೆ ತಿಳಿಸಿ. ನನ್ನನ್ನು ಕಾಡುತ್ತಿರುವ ಪ್ರಶ್ನೆ ಎಂದರೆ ಈ ಪುಸ್ತಕಗಳನ್ನು ಸುಟ್ಟವರಾರು? ಯಾಕೆ ಸುಟ್ಟರು? ಹಿಟ್ಲರ್‌ ಆಡಳಿತದಲ್ಲಿ ಪುಸ್ತಕ ಸುಡುವ ಕಾರ್ಯ ನಡೆಯುತ್ತಿತ್ತು ಎಂದು ಓದಿದ್ದೇನೆ. ಇಸಾಕ್‌ ಪುಸ್ತಕಗಳನ್ನು ಯಾರು ಯಾಕೆ ಸುಟ್ಟರು?

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...