ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 20 ಅಂಶಗಳ ಕದನ ವಿರಾಮ ಯೋಜನೆ ಮುಂದಿಟ್ಟಿರುವ ನಡುವೆಯೇ ಗಾಝಾದಲ್ಲಿ ಇಸ್ರೇಲ್ ತನ್ನ ಆಕ್ರಮಣವನ್ನು ಮುಂದುವರಿಸಿದೆ. ಬುಧವಾರ (ಅ.1) 16 ಮಂದಿ ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಹತ್ಯೆಗೈದಿದೆ ಎಂದು ವರದಿಯಾಗಿದೆ.
ಗಾಝಾ ನಗರದಲ್ಲಿ ಸ್ಥಳಾಂತರಗೊಂಡ ನಿರಾಶ್ರಿತರು ಆಶ್ರಯ ಪಡೆಯುತ್ತಿದ್ದ ಶಾಲೆಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ. ನಗರದ ಪೂರ್ವ ಝೈಟೌನ್ ಪ್ರದೇಶದಲ್ಲಿರುವ ಅಲ್-ಫಲಾಹ್ ಶಾಲೆಗೆ ನಿಮಿಷಗಳ ಅಂತರದಲ್ಲಿ ಎರಡು ಬಾರಿ ದಾಳಿ ಮಾಡಲಾಗಿದೆ ಎಂದು ಅಲ್-ಅಹ್ಲಿ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ ಗಾಝಾ ನಗರದ ಪಶ್ಚಿಮ ಭಾಗದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಸುತ್ತಲೂ ನೆರೆದಿದ್ದ ಜನರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಐವರು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಅಲ್-ಅಹ್ಲಿ ಆಸ್ಪತ್ರೆ ಮಾಹಿತಿ ನೀಡಿದೆ.
ಇನ್ನು ಗಾಝಾ ನಗರದ ಪಶ್ಚಿಮದಲ್ಲಿರುವ ಅಪಾರ್ಟ್‌ಮೆಂಟ್ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಸ್ವೀಕರಿಸಲಾಗಿದೆ ಎಂದು ಅಲ್ ಶಿಫಾ ಆಸ್ಪತ್ರೆ ಹೇಳಿದೆ.
ಮಧ್ಯ ಗಾಝಾದಲ್ಲಿರುವ ನುಸೇರತ್ ನಿರಾಶ್ರಿತರ ಶಿಬಿರದ ಮೇಲೂ ಇಸ್ರೇಲ್ ದಾಳಿ ನಡೆಸಿದ್ದು, ದಂಪತಿ ಸಾವನ್ನಪ್ಪಿದ್ದಾರೆ ಎಂದು ಅಲ್-ಅವ್ದಾ ಆಸ್ಪತ್ರೆ ತಿಳಿಸಿದೆ. ಬುರೈಜ್ ನಿರಾಶ್ರಿತರ ಶಿಬಿರದ ಮೇಲೆ ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.
ಮಂಗಳವಾರ (ಸೆ.30) ಗಾಝಾದಲ್ಲಿ ನಡೆದ ದಾಳಿಯಲ್ಲಿ ಸಾವನ್ನಪ್ಪಿದ ಟರ್ಕಿಶ್ ಪ್ರಸಾರ ಸಂಸ್ಥೆ ಟಿಆರ್‌ಟಿಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಯಾಹ್ಯಾ ಬರ್ಝಾಕ್ ಅವರ ಅಂತ್ಯಕ್ರಿಯೆಯನ್ನು ಯೋಜಿಸಲಾಗಿದೆ ಎಂದು ಟಿಆರ್‌ಟಿ ತಿಳಿಸಿದೆ.
ಹತ್ಯೆಗೀಡಾದ ಪತ್ರಕರ್ತ ಅಥವಾ ಬುಧವಾರದ ದಾಳಿಗಳ ಕುರಿತು ಇಸ್ರೇಲಿ ಸೇನೆಯು ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿಟ್ಟಿರುವ 20 ಅಂಶಗಳ ಕದನ ವಿರಾಮ ಯೋಜನೆಗೆ ಇಸ್ರೇಲ್ ಒಪ್ಪಿಗೆ ಸೂಚಿಸಿದೆ. ಆದರೆ, ಹಮಾಸ್ ಇನ್ನೂ ಪ್ರತಿಕ್ರಿಯಿಸಿಲ್ಲ. ಹಮಾಸ್‌ಗೆ ಪ್ರತಿಕ್ರಿಯಿಸಲು ನಾಲ್ಕು ದಿನಗಳ ಸಮಯವಕಾಶ ಇದೆ ಎಂದು ಟ್ರಂಪ್ ಹೇಳಿದ್ದಾರೆ. ಈ ನಡುವೆ ಗಾಝಾದಲ್ಲಿ ಇಸ್ರೇಲ್ ನರಮೇಧ ಮುಂದುವರಿಸಿದೆ.
ಇಸ್ರೇಲ್ ಬೆದರಿಕೆಗಳ ನಡುವೆಯೂ ಗಾಝಾ ತೀರ ಸಮೀಪಿಸುತ್ತಿರುವ ‘ಸುಮುದ್ ಫ್ಲೋಟಿಲ್ಲಾ’


