ಗಾಝಾದ ಮೇಲಿನ ಆಕ್ರಮಣವನ್ನು ಇಸ್ರೇಲ್ ಮುಂದುವರೆಸಿದ್ದು, ಭಾನುವಾರ (ಡಿ. 22) ರಾತ್ರಿ ನಿರಾಶ್ರಿತರ ಕ್ಯಾಂಪ್, ಶಾಲೆ ಸೇರಿದಂತೆ ವಿವಿಧ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿ ಹಲವರನ್ನು ಹತ್ಯೆ ಮಾಡಿದೆ.
ದಕ್ಷಿಣ ಗಾಝಾದ ಸುರಕ್ಷಿತ ಜಾಗ ಎನ್ನಲಾದ ಅಲ್-ಮವಾಸಿಯ ನಿರಾಶ್ರಿತರ ಕ್ಯಾಂಪ್ ಮೇಲೆ ಡ್ರೋನ್ ದಾಳಿ ನಡೆಸಿದ ಇಸ್ರೇಲ್ ಸೇನೆ ಏಳು ಜನರನ್ನು ಹತ್ಯೆ ಮಾಡಿದೆ. ಅದೇ ಪ್ರದೇಶದಲ್ಲಿ ನಾಗರಿಕರನ್ನು ಹೊತ್ತೊಯ್ಯುತ್ತಿದ್ದ ವಾಹನ ಮತ್ತು ಭದ್ರತಾ ಸಿಬ್ಬಂದಿ ಸಂಚರಿಸುತ್ತಿದ್ದ ವಾಹನವೊಂದರ ಮೇಲೆ ಪ್ರತ್ಯೇಕ ದಾಳಿನ ನಡೆಸಿದೆ. ಈ ಮೂಲಕ ಒಟ್ಟು ನಾಲ್ವರನ್ನು ಕೊಂದು ಹಾಕಿದೆ.
ಕೇಂದ್ರ ಗಾಝಾದಲ್ಲಿ ಇಂದು (ಡಿ.23) ನಸುಕಿನಲ್ಲಿ ಶಾಲೆ ಮತ್ತು ಸುರಕ್ಷಿತ ಪ್ರದೇಶ ಎನ್ನಲಾದ ನುಸೈರತ್‌ನ ನಿರಾಶ್ರಿತರ ಕ್ಯಾಂಪ್ ಮೇಲೆ ಪ್ರತ್ಯೇಕ ದಾಳಿ ನಡೆಸಿದೆ. ಇದರಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ಇದೇ ನುಸೈರತ್ ಪ್ರದೇಶಲ್ಲಿ ಇಸ್ರೇಲ್ ಸೇನೆ ಇನ್ನೂ ನಾಲ್ವರನ್ನು ಕೊಂದಿದೆ.
ಭಾನುವಾರ ಮುಂಜಾನೆಯಿಂದ ಸೋಮವಾರ ಮುಂಜಾನೆಯವರೆಗೆ 24 ಗಂಟೆಗಳ ಅವಧಿಯಲ್ಲಿ ವಿವಿಧ ದಾಳಿಗಳ ಮೂಲಕ ಇಸ್ರೇಲ್ ಸೇನೆ ಒಟ್ಟು 50 ಅಮಾಯಕರನ್ನು ಹತ್ಯೆ ಮಾಡಿದೆ ಎಂದು ಅಲ್-ಜಝೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಿರಂತರ ದಾಳಿಯ ನಡುವೆ ಉತ್ತರ ಗಾಝಾದ ಬೈತ್ ಲಾಹಿಯಾದಲ್ಲಿರುವ ಕಮಲ್ ಅದ್ವಾನ್ ಎಂಬ ಆಸ್ಪತ್ರೆಯನ್ನು ಮುಚ್ಚಲು ಇಸ್ರೇಲ್ ಸೇನೆ ಸೂಚಿಸಿದೆ. ಇದರಿಂದ ಸುಮಾರು 400 ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಈ ಭಾಗದಲ್ಲಿ ಭಾಗಶಃ ಕಾರ್ಯನಿರ್ವಹಿಸುತ್ತಿದ್ದ ಕೊನೆಯ ಆಸ್ಪತ್ರೆಎ ಎಂದು ಕೆಲ ವರದಿಗಳು ಹೇಳಿವೆ.
ಉತ್ತರ ಗಾಝಾದಲ್ಲಿ ಕೆಲ ಆಸ್ಪತ್ರೆಗಳು ಇನ್ನೂ ಕಾರ್ಯಾಚರಿಸುತ್ತಿವೆ. ಅಲ್ಲಿ ಸಾವಿರಾರು ನಾಗರಿಕರು ಸಿಲುಕಿಕೊಂಡಿದ್ದಾರೆ. ಇಸ್ರೇಲ್ ಸೇನೆ ಆಸ್ಪತ್ರೆಗಳಲ್ಲಿರುವ ಜನರಿಗೆ ಕಳೆದ ಮೂರು ತಿಂಗಳಿನಿಂದ ದಿಗ್ಬಂಧನ ವಿಧಿಸಿದೆ.
ಕಮಲ್ ಅದ್ವಾನ್ ಆಸ್ಪತ್ರೆಯ ಮೇಲೆ ಬಾಂಬ್, ಶೆಲ್‌ಗಳಿಂದ ಇಸ್ರೇಲ್ ಸೇನೆ ಭಾನುವಾರ ದಾಳಿ ನಡೆಸಿದೆ. ನಿರ್ದಿಷ್ಟವಾಗಿ ಮಹಿಳೆಯರು, ಹೆರಿಗೆ ಮತ್ತು ನವಜಾತ ಶಿಶುಗಳ ವಾರ್ಡ್‌ಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ. ಇದರಿಂದ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ.
“ಇಸ್ರೇಲ್ ಸೇನೆ ದೊಡ್ಡ ದೊಡ್ಡ ಯುದ್ದ ಟ್ಯಾಂಕರ್‌ಗಳ ಮೂಲಕ ಆಸ್ಪತ್ರೆಯನ್ನು ನೇರವಾಗಿ ಗುರಿಯಾಗಿಸಿದೆ. ಇದರಿಂದ ಹೆಚ್ಚಿನ ಸಾವು-ನೋವು ಸಂಭವಿಸುವ ಸಾಧ್ಯತೆ ಇದೆ. ಆಸ್ಪತ್ರೆಯನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ಆದರೆ, ನಮ್ಮಲ್ಲಿ ಬೇಕಾದಷ್ಟು ಆಂಬ್ಯುಲೆನ್ಸ್ ಇಲ್ಲದ ಕಾರಣ ರೋಗಿಗಳನ್ನು ಸ್ಥಳಾಂತರಿಸುವುದು ಅಸಾಧ್ಯ” ಎಂದು ಆಸ್ಪತ್ರೆಯ ಮುಖ್ಯಸ್ಥ ಹುಸ್ಸಾಮ್ ಅಬು ಸಫಿಯಾ ತಿಳಿಸಿದ್ದಾಗಿ ವರದಿಗಳು ಹೇಳಿವೆ.
ಕಮಲ್ ಅದ್ವಾನ್ ಆಸ್ಪತ್ರೆಯ ಮೇಲೆ ದಾಳಿ ನಡೆಸಿ ಜನರನ್ನು ಬಲವಂತಾಗಿ ಹೊರ ಕಳಿಸುವುದು ‘ಜನಾಂಗೀಯ ಹತ್ಯೆಯಾಗಿದೆ. ಇದು ಅಪರಾಧ ಎಂದು ಹಮಾಸ್ ಹೇಳಿದೆ.
ಇದನ್ನೂ ಓದಿ : ಪರ್ಭಾನಿಯಲ್ಲಿ ಪೊಲೀಸರಿಂದ ದಲಿತ ವ್ಯಕ್ತಿ ಹತ್ಯೆ, ಸಿಎಂ ಸುಳ್ಳು ಹೇಳಿದ್ದಾರೆ: ರಾಹುಲ್ ಗಾಂಧಿ ಆರೋಪ


