ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಮೇಲೆ ಒತ್ತಡ ಹೇರುವ ಸಲುವಾಗಿ ಗಾಝಾಗೆ ವಿದ್ಯುತ್ ಸರಬರಾಜನ್ನು ಇಸ್ರೇಲ್ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.
ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಹಮಾಸ್ ಮೇಲೆ ಇಸ್ರೇಲ್ ಒತ್ತಡ ಹೇರುತ್ತಲೇ ಇದೆ. ಅದಕ್ಕೆ ಹಮಾಸ್ ಬಗ್ಗದಿದ್ದಾಗ ಅಮೆರಿಕ ಜೊತೆಗೂಡಿ ಗಾಝಾವನ್ನು ನರಕ ಮಾಡುವುದಾಗಿ ಬೆದರಿಕೆ ಹಾಕಿದೆ.
ಯಾವುದೇ ಬೆದರಿಕೆಗೂ ಹಮಾಸ್ ತಲೆಬಾಗದ ಹಿನ್ನೆಲೆ, ಗಾಝಾ ಪ್ರದೇಶಕ್ಕೆ ವಿದ್ಯುತ್ ಸರಬರಾಜು ಕಡಿತಗೊಳಿಸುವಂತೆ ಇಸ್ರೇಲ್ ಇಂಧನ ಸಚಿವ ಎಲಿ ಕೋಹೆನ್ ಅವರು ಇಸ್ರೇಲ್ ಎಲೆಕ್ಟ್ರಿಕ್ ಕಾರ್ಪೊರೇಷನ್‌ಗೆ (ಐಇಸಿ) ಭಾನುವಾರ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಟೈಮ್ಸ್ ಆಫ್ ಇಸ್ರೇಲ್ ವರದಿಯ ಪ್ರಕಾರ, ಸುಮಾರು 24 ಜನರು ಇನ್ನೂ ಹಮಾಸ್ ವಶದಲ್ಲಿ ಒತ್ತೆಯಾಳುಗಳಾಗಿ ಇದ್ದಾರೆ. ಸುಮಾರು 35 ಒತ್ತೆಯಾಳುಗಳ ಮೃತದೇಹಗಳೂ ಹಮಾಸ್ ಬಳಿಯಿದೆ. ಜೀವಂತ ಇರುವವರು ಮತ್ತು ಮೃತರ ದೇಹಗಳನ್ನು ಹಸ್ತಾಂತರಿಸುವಂತೆ ಇಸ್ರೇಲ್ ಹಮಾಸ್‌ಗೆ ಬೇಡಿಕೆ ಇಟ್ಟಿದೆ.
ಸಣ್ಣ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಸಚಿವ ಎಲಿ ಕೋಹೆನ್, ” ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಆಗುವವರೆಗೆ ನಾವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ. ಎಲ್ಲರೂ ಸುರಕ್ಷಿತವಾಗಿ ಬಿಡುಗಡೆಯಾದ ಮರುದಿನ ಗಾಝಾದಲ್ಲಿ ಹಮಾಸ್ ಇರುವುದಿಲ್ಲ” ಎಂದಿದ್ದಾರೆ.
Le ministre israélien de l'énergie, Eli Cohen, a signé un ordre visant à mettre fin à l'approvisionnement en électricité de la bande de Gaza. La décision prend effet immédiatement pic.twitter.com/wG1FZ1FEdN
— Joel Raboni (@JoelRaboni) March 10, 2025
ಟೈಮ್ಸ್ ಆಫ್ ಇಸ್ರೇಲ್ ಜೊತೆ ಮಾತನಾಡಿರುವ ಇಸ್ರೇಲ್ ಅಧಿಕಾರಿಯೊಬ್ಬರು ಸಚಿವ ಕೋಹೆನ್ ಅವರ ಹೇಳಿಕೆ ನಾಟಕೀಯವಾದದ್ದು ಎಂದಿದ್ದಾರೆ. “ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲ್ ಹಮಾಸ್ ದಾಳಿ ನಡೆಸಿದ ದಿನದಿಂದ ಗಾಝಾಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಅದಾಗ್ಯೂ, ನವೆಂಬರ್‌ನಲ್ಲಿ ಮಧ್ಯ ಗಾಝಾದ ದೈರ್ ಅಲ್-ಬಲಾಹ್ ಬಳಿಯ ಉಪ್ಪುನೀರಿನ ಸಂಸ್ಕರಣಾ ಘಟಕಕ್ಕೆ ವಿದ್ಯುತ್ ಪೂರೈಕೆ ಮಾಡುವುದಾಗಿ ಇಸ್ರೇಲ್ ಹೇಳಿತ್ತು. ಅಸಲಿಗೆ ಆ ಘಟಕಕ್ಕೆ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗಿದೆ” ಎಂದಿದ್ದಾರೆ.
ದೈರ್ ಅಲ್-ಬಲಾಹ್ ಉಪ್ಪು ನೀರು ಸಂಸ್ಕರಣಾ ಘಟಕವು ಟ್ಯಾಂಕರ್‌ಗಳ ಮೂಲಕ ಹಾಗೂ ಮಧ್ಯ ಮತ್ತು ದಕ್ಷಿಣ ಗಾಝಾದಲ್ಲಿರುವ ದೈರ್ ಅಲ್-ಬಲಾಹ್ ಮತ್ತು ಖಾನ್ ಯೂನುಸ್ ಗವರ್ನರೇಟ್‌ಗಳ ಜಾಲಗಳ ಮೂಲಕ ಗಾಝಾದಲ್ಲಿ 600,000 ಕ್ಕೂ ಹೆಚ್ಚು ಜನರಿಗೆ ಸೇವೆ ಸಲ್ಲಿಸುತ್ತದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಪ್ರಾರಂಭವಾಗುವ ಮೊದಲು 2 ಮಿಲಿಯನ್‌ಗಿಂತಲೂ ಹೆಚ್ಚು ಜನರ ನೀರಿನ ಅಗತ್ಯದಲ್ಲಿ ಸುಮಾರು 15 ಪ್ರತಿಶತವನ್ನು ಪೂರೈಸಿದ ಗಾಝಾ ಪಟ್ಟಿಯಲ್ಲಿರುವ ಮೂರು ಸಮುದ್ರ ನೀರು ಸಂಸ್ಕರಣಾ ಸೌಲಭ್ಯಗಳಲ್ಲಿ ಇದು ಒಂದಾಗಿದೆ.
ಗಾಝಾ ಪಟ್ಟಿಗೆ ಆಹಾರ ಸರಬರಾಜುಗೆ ತಡೆಯೊಡ್ಡಿದ ಬಳಿಕ ವಿದ್ಯುತ್ ಸರಬರಾಜನ್ನು ಇಸ್ರೇಲ್ ಕಡಿತಗೊಳಿಸಿದೆ.
ಇಸ್ರೇಲ್-ಹಮಾಸ್ ನಡುವಿನ ಕದನ ವಿರಾಮದ ಎರಡನೇ ಹಂತವನ್ನು ಜಾರಿಗೊಳಿಸಲು ಹಮಾಸ್ ನಿರಾಕರಿಸಿದ ಹಿನ್ನೆಲೆ ಆಹಾರ ಮತ್ತು ವಿದ್ಯುತ್ ಸರಬರಾಜು ಕಡಿತಗೊಳಿಸಲಾಗಿದೆ ಎಂದು ಇಸ್ರೇಲ್ ಸಮರ್ಥಿಸಿಕೊಂಡಿದೆ.
ಆದರೆ, ಇಸ್ರೇಲ್ ಕದನ ವಿರಾಮ ಉಲ್ಲಂಘಿಸಿದೆ. ಗಾಝಾದಲ್ಲಿ ಅಲ್ಲಲ್ಲಿ ದಾಳಿ ನಡೆಸಿದೆ. ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ತೀನಿಯರ ಮೇಲೆ ಆಕ್ರಮಣ ನಡೆಸುತ್ತಿದೆ. ಕದನ ವಿರಾಮದ ಒಪ್ಪಂದಂತೆ ಆರಂಭದಲ್ಲಿ ಒತ್ತೆಯಾಳುಗಳಿಗೆ ಬದಲಾಗಿ ಬಂಧಿತ ಪ್ಯಾಲೆಸ್ತೀನಿಯರನ್ನು ಬಿಡುಗಡೆ ಮಾಡಿತ್ತು. ಟ್ರಂಪ್ ಅವರನ್ನು ನೆತನ್ಯಾಹು ಭೇಟಿಯಾದ ಬಳಿಕ, ಕದನ ವಿರಾಮದ ಒಪ್ಪಂದ ಉಲ್ಲಂಘಿಸಿ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಅಮೆರಿಕ ಮತ್ತು ಇಸ್ರೇಲ್ ಒಟ್ಟಿಗೆ ನಮ್ಮನ್ನು ಬೆದರಿಸುತ್ತದೆ ಎಂದು ಹಮಾಸ್ ಆರೋಪಿಸಿದೆ.
ಒಪ್ಪಂದಂತೆ ಮೊದಲ ಹಂತದಲ್ಲಿ ಪರಸ್ಪರ ಒತ್ತೆಯಾಳುಗಳ ಬಿಡುಗಡೆಯಾಗಬೇಕು. ನಂತರ ಎರಡನೇ ಹಂತದಲ್ಲಿ ಇಸ್ರೇಲ್ ಸೇನೆ ಗಾಝಾ ಬಿಟ್ಟು ತೆರಳಬೇಕು. ಎಲ್ಲವೂ ಆರಂಭದ ಮಾತುಕತೆಯಂತೆಯೇ ಆಗಬೇಕು ಎಂದು ಹಮಾಸ್ ಪಟ್ಟು ಹಿಡಿದಿದೆ.
ಗಾಝಾಗೆ ನೆರವು ನೀಡುವುದಕ್ಕೆ ತಡೆಯೊಡ್ಡಿರುವ ಇಸ್ರೇಲ್ ಕ್ರಮವನ್ನು ಪಾಶ್ಚಿಮಾತ್ಯ ಸರ್ಕಾರಗಳು ಮತ್ತು ಅರಬ್ ರಾಷ್ಟ್ರಗಳು ಖಂಡಿಸಿವೆ. ಆದಾಗ್ಯೂ, ಅಮೆರಿಕ ಇಸ್ರೇಲ್‌ನ ನಿರ್ಧಾರವನ್ನು ಬೆಂಬಲಿಸಿದೆ. ಗಾಝಾ ನಿವಾಸಿಗಳ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಸರಕುಗಳು ಲಭ್ಯವಿದೆ. ಹಮಾಸ್ ಆ ಸರಕುಗಳ ಪೂರೈಕೆಯನ್ನು ಬಳಸಿಕೊಂಡು ಗಾಝಾ ಮೇಲಿನ ತನ್ನ ನಿಯಂತ್ರಣವನ್ನು ಹೆಚ್ಚಿಸುತ್ತಿದೆ. ಇಸ್ರೇಲ್ ಮೇಲಿನ ದಾಳಿಗೆ ಹಣಕಾಸು ಒದಗಿಸುತ್ತಿದೆ ಎಂದು ಇಸ್ರೇಲ್ ಹೇಳಿದೆ.
ಕೆನಡಾದ ಮುಂದಿನ ಪ್ರಧಾನಿಯಾಗಿ ಮಾಜಿ ಕೇಂದ್ರ ಬ್ಯಾಂಕರ್ ಮಾರ್ಕ್ ಕಾರ್ನಿ ನೇಮಕ!


