ಹಮಾಸ್ ಜೊತೆಗಿನ ಶಾಂತಿ ಒಪ್ಪಂದದ ಮೊದಲ ಹಂತ ಜಾರಿಗೊಳಿಸುತ್ತಿರುವ ಇಸ್ರೇಲಿ ಸೇನೆ, ಗಾಝಾ ಮೇಲಿನ ತನ್ನ ದಾಳಿಯನ್ನು ನಿಲ್ಲಿಸಿದ್ದು, ಗಾಝಾ ಪಟ್ಟಿ ಪ್ರದೇಶದಿಂದ ಭಾಗಶಃ ಹಿಂದೆ ಸರಿದಿದೆ. ಈ ಹಿನ್ನೆಲೆ, ಬಲವಂತವಾಗಿ ಸ್ಥಳಾಂತರಿಸಲ್ಪಟ್ಟ ಸಾವಿರಾರು ಪ್ಯಾಲೆಸ್ತೀನಿಯರು ಉತ್ತರ ಗಾಝಾದ ಧ್ವಂಸಗೊಂಡ ಪಟ್ಟಣಗಳು ಮತ್ತು ನಗರಗಳಿಗೆ ಮರಳುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ಅಲ್-ಜಝೀರಾ ವರದಿ ಮಾಡಿದೆ.
ಹಮಾಸ್ ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವ ಇಸ್ರೇಲ್ ಪ್ರಜೆಗಳ ಬಿಡುಗಡೆ ಕಾರ್ಯ ಸೋಮವಾರ (ಅ.13) ನಡೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹಮಾಸ್, ಪ್ಯಾಲೆಸ್ಟಿನೀಯನ್ ಇಸ್ಲಾಮಿಕ್ ಜಿಹಾದ್ ಮತ್ತು ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಷನ್ ಆಫ್ ಪ್ಯಾಲೆಸ್ಟೈನ್ (ಪಿಎಫ್‌ಎಲ್‌ಎಫ್) ಸಂಘಟನೆಗಳು ಗಾಝಾ ಪಟ್ಟಿಯ ಮೇಲೆ ‘ಯಾವುದೇ ವಿದೇಶಿ ಆಡಳಿತ’ವನ್ನು ತಿರಸ್ಕರಿಸುವುದಾಗಿ ಹೇಳಿವೆ.
ಇದೇ ವೇಳೆ, ಗಾಜಾ ಅಧಿಕಾರಿಗಳು ಇಸ್ರೇಲ್ ಗಾಝಾದ ಮೇಲೆ ಆಕ್ರಮಣ ಮಾಡಿದ ಸಂದರ್ಭದಲ್ಲಿ ನಡೆದ ಯುದ್ಧಾಪರಾಧಗಳು ಮತ್ತು ಜನಾಂಗೀಯ ಹತ್ಯಾಕಾಂಡದ ಬಗ್ಗೆ ಸ್ವತಂತ್ರವಾದ, ಅಂತಾರಾಷ್ಟ್ರೀಯ ತನಿಖೆಗೆ ಒತ್ತಾಯಿಸಿದ್ದಾರೆ.
ಗಾಝಾದ ಎಲ್ಲಾ ಗಡಿಗಳನ್ನು ತೆರೆಯುವಂತೆ ಪ್ಯಾಲೆಸ್ತೀನ್ ನಿರಾಶ್ರಿತರ ಪರ ಕೆಲಸ ಮಾಡುವ ವಿಶ್ವಸಂಸ್ಥೆಯ ಸಂಸ್ಥೆ ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ ಏಜೆನ್ಸಿ ಫಾರ್ ಪ್ಯಾಲೆಸ್ಟೈನ್ ರೆಫ್ಯೂಜಿ ಇನ್ ದ ನಿಯರ್ ಈಸ್ಟ್ (ಯುನ್‌ಆರ್‌ಡಬ್ಲ್ಯುಎ) ಒತ್ತಾಯಿಸಿದೆ. ಗಡಿ ತೆರೆದ ಗಂಟೆಗಳಲ್ಲಿ ಗಾಝಾ ತಲುಪಲು 6,000 ನೆರವು ಟ್ರಕ್‌ಗಳು ಸಿದ್ಧವಾಗಿವೆ ಎಂದು ಅದು ಹೇಳಿದೆ.
ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿದ ಸುಮಾರು 135 ಪ್ಯಾಲೆಸ್ತೀನಿಯರ ಶವಗಳನ್ನು ಶುಕ್ರವಾರ ಗಾಝಾದ ವಿವಿಧ ಆಸ್ಪತ್ರೆಗಳಿಗೆ ತರಲಾಗಿದೆ ಎಂದು ವಫಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇಸ್ರೇಲ್ ಬಾಂಬ್ ದಾಳಿಯನ್ನು ನಿಲ್ಲಿಸಿರುವ ಸಂದರ್ಭವನ್ನು ಬಳಸಿಕೊಂಡು ರಕ್ಷಣಾ ತಂಡಗಳು ನಾಶವಾದ ಕಟ್ಟಡಗಳನ್ನು ತಲುಪುತ್ತಿವೆ.
ಶುಕ್ರವಾರ ಇಸ್ರೇಲಿ ವಾಯುದಾಳಿಯಲ್ಲಿ 19 ಜನರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಈ ಹಿಂದೆ ಉಂಟಾದ ಗಾಯದಿಂದ ಸಾವನ್ನಪ್ಪಿದ್ದಾರೆ ಎಂದು ಗಾಝಾದ ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸಿ ವಫಾ ವರದಿ ಮಾಡಿದೆ.
ಸಮುದ್ರದ ಮೂಲಕ ನೆರವು ತಲುಪಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಇನ್ನೂ ಐದು ಜನರನ್ನು ಇಸ್ರೇಲ್ ಬಂಧನದಿಂದ ಬಿಡುಗಡೆ ಮಾಡಿದೆ ಎಂದು ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ ಹೇಳಿದೆ.
ದಕ್ಷಿಣ ಲೆಬನಾನ್‌ನ ಅಲ್-ನಝರಿಯಾ ಗ್ರಾಮದ ಮೇಲೆ ಇಸ್ರೇಲಿ ಯುದ್ಧ ವಿಮಾನಗಳು ಬಾಂಬ್ ದಾಳಿ ನಡೆಸಿದ ಹಿನ್ನೆಲೆ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಲೆಬನಾನಿನ ಸಶಸ್ತ್ರ ಗುಂಪಿಗೆ ಸೇರಿದ ಮೂಲಸೌಕರ್ಯವನ್ನು ಪುನಃಸ್ಥಾಪಿಸಲು ಬಳಸುವ ಉಪಕರಣಗಳನ್ನು ಸಂಗ್ರಹಿಸುತ್ತಿದ್ದ ಹಿಜ್ಬೊಲ್ಲಾ ತಾಣಗಳ ಮೇಲೆ ದಾಳಿ ಮಾಡಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
ಆಕ್ರಮಿತ ಪಶ್ಚಿಮ ದಂಡೆಯ ದುರಾ ನಗರದ ಮೇಲೆ ದಾಳಿ ನಡೆಸಿದ ಇಸ್ರೇಲಿ ಸೇನೆಯು ಒಬ್ಬ ಪ್ಯಾಲೆಸ್ತೀನ್ ವ್ಯಕ್ತಿಯ ಮೇಲೆ ಗುಂಡು ಹಾರಿಸಿದೆ ಮತ್ತು ನಂತರ ಗಾಯಾಳು ವ್ಯಕ್ತಿಯನ್ನು ತಲುಪದಂತೆ ಆಂಬ್ಯುಲೆನ್ಸ್‌ಗಳನ್ನು ತಡೆದಿದೆ ಎಂದು ವರದಿಗಳು ಹೇಳಿವೆ.


