ಕದನ ವಿರಾಮ ಒಪ್ಪಂದದ ಭಾಗವಾಗಿ ಇಸ್ರೇಲ್-ಹಮಾಸ್ ನಡುವೆ ಬಂಧಿತರು ಮತ್ತು ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ.
ಭಾರತೀಯ ಕಾಲಮಾನ ಸೋಮವಾರ (ಅ.13) ಪೂರ್ವಾಹ್ನ 12 ಗಂಟೆಯ ಸುಮಾರಿಗೆ ಮೊದಲ ಹಂತದಲ್ಲಿ ಏಳು ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ರೆಡ್ ಕ್ರಾಸ್ ಅಂತಾರಾಷ್ಟೀಯ ಸಮಿತಿ ಮೂಲಕ ಹಮಾಸ್ ಇಸ್ರೇಲ್‌ಗೆ ಹಸ್ತಾಂತರಿಸಿದೆ. .
ನಂತರ, ಎರಡನೇ ಹಂತದಲ್ಲಿ, 13 ಒತ್ತೆಯಾಳುಗಳನ್ನು ಹಸ್ತಾಂತರ ಮಾಡಿದೆ. ಈ ಮೂಲಕ ಜೀವಂತ ಇದ್ದ ಎಲ್ಲಾ 20 ಒತ್ತೆಯಾಳುಗಳನ್ನು ಹಮಾಸ್ ಹಸ್ತಾಂತರಿಸಿದೆ. ಗಾಝಾದ ಖಾನ್ ಯೂನಿಸ್ ನಗರದಲ್ಲಿ ಈ ಹಸ್ತಾಂತರ ಪ್ರಕ್ರಿಯೆ ನಡೆದಿದೆ.
ಇದಕ್ಕೆ ಬದಲಾಗಿ, ಜೈಲು ಶಿಕ್ಷೆಗೆ ಗುರಿಯಾದ ಸುಮಾರು 250ಕ್ಕೂ ಹೆಚ್ಚು ಅಪರಾಧಿಗಳು ಮತ್ತು 2023ರ ಅಕ್ಟೋಬರ್ 7ರ ನಂತರ ಬಂಧಿಸಲ್ಪಟ್ಟವರು ಸೇರಿದಂತೆ ಒಟ್ಟು 2000 ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಬಿಡುಗಡೆ ಮಾಡುತ್ತಿದೆ.
ವರದಿಗಳ ಪ್ರಕಾರ, ಪ್ಯಾಲೆಸ್ತೀನಿಯರನ್ನು ಹೊತ್ತ ಮೊದಲ ಕೆಲ ಬಸ್‌ಗಳು ಆಕ್ರಮಿತ ಪಶ್ಚಿಮ ದಂಡೆಯ ರಾಮಲ್ಲಾ ತಲುಪಿದೆ. ಅಲ್ಲಿ ಸಾವಿರಾರು ಜನರು ತಮ್ಮವರನ್ನು ಸ್ವಾಗತಿಸಿದ್ದಾರೆ. ಬಿಡುಗಡೆಗೊಂಡವರನ್ನು ರಾಮಲ್ಲಾದಿಂದ ಗಾಝಾಕ್ಕೆ ಕರೆ ತರಲಾಗುತ್ತದೆ. ನಂತರ ದಕ್ಷಿಣ ಗಾಝಾದ ಖಾನ್ ಯೂನಿಸ್‌ನ ಯುರೋಪಿಯನ್ ಆಸ್ಪತ್ರೆ ಅಥವಾ ಕೇಂದ್ರ ಗಾಝಾದ ಅಲ್-ನಸರ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ.
2000 ಪ್ಯಾಲೆಸ್ತೀನಿಯರು ಇಸ್ರೇಲ್‌ನ ಓಫರ್ ಮಿಲಿಟರಿ ಜೈಲು, ಮೆಗಿದ್ದೋ ಸೆರೆಮನೆ, ಗಿಲ್ಬೋವಾ ಜೈಲು, ಕೆಟ್ಜಿಯೊಟ್ ಜೈಲು ಮತ್ತು ಐಡಿಎಫ್ ಕಸ್ಟಡಿ ಸೌಲಭ್ಯಗಳಿಂದ ಬಿಡುಗಡೆಯಾಗಲಿದ್ದಾರೆ. ಹಮಾಸ್ ಒತ್ತೆಯಾಳುಗಳನ್ನು ಇದುವರೆಗೆ ಎಲ್ಲಿ ಬಚ್ಚಿಟ್ಟಿತ್ತು ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಬಿಡುಗಡೆ ಮಾತ್ರ ಖಾನ್ ಯೂನಿಸ್‌ನಲ್ಲಿ ನಡೆದಿದೆ.
ಜೀವಂತ ಇದ್ದ 20 ಇಸ್ರೇಲಿ ಒತ್ತೆಯಾಳುಗಳ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದೆ. ಇಸ್ರೇಲ್‌ನ ಟೆಲ್ ಅವೀವ್ ನಗರದ ತಲುಪಿದ ಅವರನ್ನು ಸಂಬಂಧಿಕರು ಸ್ವಾಗತಿಸಿದ್ದಾರೆ. ಇನ್ನು 28 ಮೃತ ಒತ್ತೆಯಾಳುಗಳ ದೇಹಗಳನ್ನು ಹಸ್ತಾಂತರಿಸಬೇಕಿದೆ.
ವರದಿಗಳ ಪ್ರಕಾರ, ಹಮಾಸ್ ಇಂದು (ಸೋಮವಾರ) 28 ಮೃತದೇಹಗಳ ಪೈಕಿ 4 ದೇಹಗಳನ್ನು ಹಸ್ತಾಂತರಿಸಿದೆ. ಇನ್ನುಳಿದ 24 ದೇಹಗಳ ಹಸ್ತಾಂತರ ಆಗಬೇಕಿದೆ. ಟೆಲ್ ಅವೀವ್‌ನಲ್ಲಿ ಜೀವಂತವಾಗಿ ತಲುಪಿದ ಒತ್ತೆಯಾಳುಗಳ ಸಂಬಂಧಿಕರು ಖುಷಿಯಿಂದ ಕುಣಿದಾಡಿದರೆ, ಮರಣ ಹೊಂದಿದವರ ಸಂಬಂಧಿಕರು ದುಖಃ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಸ್ರೇಲಿ ಸಂಸತ್ತಿನಲ್ಲಿ ಟ್ರಂಪ್ ಭಾಷಣ
ಇತ್ತ ಗಡಿಯಲ್ಲಿ ಬಂಧಿತರು ಒತ್ತೆಯಾಳುಗಳ ಹಸ್ತಾಂತರ ಕಾರ್ಯ ನಡೆಯುತ್ತಿದ್ದರೆ, ಅತ್ತ ಪಶ್ಚಿಮ ಜೆರುಸಲೆಮ್‌ನ ಇಸ್ರೇಲಿ ಸಂಸತ್‌ನಲ್ಲಿ (ನೆಸೆಟ್) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣ ಮಾಡಿದ್ದಾರೆ.
“ಎರಡು ವರ್ಷಗಳ ಕತ್ತಲೆಯ ಸೆರೆವಾಸದ ಬಳಿಕ, 20 ಒತ್ತೆಯಾಳುಗಳು ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ” ಎಂದು ಟ್ರಂಪ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಒತ್ತೆಯಾಳುಗಳ ಬಿಡುಗಡೆ ಮತ್ತು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಲು ಹಮಾಸ್ ಮೇಲೆ ಒತ್ತಡೆ ಹೇರಿದ ಅರಬ್ ಮುಸ್ಲಿಂ ದೇಶಗಳಿಗೆ ಇದೇ ವೇಳೆ ಟ್ರಂಪ್ ಧನ್ಯವಾದ ತಿಳಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಟ್ರಂಪ್ ಕೊಂಡಾಡಿದ್ದಾರೆ. ಅಲ್ಲದೆ, ಕದನ ವಿರಾಮ ಜಾರಿಯಾಗುವಲ್ಲಿ ಅಮೆರಿಕದ ತನ್ನ ಆಡಳಿತ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
ಲೆಬನಾನ್‌ನ ಹಿಜ್ಬುಲ್ಲಾ ಗುಂಪಿನ ವಿರುದ್ದ ಗುಡುಗಿದ ಟ್ರಂಪ್, ಹಿಜ್ಬುಲ್ಲಾ ಇಸ್ರೇಲ್‌ಗೆ ಯಾವತ್ತೂ ಅಪಾಯಕಾರಿ ಎಂದಿದ್ದಾರೆ. ಲೆಬನಾನ್‌ನ ಹೊಸ ಅಧ್ಯಕ್ಷ ಶಾಶ್ವತವಾಗಿ ಹಿಜ್ಬುಲ್ಲಾವನ್ನು ನಿಶಸ್ತ್ರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾವು ನೀವು ಅವರನ್ನು ಬೆಂಬಲಿಸಬೇಕು ಎಂದು ಟ್ರಂಪ್ ಇಸ್ರೇಲ್ ನಾಯಕರಿಗೆ ಕರೆ ನೀಡಿದ್ದಾರೆ.
ಟ್ರಂಪ್ ಕೊಂಡಾಡಿದ ನೆತನ್ಯಾಹು
ಟ್ರಂಪ್‌ಗೂ ಮೊದಲು ಭಾಷಣ ಮಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, “ನಮ್ಮ ಜನರ ಇತಿಹಾಸದಲ್ಲಿ ಕೆತ್ತಲಾಗುವ ಭಾವನೆಗಳಿಂದ ತುಂಬಿರುವ ಈ ದಿನದಂದು, ನಿಮ್ಮ ಹೆಸರು ನಮ್ಮ ರಾಷ್ಟ್ರದ ಪರಂಪರೆಯಲ್ಲಿ ಕೆತ್ತಲ್ಪಡುತ್ತದೆ” ಎಂದು ಟ್ರಂಪ್ ಅವರನ್ನು ಕೊಂಡಾಡಿದ್ದಾರೆ.
ಶ್ವೇತ ಭವನದಲ್ಲಿ ಇಸ್ರೇಲ್ ಹೊಂದಿರುವ ‘ಶ್ರೇಷ್ಠ ಸ್ನೇಹಿತ’ ಟ್ರಂಪ್ ಎಂದ ನೆತನ್ಯಾಹು, ಯಾವ ಅಮೆರಿಕನ್ ಅಧ್ಯಕ್ಷರೂ ಇಸ್ರೇಲ್‌ಗೆ ಇದಕ್ಕಿಂತ ಹೆಚ್ಚಿನದನ್ನು ಮಾಡಿಲ್ಲ ಎಂದು ಟ್ರಂಪ್ ಅವರನ್ನು ಈ ಕೆಳಗಿನವುಗಳಿಗಾಗಿ ಶ್ಲಾಘಿಸಿದ್ದಾರೆ.
1.2018 ರಲ್ಲಿ ಅಮೆರಿಕ ರಾಯಭಾರ ಕಚೇರಿಯನ್ನು ಜೆರುಸಲೆಮ್‌ಗೆ ಸ್ಥಳಾಂತರಿಸುವುದು.
2.ಅಬ್ರಹಾಂ ಒಪ್ಪಂದಗಳಲ್ಲಿ ಮಧ್ಯಸ್ಥಿಕೆ ವಹಿಸಿರುವುದು
3. ಆಕ್ರಮಿತ ಗೋಲನ್ ಹೈಟ್ಸ್ ಮೇಲೆ ಇಸ್ರೇಲ್‌ನ ‘ಸಾರ್ವಭೌಮತ್ವ’ ವನ್ನು ಗುರುತಿಸಿರುವುದು
ಗಾಝಾ ಕದನ ವಿರಾಮ ಒಪ್ಪಂದಕ್ಕೆ ‘ಬಹುತೇಕ ಇಡೀ ಪ್ರಪಂಚದ ಬೆಂಬಲ’ ಸಿಕ್ಕಿದ್ದು ಟ್ರಂಪ್ ಅವರ ‘ಪ್ರಮುಖ ನಾಯಕತ್ವ ಎಂದು ನೆತನ್ಯಾಹು ಕೊಂಡಾಡಿದ್ದಾರೆ. ಇದೇ ವೇಳೆ ಇಸ್ರೇಲ್ ವಿರುದ್ದವಾಗಿ ನಿಂತಿದ್ದ ರಾಷ್ಟ್ರಗಳ ಹೆಸರನ್ನು ಉಲ್ಲೇಖಿಸದೆ ಅವರು ಟೀಕಿಸಿದ್ದಾರೆ.
ಟ್ರಂಪ್ ಭಾಷಣಕ್ಕೆ ಅಡ್ಡಿಪಡಿಸಿದ ಸಂಸತ್ ಸದಸ್ಯರು
ಅಯ್ಮನ್ ಒಡೆಹ್ ಮತ್ತು ಓಫರ್ ಕ್ಯಾಸಿಫ್ ಎಂಬ ಇಬ್ಬರು ಸಂಸತ್ ಸದಸ್ಯರು ಟ್ರಂಪ್ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ನೆಸೆಟ್‌ನಲ್ಲಿ ನಡೆಯಿತು. ಇವರಿಬ್ಬರು ಟ್ರಂಪ್ ಭಾಷಣದ ವೇಳೆ ‘ನರಮೇಧ’ ಎಂದು ಘೋಷಣೆಗಳನ್ನು ಕೂಗಿ ಗಾಝಾ ಆಕ್ರಮಣವನ್ನು ಖಂಡಿಸಿದ್ದಾರೆ. ನಂತರ ಅವರಿಬ್ಬರನ್ನು ಸಂಸತ್‌ನಿಂದ ಹೊರಗೆ ಕಳಿಸಲಾಗಿದೆ ಎಂದು ವರದಿಯಾಗಿದೆ.
ಇರಾನ್ ಜೊತೆ ಶಾಂತಿ ಒಪ್ಪಂದಕ್ಕೆ ಸಿದ್ದ
ನೇರ ಶತ್ರು ಇರಾನ್ ಜೊತೆಯೂ ಶಾಂತಿ ಒಪ್ಪಂದ ಮಾಡಿಕೊಳ್ಳುವ ಇಂಗಿತವನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ. ಇರಾನ್ ಶಾಂತಿ ಒಪ್ಪಂದಕ್ಕೆ ಮುಂದಾದರೆ ತುಂಬಾ ಒಳ್ಳೆಯದು. ಏಕೆಂದರೆ, ಅಲ್ಲಿನ ಜನತೆ ಬದುಕಲು ಬಯಸುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಈಜಿಪ್ಟ್‌ನಲ್ಲಿ ಗಾಝಾ ಶಾಂತಿ ಶೃಂಗ
ಇಸ್ರೇಲ್ ನೆಸೆಟ್‌ನಲ್ಲಿ ಭಾಷಣ ಮಾಡಿದ ಬಳಿಕ ಈಜಿಪ್ಟ್‌ನ ಶರ್ಮ್ ಅಲ್ ಶೇಕ್‌ನಲ್ಲಿ ನಡೆಯಲಿರುವ ‘ಗಾಝಾ ಶಾಂತಿ ಶೃಂಗ’ ದಲ್ಲಿ ಟ್ರಂಪ್ ಭಾಗವಹಿಸಲಿದ್ದಾರೆ. ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್ ಸಿಸಿ ಮತ್ತು ಡೊನಾಲ್ಟ್ ಟ್ರಂಪ್ ಜಂಟಿಯಾಗಿ ಈ ಶೃಂಗಸಭೆಯ ನೇತೃತ್ವವಹಿಸಲಿದ್ದಾರೆ.
ಭಾರತ ಸೇರಿದಂತೆ ಸುಮಾರು 20 ದೇಶಗಳ ಪ್ರಮುಖರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಭಾರತ ಪ್ರಧಾನಿ ನರೇಂದ್ರ ಮೋದಿಯವರಿಗೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿತ್ತು. ಆದರೆ, ಭಾರತ ಸರ್ಕಾರ ಪ್ರಧಾನಿ ಬದಲಾಗಿ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರನ್ನು ಕಳಿಸಿಕೊಟ್ಟಿದೆ ಎಂದು ತಿಳಿದು ಬಂದಿದೆ.
ಕದನ ವಿರಾಮ: ಮೊದಲ ಹಂತದಲ್ಲಿ 7 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಹಸ್ತಾಂತರಿಸಿದ ಹಮಾಸ್


