ಇಸ್ರೇಲ್-ಇರಾನ್ ಗಳ ಯುದ್ಧ ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ $78ರಷ್ಟು ಏರಿಕೆಯಾಗಿದೆ. 2022ರಿಂದ ಇಲ್ಲಿಯವರೆಗೆ ಕಂಡಿರದಿದ್ದ ಬೆಲೆ, ಈಗ ಇದ್ದಕ್ಕಿದ್ದಂತೆ ಏರಿಕೆ ಕಂಡಿದೆ. ಇದರಿಂದಾಗಿ ತೈಲ ಪೂರೈಕೆ ವ್ಯಾಪಾರಿಗಳು ತೊಂದರೆಗೆ ಸಿಲುಕಿದ್ದಾರೆ. ಇದು ಜಾಗತಿಕ ತೈಲ ಉದ್ಯಮ ಮತ್ತು ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ರಾಯಿಟರ್ ವರದಿ ಮಾಡಿದೆ.
ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲವು ಬ್ಯಾರೆಲ್ ಗೆ $72.98ಕ್ಕೆ ಅಥವಾ 7.26% ರಷ್ಟು ಏರಿಕೆಯಾಗಿ ಕೊನೆಗೊಂಡಿದೆ. ಡಬ್ಲ್ಯೂಟಿಐ ತೈಲವು 14% ಕ್ಕಿಂತ ಹೆಚ್ಚು ಜಿಗಿದು $77.62ಕ್ಕೆ ತಲುಪಿದೆ. ಇದು ಜನವರಿ 21ರ ನಂತರದ ಅತ್ಯಧಿಕ ಏರಿಕೆಯಾಗಿದೆ.
2022ರಲ್ಲಿ ರಷ್ಯಾ-ಉಕ್ರೇನ್ ಸಂಘರ್ಷವು ಇಂಧನ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗಿತ್ತು. ಇಸ್ರೇಲ್ ತನ್ನ ವಾಯು ದಾಳಿಯಲ್ಲಿ ಇರಾನ್‌ನ ಪರಮಾಣು ಘಟಕಗಳು, ಕ್ಷಿಪಣಿ ಕಾರ್ಖಾನೆಗಳು ಮತ್ತು ಪ್ರಮುಖ ಮಿಲಿಟರಿ ಕಮಾಂಡರ್‌ಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಇಸ್ರೇಲ್ ಹೇಳಿತ್ತು. ಇದು ಇರಾನ್ ಅಣ್ವಸ್ತ್ರ ಉತ್ಪಾದಿಸುವುದನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ಅದು ಹೇಳಿದೆ.
ಇರಾನ್‌ನ ರಾಷ್ಟ್ರೀಯ ತೈಲ ಸಂಸ್ಕರಣಾ ಮತ್ತು ವಿತರಣಾ ಕಂಪನಿಯು ತೈಲ ಸಂಸ್ಕರಣಾ ಮತ್ತು ಸಂಗ್ರಹಣಾ ಘಟಕಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯ (OPEC) ಸದಸ್ಯ ಇರಾನ್ ದಿನಕ್ಕೆ ಸರಿಸುಮಾರು 3.3 ಮಿಲಿಯನ್ ಬ್ಯಾರೆಲ್‌ಗಳನ್ನು (bpd) ಉತ್ಪಾದಿಸುತ್ತದೆ ಮತ್ತು 2 ಮಿಲಿಯನ್ ಬ್ಯಾರೆಲ್ ಗಳಿಗಿಂತ ಹೆಚ್ಚು ಕಚ್ಚಾ ತೈಲ ಮತ್ತು ಇಂಧನವನ್ನು ರಫ್ತು ಮಾಡುತ್ತದೆ.
ರಷ್ಯಾ ಸೇರಿದಂತೆ ಅದರ ಮಿತ್ರರಾಷ್ಟ್ರಗಳ ನಡುವಿನ ಬಿಡಿ ಉತ್ಪಾದನಾ ಸಾಮರ್ಥ್ಯವು ಇರಾನ್‌ನ ಉತ್ಪಾದನೆಗೆ ಸರಿಸುಮಾರು ಸಮಾನವಾಗಿದೆ. ಇದು ಯಾವುದೇ ಸಂಭಾವ್ಯ ಪೂರೈಕೆ ಅಡಚಣೆಗಳನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಎಂದು OPEC ಹೇಳಿದೆ.
ಹೆಚ್ಚುತ್ತಿರುವ ಸಂಘರ್ಷವು ಜಾಗತಿಕ ತೈಲ ಸಾಗಣೆಗೆ ನಿರ್ಣಾಯಕವಾದ ಹಾರ್ಮುಜ್ ಜಲಸಂಧಿಗೆ ಸಂಭಾವ್ಯ ಅಡಚಣೆಗಳ ಬಗ್ಗೆ ಕಳವಳಗಳನ್ನು ಹೆಚ್ಚಿಸಿದೆ.


