ಮೇ ಅಂತ್ಯದಿಂದ ಗಾಝಾದ ನೆರವು ಕೇಂದ್ರಗಳಲ್ಲಿ ಕನಿಷ್ಠ 1,760 ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಹತ್ಯೆ ಮಾಡಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ.
ಶುಕ್ರವಾರ ಗಾಝಾ ಪಟ್ಟಿಯಾದ್ಯಂತ ಇಸ್ರೇಲಿ ಸೇನೆ ನಡೆಸಿದ ದಾಳಿಯಲ್ಲಿ ಕನಿಷ್ಠ 44 ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳನ್ನು ಉಲ್ಲೇಖಿಸಿ ಅಲ್- ಜಝೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶುಕ್ರವಾರ ಗಾಝಾದಲ್ಲಿ ಕನಿಷ್ಠ ಒಂದು ಮಗು ಹಸಿವಿನಿಂದ ಮೃತಪಟ್ಟಿದ್ದು, ಈವರೆಗೆ 107 ಮಕ್ಕಳು ಸೇರಿದಂತೆ ಒಟ್ಟು 240 ಮಂದಿ ಹಸಿವು, ಅಪೌಷ್ಠಿಕತೆಯಿಂದ ಸಾವಿಗೀಡಾಗಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.
“ಹಸಿವು ಎಲ್ಲರನ್ನೂ ಬಾಧಿಸಿದೆ, ನಾವೆಲ್ಲರೂ ಅದರಿಂದ ಬಳಲುತ್ತಿದ್ದೇವೆ” ಎಂದು ಗಾಝಾದ ಫೋಟೋ ಜರ್ನಲಿಸ್ಟ್ ಹಾಗೂ ವರದಿಗಾರ ಅಮೆರ್ ಅಲ್ ಸುಲ್ತಾನ್ ಹೇಳಿದ್ದಾಗಿ ಅಲ್ ಜಝೀರಾ ವರದಿ ತಿಳಿಸಿದೆ.
ಪ್ರತಿದಿನ ತನ್ನ ಪುಟ್ಟ ಮಕ್ಕಳು ಸೇರಿದಂತೆ ಕುಟುಂಬಸ್ಥರು, ಸಂಬಂಧಿಕರು ಇಸ್ರೇಲ್ ಆಕ್ರಮಣಕ್ಕೆ ಬಲಿಯಾಗುತ್ತಿರುವುದನ್ನು ನೋಡುವ ಮಾನಸಿಕ ಹಿಂಸೆಯ ಜೊತೆಗೆ, ಪ್ಯಾಲೆಸ್ತೀನಿಯನ್ ಪತ್ರಕರ್ತರು ಹಸಿವು ಎಂಬ ಮತ್ತೊಂದು ಪ್ರಮುಖ ಸವಾಲನ್ನು ಎದುರಿಸುತ್ತಿದ್ದಾರೆ ಎಂದು ವರದಿಗಳು ವಿವರಿಸಿವೆ.
“ನಾವು ಕೆಲಸಕ್ಕೆ ಹೋಗುತ್ತೇವೆ, ತಿನ್ನಲು ಏನೂ ಸಿಗದಿದ್ದಾಗ ಕೇವಲ ನೀರು ಕುಡಿದು ಸುಮ್ಮನಿರುತ್ತೇವೆ. ಎರಡ್ಮೂರು ದಿನಗಳ ಕಾಲ ನೀರು ಕುಡಿದೇ ಬದುಕಬೇಕಾದ ಪರಿಸ್ಥಿತಿ ಇದೆ. ನಮ್ಮ ಜನರ ವಿರುದ್ಧದ ಈ ಯುದ್ಧದ ಸಮಯದಲ್ಲಿ ನಾವು ಎದುರಿಸುತ್ತಿರುವ ಅತ್ಯಂತ ಕಠಿಣ ಸವಾಲುಗಳಲ್ಲಿ ಇದೂ ಹಸಿವು ಒಂದು” ಎಂದು ಪತ್ರಕರ್ತ ಸುಲ್ತಾನ್ ಅಲ್-ಜಝೀರಾ ಜೊತೆ ನೋವು ಹಂಚಿಕೊಂಡಿದ್ದಾರೆ.
ಗಾಝಾದಲ್ಲಿ ಕೆಲಸ ಮಾಡುತ್ತಿರುವ ಪ್ಯಾಲೆಸ್ತೀನಿಯನ್ ಪತ್ರಕರ್ತರು ವಿಶ್ವದ ಅತ್ಯಂತ ಅಪಾಯಕಾರಿ ಮಾಧ್ಯಮ ವೃತ್ತಿಪರರು ಎಂದು ಪತ್ರಕರ್ತರನ್ನು ರಕ್ಷಿಸುವ ಸಮಿತಿ ‘ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್’ ಹೇಳಿದೆ.
2023ರ ಆಕ್ಟೋಬರ್ 7ರಿಂದ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನಿರಂತರ ಆಕ್ರಮಣದಿಂದ ಇದುವರೆಗೆ ಸುಮಾರು 61,827 ಜನರು ಸಾವಿಗೀಡಾಗಿದ್ದಾರೆ ಮತ್ತು 155,275 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ರಷ್ಯಾದಿಂದ ತೈಲ ಖರೀದಾರ ದೇಶಗಳ ಮೇಲೆ ದ್ವಿತೀಯ ಸುಂಕ ವಿಧಿಸದಿರಬಹುದು: ಟ್ರಂಪ್ ಸೂಚನೆ


