ಇಸ್ರೇಲಿ ಸೈನ್ಯವು ಶನಿವಾರ ಉತ್ತರ ಲೆಬನಾನ್‌ಗೆ ತನ್ನ ವೈಮಾನಿಕ ದಾಳಿಯನ್ನು ವಿಸ್ತರಿಸಿದೆ. ಬೈರುತ್ ಮತ್ತು ದಕ್ಷಿಣದ ನಗರಗಳಲ್ಲಿ ಬಾಂಬ್ ದಾಳಿಗಳು ಮುಂದುವರೆದಿದ್ದು, ಇಸ್ರೇಲಿ ಸೈನ್ಯವು ಹೆಜ್ಬುಲ್ಲಾವನ್ನು ಗುರಿಯಾಗಿಸಿ ತನ್ನ ಆಕ್ರಮಣವನ್ನು ತೀವ್ರಗೊಳಿಸಿದೆ. ಶನಿವಾರ ಮುಂಜಾನೆ ಉತ್ತರ ನಗರವಾದ ಟ್ರಿಪೋಲಿಯಲ್ಲಿ ದಾಳಿಗಳು ನಡೆದಿದ್ದು, ಅಲ್ಲಿ ಹಮಾಸ್ ಉನ್ನತ ನಾಯಕ ಮತ್ತು ಅವರ ಕುಟುಂಬವನ್ನು ಹತ್ಯೆ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲಿ ಸೇನೆಯು ಮೂರು ಎಚ್ಚರಿಕೆಗಳನ್ನು ನೀಡಿದ್ದು, ಆ ಪ್ರದೇಶದ ನಿವಾಸಿಗಳನ್ನು ತಕ್ಷಣವೇ ಸ್ಥಳಾಂತರಿಸುವಂತೆ ಒತ್ತಾಯಿಸಿದೆ. ರಾತ್ರಿಯಲ್ಲಿ ಬೈರುತ್‌ನ ವಿಮಾನ ನಿಲ್ದಾಣದ ಬಳಿ ವಿಮಾನಗಳು ಆಗಮಿಸುತ್ತಿದ್ದಂತೆ ಸ್ಫೋಟಗಳು ಮತ್ತು ವೈಮಾನಿಕ ದಾಳಿಗಳು ಸಂಭವಿಸಿದವು.
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ತಮ್ಮ ಶುಕ್ರವಾರದ ಧರ್ಮೋಪದೇಶದಲ್ಲಿ “ಇಸ್ರೇಲ್ ಹೆಚ್ಚು ಕಾಲ ಉಳಿಯುವುದಿಲ್ಲ, ಇರಾನ್ ಹಿಂದೆ ಸರಿಯುವುದಿಲ್ಲ” ಎಂದು ಎಚ್ಚರಿಸಿದ ನಂತರ ಹೊಸ ಸುತ್ತಿನ ತೀವ್ರವಾದ ದಾಳಿಗಳು ನಡೆದಿವೆ.
ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್f) ಸುಮಾರು ಮೂರು ವಾರಗಳ ಕಾಲ ದಕ್ಷಿಣ ಲೆಬನಾನ್ ಮೇಲೆ ದಾಳಿ ನಡೆಸುತ್ತಿದೆ, ಹಲವಾರು ಜನರನ್ನು ಕೊಂದು 1.2 ಮಿಲಿಯನ್ ಲೆಬನಾನ್ನರನ್ನು ಅವರ ಮನೆಗಳಿಂದ ಹೊರಹೋಗುವಂತೆ ಮಾಡಿದೆ.
ಹಮಾಸ್‌ನ ಸಶಸ್ತ್ರ ವಿಭಾಗ, ಅಲ್-ಕಸ್ಸಾಮ್ ಬ್ರಿಗೇಡ್‌ಗಳ ನಾಯಕ ಸಯೀದ್ ಅತಲ್ಲಾ, ಉತ್ತರ ಲೆಬನಾನಿನ ನಗರವಾದ ಟ್ರಿಪೋಲಿಯಲ್ಲಿರುವ ಪ್ಯಾಲೇಸ್ಟಿನಿಯನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ಮೂರು ಕುಟುಂಬ ಸದಸ್ಯರೊಂದಿಗೆ ಕೊಲ್ಲಲ್ಪಟ್ಟರು ಎಂದು ಹಮಾಸ್ ಸಂಯೋಜಿತ ಮಾಧ್ಯಮಗಳು ತಿಳಿಸಿವೆ. ದಾಳಿಯ ಬಗ್ಗೆ ಇಸ್ರೇಲ್ ಸೇನೆಯು ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ದಕ್ಷಿಣ ಲೆಬನಾನ್‌ನ ಮಸೀದಿಯೊಂದರಲ್ಲಿ ಭಯೋತ್ಪಾದಕ ಗುಂಪಿನ ಸದಸ್ಯರು ಕಾರ್ಯನಿರ್ವಹಿಸುತ್ತಿರುವ ಹಿಜ್ಬುಲ್ಲಾ ಪ್ರಧಾನ ಕಛೇರಿಯನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಐಡಿಎಫ್ ಘೋಷಿಸಿದೆ. “ದಕ್ಷಿಣದಲ್ಲಿರುವ ‘ಸಲಾಹ್ ಎಹಂಡೋರ್’ ಆಸ್ಪತ್ರೆಯ ಬಳಿಯ ಮಸೀದಿಯಲ್ಲಿ ಸ್ಥಾಪಿಸಲಾದ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಯೋತ್ಪಾದಕ ಸಂಘಟನೆ ಹೆಜ್ಬುಲ್ಲಾದ ಕಾರ್ಯಕರ್ತರ ವಿರುದ್ಧ ವಾಯುಪಡೆಯ ವಿಮಾನಗಳು ರಾತ್ರಿಯಲ್ಲಿ ಅಮ್ಮನ್ ಮತ್ತು ಉತ್ತರ ಕಮಾಂಡ್‌ನ ಗುಪ್ತಚರ ಮಾರ್ಗದರ್ಶನದಲ್ಲಿ ಉದ್ದೇಶಿತ ದಾಳಿಗಳನ್ನು ನಡೆಸಿತು ಎಂದು ಇಸ್ರೇಲ್ ಸೇನೆ ಟ್ವೀಟ್ ಮಾಡಿದೆ.
ಗುರುವಾರ ರಾತ್ರಿ ಇಸ್ರೇಲಿ ದಾಳಿಯಲ್ಲಿ ಗುರಿಯಾಗಿರುವ ವರದಿಯಾದ ಹಿಜ್ಬುಲ್ಲಾ ಮುಖ್ಯಸ್ಥರಾಗಿ ಹಸನ್ ನಸ್ರಲ್ಲಾಹ್ ಅವರ ಉತ್ತರಾಧಿಕಾರಿಯಾದ ಹಶೆಮ್ ಸಫೀದಿನ್ ಅವರ ಭವಿಷ್ಯವು ಅಸ್ಪಷ್ಟವಾಗಿದೆ. ಇಸ್ರೇಲ್ ಅಥವಾ ಹಿಜ್ಬುಲ್ಲಾ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಅವರು ಸಫಿಯದ್ದೀನ್ ಮತ್ತು ನಸ್ರಲ್ಲಾ ಅವರ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. “ನಿಮ್ಮ ಪ್ರಾಕ್ಸಿಗಳನ್ನು ತೆಗೆದುಕೊಂಡು ಲೆಬನಾನ್ ತೊರೆಯಿರಿ” ಎಂದು ಖಮೇನಿಯನ್ನು ಒತ್ತಾಯಿಸಿದರು.
ಇಸ್ರೇಲಿ ಸೇನೆಯು ದಕ್ಷಿಣ ಲೆಬನಾನಿನ ಒಡೈಸ್ಸೆಹ್ ಪಟ್ಟಣಕ್ಕೆ ನುಸುಳಲು ಪ್ರಯತ್ನಿಸುತ್ತಿದೆ ಎಂದು ಹಿಜ್ಬೊಲ್ಲಾಹ್ ಹೇಳಿಕೆ ನೀಡಿದ್ದು, ಘರ್ಷಣೆಗಳು ನಡೆಯುತ್ತಿವೆ ಎಂದು ಹೇಳಿದರು. ಇಸ್ರೇಲಿ ಸೇನೆಯು ಖಿಯಾಮ್ ನಗರ ಮತ್ತು ದಕ್ಷಿಣ ಲೆಬನಾನ್‌ನ ಕಾಫರ್ ಕಿಲಾ ಹೊರವಲಯದಲ್ಲಿ ಫಿರಂಗಿ ಶೆಲ್ ದಾಳಿ ನಡೆಸಿತು.
ಮಂಗಳವಾರ ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ತನ್ನ ದಾಳಿಯ ಆಯ್ಕೆಗಳನ್ನು ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ಇದು ಲೆಬನಾನ್‌ನಲ್ಲಿ ಇಸ್ರೇಲ್‌ನ ಮಿಲಿಟರಿ ಕ್ರಮ ಮತ್ತು ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆಗೆ ಪ್ರತೀಕಾರವಾಗಿ ಎಂದು ಟೆಹ್ರಾನ್ ಹೇಳಿಕೊಂಡಿದೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ಲೆಬನಾನ್ ಭೇಟಿಯ ನಂತರ ಮಾತುಕತೆಗಾಗಿ ಸಿರಿಯಾಕ್ಕೆ ಬಂದಿಳಿದರು, ಇದರಲ್ಲಿ ಅವರು ಲೆಬನಾನ್ ಮತ್ತು ಹೆಜ್ಬೊಲ್ಲಾಗೆ ಬೆಂಬಲವನ್ನು ಪುನರುಚ್ಚರಿಸಿದರು.
ಲೆಬನಾನ್ ಮತ್ತು ಸಂಘರ್ಷ ಪೀಡಿತ ನಾಗರಿಕರನ್ನು ಬೆಂಬಲಿಸಲು ಸುಮಾರು 157 ಮಿಲಿಯನ್ ಯುಎಸ್ ಡಾಲರ್‌ಗಳನ್ನು ಹೊಸ ಮಾನವೀಯ ನೆರವು ನೀಡುವುದಾಗಿ ಯುನೈಟೆಡ್ ಸ್ಟೇಟ್ಸ್ ಘೋಷಿಸಿತು. “ಈ ನಿಧಿಯು ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳು, ಲೆಬನಾನ್‌ನೊಳಗಿನ ನಿರಾಶ್ರಿತರ ಜನಸಂಖ್ಯೆಯ ಹೊಸ ಮತ್ತು ಅಸ್ತಿತ್ವದಲ್ಲಿರುವ ಅಗತ್ಯಗಳನ್ನು ಪರಿಹರಿಸುತ್ತದೆ. ಈ ನೆರವು ನೆರೆಯ ಸಿರಿಯಾಕ್ಕೆ ಪಲಾಯನ ಮಾಡುವವರನ್ನು ಸಹ ಬೆಂಬಲಿಸುತ್ತದೆ” ಎಂದು ಯುಎಸ್ ಸ್ಟೇಟ್ಸ್ ಡಿಪಾರ್ಟ್‌ಮೆಂಟ್ ಹೇಳಿದೆ.
ಈ ಬೆಳವಣಿಗೆಗಳ ನಡುವೆಯೇ, ಯುಎಸ್ ಮಿಲಿಟರಿ ಶುಕ್ರವಾರ ಯೆಮೆನ್‌ನ ಹೌತಿ ನಿಯಂತ್ರಿತ ಪ್ರದೇಶಗಳಲ್ಲಿ 15 ಹೌತಿ ಗುರಿಗಳ ಮೇಲೆ ದಾಳಿ ನಡೆಸಿತು. ವಿಮಾನಗಳು ಮತ್ತು ಯುದ್ಧನೌಕೆಗಳು ಈ ಪ್ರದೇಶದಲ್ಲಿ ಬಾಂಬ್ ದಾಳಿ ನಡೆಸಿದ್ದರಿಂದ ಮಿಲಿಟರಿ ಹೊರಠಾಣೆಗಳು ಮತ್ತು ವಿಮಾನ ನಿಲ್ದಾಣದಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ನಿವಾಸಿಗಳು ವರದಿ ಮಾಡಿದ್ದಾರೆ. ಬ್ರಿಟಿಷ್ ಸೈನ್ಯವೂ ದಾಳಿಯಲ್ಲಿ ಭಾಗವಹಿಸಿತು ಎಂದು ವರಿಯಿಂದ ಮಾಧ್ಯಮಗಳ ವರದಿಯಿಂದ ತಿಳಿದುಬಂದಿದೆ.
ಇದನ್ನೂ ಓದಿ; ”ಇಸ್ರೇಲ್ ಹೆಚ್ಚು ಕಾಲ ಉಳಿಯುವುದಿಲ್ಲ” | ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಪ್ರತಿಜ್ಞೆ


