ಇಸ್ರೇಲ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ನಡುವೆ ಕದನ ವಿರಾಮ ಒಪ್ಪಂದ ನಡೆದರೂ, ಅದು ಹೆಸರಿಗೆ ಮಾತ್ರ ಎಂಬಂತಾಗಿದೆ. ಸೋಮವಾರ (ಡಿ.2) ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್‌ನ 11 ಜನರು ಸಾವನ್ನಪ್ಪಿದ್ದಾರೆ. ಆ ಬಳಿಕ ಪರಸ್ಪರ ಸಂಘರ್ಷ ಉಲ್ಬಣಿಸಿದೆ.
ನವೆಂಬರ್ 27ರಂದು ಯುಎಸ್, ಈಜಿಪ್ಟ್, ಕತಾರ್ ಮತ್ತು ತುರ್ಕಿ ದೇಶಗಳ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಸೇನೆ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಕದನ ವಿರಾಮಕ್ಕೆ ಸಹಿ ಹಾಕಿತ್ತು. ಈ ವಿಚಾರವನ್ನು ಯುಎಸ್ ಅಧ್ಯಕ್ಷ ಜೋ ಬೈಡನ್ ಅವರೇ ಘೋಷಣೆ ಮಾಡಿದ್ದರು.
ಆದರೆ, ಇಸ್ರೇಲ್ ಕದನ ವಿರಾಮ ಮುರಿದು ಸೋಮವಾರ ಲೆಬನಾನ್ ಮೇಲೆ ವೈಮಾನಿಕ ದಾಳಿ ನಡೆಸಿ ಇಬ್ಬರನ್ನು ಕೊಂದು ಹಾಕಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಹಿಜ್ಬುಲ್ಲಾ ಕೂಡ ಇಸ್ರೇಲ್ ಸೇನಾ ನೆಲೆ ಮೇಲೆ ದಾಳಿ ನಡೆಸಿದೆ. ನಂತರ ಇಸ್ರೇಲ್ ನಡೆಸಿದ ಸರಣಿ ದಾಳಿಗಳಲ್ಲಿ 9 ಜನರು ಸಾವನ್ನಪ್ಪಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಹೇಳಿದೆ.
ಲೆಬನಾನ್ ತನ್ನದೇ ಎಂದು ಹೇಳಿಕೊಳ್ಳುವ ವಿವಾದಿತ ಪ್ರದೇಶವಾದ ಫಾರ್ ಚೌಬಾದ ಬೆಟ್ಟಗಳಲ್ಲಿನ ಇಸ್ರೇಲಿ ಮಿಲಿಟರಿ ನೆಲೆಯ ಮೇಲೆ ದಾಳಿ ಮಾಡುವ ಮೂಲಕ ಕದನ ವಿರಾಮದ ‘ಪುನರಾವರ್ತಿತ ಉಲ್ಲಂಘನೆ’ ಗಳಿಗೆ “ಪ್ರಾಥಮಿಕ ರಕ್ಷಣಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದೇವೆ ಎಂದು ಹಿಜ್ಬುಲ್ಲಾ ಸಮರ್ಥಿಸಿಕೊಂಡಿದೆ.
ಲೆಬನಾನ್‌ನಾದ್ಯಂತ ಮಾರಣಾಂತಿಕ ವಾಯುದಾಳಿಗಳು, ದಕ್ಷಿಣದಲ್ಲಿ ನಾಗರಿಕರ ಮೇಲೆ ಗುಂಡು ಹಾರಿಸುವುದು ಮತ್ತು ರಾಜಧಾನಿ ಬೈರುತ್ ಸೇರಿದಂತೆ ಲೆಬನಾನಿನ ವಾಯುಪ್ರದೇಶದಲ್ಲಿ ಡ್ರೋನ್, ಜೆಟ್‌ಗಳನ್ನು ಹಾರಿಸುವ ಮೂಲಕ ಇಸ್ರೇಲ್ ಕದನ ವಿರಾಮ ಉಲ್ಲಂಘಿಸಿದೆ ಎಂದು ಹಿಜ್ಬುಲ್ಲಾ ಆರೋಪಿಸಿದೆ.
ದಾಳಿ ನಿಲ್ಲಿಸುವಂತೆ ಸಂಬಂಧಿ ಅಧಿಕಾರಿಗಳು ಮನವಿ ಮಾಡಿದರೂ, ಇಸ್ರೇಲ್ ಸುಮ್ಮನಾಗಲಿಲ್ಲ. ಹಾಗಾಗಿ, ನಾವು ಪ್ರತಿಕ್ರಿಯೆ ನೀಡಬೇಕಾಗಿ ಬಂದು ಎಂದು ಹಿಜ್ಬುಲ್ಲಾ ತಿಳಿಸಿದೆ.
ಆದರೆ, ಹಿಜ್ಬಲ್ಲಾ ಪ್ರತಿಕ್ರಿಯೆ ಇಸ್ರೇಲ್ ಕಡೆಯಿಂದ ಇನ್ನಷ್ಟು ದಾಳಿಗಳನ್ನು ಪ್ರೇರೇಪಿಸಿದ್ದಲ್ಲದೆ ಜೀವ ಹಾನಿಗೆ ಕಾರಣವಾಗಿದೆ. ಇಸ್ರೇಲ್ ಸರಣಿ ದಾಳಿಗಳನ್ನು ನಡೆಸಿ ಇದು ನಮ್ಮ ತೀಕ್ಣ ಪ್ರತಿಕ್ರಿಯೆ ಎಂದಿದೆ.
ಇಸ್ರೇಲ್ ಮತ್ತು ಹಿಬ್ಜುಲ್ಲಾ ನಡುವೆ ಕದನ ವಿರಾಮ ಘೋಷಣೆಯಾದ ಬಳಿಕ, ಮನೆ ಬಿಟ್ಟು ದೂರದ ಊರುಗಳಿಗೆ ತೆರಳಿದ್ದ ಬೈರೂತ್ ಸೇರಿದಂತೆ ಲೆಬನಾನ್‌ನ ವಿವಿಧ ಭಾಗಗಳ ಜನರು ಮರಳಿ ಬಂದಿದ್ದರು. ಈಗ ಸಂಘರ್ಷ ಮತ್ತೆ ಉಲ್ಬಣಿಸಿದ್ದರಿಂದ ಅವರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
ಇದನ್ನೂ ಓದಿ : ‘ದೇಶದ ಸೌಹಾರ್ದತೆ ದುರ್ಬಲವಾಗಿಲ್ಲ’ | ಹೋರಾಟಗಾರ ನದೀಮ್ ಖಾನ್ ಬಂಧನ ಪ್ರಕರಣದ ವಿಚಾರಣೆ ವೇಳೆ ದೆಹಲಿ ಪೊಲೀಸರಿಗೆ ಹೈಕೋರ್ಟ್ ತಪರಾಕಿ


