Homeಅಂತರಾಷ್ಟ್ರೀಯಯೆಮೆನ್ ಮೇಲೆ ಇಸ್ರೇಲ್ ವಾಯುದಾಳಿ: 35 ಜನರು ಸಾವು

ಯೆಮೆನ್ ಮೇಲೆ ಇಸ್ರೇಲ್ ವಾಯುದಾಳಿ: 35 ಜನರು ಸಾವು

- Advertisement -
- Advertisement -

ಕತಾರ್ ರಾಜಧಾನಿ ದೋಹಾದಲ್ಲಿ ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಒಂದು ದಿನದ ನಂತರ, ಯೆಮೆನ್ ರಾಜಧಾನಿ ಸನಾ ಮತ್ತು ಅಲ್-ಜಾಫ್ ಗವರ್ನರೇಟ್‌ ವ್ಯಾಪ್ತಿಯಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಿಂದ ಕನಿಷ್ಠ 35 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಲ್-ಜಝೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸನಾ ಮತ್ತು ಅಲ್-ಜಾಫ್ ಮೇಲೆ ಇಸ್ರೇಲ್ ನಡೆಸಿದ ಆಕ್ರಮಣದಲ್ಲಿ 131 ಜನರು ಗಾಯಗೊಂಡಿದ್ದಾರೆ ಎಂದು ಯೆಮೆನ್ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಇದು ಪ್ರಾಥಮಿಕ ಅಂಕಿ ಅಂಶಗಳಾಗಿವೆ, ರಕ್ಷಣಾ ತಂಡಗಳು ಬಲಿಪಶುಗಳಿಗಾಗಿ ಹುಡುಕಾಟ ಮುಂದುವರಿಸುವುದರಿಂದ ಸಾವು-ನೋವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದೆ.

ರಾಜಧಾನಿ ಸನಾದ ಅಲ್-ತಹ್ರಿರ್ ಪ್ರದೇಶ ಮತ್ತು ಸುತ್ತಮುತ್ತಲಿನ ಮನೆಗಳು, ನಗರದ ನೈಋತ್ಯದಲ್ಲಿರುವ 60ನೇ ಬೀದಿಯಲ್ಲಿರುವ ವೈದ್ಯಕೀಯ ಸೌಲಭ್ಯ ಅಥವಾ ಆಸ್ಪತ್ರೆ ಮತ್ತು ಅಲ್-ಜಾಫ್ ಗವರ್ನರೇಟ್‌ನ ರಾಜಧಾನಿ ಅಲ್-ಹಝ್ಮ್‌ನಲ್ಲಿರುವ ಸರ್ಕಾರಿ ಕಚೇರಿಗಳು ಸೇರಿದಂತೆ ನಾಗರಿಕ ಮತ್ತು ವಸತಿ ಪ್ರದೇಶಗಳ ಮೇಲೆ ದಾಳಿಗಳು ನಡೆದಿವೆ ಎಂದು ಸಚಿವಾಲಯ ತಿಳಿಸಿದೆ.

ಬಾಂಬ್ ದಾಳಿಯಿಂದ ಉಂಟಾದ ಬೆಂಕಿಯನ್ನು ನಂದಿಸಲು ಮತ್ತು ಅವಶೇಷಗಳಡಿಯಿಂದ ಬದುಕುಳಿದವರನ್ನು ಹೊರತೆಗೆಯಲು ನಾಗರಿಕ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿವೆ ಎಂದು ಸಚಿವಾಲಯ ಹೇಳಿದೆ.

ಹೌತಿ ನಡೆಸುತ್ತಿರುವ ಅಲ್ ಮಸಿರಾ ಟಿವಿಯ ಪ್ರಕಾರ, ನೈಋತ್ಯ ಸನಾದಲ್ಲಿನ ವೈದ್ಯಕೀಯ ಸೌಲಭ್ಯ ಮತ್ತು ಅಲ್-ಹಝ್ಮ್‌ನಲ್ಲಿರುವ ಸ್ಥಳೀಯ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.

“ನೈತಿಕ ಮಾರ್ಗದರ್ಶನ ಪ್ರಧಾನ ಕಚೇರಿ’ಯ ಮೇಲಿನ ದಾಳಿಯ ಪರಿಣಾಮವಾಗಿ ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ, ಮನೆಗಳು ಹಾನಿಗೊಳಗಾಗಿವೆ” ಎಂದು ಅಲ್ ಮಸಿರಾ ಟಿವಿ ಬುಧವಾರ ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ.

ಹಾನಿಯ ಒಟ್ಟು ಪ್ರಮಾಣ ಅಥವಾ ನಷ್ಟ ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಇಸ್ರೇಲಿ ಜೆಟ್‌ಗಳು ಸನಾದ ಅಲ್-ಸಿತ್ತೀನ್ ಸ್ಟ್ರೀಟ್‌ನಲ್ಲಿರುವ ವೈದ್ಯಕೀಯ ಕೇಂದ್ರವನ್ನು ಗುರಿಯಾಗಿಸಿಕೊಂಡಿತ್ತು ಎಂದು ಯೆಮೆನ್ ತೈಲ ಮತ್ತು ಅನಿಲ ನಿಗಮ ಹೇಳಿದೆ.

ಇಸ್ರೇಲಿ ದಾಳಿಗೆ ಪ್ರತಿಯಾಗಿ ನಮ್ಮ ವಾಯು ರಕ್ಷಣಾ ಪಡೆಗಳು ಕ್ಷಿಪಣಿಗಳ ಮೂಲಕ ಪ್ರತಿಕ್ರಿಯೆ ನೀಡಿದೆ. ಕೆಲ ಇಸ್ರೇಲಿ ವಿಮಾನಗಳು ದಾಳಿ ನಡೆಸುವ ಮೊದಲೇ ಅವುಗಳನ್ನು ಹಿಮ್ಮೆಟ್ಟಿಸಿದ್ದೇವೆ. ಈ ಮೂಲಕ ಇಸ್ರೇಲ್‌ನ ಉದ್ದೇಶಿತ ಆಕ್ರಮಣವನ್ನು ವಿಫಲಗೊಳಿಸಿದ್ದೇವೆ ಎಂದು ಹೌತಿ ಮಿಲಿಟರಿ ವಕ್ತಾರ ಯಾಹ್ಯಾ ಸಾರಿ ಹೇಳಿದ್ದಾರೆ.

ಇಸ್ರೇಲ್ ಸೇನೆಯು ದಾಳಿಯನ್ನು ದೃಢಪಡಿಸಿದ್ದು, ಸನಾ ಮತ್ತು ಅಲ್-ಜಾಫ್‌ನ ಪ್ರದೇಶಗಳ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದೆ.

ಕೆಲವು ದಿನಗಳ ಹಿಂದೆ ಇಸ್ರೇಲ್‌ನ ರಾಮನ್ ವಿಮಾನ ನಿಲ್ದಾಣದ ಮೇಲೆ ಹೌತಿ ಬಂಡುಕೋರರು ನಡೆಸಿದ ಡ್ರೋನ್ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

“ನಾವು ದಾಳಿಯನ್ನು ಮುಂದುವರೆಸುತ್ತೇವೆ. ನಮ್ಮ ಮೇಲೆ ದಾಳಿ ನಡೆಸುವ ಯಾರೇ ಆಗಿರಲಿ, ಅವರ ಮೇಲೆ ದಾಳಿ ನಡೆಸುತ್ತೇವೆ” ಎಂದು ನೆತನ್ಯಾಹು ಬೆದರಿಕೆ ಹಾಕಿದ್ದಾರೆ.

ಪ್ರಮುಖ ವಿಮಾನ ನಿಲ್ದಾಣ ಸೇರಿದಂತೆ ಯೆಮೆನ್ ಮೇಲೆ ಪದೇ ಪದೇ ಇಸ್ರೇಲ್ ಬಾಂಬ್ ದಾಳಿ ನಡೆಸುತ್ತಿವೆ. ಯುದ್ಧಪೀಡಿತ ದೇಶದಲ್ಲಿ ನಾಗರಿಕರನ್ನು ಕೊಂದು ಮೂಲಸೌಕರ್ಯಗಳಿಗೆ ಹಾನಿ ಮಾಡಿದೆ. ಕಳೆದ ತಿಂಗಳು, ಇಸ್ರೇಲ್ ವಾಯುದಾಳಿಯಲ್ಲಿ ಹೌತಿ ಆಡಳಿತದ ಪ್ರಧಾನಿ ಅಹ್ಮದ್ ಅಲ್-ರಹಾವಿ ಸೇರಿದಂತೆ ಉನ್ನತ ಯೆಮೆನ್ ಅಧಿಕಾರಿಗಳನ್ನು ಹತ್ಯೆಯಾಗಿದ್ದರು.

ಗಾಝಾಗೆ ಬೆಂಬಲ ನೀಡದಂತೆ ಇಸ್ರೇಲ್ ನಮ್ಮ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದೆ. ನಾವು ಗಾಝಾ ಮೇಲಿನ ಜನಾಂಗೀಯ ಯುದ್ಧ ನಿಲ್ಲುವವರೆಗೂ ಇಸ್ರೇಲ್ ವಿರುದ್ಧದ ಕಾರ್ಯಾಚರಣೆ ನಡೆಸುತ್ತೇವೆ ಎಂದು ಹೌತಿ ಮಿಲಿಟರಿ ವಕ್ತಾರ ಯಾಹ್ಯಾ ಸಾರಿ ಪ್ರತಿಜ್ಞೆ ಮಾಡಿದ್ದಾರೆ.

ಹೌತಿ ಗುಂಪು ಕೆಂಪು ಸಮುದ್ರದ ಮೂಲಕ ಹಾದುಹೋಗುವ ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ಸಮುದ್ರ ದಿಗ್ಬಂಧನವನ್ನು ವಿಧಿಸಿದೆ ಮತ್ತು ಪ್ಯಾಲೆಸ್ತೀನಿಯರ ಜೊತೆ ಒಗ್ಗಟ್ಟು ಪ್ರದರ್ಶಿಸಿ ಇಸ್ರೇಲ್ ವಿರುದ್ಧ ವಾಯು ದಾಳಿಗಳನ್ನು ನಡೆಸಿದೆ.

23 ತಿಂಗಳ ನಿರಂತರ ಇಸ್ರೇಲಿ ಬಾಂಬ್ ದಾಳಿಯಿಂದ ನಾಶವಾದ ಗಾಝಾದಲ್ಲಿ ಕದನ ವಿರಾಮಕ್ಕೆ ಒಪ್ಪಿಗೆಯಾದಾಗ ಇಸ್ರೇಲ್ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸುವುದಾಗಿ ಹೌತಿಗಳು ಹೇಳಿದ್ದಾರೆ. 2023ರ ಅಕ್ಟೋಬರ್‌ನಲ್ಲಿ ಇಸ್ರೇಲ್ ಗಾಝಾ ಮೇಲೆ ದಾಳಿ ಪ್ರಾರಂಭಿಸಿದಾಗಿನಿಂದ 64,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಕೊಲ್ಲಲ್ಪಟ್ಟಿದ್ದಾರೆ.

ನೇಪಾಳ: ಹಿಂಸಾಚಾರದ ನಂತರ ಸೇನೆ ಪ್ರವೇಶ; ದೇಶಾದ್ಯಂತ ನಿಷೇಧಾಜ್ಞೆ ಮತ್ತು ಕರ್ಫ್ಯೂ ಘೋಷಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -