ಗಾಝಾ ನಗರವನ್ನು ತನ್ನ ವಶಕ್ಕೆ ಪಡೆಯಲು ಇಸ್ರೇಲ್ ಮುಂದಾಗಿದ್ದು, ಇದರ ಆರಂಭಿಕ ಹಂತವಾಗಿ ಪ್ಯಾಲೆಸ್ತೀನಿಯರನ್ನು ಯುದ್ದ ವಲಯಗಳಿಂದ (ತಮ್ಮ ಸ್ವಂತ ಊರುಗಳಿಂದ) ದಕ್ಷಿಣ ಗಾಝಾಗೆ ಬಲವಂತವಾಗಿ ಸ್ಥಳಾಂತರಿಸುವ ಸಿದ್ದತೆಯನ್ನು ಭಾನುವಾರ (ಆ.17) ಪ್ರಾರಂಭಿಸಿದೆ.
ಇಸ್ರೇಲ್ ಸೇನೆಯ ಅರೇಬಿಕ್ ಭಾಷೆಯ ವಕ್ತಾರ ಅವಿಚಾಯ್ ಅಡ್ರೇ ಶನಿವಾರ, ಗಾಝಾ ನಿವಾಸಿಗಳಿಗೆ ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಪರಿಹಾರ ಸಂಸ್ಥೆಗಳು ಕರೀಂ ಅಬೂ ಸಲೀಂ ಅಥವಾ ಕೆರೆಮ್ ಶಾಲೋಮ್ ಮೂಲಕ ಸಾಗಿಸುವ ಟೆಂಟ್‌ಗಳು ಮತ್ತು ಇತರ ಆಶ್ರಯ ಉಪಕರಣಗಳನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.
ಜನರ ಸ್ಥಳಾಂತರ ಯೋಜನೆಯ ಬಗ್ಗೆ ಅಥವಾ ಮಾನವೀಯ ನೆರವು ನೀಡುವಲ್ಲಿ ಅದರ ಪಾತ್ರದ ಬಗ್ಗೆ ವಿಶ್ವಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಉಳಿದಿರುವ ಎರಡು ಹಮಾಸ್ ಭದ್ರಕೋಟೆಗಳಾದ ಉತ್ತರದಲ್ಲಿ ಗಾಝಾ ನಗರ ಮತ್ತು ದಕ್ಷಿಣಕ್ಕೆ ಅಲ್-ಮವಾಸಿಯನ್ನು ‘ಕೆಡವಲು’ ಸೇನೆಗೆ ಹಸಿರು ನಿಶಾನೆ ತೋರಲಾಗಿದೆ ಎಂದು ಘೋಷಿಸಿದ ಕೆಲ ದಿನಗಳಲ್ಲೇ ಜನರ ಬಲವಂತದ ಸ್ಥಳಾಂತರಕ್ಕೆ ಇಸ್ರೇಲ್ ಸೇನೆ ಮುಂದಾಗಿದೆ.
ಗಾಝಾ ನಗರದ ಜನಸಂಖ್ಯೆ ಪ್ರಸ್ತುತ ಸುಮಾರು ಒಂದು ಮಿಲಿಯನ್ ಎಂದು ಅಂದಾಜಿಸಲಾಗಿದೆ. ಅಷ್ಟೂ ಜನರಿಗೆ ಅಗತ್ಯ ವಸ್ತುಗಳನ್ನು ವಿತರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆಯೇ?..ದಕ್ಷಿಣ ಗಾಝಾದಲ್ಲಿ ಅವರನ್ನು ಸ್ಥಳಾಂತರಿಸುವ ಪ್ರದೇಶ ಯಾವುದು? ಈಜಿಪ್ಟ್ ಗಡಿಯ ಸಮೀಪವಿರುವ ರಫಾ ಪ್ರದೇಶವೇ? ಎಂದು ಇಸ್ರೇಲ್ ಸೇನೆ ಸ್ಪಷ್ಟಪಡಿಸಿಲ್ಲ.
ಜನರನ್ನು ಬಲವಂತವಾಗಿ ಸ್ಥಳಾಂತರಿಸಲು ಮುಂದಾಗಿರುವ ಇಸ್ರೇಲ್‌ನ ಯೋಜನೆಯ ಬಗ್ಗೆ ವಿಶ್ವಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಕಳೆದ ಗುರುವಾರ ಈ ಯೋಜನೆಯ ಬಗ್ಗೆ ಪ್ರತಿಕ್ರಿಯಿಸಿದ್ದ ವಿಶ್ವಸಂಸ್ಥೆ, ಇಸ್ರೇಲ್ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಿದರೆ, ದಕ್ಷಿಣ ಗಾಝಾದಲ್ಲಿ ಪರಿಸ್ಥಿತಿ ಇನ್ನಷ್ಟು ಶೋಚಣೀಯವಾಗಲಿದೆ ಎಂದು ಎಚ್ಚರಿಸಿದೆ.
ಹಮಾಸ್‌ನ ಮಿತ್ರ ಸಂಘಟನೆಯಾದ ‘ಇಸ್ಲಾಮಿಕ್ ಜಿಹಾದ್’ ಇಸ್ರೇಲ್ ಸೇನೆಯ ಘೋಷಣೆಯನ್ನು “ಗಾಝಾ ನಗರವನ್ನು ಆಕ್ರಮಿಸಿಕೊಳ್ಳುವ ಕ್ರೂರ ದಾಳಿಯ ಭಾಗ ಮತ್ತು ಅಂತಾರಾಷ್ಟ್ರೀಯ ಸಂಪ್ರದಾಯಗಳ ಸ್ಪಷ್ಟ ಮತ್ತು ನಿರ್ಲಜ್ಜ ಅಪಹಾಸ್ಯ” ಎಂದು ಬಣ್ಣಿಸಿದೆ.
“ಹಸಿವು, ಹತ್ಯಾಕಾಂಡ ನಡುವೆ ಜನರು ಪಲಾಯನ ಮಾಡುವಂತೆ ಒತ್ತಾಯಿಸುವುದು ಮಾನವೀಯತೆಯ ವಿರುದ್ಧ ನಡೆಯುತ್ತಿರುವ ಅಪರಾಧವಾಗಿದೆ. ಗಾಝಾದಲ್ಲಿ ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ದೈನಂದಿನ ನಡೆಯುತ್ತಿರುವ ಆಕ್ರಮಣ ಒಂದೇ ರೀತಿಯದ್ದು ಎಂದು ಇಸ್ಲಾಮಿಕ್ ಜಿಹಾದ್ ಹೇಳಿಕೆಯಲ್ಲಿ ತಿಳಿಸಿದೆ.
ಅಕ್ಟೋಬರ್ 7, 2023ರಿಂದ ಇದುವರೆಗೆ ಗಾಝಾದಲ್ಲಿ ಇಸ್ರೇಲ್ ನಡೆಸಿದ ಆಕ್ರಮಣದಿಂದ ಸಾವಿಗೀಡಾದವರ ಅಂದಾಜು ಸಂಖ್ಯೆ 61,827ಕ್ಕೆ ಏರಿಕೆಯಾಗಿದ್ದು, ಗಾಝಾದ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಹಸಿವು, ಅಪೌಷ್ಟಿಕತೆಯಿಂದ ಇದುವರೆಗೆ 251 ಜನರು ಸಾವನ್ನಪ್ಪಿದ್ದಾರೆ.
ಮೇ ಅಂತ್ಯದಿಂದ ಗಾಝಾದ ನೆರವು ಕೇಂದ್ರಗಳಲ್ಲಿ ಕನಿಷ್ಠ 1,760 ಜನರನ್ನು ಇಸ್ರೇಲ್ ಹತ್ಯೆ ಮಾಡಿದೆ: ವಿಶ್ವಸಂಸ್ಥೆ


