ಇಸ್ರೇಲ್ ಸೇನೆಯ ಆಕ್ರಮಣದಿಂದ ತಮ್ಮ ತಾಯ್ನಾಡನ್ನು ರಕ್ಷಿಸಿಕೊಳ್ಳಲು ಹೋರಾಡುತ್ತಿರುವ ಪ್ಯಾಲೆಸ್ತೀನಿಯರ ಕುರಿತಾದ ‘ನೋ ಅದರ್ ಲ್ಯಾಂಡ್’ ಚಿತ್ರ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿದೆ.
ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯನ್ ಹೋರಾಟಗಾರರು ಹಾಗೂ ಚಲನಚಿತ್ರ ನಿರ್ಮಾಪಕರಾದ ಬಾಸೆಲ್ ಅದ್ರಾ, ಯುವಲ್ ಅಬ್ರಹಾಂ, ರಾಚೆಲ್ ಸ್ಜೋರ್ ಮತ್ತು ಹಮ್ದನ್ ಬಲ್ಲಾಲ್ ಅವರನ್ನು ಒಳಗೊಂಡ ಚಿತ್ರ ತಂಡವು, 97ನೇ ಅಕಾಡೆಮಿ ಅವಾರ್ಡ್‌ನಲ್ಲಿ ಪೋರ್ಸಲೇನ್ ವಾರ್, ಶುಗರ್ಕೇನ್, ಬ್ಲ್ಯಾಕ್ ಬಾಕ್ಸ್ ಡೈರೀಸ್ ಮತ್ತು ಸೌಂಡ್‌ಟ್ರ್ಯಾಕ್ ಟು ಎ ಕಪ್ ಡಿ’ಎಟಾಟ್ ಚಿತ್ರಗಳ ಜೊತೆಗಿನ ಸ್ಪರ್ಧೆಯಲ್ಲಿ ಭಾನುವಾರ (ಮಾ.2) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.
2019 ಮತ್ತು 2023ರ ನಡುವೆ ‘ನೋ ಅದರ್ ಲ್ಯಾಂಡ್’ ಚಿತ್ರವನ್ನು ನಿರ್ಮಿಸಲಾಗಿದೆ. ಆ ಬಳಿಕ ನಿರ್ದೇಶಕರ ಪೈಕಿ ಒಬ್ಬರಾದ ಬೇಸಲ್ ಅದ್ರಾ ಅವರು ಬಂಧನ ಭೀತಿ ಎದುರಿಸುತ್ತಿದ್ದರು. ಬೇಸಲ್ ಅದ್ರಾ ಅವರ ಹುಟ್ಟೂರು ಮಸಾಫರ್ ಯಟ್ಟಾವನ್ನು ಇಸ್ರೇಲ್ ಸೈನಿಕರು ಆಕ್ರಮಿಸಿಕೊಂಡು ಪಶ್ಚಿಮ ದಂಡೆಯ ದಕ್ಷಿಣ ತುದಿಯನ್ನು ಮಿಲಿಟರಿ ತರಬೇತಿ ವಲಯವಾಗಿ ನಿರ್ಮಿಸಲು ಮುಂದಾಗಿದ್ದ ಬಗ್ಗೆ ಚಿತ್ರ ಗಮನ ಸೆಳೆದಿತ್ತು.
ಆದ್ರಾ ಅವರು ಯಹೂದಿ-ಇಸ್ರೇಲಿ ಪತ್ರಕರ್ತ ಯುವಲ್ ಅಬ್ರಹಾಂ ಜೊತೆ ಸ್ನೇಹ ಬೆಳೆಸುವವರೆಗೂ ಅವರ ಧ್ವನಿಯನ್ನು ಕೇಳುವವರು ಇರಲಿಲ್ಲ. ಪತ್ರಕರ್ತ ಯುವಲ್ ಅಬ್ರಹಾಂ ಜೊತೆ ಸ್ನೇಹ ಬೆಳೆಸಿದ ನಂತರ, ಅವರು ಆದ್ರಾ ಅವರ ಕಥೆಯನ್ನು ಹೊರ ಜಗತ್ತಿಗೆ ತಿಳಿಸಲು ಸಹಾಯ ಮಾಡುತ್ತಾರೆ.
ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಆದ್ರಾ, ‘ನೋ ಅದರ್ ಲ್ಯಾಂಡ್’ ಪ್ಯಾಲೆಸ್ತೀನಿಯರು ದಶಕಗಳಿಂದ ಅನುಭವಿಸುತ್ತಿರುವ ಕಠೋರ ವಾಸ್ತವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
“ಎರಡು ತಿಂಗಳ ಹಿಂದೆಯಷ್ಟೇ ನಾನು ತಂದೆಯಾದೆ. ನನ್ನ ಮಗಳು ನಾನು ಈಗ ಬದುಕುತ್ತಿರುವಂತೆ ಬದುಕಬಾರದು ಎಂಬ ಆಶಯವನ್ನು ಹೊಂದಿದ್ದೇನೆ. ಈಗ ಪ್ರತಿದಿನ ವಸಾಹತುಗಾರರು, ಹಿಂಸಾಚಾರ ಮಾಡುತ್ತಿದ್ದಾರೆ, ಮನೆಗಳನ್ನು ಉರುಳಿಸುತ್ತಿದ್ದಾರೆ. ಬಲವಂತದಿಂದ ಸ್ಥಳಾಂತರ ಮಾಡುತ್ತಿದ್ದಾರೆ. ನನ್ನ ಸಮುದಾಯ ಇಸ್ರೇಲ್ ಆಕ್ರಮಣವನ್ನು ಎದುರಿಸಿಕೊಂಡೇ ಪ್ರತಿದಿನ ವಾಸಿಸುತ್ತಿದೆ ಮತ್ತು ಅನುಭವಿಸುತ್ತಿದೆ” ಎಂದು ಆದ್ರಾ ಹೇಳಿದ್ದಾರೆ.
“ಪ್ಯಾಲೆಸ್ತೀನಿಯನ್ ಜನರ ಮೇಲಿನ ಅನ್ಯಾಯ ಮತ್ತು ಜನಾಂಗೀಯ ನಿರ್ಮೂಲನೆಯನ್ನು ನಿಲ್ಲಿಸಲು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುವಂತೆ” ಅವರು ಜಗತ್ತಿಗೆ ಕರೆ ನೀಡಿದ್ದಾರೆ.
Incredible moment when Israel's occupation, Israel's apartheid, and Israel's destruction of Gaza are called out at the Oscars!
Thank you @basel_adra & @yuval_abraham for your powerful voices.#Oscars #Oscars2025 pic.twitter.com/gEuAOd59nx
— Omar Baddar عمر بدّار (@OmarBaddar) March 3, 2025
ಪ್ಯಾಲೆಸ್ತೀನಿಯರ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗಿರುವ ಸಾಕ್ಷ್ಯಚಿತ್ರದ ಕುರಿತು ಮಾತನಾಡಿದ ಇಸ್ರೇಲ್ ಪತ್ರಕರ್ತ ಯುವಲ್ ಅಬ್ರಹಾಂ, “ಪ್ಯಾಲೆಸ್ತೀನಿಯರು ಹಾಗೂ ಇಸ್ರೇಲಿಗರಾದ ನಾವು ಈ ಚಿತ್ರವನ್ನು ಒಟ್ಟಾಗಿ ನಿರ್ಮಿಸಿದ್ದೇವೆ. ಕಾರಣ, ನಮ್ಮ ಧ್ವನಿಗಳು ಶಕ್ತಿಶಾಲಿಯಾಗಿವೆ. ಅಂತ್ಯಗೊಳ್ಳಲೇಬೇಕಾದ ಗಾಝಾ ಹಾಗೂ ಅಲ್ಲಿನ ಜನರ ವಿನಾಶವನ್ನು ನಾವಿಬ್ಬರೂ ನೋಡುತ್ತಿದ್ದೇವೆ. ಅಕ್ಟೋಬರ್ 7ರಂದು ಅತ್ಯಂತ ಅಮಾನುಷವಾಗಿ ಒತ್ತೆಯಾಳುಗಳನ್ನಾಗಿಸಿಕೊಳ್ಳಲಾಗಿರುವ ಇಸ್ರೇಲ್ ಪ್ರಜೆಗಳನ್ನು ಕೂಡ ಬಿಡುಗಡೆ ಮಾಡಲೇಬೇಕು” ಎಂದಿದ್ದಾರೆ.
ತಮ್ಮಿಬ್ಬರ ನಡುವಿನ ಅಸಮಾನತೆಯ ಮೇಲೂ ಬೆಳಕು ಚೆಲ್ಲಿದ ಅಬ್ರಹಾಂ, “ನಾನು ನಾಗರಿಕ ಕಾನೂನುಗಳಿರುವ ಪ್ರಭುತ್ವದಡಿ ಸ್ವತಂತ್ರವಾಗಿ ಜೀವಿಸುತ್ತಿದ್ದರೆ, ತನ್ನ ಜೀವನವನ್ನು ನಾಶಗೊಳಿಸಿದ ಹಾಗೂ ಅದನ್ನು ತನ್ನಿಂದ ತಡೆಯಲಾಗದ ಆದ್ರಾ ಸೇನಾ ಕಾನೂನುಗಳ ಆಡಳಿತದಡಿ ಜೀವಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಈ ಬಿಕ್ಕಟ್ಟಿಗೆ ಭಿನ್ನ ದಾರಿಯಿದ್ದು, ಜನಾಂಗೀಯ ಮೇಲರಿಮೆಯಿಲ್ಲದ, ಎರಡೂ ಕಡೆಯ ಜನರಿಗೆ ರಾಷ್ಟ್ರೀಯ ಹಕ್ಕುಗಳಿರುವ ರಾಜಕೀಯ ಪರಿಹಾರ ಸಾಧ್ಯವಿದೆ” ಎಂದೂ ಅವರು ಸಲಹೆ ನೀಡಿದ್ದಾರೆ.
ಅಮೆರಿಕ ವಿದೇಶಾಂಗ ನೀತಿಯನ್ನೂ ಟೀಕಿಸಿದ ಅಬ್ರಹಾಂ, “ಆದ್ರಾ ಅವರ ಜನರಿಗೆ ನೈಜ ಸ್ವಾತಂತ್ರ್ಯ ದೊರೆತಾಗ ಮಾತ್ರ ನಾವು ಸುರಕ್ಷಿತ ಎಂಬಂತೆ ನಾವಿಬ್ಬರೂ ಪರಸ್ಪರ ಬೆಸೆದುಕೊಂಡಿರುವುದು ನಿಮಗೇಕೆ ಕಾಣುತ್ತಿಲ್ಲ?” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಈ ಸಾಕ್ಷ್ಯಚಿತ್ರವನ್ನು ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಾಲ್ವರು ಹೋರಾಟಗಾರರು ಒಟ್ಟಾಗಿ ನಿರ್ಮಿಸಿದ್ದು, ಸದ್ಯ ಮುಂದುವರಿದಿರುವ ಪ್ರಾಂತೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ನ್ಯಾಯಕ್ಕಾಗಿ ತೋರುವ ಪ್ರತಿರೋಧದ ಕ್ರಿಯೆಯನ್ನು ಈ ಸಾಕ್ಷ್ಯಚಿತ್ರ ಮಂಡಿಸುತ್ತದೆ.
ಬರ್ಲಿನ್ 74ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ‘ನೋ ಅದರ್ ಲ್ಯಾಂಡ್’ ಆಯ್ಕೆಯಾಗಿತ್ತು. ಫೆಬ್ರವರಿ 14, 2024ರಂದು ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ಈ ಸಾಕ್ಷ್ಯಚಿತ್ರವು, ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪನೋರಮಾ ಪ್ರೇಕ್ಷಕರ ಪ್ರಶಸ್ತಿ ಹಾಗೂ ಬರ್ಲಿನ್ ಸಾಕ್ಷ್ಯಚಿತ್ರ ಪ್ರಶಸ್ತಿಗೆ ಭಾಜನವಾಗಿತ್ತು.


