ಕಳೆದ ಮೇ ತಿಂಗಳಿನಲ್ಲಿ ಹನ್ನೊಂದು ದಿನದ ಕಾಲ ಗಾಜಾ ವಿರುದ್ಧ ನಡೆದ ಏಕಪಕ್ಷೀಯ ಇಸ್ರೇಲಿನ ಕ್ರೌರ್ಯದ ನಂತರದ ಇದೇ 13ನೇ ತಾರೀಕು ಇಸ್ರೇಲಿನಲ್ಲಿ ಹೊಸ ಮೈತ್ರಿಕೂಟ ರಚನೆಯಾಗಿದೆ. ಜೂನ್ ತಿಂಗಳ 13ನೇ ತಾರೀಕು ಇಸ್ರೇಲಿನ ನೂತನ ಪ್ರಧಾನಮಂತ್ರಿಯಾಗಿ ನಫ್ತಾಲಿ ಬೆನೆಟ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರಿಂದ ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಪ್ರಧಾನಿಯಾಗಿದ್ದ ಬೆಂಜಮಿನ್ ನೇತನ್ಯಾಹು ತಮ್ಮ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಬೆಂಜಮಿನ್ ನೇತನ್ಯಾಹು ಅವರ ದೀರ್ಘ ಮತ್ತು ವಿಭಜಕ ಆಳ್ವಿಕೆಯು ಅಧಿಕೃತವಾಗಿ ಕೊನೆಗೊಂಡಿದೆ. ಆದರೆ, ವ್ಯಾಪಕವಾಗಿ ವಿಭಿನ್ನವಾದ ಸಿದ್ಧಾಂತಗಳನ್ನು ಹೊಂದಿರುವ ನೇತನ್ಯಾಹು ವಿರೋಧಿ ಪಡೆಗಳಿಂದ ಒಟ್ಟಿಗೆ ಸೇರಿಸಲ್ಪಟ್ಟ ಒಂದು ಅನಿಶ್ಚಿತ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಯೆಶ್ ಅತಿದ್ ಲ್ಯಾಪಿಡಾ, ಯಮಿನಾ ಪಕ್ಷ, ಕಹೋಲ್-ಲವನ್ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್, ಅವರ್ ಹೋಂ ಇಸ್ರೇಲ್‌ನ ಅವಿಗ್ಡೋರ್ ಲೈಬರ್ಮನ್, ನ್ಯೂ ಹೋಪ್, ಎಡಪಂಥೀಯ ಪಕ್ಷಗಳಾದ ಲೇಬರ್, ಮೆರೆಟ್ಜ್ ಮತ್ತು ಅರೇಬಿಕ್ “ರಾಮ್” ಎಂಬ ಒಟ್ಟು ಎಂಟು ಪಕ್ಷಗಳು ಸೇರಿ ಈ ಮೈತ್ರಿಕೂಟವನ್ನು ರಚಿಸಿವೆ.
ಕಳೆದ ಹನ್ನೆರಡು ವರ್ಷಗಳಿಂದ, ಅದರಲ್ಲೂ ಮುಖ್ಯವಾಗಿ ಕಳೆದ ಎರಡು ವರ್ಷಗಳಿಂದ ಒಂದಲ್ಲ ಒಂದು ರೀತಿಯಿಂದ ಅನಿಶ್ಚಿತತೆಯಿಂದ, ಯುದ್ಧದಾಹಿ, ಭ್ರಷ್ಟಾಚಾರಗಳಲ್ಲಿ ಸಿಲುಕಿದ್ದ ಪ್ಯಾಲೆಸ್ಟೇನಿಯನ್ನರ ಮೇಲೆ ನಿರಂತರ ಕ್ರೌರ್ಯವನ್ನು ನಡೆಸಿಕೊಂಡೇ ಸಮ್ಮಿಶ್ರ ಸರ್ಕಾರವನ್ನು ನೇತನ್ಯಾಹು ಮುನ್ನಡೆಸಿದ್ದರು. ಇರಾನ್ ವಿರುದ್ಧ ಯುದ್ಧಕ್ಕಾಗಿ ಪರಿತಪಿಸುತ್ತಿದ್ದ ನೇತನ್ಯಾಹು ಪ್ರಾದೇಶಿಕ ಅಸ್ಥಿರತೆ ಮತ್ತು ಬಿಕ್ಕಟ್ಟನ್ನು ಇನ್ನಷ್ಟು ವಿಸ್ತರಿಸಿದರು. ಒಬಾಮ ಮತ್ತು ಟ್ರಂಪ್ ಅಧಿಕಾರದ ಅವಧಿಯಲ್ಲಿ ಗಾಜಾ, ಜೆರುಸಲೆಮ್ ಮತ್ತು ವೆಸ್ಟ್ ಬ್ಯಾಂಕ್‌ನ ತನ್ನ ಸೆಟ್ಟ್ಲರ್ ಕಾಲೋನಿಯಲಿಸಂಅನ್ನು (ಅಂತಾರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವಾಗಿ ಪ್ಯಾಸ್ಟೇನಿಯನ್ನರ ಭೂಪ್ರದೇಶವನ್ನು ಕಬಳಿಸಿಕೊಂಡು ಇಸ್ರೇಲಿ ಪ್ರದೇಶವನ್ನು ವಿಸ್ತರಿಸಿಕೊಳ್ಳುವುದು) ಇನ್ನಷ್ಟು ತೀವ್ರವಾಗಿ ಮುಂದುವರಿಸಲಾಯಿತು. ಟ್ರಂಪ್ ಅಧಿಕಾರದಲ್ಲಿ ಏಕಪಕ್ಷೀಯವಾಗಿ ಜೆರುಸಲೆಮ್‌ಅನ್ನು ಇಸ್ರೇಲಿನ ರಾಜಧಾನಿಯನ್ನಾಗಿ ಘೋಷಿಸಿಕೊಂಡು ಸಿರಿಯಾದಿಂದ ವಶಪಡಿಸಿಕೊಂಡಿದ್ದ ಪ್ರದೇಶ ಗೋಲನ್ ಹೈಟ್ಸ್‌ಅನ್ನು ತನ್ನದೆಂದು ಘೋಷಿಸಿಕೊಂಡರು. ಸಿರಿಯಾ ಯುದ್ಧದಲ್ಲಿ ಇಸ್ಲಾಮಿಕ್ ಸ್ಟೇಟ್ ಎಂಬ ಭಯೋತ್ಪಾದಕ ಶಕ್ತಿಗಳಿಗೆ ಕುಮ್ಮಕ್ಕು ಮತ್ತು ರಕ್ಷಣೆ ನೀಡುತ್ತಾ ಸಿರಿಯಾ ಮತ್ತು ಇರಾಕ್ ದೇಶದ ಮೇಲೆ ಈಗಲೂ ಕ್ಷಿಪಣಿ ಮತ್ತು ಯುದ್ಧ ವಿಮಾನಗಳ ಮೂಲಕ ದಾಳಿ ನಡೆಸುತ್ತಾ ಅಂತಾರಾಷ್ಟ್ರೀಯ ಕಾನೂನುಗಳನ್ನು ಗಾಳಿಗೆ ತೂರುತ್ತಿದೆ.

ನೇತನ್ಯಾಹು ಅಧಿಕಾರಾವಧಿಯಲ್ಲಿ ಒಟ್ಟು ನಾಲ್ಕು ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೇನಿಯರನ್ನು ಮಾರಣಹೋಮ ನಡೆದ ವರದಿಗಳಿವೆ. ಅದರಲ್ಲಿ 800ಕ್ಕೂ ಹೆಚ್ಚಿನ ಸಂಖ್ಯೆ ಮಕ್ಕಳದ್ದೇ. ಅಸಂಖ್ಯಾತ ಅನಾಥರನ್ನು ಸೃಷ್ಟಿಸಿರುವುದಲ್ಲದೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಾಶಗೊಳಿಸಲಾಗಿದೆ. ಕಳೆದ ತಿಂಗಳು ನೆಡೆದ ಗಾಜಾ ಮಾರಣಹೋಮದಲ್ಲಿ ಒಟ್ಟು 260ಕ್ಕೂ ಮೇಲ್ಪಟ್ಟ ಪ್ಯಾಸ್ಟೇನಿಯನ್ನರು ಹತರಾಗಿದ್ದಾರೆ. ಅದರಲ್ಲಿ 60ಕ್ಕೂ ಹೆಚ್ಚು ಮಕ್ಕಳೇ. ಅಂತಾರಾಷ್ಟ್ರೀಯ ಸುದ್ದಿವಾಹಿನಿಗ (ಅಲ್ ಜಜಿರಾ, ಅಸೋಸಿಯೇಟೆಡ್ ಪ್ರೆಸ್ ಸೇರಿ) ಹದಿನಾಲ್ಕು ಅಂತಸ್ತಿನ ಕಟ್ಟಡವನ್ನು ಧ್ವಂಸಗೊಳಿಸಿ, ಕಂಡುಕೇಳರಿಯದ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ನಿರಾಯುಧರಾದ ಪ್ಯಾಲೆಸ್ಟೇನಿಯನ್ನರ ಮೇಲೆ ಬಳಸಲಾಗಿದೆ. ಮಾರ್ಚ್ 23ರ ಚುನಾವಣೆ ನಂತರದ ಫಲಿತಂಶವನ್ನು ತಿಳಿದ ನೇತನ್ಯಾಹು, ಟ್ರಂಪ್ ಮಾಡಿದ ಹಾಗೆ ಚುನಾವಣಾ ಅಕ್ರಮದ ಬಗ್ಗೆ ಮಾತನಾಡತೊಡಗಿ ನಂತರ ಇಸ್ರೇಲ್‌ಅನ್ನು ಯುದ್ಧದೆಡೆಗೆ ಕೊಂಡೊಯ್ಯಲು ಪ್ರಯತ್ನಿಸಿ ಗಾಜಾ ಮೇಲೆ ಮೇ ತಿಂಗಳಿನಲ್ಲಿ ಆಕ್ರಮಣ ನಡೆಸಿದ.
“ನಾವು ಪ್ರಪಾತಕ್ಕೆ ಮುಂಚಿತವಾಗಿ ರೈಲನ್ನು ನಿಲ್ಲಿಸಿದ್ದೇವೆ” ಎಂದು ಹೇಳಿರುವ ನಫ್ತಾಲಿ ಬೆನೆಟ್ “ವಿವಿಧ ನಾಯಕರು, ಎಲ್ಲಾ ಭಾಗದ ಜನರು ಸೇರಿ, ಈ ಹುಚ್ಚುತನವನ್ನು ನಿಲ್ಲಿಸುವ ಸಮಯ ಬಂದಿದೆ” ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಈಗ ಅಧಿಕಾರಕ್ಕೆ ಬಂದಿರುವ ಒಕ್ಕೂಟ ತೀವ್ರ ಬಲಪಂಥೀಯ ಪಕ್ಷಗಳನ್ನೂ ಒಳಗೊಂಡು, ಮಧ್ಯ ಮತ್ತು ಎಡಪಕ್ಷಗಳನ್ನೂ ಒಳಗೊಂಡಿದೆ. ಈ ಸಮ್ಮಿಶ್ರ ಸರ್ಕಾರದ ಒಪ್ಪಂದದ ಪ್ರಕಾರ ಮೊದಲಾರ್ಧದಲ್ಲಿ ಯಮಿನ ಪಕ್ಷದ ಬೆನೆಟ್ ಪ್ರಧಾನಿಯಾದರೆ, ದ್ವಿತೀಯಾರ್ಧದಲ್ಲಿ ಹೇಳಿಕೊಳ್ಳಲು ಎಡವೂ ಅಲ್ಲದ ಬಲವೂ ಅಲ್ಲದ ಮಧ್ಯಮ ವಾದದ ಲಿಪಿಡ್ ಪ್ರಧಾನಿಯಾಗಿರುತ್ತಾರೆ. ಆದರೆ ಇರದಲ್ಲಿ ಪ್ರಶ್ನೆ ಬರುವುದೇ ಸ್ವತಃ ತೀವ್ರ ರಾಷ್ಟ್ರೀಯವಾದಿ ಮತ್ತು ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಎರಡು ರಾಷ್ಟ್ರ ಕಲ್ಪನೆಯ ವಿರುದ್ಧವಾಗಿರುವ ಪ್ರಧಾನಿ ನಫ್ತಾಲಿ ಬೆನೆಟ್ ನಿಲುವುಗಳು, ನೇತನ್ಯಾಹು ಅವರ ವಿಸ್ತಾರವಾದಿ ನೀತಿ-ನಿಲುವುಗಳಿಗಿಂತ ಹೇಗೆ ವಿಭಿನ್ನವಾಗಿರಲು ಸಾಧ್ಯ? 1967ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಿಂದ ಇಸ್ರೇಲ್‌ಗೆ ವಲಸೆ ಬಂದ ಅಮೆರಿಕನ್ ಪೋಷಕರಿಗೆ ಜನಿಸಿದ ಬೆನೆಟ್, ಬಲಪಂಥೀಯ ಅಲ್ಟ್ರಾ ನ್ಯಾಷನಲಿಸ್ಟ್ ಆಗಿದ್ದು, ಅವರು ಪ್ಯಾಲೆಸ್ಟೇನಿಯನ್ ರಾಜ್ಯವನ್ನು ತೀವ್ರವಾಗಿ ವಿರೋಧಿಸುತ್ತಾರೆ.
ಯಹೂದಿಗಳಿಗೆ ಟೆಂಪಲ್ ಮೌಂಟ್ ಎಂದು ಕರೆಯಲ್ಪಡುವ ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಪೂಜ್ಯ ನೋಬಲ್ Sanctuary ಮಸೀದಿ ಸಂಕೀರ್ಣದ ಮೇಲೆ ಯಹೂದಿ ನಿಯಂತ್ರಣವನ್ನು ಹೆಚ್ಚಿಸಲು ಬೆನೆಟ್ ವಾದಿಸುತ್ತಾರೆ. ಇದು ಇಸ್ಲಾಮಿನ ಮೂರನೇ ಪವಿತ್ರ ತಾಣವಾಗಿದೆ. 2013ರಲ್ಲಿ ಬೆನೆಟ್ “ನಾವು ಭಯೋತ್ಪಾದಕರನ್ನು ಸೆರೆಹಿಡಿದರೆ, ನಾವು ಅವರನ್ನು ಕೊಲ್ಲಬೇಕು… ನನ್ನ ಜೀವನದಲ್ಲಿ ನಾನು ಈಗಾಗಲೇ ಸಾಕಷ್ಟು ಅರಬ್ಬರನ್ನು ಕೊಂದಿದ್ದೇನೆ – ಮತ್ತು ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ” ಎಂಬ ಹೇಳಿಕೆ ನೀಡಿದ್ದರು. ಅಕ್ಟೋಬರ್ 2018ರ ಹೇಳಿಕೆಯಲ್ಲಿ ತಾವು ರಕ್ಷಣಾ ಮಂತ್ರಿಯಾಗಿದ್ದರೆ “ಇಸ್ರೇಲ್ ಮತ್ತು ಗಾಜಾ ನಡುವಿನ ಗಡಿಯನ್ನು ದಾಟಲು ಪ್ರಯತ್ನಿಸುತ್ತಿರುವ ಪ್ಯಾಲೆಸ್ಟೇನಿಯರನ್ನು ಕೊಲ್ಲಲು ಗುಂಡು ಆದೇಶ ನೀಡುತ್ತೇನೆ ಮತ್ತು ಪ್ಯಾಲೆಸ್ಟೇನಿಯನ್ನರ ಮಕ್ಕಳು ಮಕ್ಕಳಲ್ಲ ಭಯೋತ್ಪ್ಪಾದಕರು” ಎಂಬ ಹೇಳಿಕೆಯು ನೀಡಿದ್ದ.
ಇಸ್ರೇಲ್ ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ಇರುವ ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುತ್ತದೆ. ಆದರೆ, ಅದರ ದುರ್ವರ್ತನೆಗೂ ಮತ್ತು ಪ್ರಜಾಪ್ರಭುತ್ವಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬ್ರಿಟನ್ ಮತ್ತು ಅಮೆರಿಕ ಕುಮ್ಮಕ್ಕಿನಿಂದ ಸೃಷ್ಟಿಯಾದ ಇಸ್ರೇಲ್ ದೇಶ ಅಲ್ಲಿನ ಮೂಲ ನಿವಾಸಿಗಳಾದ ಪ್ಯಾಲೆಸ್ಟೀನರ ಮೇಲೆ ತನ್ನ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ, ದೌರ್ಜನ್ಯ ನಡೆಸಿ, ತನ್ನ ವಿಸ್ತೀರ್ಣವನ್ನು ಬೆಳೆಸುತ್ತಾ ಹೋಗಿದೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವನ್ನು ಅಮೆರಿಕ ಮತ್ತು ಯೂರೋಪಿನ ರಾಷ್ಟ್ರಗಳು ಇಸ್ರೇಲಿಗೆ ಪೂರೈಸುತ್ತವೆ. ಟ್ರಂಪ್ ಅಧಿಕಾರದಿಂದ ಕೆಳಗಿಳಿದ ನಂತರ ಬೈಡೆನ್ ಅಧಿಕಾರ ಹೇಗೆ ಟ್ರಂಪ್ ನೀತಿಗಳನ್ನೇ ಅನುಸರಿಸುತ್ತಿವೆಯೋ ಹಾಗೆಯೇ ನೇತನ್ಯಾಹು ನಂತರ ಬೆನೆಟ್ ಅದೇ ಆಕ್ರಮಣಕಾರಿ
ಯುದ್ಧದಾಹಿ ನೀತಿಗಳನ್ನು ಅನುಸರಿಸುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಪ್ರಧಾನಿ ಮೋದಿಯ ವಿಶ್ವಾಸಿಗಳೆಂಬ ಹೆಗ್ಗಳಿಕೆಯ ಜಗತ್ತಿನ ಬಲಪಂಥೀಯ ಸರ್ಕಾರಗಳು (ಟ್ರಂಪ್, ನೇತನ್ಯಾಹು) ಒಂದರ ನಂತರ ಒಂದು ಪತನವಾಗುತ್ತಿದ್ದರೂ ಅದರಿಂದ ತೆರವಾದ ಜಾಗವನ್ನು ತುಂಬಲು ಜನಪರವಾದ ಸಿದ್ಧಾಂತವುಳ್ಳ ಪಕ್ಷಗಳ-ರಾಜಕಾರಣದ ಕೊರತೆಯಿಂದ ಅದೇ ರೀತಿಯ ತೋಳಗಳು ಅಧಿಕಾರಕ್ಕೇರುತ್ತಿದ್ದಾರೆ. ಇದರಿಂದ ಭಾರತವು ಪಾಠ ಕಲಿಯುತ್ತದೆಯೇ ಅಥವಾ ಅದೇ ತಪ್ಪನ್ನು ಮುಂದುವರೆಸುತ್ತದೆಯೇ ಕಾದು ನೋಡಬೇಕು.

ಭರತ್ ಹೆಬ್ಬಾಳ
ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಭರತ್ ಸಾಮಾಜಿಕ ಚಳವಳಿಗಳ ಜೊತೆಗೆ ನಂಟು ಬೆಳೆಸಿಕೊಂಡವರು. ತಂತ್ರಜ್ಞಾನದ ಸಾಧ್ಯತೆಗಳು ಮತ್ತು ಜಾಗತಿಕ ಭೌಗೋಳಿಕ ರಾಜಕೀಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಾರೆ.



ಇದು ಯಾವ ವಿಸ್ತಾರವಾದ ಚೀನಾ ತರ ವಿಸ್ತಾರ ಮಾಡ್ಬೇಕು ಚೀನಾ ನೆಲದಲ್ಲಿ ಈ ರೀತಿ ಬರದಿದ್ದರೆ ನಿಮ್ಮ ಸ್ವಾತಂತ್ರ ಗೊತ್ತಾಗೋದು