Homeಅಂಕಣಗಳುಸುದ್ದಿ - ವಿಕೇಂದ್ರೀಕರಣ - ಐಎಎಸ್ - ಐಪಿಎಸ್ - ಭಾಗ - 3

ಸುದ್ದಿ – ವಿಕೇಂದ್ರೀಕರಣ – ಐಎಎಸ್ – ಐಪಿಎಸ್ – ಭಾಗ – 3

- Advertisement -
- Advertisement -

ಬಿಬಿಸಿ ಟಿವಿ ವಾಹಿನಿಯಲ್ಲಿ ‘ಯಸ್ ಮಿನಿಸ್ಟರ್’ ಅಂತ ಒಂದು ಧಾರಾವಾಹಿ ಬರ್ತಾ ಇತ್ತು 1980ರ ಸುಮಾರಿಗೆ. ಅದರ ಕಥಿ ಏನು ಅಂದರ, ಜೇಮ್ಸ್ ಹ್ಯಾಕರ್ ಅನ್ನುವ ಮಂತ್ರಿಯನ್ನು ಅಧಿಕಾರಿಗಳು ಹೆಂಗ್ ದಾರಿ ತಪ್ಪಿಸುತ್ತಾರ ಅನ್ನೋದು. ಮೊದಲ ಬಾರಿಗೆ ಆರಿಸಿ ಬಂದಾಗ ಬ್ರಿಟನ್ ಸರ್ಕಾರದ ದಿಕ್ಕನ್ನೇ ಬದಲು ಮಾಡುತ್ತೇನೆ ಅಂತ ಹೊರಟ ಸಚಿವ ಕೊನೆಗೆ ತನ್ನ ಅಧಿಕಾರ ವ್ಯಾಪ್ತಿಯ ‘ಅಂತರಿಕ ಆಡಳಿತ ವಿಭಾಗದ ಸಚಿವಾಲಯ’ದಲ್ಲಿ ತನ್ನ ಕಾರ್ಯದರ್ಶಿಗಳು ಹಾಗು ಇತರ ಅಧಿಕಾರಿ ವರ್ಗವನ್ನು ಸಹಿತ ಬದಲು ಮಾಡಲು ಆಗದೆ ಅಸಹಾಯಕನಾಗಿ ಕೈಚೆಲ್ಲುವುದು ಅದರ ತಿರುಳು.

ಅಲ್ಲಿನ ಅಧಿಕಾರಿಗಳು ಮಂತ್ರಿ ಹೇಳುವ ಎಲ್ಲದಕ್ಕೂ ಯಸ್ ಮಿನಿಸ್ಟರ್ ಅಂತ ಅನ್ನುವುದು, ಆದರೆ ಅವರು ಹೇಳುವ ಯಾವ ಜನ ಪರ ಕೆಲಸವನ್ನೂ ಮಾಡದೇ ಹೋಗುವುದು, ತಮಗೆ ಅನುಕೂಲ ಆಗುವ ಕೆಲಸಗಳನ್ನಷ್ಟೇ ಮಾಡುವುದು, ಎಲ್ಲಾ ಸರಕಾರಿ ಯೋಜನೆಗಳ ಬಗ್ಗೆ ಸಚಿವರ ದಿಕ್ಕು ತಪ್ಪಿಸುವುದು, ಸರಿಯಾದ ಮಾಹಿತಿ ಕೊಡದೆ ಇರುವುದು, ಮಂತ್ರಿ ಏನಾದರು ಮೂರ್ಖತನದ ಹೇಳಿಕೆ ಕೊಟ್ಟಾಗ, ಅವನನ್ನು ಬಚಾವು ಮಾಡುವುದು, ಮಂತ್ರಿಮಂಡಲದ ಸಮಸ್ಯೆ ಎದುರಾದಾಗ ಅವನಿಗೆ ಸಲಹೆ ನೀಡುವುದು, ಪ್ರಧಾನಿಯ ವಿಶ್ವಾಸಗಳಿಸಿಕೊಳ್ಳಲಿಕ್ಕೆ ಸಹಾಯ ಮಾಡೋದು, ಇಂಥವೆಲ್ಲಾ ಮಾಡಿದ್ದಕ್ಕ ಆ ಸಚಿವನಿಗೆ ಈ ಅಧಿಕಾರಿಗಳು ಅನಿವಾರ್ಯ ಅಂತ ಅನ್ನಿಸಿಬಿಡತದ. ಆದರ ಜನರಿಂದ ಆಯ್ಕೆ ಆಗಿ ಬಂದ ತಾನು, ಆ ಅಧಿಕಾರಾರೂಢ ವ್ಯವಸ್ಥೆಯ ಭಾಗವಾಗಿ ಹೋಗೋದು, ಆನಂತರ ಜನರಿಗೆ ತನ್ನಿಂದ ಯಾವುದೇ ಉಪಯೋಗ ಆಗದೆ ಹೋಗೋದು ಅವನಿಗೆ ಅರಿವು ಆಗ್ತದ. ತಾನು ಮಂತ್ರಿ ಅಲ್ಲ, ಪ್ರಧಾನಮಂತ್ರಿ ಆದಮೇಲೆ ಸಹಿತ ಈ ವ್ಯವಸ್ಥೆಯನ್ನ ಬದಲು ಮಾಡಲಿಕ್ಕೆ ಆಗೋದಿಲ್ಲ ಅಂತ ಅವನಿಗೆ ಖಾತ್ರಿ ಆಗಿಹೋಗ್ತದ.

ಈ ರೀತಿ ವಿಚಿತ್ರ ಹಾಗು ಕ್ಲಿಷ್ಟವಾಗಿರೋ ವ್ಯವಸ್ಥೆ ಜಾರಿಗೆ ಬಂದದ್ದು ಹೆಂಗ? ಅದರ ಇತಿಹಾಸ ರೋಚಕವಾಗಿದೆ.

ಗ್ರೀಕ್ ದೇಶ ಬಿಟ್ಟರೆ ಅತಿ ಹಿಂದೆ ಪ್ರಜಾಪ್ರಭುತ್ವ ಜಾರಿಗೆ ಬಂದ ರಾಷ್ಟ್ರ ಅಂದರೆ ಬ್ರಿಟನ್. ಅಲ್ಲಿ ರಾಜಪ್ರಭುತ್ವ ಹೆಸರಿಗೆ ಮಾತ್ರ ಇದ್ದು, ಸಂಸತ್ತು ಅಧಿಕಾರಿ ಚಲಾಯಿಸುತ್ತಾ ಇದೆ. 19ನೆ ಶತಮಾನದವರೆಗೂ ಅಲ್ಲಿ ಯಾವ ಪಕ್ಷ ಗೆದ್ದು ಬರುತ್ತಿತ್ತೋ ಆ ಪಕ್ಷದ ನಾಯಕ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದ. ತನ್ನ ಮನಸ್ಸಿಗೆ ಬಂದವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳುತ್ತಿದ್ದ.

ಅನೇಕ ಬಾರಿ ಈ ರೀತಿ ನೇಮಕ ಆದ ಕಾರ್ಯದರ್ಶಿಗಳಿಗೆ ರಾಜಕೀಯ ನಿಲುವು-ಒಲವು ಇರುತ್ತಾ ಇತ್ತು. ಅವರು ಈ ಪಕ್ಷದ ಪರವಾಗಿ ಅಥವಾ ಆ ಪಕ್ಷದ ವಿರುದ್ಧವಾಗಿ ಇರ್ತಾರ.

ಹಿಂಗಾಗಿ, ಅವರಿಂದ ನಿರ್ಮೋಹಿಯಾಗಿ, ರಾಗ-ದ್ವೇಷ ಇಲ್ಲದೆ ಕೆಲಸ ಮಾಡಲು ಸಾಧ್ಯ ಇಲ್ಲ ಅಂತ ಹೇಳಿ ಅಲ್ಲಿನ ಸಂಸತ್ತಿನಲ್ಲಿ 1850ರ ಸುಮಾರಿಗೆ ಗಲಾಟೆ ಆತು. ಒಂದು ಸಮಿತಿ ನೇಮಕ ಆತು. ಅವರು ಈ ದೇಶದಾಗ ನಾಗರಿಕ ಸೇವೆಗಳು ಅಂತ ಇರಬೇಕು, ಯುವಜನರು ಒಂದು ಸ್ಪರ್ಧಾತ್ಮಕ ಪರೀಕ್ಷೆ ಪಾಸು ಆಗಿ ಆ ಸೇವೆಗೆ ಸೇರಿಕೊಳ್ಳಬೇಕು. ಅವರು ರಾಜಕೀಯದಿಂದ ದೂರ ಇರಬೇಕು. ಜನ ಹಿತಕ್ಕಾಗಿ ಕೆಲಸ ಮಾಡಬೇಕು ಅಂತ ಶಿಫಾರಸು ಮಾಡಿದರು.

ಎಲ್ಲಾ ಸರಕಾರಿ ಸಮಿತಿಯ ವರದಿಗಳ ಹಣೆಬರಹ ಏನು ಇರ್ತದೋ ಹಂಗ ಇದರದ್ದೂ ಆತು. 1855ರ ಸಮಿತಿಯ ವರದಿ 1860ರವರೆಗೂ ಜಾರಿಗೆ ಬರಲಿಲ್ಲ.

ಆಮ್ಯಾಲೆ ಒಬ್ಬ ಪುಣ್ಯಾತ್ಮರು ಪ್ರಧಾನಿ ಆಗಿ ನೇಮಕ ಆದರು. ಅವ್ರ ಹೆಸರು ಲಾರ್ಡ್ ಗ್ಲ್ಯಾಡ್ಸ್ಟೋನ್. ಅವರು ಕನ್ನಡಿಗರಾಗಿದ್ದರ ಅವರನ್ನ ‘ಕಲ್ಲೂರು ಆನಂದ ರಾಯರು’ ಅಂತ ಕರಿಬಹುದೇನೋ. ಇಂತಿರೋ ಆನಂದರಾಯರ ಜೀವನದ ಪ್ರಮುಖ ಕೊಡುಗೆ ಅಂದರೆ ಅವರು ವಿಕ್ಟೋರಿಯಾ ರಾಣಿಯ ನೇತೃತ್ವದೊಳಗ ರಾಣಿಯವರ ಮಹೋನ್ನತ ನಾಗರಿಕ ಸೇವೆಯನ್ನ ಸುರು ಮಾಡಿದರು. ಈ ವಿ.ರಾ.ಮ.ನ.ಸೇ ಏನು ಇತ್ತಲ್ಲಾ, ಅದರೊಳಗ ಒಂದು ಅಕ್ಷರ ಹಿಂದ ಮುಂದ ಮಾಡಿ ಅದನ್ನ ವಿರಾಮ ಸೇನೆ ಅನ್ನಬಹುದೇನೋ. ಅವರು ಮಾಡೋ ಕೆಲಸನೂ ಅಷ್ಟರಾಗ ಅದ.

ರಾಣಿ ಸರಕಾರದಲ್ಲಿ ಸುರು ಆದ ಈ ವಿರಾಮ ಸೇನೆ ಈಸ್ಟ್ ಇಂಡಿಯ ಕಂಪನಿ ಮುಂದುವರೆಯಿತು. ಇಂಡಿಯಾ ಅಂದರ ಇವತ್ತಿನ ಇಂಡಿಯಾ ಅಲ್ಲ. ಕಂಪನಿ ಸರಕಾರ ಆಳಿದ ಇಂಡಿಯಾ ಅಂದರ ಅಫ್ಘಾನಿಸ್ತಾನದ ಬಾಮಿಯಾನ್‌ದಿಂದ ಹಿಡಿದು ಬರ್ಮಾದವರೆಗೂ ಇತ್ತು. ಅದು ಸುಮಾರು 3064 ಕಿಲೋಮೀಟರ್ ಉದ್ದದ ಪ್ರದೇಶ. ಅಷ್ಟು ದೊಡ್ಡ ಭೂಪ್ರದೇಶವನ್ನ 6704 ಕಿಲೋಮೀಟರ್ ದೂರದಿಂದ ಆಳಲಿಕ್ಕೆ ಬ್ರಿಟನ್ ರಾಣಿಗೆ ಸಾಧ್ಯವಾಗಿದ್ದು ಈ ನಾಗರಿಕ ಸೇವೆ ಅಥವಾ ವಿರಾಮ ಸೇನೆ ಸಹಾಯದಿಂದ.

PC : Amazon.in

ಆಗ ಭಾರತದಲ್ಲಿ ಇದ್ದ ಬ್ರಿಟಿಷ್ ಅಧಿಕಾರಿಗಳು – ನಾಗರಿಕ ಸೇವೆ ಹಾಗೂ ಸೈನ್ಯ ಅಧಿಕಾರಿಗಳು ಸೇರಿ ಕೇವಲ ಎರಡು ಸಾವಿರ ಜನ ಇದ್ದರು. ಅಂದಿನ ಭಾರತದ ರಾಜಧಾನಿ ಕಲಕತ್ತಾದಿಂದ ಹಿಡಿದು ಧಾರವಾಡ ಜಿಲ್ಲೆಯ ಸವಣೂರು ಎಂಬ ಸಣ್ಣ ಹಳ್ಳಿಯವರೆಗೂ ಆ ಅಧಿಕಾರಿಗಳು ನೇಮಕಗೊಂಡಿದ್ದರು. ಈ ವ್ಯವಸ್ಥೆ ಭಾಳ ದಿವಸ ನಡೀತು.

ಆಮ್ಯಾಲೆ, ಎರಡು ನೂರಾ ನಲವತ್ತ ಏಳು ವರ್ಷದ ನಂತರ, ಸಾವಿರಾರು ಸ್ವಾತಂತ್ರ ಯೋಧರು ಹುತಾತ್ಮರಾಗಿ, ಜೈಲಿಗೆ ಹೋಗಿ, ಅವ್ರ ಹೆಂಡ್ತಿ ಮಕ್ಕಳು ಬೀದಿಗೆ ಬಿದ್ದು, ಉಳಿದವರು ಇದ್ದರೂ ಸತ್ತಂಗ ಆದ ಮ್ಯಾಲೆ ಬ್ರಿಟಿಷರು ಬಿಟ್ಟುಹೋದರು.

ದಾಸ್ಯದ ಎಲ್ಲಾ ಸಂಕೋಲೆಗಳು ಕಳಚಿಕೊಂಡುಹೋದವು. ಅಥವಾ ಹಂಗ ನಾವು ತಿಳಕೊಂಡೆವು. ಆದರ ಅದರಾಗ ಒಂದು ಕೊಂಡಿ ಕಳಚಲೇ ಇಲ್ಲ. ಅದು ಯಾವುದು ಅಂದರ ಐಎಎಸ್, ಐಪಿಎಸ್, ಐಎಫ್‌ಎಸ್ ಇತ್ಯಾದಿ.

ಅದು ಬ್ರಿಟಿಷರು ಮಾಡಿದ ತುಕ್ಕು ಹಿಡಿಯದ ಕಬ್ಬಿಣದ ಸರಪಳಿಯ ಕೊಂಡಿ. ಆದರ ಅದು ಬರ್ತಾ ಬರ್ತಾ ತುಕ್ಕು ಹಿಡದು, ಆಳುವುವವರ, ಜನರ ನಡುವಿನ ಕೊಂಡಿ ಆಗದೆ, ಜನ ಕಲ್ಯಾಣದ ಕೆಲಸಕ್ಕೆ ಬಾರದೇ ಹೋತು. ‘ರಾಜಕೀಯ ರಹಿತ ಜನ ಸೇವೆ’ ಹೋಗಿ, ಬರೇ ಬ್ರಿಟಿಷರ ದರ್ಪ, ದುರಾಡಳಿತ, ದುರಹಂಕಾರದ ಗುಣ ಬೆಳೆಸಿಕೊಂಡುಬಿಟ್ಟಿತು.

ಭಾರತ ಸರ್ವತಂತ್ರ ಸ್ವತಂತ್ರ ಆದರೂ ಸಹಿತ ವಿರಾಮ ಸೇನೆಯ ಮಾನಸ ಪುತ್ರರಾದ ನಮ್ಮ ಐಎಎಸ್ಸು, ಐಪಿಎಸ್ಸು ಇತ್ಯಾದಿ 27 ಎಸ್ಸು ಸೇವೆಗಳ ಅಧಿಕಾರಿಗಳು ನಮ್ಮನ್ನ ಹಿಡಕೊಂಡು ಕೂತಾರ. ಅವರಿಂದ ನಮಗ ಸ್ವಾತಂತ್ರ ಸಿಕ್ಕಿಲ್ಲಾ.

ಭಾರತದಂತಹ ಬಹು ವೈವಿಧ್ಯತೆ ಇರುವ, 20 ಮೈಲಿಗೆ ಬ್ಯಾರೆ ಬ್ಯಾರೆ ಪ್ರದೇಶ, ಭಾಷೆ, ಸಂಸ್ಕೃತಿ, ಇರುವ ದೇಶದ ಎಲ್ಲಾ ನೀತಿ ನಿಯಮ ರೂಪುಗೊಳ್ಳುವುದು ದೆಹಲಿಯ ಸುಲ್ತಾನರ ಅಸ್ಥಾನದೊಳಗ. ವಿವಿಧ ಪ್ರದೇಶಗಳಿಗೆ ವಿವಿಧ ರೀತಿಯ ನೀತಿ ಬೇಕಾಗುತ್ತವೆ ಅನ್ನೋದು ಈ ದೇಶದ ಸಣ್ಣ ಹುಡುಗರಿಗೆ ಸಹಿತ ಗೊತ್ತದ. ಆದರ ಕಿರೀಟ ತೊಟ್ಟ ತಲೆಗಳಿಗೆ ಅದು ಗೊತ್ತಾಗೋದಿಲ್ಲ.

ಅವರು ಒಂದು ದೇಶ-ಒಂದು ನೀತಿ ಅಂತ ಬಳಾಂಗ್ ಕುಟ್ಟುತ್ತಾ ಇದ್ದಾರೆ. ಅಧಿಕಾರಿಗಳು ಅವರ ಆಣತಿಯಂತೆ ನಡೆಯುವವರೋ ಅಥವಾ “ನೀವು ಹಿಂಗ್ ಮಾಡ್ರಿ ಸಾಹೇಬರ, ಭಾಳ ಫೇಮಸ್ ಆಗ್ತೀರಿ” ಅಂತ ಅವರಿಗೆ ಕೆಟ್ಟ ಕೆಟ್ಟ ಐಡಿಯಾ ಕೊಡ್ತಾರೋ ಗೊತ್ತಿಲ್ಲಾ. ಇವರು ಹೇಳಿದ ಹಂಗ ಅವರು ಕೇಳ್ತಾರೋ ಅಥವಾ ಎಲ್ಲಾ ಉಲ್ಟಾ ನಡಿತದೋ, ಅದುನೂ ಗೊತ್ತಿಲ್ಲಾ. ಆದರ ಇಬ್ಬರೂ ಕೂಡಿ ಎಲ್ಲಾ ಅಧಿಕಾರವನ್ನು ಕೇಂದ್ರೀಕೃತ ಮಾಡಿಬಿಟ್ಟಾರ.

ಇಲ್ಲೀತನಕ ಕೇಳಿದ್ದು ಈ ಕತೆಯ ಪೀಠಿಕೆ ಅಷ್ಟ. ಈಗ ಒಂದು ಪ್ರಶ್ನೆಗೆ ಉತ್ತರ ಹೇಳ್ರಿ.

ಕರ್ನಾಟಕ ರಾಜ್ಯದಾಗ 300 ಜನ ಐಎಎಸ್ಸು ಅಧಿಕಾರಿಗಳು ಹಾಗು ಐಪಿಎಸ್ಸು ಅಧಿಕಾರಿಗಳು ಅದಾರ. ಇದರೊಳಗ ಎಷ್ಟು ಜನ ಬೆಂಗಳೂರು ಬಿಟ್ಟು, ವಿಭಾಗೀಯ ಹಾಗು ಜಿಲ್ಲಾ ಕೇಂದ್ರಗಳಲ್ಲಿ ಅಧಿಕಾರಿಗಳಾಗಿದ್ದಾರೆ? ಕೇವಲ 67 ಐಎಎಸ್ಸು ಅಧಿಕಾರಿಗಳು ಮತ್ತು 40 ಐಪಿಎಸ್ಸು ಅಧಿಕಾರಿಗಳು ಬೆಂಗಳೂರಿನಿಂದ ಹೊರಗಡೆ ಅದಾರ.

ದೆಹಲಿಯ ಸರಕಾರದೊಳಗ ಏನು ನಡೀತದೋ ಥೇಟು ಅದ ರೀತಿ ಬೆಂಗಳೂರು ಸರಕಾರದೊಳಗೂ ನಡಿತದ. ಕರ್ನಾಟಕದ ನಾಲ್ಕು ಕಂದಾಯ ವಿಭಾಗ ಹಾಗು ಎಂಟು ಕಾನೂನು ಸುವ್ಯವಸ್ಥೆ ವಿಭಾಗಗಳ ಮೂವತ್ತು ಜಿಲ್ಲೆಗಳಿಗೆ ಅನ್ವಯವಾಗುವ ಎಲ್ಲಾ ನೀತಿ ನಿಯಮ, ಆಡಳಿತ ನಿರ್ಧಾರಗಳು, ಬೆಂಗಳೂರಿನ ನಿಧಾನಸೌಧದಾಗ ನಿಧಾನವಾಗಿ ನಿರ್ಧಾರ ಆಗತಾವ. ಅವು ಬಾಡಕುಂದರಿಯ ಬಡವ ಬಸವಣ್ಣೆಪ್ಪನ ತನಕ ಬರೋದರಾಗ ನಡುವೆ ಎಲ್ಲೋ ಸೋರಿ ಹೋಗಿರ್ತಾವು.

ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೇವಾಲಯ ಪ್ರವೇಶಿಸಿದ ದಲಿತ ಯುವಕನಿಗೆ ಡಿಎಂಕೆ ಮುಖಂಡನಿಂದ ಬೆದರಿಕೆ; ವಿಡಿಯೊ ವೈರಲ್‌

0
ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆ (ಎಚ್‌ಆರ್ ಮತ್ತು ಸಿಇ) ನಿರ್ವಹಿಸುತ್ತಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಡಿಎಂಕೆ ಒಕ್ಕೂಟದ ಕಾರ್ಯದರ್ಶಿಯೊಬ್ಬರು ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ತಮಿಳುನಾಡಿನ ತಿರುಮಲೈಗಿರಿ (ಸೇಲಂ ಜಿಲ್ಲೆ)ಯಲ್ಲಿರುವ...