ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ಜೋಡಿಸುವಂಥ (ಡಾಕಿಂಗ್) ‘ಸ್ಪಾಡೆಕ್ಸ್’ (SpaDEX)
ಯೋಜನೆಗಾಗಿ ಎರಡು ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ60 (PSLV-C60) ರಾಕೆಟ್ ನಿಗದಿತ ಕಕ್ಷೆ ತಲುಪಿದೆ ಎಂದು ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಘೋಷಿಸಿದೆ.
ಪಿಎಸ್‌ಎಲ್‌ವಿ-ಸಿ60 ರಾಕೆಟ್ ತಲಾ 220 ಕೆ.ಜಿ ತೂಕದ ಎರಡು ಸ್ಪಾಡೆಕ್ಸ್ ಉಪಗ್ರಹಗಳು ಮತ್ತು 24 ಪೇಲೋಡ್‌ಗಳನ್ನು ಹೊಂದಿರುವ ಪಿಒಇಎಂ-4 ಅನ್ನು ನಿಗದಿತ ಕಕ್ಷೆಗೆ ಸೇರಿಸಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರು ಮಾಹಿತಿ ನೀಡಿದ್ದಾರೆ.
ಇನ್ನೊಂದು ವಾರದಲ್ಲಿ, ಅಂದರೆ ಜನವರಿ 7ರ ವೇಳೆಗೆ ಡಾಕಿಂಗ್ ಪ್ರಕ್ರಿಯೆ (ಡಾಕಿಂಗ್-ಅನ್‌ಡಾಕಿಂಗ್) ನಡೆಯುವ ನಿರೀಕ್ಷೆಯಿದೆ. ಅದನ್ನು ಬೆಂಗಳೂರಿನ ಇಸ್ರೋ ಕೇಂದ್ರದಿಂದ ನೇರವಾಗಿ ವೀಕ್ಷಿಸಲು ಸಾಧ್ಯವಾಗಲಿದೆ ಎಂದು ಸೋಮನಾಥ್ ಹೇಳಿದ್ದಾರೆ.
ಸೋಮವಾರ (ಡಿ.30) ರಾತ್ರಿ 10 ಗಂಟೆಗೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ತಲಾ 220 ಕೆ.ಜಿ ತೂಕದ ಎರಡು ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ60 ರಾಕೆಟ್ ನಭಕ್ಕೆ ಹಾರಿದೆ.
🎥 Relive the Liftoff! 🚀
Experience the majestic PSLV-C60 launch carrying SpaDeX and groundbreaking payloads. Enjoy breathtaking images of this milestone in India’s space journey! 🌌✨#SpaDeX #PSLV #ISRO
📍 @DrJitendraSingh pic.twitter.com/PWdzY0B7nQ
— ISRO (@isro) December 30, 2024
ಈ ಮೂಲಕ ಭಾರತ ಬಾಹ್ಯಾಕಾಶದಲ್ಲಿ ಡಾಕಿಂಗ್ ತಂತ್ರಜ್ಞಾನಕ್ಕಾಗಿ ಯಶಸ್ವಿ ಉಪಗ್ರಹಗಳನ್ನು ಉಡ್ಡಯನ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವೆನಿಸಿಕೊಂಡಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ.
ಜನವರಿಯಲ್ಲಿ 100ನೇ ಉಡಾವಣೆ
ಸ್ಪೇಡೆಕ್ಸ್ ಉಪಗ್ರಹಗಳದ್ದು 99ನೇ ಉಡಾವಣೆಯಾಗಿದೆ. ಚಾರಿತ್ರಿಕ 100ನೇ ಉಡಾವಣೆಗೆ ಇಸ್ರೋ ಸಜ್ಜಾಗಿದ್ದು, ಹೊಸ ವರ್ಷದಲ್ಲಿ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‌ಎಲ್‌ವಿ) ಉಡ್ಡಯನವಾಗಲಿದೆ ಎಂದು ಎಸ್.ಸೋಮನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ : ‘ಕೇರಳ ಮಿನಿ ಪಾಕಿಸ್ತಾನ’ ಎಂದ ಮಹಾರಾಷ್ಟ್ರದ ಸಚಿವ : ರಾಜೀನಾಮೆಗೆ ಕಾಂಗ್ರೆಸ್ ಪಟ್ಟು


