ಭಾರತ ಕ್ರಿಕೇಟ್ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್, ಒಬ್ಬರ ಧರ್ಮದ ಕಾರಣಕ್ಕೆ ತಾರತಮ್ಯ ಮಾಡುವುದು ಕೂಡಾ ಜನಾಂಗೀಯ ನಿಂದನೆಯೇ ಆಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಜನಾಂಗೀಯತೆಯ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಮಾತನಾಡುತ್ತಾ, “ಇದು ಕೇವಲ ಚರ್ಮದ ಬಣ್ಣಕ್ಕೆ ಸೀಮಿತವಾಗಿಲ್ಲ, ಒಬ್ಬ ವ್ಯಕ್ತಿಯು ಅವನ / ಅವಳ ಧರ್ಮದ ಆಧಾರದ ಮೇಲೆ ಕೂಡಾ ಜನಾಂಗೀಯ ನಿಂದನೆಗೆ ಒಳಗಾಗಬಹುದು” ಎಂದು ಇರ್ಫಾನ್ ಪಠಾನ್ ಹೇಳಿದ್ದಾರೆ.
“ವರ್ಣಭೇದ ನೀತಿ ಕೇವಲ ಚರ್ಮದ ಬಣ್ಣಕ್ಕೆ ಸೀಮಿತವಾಗಿಲ್ಲ. ಬೇರೆ ನಂಬಿಕೆ ಹೊಂದಿರುವ ಕಾರಣಕ್ಕಾಗಿ ನಿಮಗೆ ಮನೆಯನ್ನು ಖರೀದಿಸಿಲು ಸಮಾಜ ಅವಕಾಶ ನೀಡುವುದಿಲ್ಲ ಎಂದಾದರೆ ಅದು ಕೂಡಾ ಜನಾಂಗೀಯತೆಯೆ ಆಗಿದೆ” ಎಂದು ಪಠಾಣ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
Racism is not restricted to the colour of the skin.Not allowing to buy a home in a society just because u have a different faith is a part of racism too… #convenient #racism
— Irfan Pathan (@IrfanPathan) June 9, 2020
“ಇದು ಒಂದು ಅವಲೋಕನವಾಗಿದ್ದು ಇದನ್ನು ಯಾರಾದರು ನಿರಾಕರಿಸಬಹುದೆಂದು ನಾನು ಭಾವಿಸುವುದಿಲ್ಲ” ಎಂದು ಪಠಾಣ್ ತನ್ನ ಟ್ವೀಟ್ ಅನ್ನು ವಿವರಿಸುತ್ತಾ ಪಿಟಿಐಗೆ ತಿಳಿಸಿದ್ದಾರೆ.
ಅಮೆರಿಕಾದ ಜಾರ್ಜ್ ಫ್ಲಾಯ್ಡ್ ಹತ್ಯೆಯ ಹಿನ್ನೆಲೆಯಲ್ಲಿ, ಹಲವಾರು ಅಂತರರಾಷ್ಟ್ರೀಯ ಕ್ರಿಕೆಟಿಗರು ಆಟದಲ್ಲಿ ತಮಗಾದ ವರ್ಣಭೇದ ನೀತಿಯ ಕುರಿತು ಮಾತನಾಡಿದ್ದಾರೆ.
2014 ರ ಐಪಿಎಲ್ ಸಂದರ್ಭದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರರು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂದು ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಡ್ಯಾರೆನ್ ಸ್ಯಾಮಿ ಆರೋಪಿಸಿದ್ದಾರೆ.
2014 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಪಠಾಣ್ ಅವರು ಇಂತಹ ಘಟನೆಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
“ಅಂತಹದ್ದೇನಾದರೂ ಸಂಭವಿಸಿದ್ದರೆ ಅದು ಗಮನಕ್ಕೆ ಬರುತ್ತಿತ್ತು ಅಥವಾ ಈ ವಿಷಯದ ಬಗ್ಗೆ ತಂಡದ ಚರ್ಚೆ ನಡೆಯುತ್ತಿತ್ತು. ಅಂತಹ ಯಾವುದೇ ಘಟನೆಯ ಬಗ್ಗೆ ನನಗೆ ತಿಳಿದಿಲ್ಲ. ಸ್ಯಾಮಿ ಅವರ ಅಭಿಪ್ರಾಯಗಳಿಗೆ ಅವರೆ ಜವಾಬ್ದಾರರಾಗಿದ್ದಾರೆ”ಎಂದು ಪಠಾಣ್ ಹೇಳಿದರು.
“ಆದರೆ ದೇಶೀಯ ಕ್ರಿಕೆಟ್‌ನಲ್ಲಿ ನಾನು ಕೆಲವು ಸಮಸ್ಯೆಗಳನ್ನು ನೋಡಿದ್ದೇನೆ. ದಕ್ಷಿಣ ಭಾರತದ ನಮ್ಮ ಸಹೋದರರು ಉತ್ತರ ಭಾರತಕ್ಕೆ ಪ್ರಯಾಣಿಸುವಾಗ ಅವರು ಸಮಸ್ಯೆಗಳು ಎದುರಿಸಬೇಕಾಗಿರುತ್ತಿತ್ತು. ಇಲ್ಲಿ ನಿಜವಾದ ಸಮಸ್ಯೆ ಶಿಕ್ಷಣ ಹಾಗೂ ಸಮಾಜವು ಇನ್ನೂ ಕಲಿಯಬೇಕಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
“ಭಾರತದಲ್ಲಿ ಜನಾಂಗೀಯತೆಯ ಬಗ್ಗೆ ಇನ್ನೂ ಹೆಚ್ಚು ಚರ್ಚೆಗಳಾಗುತ್ತಿಲ್ಲ. ಕೆಲವೊಮ್ಮೆ ನಾವು ಈಶಾನ್ಯದ ನಮ್ಮ ಸಹೋದರ ಸಹೋದರಿಯರಿಗೆ ಹೆಸರುಗಳನ್ನು ಸಹ ಕರೆಯುತ್ತೇವೆ. ಈ ಸಮಸ್ಯೆ ಆಳವಾಗಿ ಬೇರೂರಿದೆ, ನಾವು ನಮ್ಮ ಮಕ್ಕಳಿಗೆ ಇದರ ಬಗ್ಗೆ ಶಿಕ್ಷಣ ನೀಡಲು ಪ್ರಾರಂಭಿಸಿದಾಗ ಮಾತ್ರ ಇದು ಹೋಗುತ್ತದೆ. ಅದು ಸರಿಯಾದ ಶಾಲಾ ಶಿಕ್ಷಣ ಹಾಗೂ ಪೋಷಕರೊಂದಿಗೆ ಪ್ರಾರಂಭವಾಗಬೇಕು. ” ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
ಓದಿ: ಕೊರೊನಾ ವಿರುದ್ಧದ ಹೋರಾಟಕ್ಕೆ 50 ಲಕ್ಷ ದೇಣಿಗೆ ಕೊಟ್ಟ ಸಚಿನ್ ತೆಂಡೂಲ್ಕರ್


