“ಗುಜರಾತ್‌ನ ಅಹಮದಾಬಾದ್‌ನಲ್ಲಿ ರಾಣಿ ಕಾ ಹಜಿರಾ ಎಂಬ ಹೆಸರಿನ 1,600 ವರ್ಷಗಳಷ್ಟು ಹಳೆಯದಾದ ಭವ್ಯವಾದ ಹಿಂದೂ ಪ್ರದೇಶವನ್ನು ಮುಸ್ಲಿಮರು ವಶಪಡಿಸಿಕೊಂಡಿದ್ದರು. ನಿನ್ನೆ ಬಿಜೆಪಿ ಸರ್ಕಾರದ ಬುಲ್ಡೋಜರ್ ಅಲ್ಲಿ ತಿರುಗಾಡಿತು ಮತ್ತು ಜಿಹಾದಿಗಳನ್ನು ತೆರವುಗೊಳಿಸಿತು. ಈಗ ಮುಸಲ್ಮಾನರ ಕಪಿಮುಷ್ಠಿಯಿಂದ ಮುಕ್ತಿ ಪಡೆದಿದೆ. ಇದು ನಿಮ್ಮ ಒಂದು ಮತದ ಬೆಲೆ! ಎಂಬ ಸಂದೇಶದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವೈರಲ್ ವಿಡಿಯೋದಲ್ಲಿ ಭವ್ಯವಾದ ಐತಿಹಾಸಿಕ ಕಟ್ಟವೊಂದರಿಂದ ಪೊಲೀಸರು ಅಂಗಡಿಗಳನ್ನು ತೆರವುಗೊಳಿಸುತ್ತಿರುವುದನ್ನು ಕಾಣಬಹುದು.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ವಿಡಿಯೋದಲ್ಲಿ ಉಲ್ಲೇಖಿಸಿರುವ ‘ರಾಣಿ ಕಾ ಹಜಿರಾ’ ಎಂಬ ಕೀ ವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದ್ದೇವೆ. ಈ ವೇಳೆ ವಿಕಿಪೀಡಿಯದಲ್ಲಿ ‘ರಾಣಿ ನೋ ಹಾಜಿರೋ’ ಎಂಬ ಶೀರ್ಷಿಕೆಯಲ್ಲಿ ಮಾಹಿತಿ ದೊರೆತಿದೆ. ಅದನ್ನು ಓದಿ ನೋಡಿದಾಗ, ‘ರಾಣಿ ನೋ ಹಾಜಿರೋ’ ಹಿಂದೂ ದೇವಾಲಯವಲ್ಲ. ಇದೊಂದು ಐತಿಹಾಸಿಕ ಕಟ್ಟಡ ಎಂದು ಗೊತ್ತಾಗಿದೆ. ರಾಣಿ ನೋ ಹಾಜಿರೋ ಗುಜರಾತ್‌ನ ಸುಲ್ತಾನ ಒಂದನೇ ಅಹ್ಮದ್ ಷಾ ಅವರ ಸಮಾಧಿಯ ಪೂರ್ವ ಭಾಗದ ಮಾನೆಕ್ ಚೌಕ್ ಬಳಿ ಇದೆ. ಇದು ಅಹ್ಮದ್ ಷಾ ಮತ್ತು ಆ ಕಾಲದ ಇತರ ಸುಲ್ತಾನರ ಪತ್ನಿಯರಿಗೆ ಸೇರಿವೆ. ಪ್ರವಾಸಿ ತಾಣವಾಗಿರುವ ಈ ಸ್ಥಳ ಈಗ ಪ್ರಸಿದ್ಧ ಮಾರುಕಟ್ಟೆಯಾಗಿ ಬದಲಾಗಿದ್ದು, ರಸ್ತೆಬದಿಯ ಆಹಾರಗಳಿಗೆ ಹೆಸರು ಮಾಡಿದೆ.

ವಿಡಿಯೋದಲ್ಲಿ ಕಾಣುವಂತೆ ತೆರವು ಕಾರ್ಯಾಚರಣೆಯ ಬಗ್ಗೆ ಪರಿಶೀಲಿಸಿದಾಗ, “ಮಾನೆಕ್ ಚೌಕ್‌ನ ರಾಣಿ ನೋ ಹಾಜಿರೋದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಅಂಗಡಿಗಳನ್ನು ಮುನ್ಸಿಪಲ್ ಕಾರ್ಪೊರೇಷನ್ ತೆಗೆದು ಹಾಕಿದ ದೃಶ್ಯ ಅದಾಗಿದೆ ಎಂದು ತಿಳಿದು ಬಂದಿದೆ.
ಇಂಡಿಯಾ ಟುಡೇ ಮಲಯಾಳಂ ಫೆ.8,2024ರಂದು ವೈರಲ್ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್ ಮಾಡಿದ್ದು, “ಅಹ್ಮದಾಬಾದ್‌ನ ಮಾನೆಕ್ ಚೌಕ್‌ನ ರಾಣಿ ನೋ ಹಾಜಿರೋದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಅಂಗಡಿಗಳನ್ನು ಮುನ್ಸಿಪಲ್ ಕಾರ್ಪೊರೇಷನ್ ತೆಗೆದುಹಾಕುತ್ತಿದೆ” ಎಂದು ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ ಹೇಳಿದ್ದಾನೆ ಎಂದು ತಿಳಿಸಿದೆ.
ನಾವು ಗಮನಿಸಿದಂತೆ ವೈರಲ್ ವಿಡಿಯೋದಲ್ಲಿ ಕಟ್ಟಡದ ಕುರಿತ ಮಾಹಿತಿ ಫಲಕದಲ್ಲಿ ಬಳಿ ಗ್ರಾನೈಟ್‌ನಲ್ಲಿ ‘ರಾಣಿಯ ಸಮಾಧಿ’ ಎಂಬ ಫಲಕದಲ್ಲಿ ಈ ಕಟ್ಟಡ ಸುಲ್ತಾನ್ ಅಹ್ಮದ್ ಷಾ ಮತ್ತು ಆ ಕಾಲದ ಇತರ ಸುಲ್ತಾನರ ಪತ್ನಿಯರಿಗೆ ಸೇರಿವೆ ಎಂದು ಬರೆದಿರುವುದನ್ನು ಕಾಣಬಹುದು.

ಅಲ್ಲದೆ, ಹಳೆಯ ಅಹಮದಾಬಾದ್‌ನ ಪ್ರಸಿದ್ಧ ವೃತ್ತವಾದ ಮಾನೆಕ್ ಚೌಕ್ ಜನನಿಬೀಡ ಪ್ರದೇಶವಾಗಿದ್ದು ಇಲ್ಲಿನ ಅಕ್ರಮ ಅಂಗಡಿ-ಮುಗ್ಗಟ್ಟುಗಳಿಂದ ಜನರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು ಮತ್ತು ಐತಿಹಾಸಿಕ ಕಟ್ಟಡಕ್ಕೂ ಸಹ ಹಾನಿ ಆಗುವ ಸಂಭವದಿಂದ ಗುಜರಾತ್ ಹೈಕೋರ್ಟಿನ ಆದೇಶದಂತೆ ಅಕ್ರಮವಾಗಿ ನಿರ್ಮಿಸಲಾದ ಅಂಗಡಿಗಳನ್ನು ಮುನ್ಸಿಪಲ್ ಕಾರ್ಪೊರೇಷನ್ ತೆಗೆದುಹಾಕಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
15 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಐತಿಹಾಸಿಕ ಸ್ಮಾರಕವು ಹಿಂದೂ, ಜೈನ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಗಳ ಸಂಯೋಜನೆಯಾಗಿದೆ ಎಂದು ಅಹಮದಾಬಾದ್ ಪ್ರವಾಸೋದ್ಯಮ ವೆಬ್‌ಸೈಟ್ ಹೇಳಿಕೊಂಡಿದೆ.

ಇದನ್ನೂ ಓದಿ : Fact Check: ತುಮಕೂರಿನ ಪುರದಲ್ಲಿ ರಥಕ್ಕೆ ಬೆಂಕಿ ಇಟ್ಟ ಆರೋಪಿ ಮುಸ್ಲಿಂ ಅಲ್ಲ


