ಅಯೋಧ್ಯೆಯ ರಾಮ ಜನ್ಮಭೂಮಿ ಟ್ರಸ್ಟ್ ಖರೀದಿಸಿದ ಭೂಮಿಯಲ್ಲಿ ಭ್ರಷ್ಟಾಚಾರದ ಆರೋಪದ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶ್ರೀರಾಮನ ಹೆಸರಲ್ಲಿ ಮೋಸ ಮಾಡುವುದು ಅಧರ್ಮವಾಗಿದೆ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್ ಪಾಂಡೆ ಭಾನುವಾರ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ ರಾಮ ಜನ್ಮಭೂಮಿ ಟ್ರಸ್ಟ್ ಭೂ ದಂಧೆ ನಡೆಸುತ್ತಿದೆ ಎಂದು ದಾಖಲೆ ಸಮೇತ ಆರೋಪ ಮಾಡಿದ್ದರು.
ಇದನ್ನೂ ಓದಿ: ರಾಮ ಜನ್ಮಭೂಮಿ ಟ್ರಸ್ಟ್‌ನಿಂದ ಭೂ ದಂಧೆ: ರಾಮನ ಹೆಸರಲ್ಲಿ ಲೂಟಿ; ದಾಖಲೆ ಬಿಡುಗಡೆ
ಇಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, “ಶ್ರೀರಾಮ ಎಂದರೆ ನ್ಯಾಯ, ಸತ್ಯ, ಧರ್ಮ ಆಗಿದೆ. ಅವನ ಹೆಸರಲ್ಲಿ ಮೋಸ ಮಾಡುವುದು ಅಧರ್ಮವಾಗಿದೆ” ಎಂದು ಬರೆದಿರುವ ಅವರು “ರಾಮ ಮಂದಿರ ಹಗರಣ” ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ.
श्रीराम स्वयं न्याय हैं, सत्य हैं, धर्म हैं-
उनके नाम पर धोखा अधर्म है!#राम_मंदिर_घोटाला— Rahul Gandhi (@RahulGandhi) June 14, 2021
2 ಕೋಟಿ ರೂ. ಗೆ ಒಂದು ಜಮೀನು ಖರೀದಿ ಮಾಡಿ, ಕೇವಲ 5 ನಿಮಿಷಗಳ ಅಂತರದಲ್ಲಿ ರಾಮಜನ್ಮಭೂಮಿ ಟ್ರಸ್ಟ್ ಅದೇ ಜಮೀನನ್ನು 18.5 ಕೋಟಿ ರೂ.ಗಳಿಗೆ ಖರೀದಿಸಿದೆ ಎಂದು ಸಂಜಯ್‍ಸಿಂಗ್ ದಾಖಲೆಗಳ ಸಮೇತ ಅಪಾದನೆ ಮಾಡಿದ್ದಾರೆ.
ಅಯೋಧ್ಯೆಯ ರಾಮ ಮಂದಿರಕ್ಕೆ ಭೂಮಿ ಖರೀದಿಸುವಾಗ ಕೋಟ್ಯಂತರ ಮೊತ್ತದ ಆರ್ಥಿಕ ಅಕ್ರಮಗಳು ನಡೆದಿವೆ ಎಂದು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್ ಪಾಂಡೆ ಕೂಡ ಭಾನುವಾರ ಆರೋಪಿಸಿದ್ದಾರೆ. ಏಕಕಾಲದಲ್ಲಿ ನಡೆದ ಪತ್ರಿಕಾಗೋಷ್ಠಿಗಳಲ್ಲಿ, (ಲಕ್ನೋದಲ್ಲಿ ಸಂಜಯ ಸಿಂಗ್ ಮತ್ತು ಅಯೋಧ್ಯೆಯಲ್ಲಿ ಪವನ್ ಪಾಂಡೆ) ಎರಡು ಭೂ ಖರೀದಿ ಒಪ್ಪಂದಗಳ ಪ್ರತಿಗಳನ್ನು ಮಾಧ್ಯಮಗಳಿಗೆ ನೀಡಲಾಗಿದೆ.
ಸಧ್ಯಕ್ಕೆ ಪ್ರಕರಣದ ವಿವಾದ ಹೆಚ್ಚುತ್ತಿದ್ದು ಬಿಜೆಪಿಯ ಮಾಜಿ ಮಿತ್ರ ಪ್ರಕ್ಷವಾಗಿರುವ ಶಿವಸೇನೆ ಕೂಡಾ ಇದರ ಬಗ್ಗೆ ಸ್ಪಷ್ಟನೆ ಕೋರಿದೆ. ಶಿವಸೇನೆ ಸಂಸದ ಸಂಜಯ್ ರಾವತ್, “ರಾಮ ಮತ್ತು ರಾಮ ಮಂದಿರದ ಹೋರಾಟವು ನಮಗೆ ನಂಬಿಕೆಯ ವಿಷಯವಾಗಿದೆ. ಕೆಲವರಿಗೆ ಇದು ರಾಜಕೀಯ ವಿಷಯ. ಮಂದಿರದ ನಿರ್ಮಾಣಕ್ಕಾಗಿ ರಚಿಸಲಾದ ಟ್ರಸ್ಟ್ ತಮ್ಮ ಮೇಲಿನ ಆರೋಪಗಳು ನಿಜವೋ ಸುಳ್ಳೋ ಎಂದು ಸ್ಪಷ್ಟಪಡಿಸಬೇಕು ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ಟ್ರಸ್ಟ್ ಭೂ ದಂಧೆ – ಅಧರ್ಮ, ಪಾಪ ಮತ್ತು ಭಕ್ತರ ನಂಬಿಕೆಗೆ ಅಪಮಾನ: ಪ್ರಿಯಾಂಕ ಗಾಂಧಿ


