Homeಅನುವಾದಿತ ಲೇಖನಆನೆಗಳಾಯಿತು, ಈಗ ಚಿರತೆಗಳ ಸರದಿ : ಮೈಸೂರಿನಲ್ಲಿ ವನ್ಯ ಪ್ರಾಣಿಗಳಿಗೆ ವಿಷ ಪ್ರಾಶನ

ಆನೆಗಳಾಯಿತು, ಈಗ ಚಿರತೆಗಳ ಸರದಿ : ಮೈಸೂರಿನಲ್ಲಿ ವನ್ಯ ಪ್ರಾಣಿಗಳಿಗೆ ವಿಷ ಪ್ರಾಶನ

- Advertisement -
- Advertisement -

ಕಾಡು ಮತ್ತು ಮನುಷ್ಯನ ನಡುವಿನ ಸಂಘರ್ಷ ತುಂಬಾ ಸುದೀರ್ಘವಾದದ್ದು. ಆರಂಭದಿಂದಲೂ ಮನುಷ್ಯ ಕಾಡು ಪ್ರಾಣಿಗಳ ಆವಾಸಸ್ಥಾನಗಳನ್ನು ವಶಪಡಿಸಿಕೊಳ್ಳುತ್ತಲೇ ಮುನ್ನುಗ್ಗುತ್ತಿದ್ದಾನೆ. ಕಾಡನ್ನು ನಾಡು ಮಾಡಿ ಬೃಹತ್‌ ಕಾಂಕ್ರೀಟ್‌ ನಗರಗಳನ್ನು ಕಟ್ಟುತ್ತಿದ್ದಾನೆ. ಆದರೆ ಮನುಷ್ಯನ ಈ ಕಟ್ಟುವಿಕೆ, ನಗರಗಳ ವಿಸ್ತರಿಸುವಿಕೆಗೆ ಕೊನೆಯೆಂಬುದೇನೂ ಇಲ್ಲ. ಕಾಡಿದ್ದ ಜಾಗಗಳಲ್ಲಿ ನಾಡು ಹುಟ್ಟಿಕೊಂಡ ಪರಿಣಾಮವಾಗಿ ಇಂದು ಕಾಡು ಪ್ರಾಣಿಗಳ ಉಪಟಳ ಮನುಷ್ಯನಿಗೆ ಹೆಚ್ಚಾಗಿದೆ. ಆನೆ ಚಿರತೆಗಳು ನಗರಗಳತ್ತ ಆಹಾರ ಹುಡುಕಿ ಬರುವುದು ಸಾಮಾನ್ಯವಾಗಿದೆ. ಒಂದು ಕಾಲದಲ್ಲಿ ಸಮೃದ್ಧ ಕಾಡಿನಿಂದ ಸುತ್ತುವರೆದಿದ್ದ ಬೆಂಗಳೂರು, ಮೈಸೂರು ನಗರಗಳು ಇಂದು ಬಟಾಬಯಲಾಗಿವೆ. ಆದರೆ ಕಾಡು ಪ್ರಾಣಿಗಳು ತಮ್ಮ ಹಳೆಯ ಆವಾಸ ಸ್ಥಾನಗಳನ್ನು ಇನ್ನು ಮರೆತಿಲ್ಲ. ಆಗಾಗ ನಗರಗಳಿಗೆ ಭೇಟಿಕೊಟ್ಟು ತಮ್ಮ ಆಹಾರಗಳನ್ನು ಹುಡುಕುತ್ತವೆ. ಹೀಗಾಗಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಆಗಾಗ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಕಾಡು ಪ್ರಾಣಿಗಳು ನಗರಕ್ಕೆ ಬರುವುದನ್ನು ಸಹಿಸದ ಮನುಷ್ಯ ಅವುಗಳನ್ನು ಹೇಗಾದರೂ ಮಾಡಿ ಕೊಲ್ಲಲು ಪ್ರಯತ್ನಿಸುತ್ತಾನೆ. ವಿದ್ಯುತ್‌ ಬೇಲಿಗಳನ್ನು ಹಾಕಿ ಆನೆಗಳನ್ನು ಸಾಯಿಸಲು ಯತ್ನಿಸುತ್ತಾನೆ. ವಿಷ ಹಾಕಿ ಚಿರತೆಗಳನ್ನು ಕೊಲ್ಲುತ್ತಾನೆ. ಜಿಂಕೆಗಳನ್ನು ಭೇಟೆಯಾಡುತ್ತಾನೆ.

ಹೀಗೆ ಮನುಷ್ಯ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಮೈಸೂರಿನಲ್ಲಿ ತಾರಕಕ್ಕೆ ಹೋಗಿದೆ. ಹಿಂದೆ ವಿದ್ಯುತ್‌ ಬೇಲಿಯ ಮೂಲಕ ಮತ್ತು ವಿಷ ಉಣಿಸುವ ಮೂಲಕ ಅನೇಕ ಆನೆಗಳನ್ನು ಸಾಯಿಸಲಾಗಿತ್ತು. ಈಗ ಮತ್ತೆ ಅಂತಹುದೇ ವರದಿ ಬೆಳಕಿಗೆ ಬಂದಿದೆ. ಈ ಸಾರಿ ಜನರ ಕ್ರೌರ್ಯಕ್ಕೆ ಬಲಿಯಾಗಿರುವುದು ಚಿರತೆಗಳು. ಮೈಸೂರಿನ ನಂಜನಗೂಡು ಮತ್ತು ಹೆಚ್‌.ಡಿ.ಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ ಕಳೆದ 20 ದಿನಗಳಲ್ಲಿ 6 ಚಿರತೆಗಳನ್ನು ವಿಷವಿಟ್ಟು ಕೊಲ್ಲಲಾಗಿರುವ ಘಟನೆಗಳು ನಡೆದಿವೆ. ಈ ಘಟನೆಯು ಪರಿಸರ ಪ್ರಿಯಯನ್ನು ಕೆರಳಿಸಿದೆ. ಚಿರತೆಗಳನ್ನು ಸಾಯಿಸುತ್ತಿರುವ ದುಷ್ಕರ್ಮಿಗಳನ್ನು ಬಂಧಿಸುವಂತೆ ಅನೇಕರು ಅರಣ್ಯ ಇಲಾಖೆಯ ಮೇಲೆ ಒತ್ತಡ ತರುತ್ತಿದ್ದಾರೆ.

ಇನ್ನು ಓದಿ : ಉದ್ದ ಕೂದಲು ಬಿಟ್ಟ ಕಾರಣಕ್ಕೆ ಪಾಕಿಸ್ತಾನದ ಕಲಾವಿದನನ್ನು ಬಂಧಿಸಿದ ಪೊಲೀಸರು! ತೀವ್ರ ಖಂಡನೆ

2009 ರಲ್ಲಿ ಇದೇ ರೀತಿ ಉಲ್ಲಹಳ್ಳಿ ಕಾಲುವೆಯ ಎಡದಂಡೆಯ ಮೇಲೆ ಏಕಾ ಏಕಿ ನಾಲ್ಕು ಆನೆಗಳ ಮೃತದೇಹ ಕಂಡುಬಂದಿತ್ತು. ಆಗ ಸೈನೆಡ್‌ ಮೂಲಕ ಆನೆಗಳನ್ನು ಕೊಂದಿರುವುದು ತನಿಖೆ ವೇಳೆ ತಿಳಿದುಬಂದಿತ್ತು. ಅಂದು ಕರ್ನಾಟಕ ಹೈಕೋರ್ಟ್‌ ಸಮಿತಿಯೊಂದನ್ನು ನೇಮಿಸಿ ತನಿಖೆ ನಡೆರಸುವಂತೆ ಅರಣ್ಯ ಇಲಾಖೆಗೆ ಆದೇಶಿಸಿತ್ತು. ಆದರೆ 10 ವರ್ಷಗಳ ನಂತರವೂ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವ ಕಾರ್ಯ ನಡೆದಿಲ್ಲ.

ಚಿರತೆಗಳ ಶವದ ಜೊತೆ ಅರ್ಧ ತಿಂದ ನಾಯಿಯ ಮೃತದೇಹ ಕಂಡುಬಂದಿದೆ. ನಾಯಿಗಳಿಗೆ ವಿಷವುಣಿಸಿ ಅವನ್ನು ಚಿರತೆಗೆ ಬಲಿ ಕೊಟ್ಟಿರುವುದು ಮೇಲ್ನೋಟಕ್ಕೆ ತಿಳಿದುಬರುವ ಸಂಗತಿ.  ಅರಣ್ಯ ಇಲಾಖೆ ನಾಯಿಯ ಮೃತದೇಹ ಹಾಗೂ ಚಿರತೆಯ ಮೃತದೇಹ ಎರಡನ್ನೂ ಬೆಂಗಳೂರಿನ ಎನಿಮಲ್‌ ಹೆಲ್ತ್‌ ಎಂಡ್‌ ವೆಟರ್ನರಿ ಬಯೋಲಾಜಿಕಲ್‌ ಇನ್ಸ್‌ಟಿಟ್ಯೂಗೆ ಕಳುಹಿಸಿದೆ. ಬೆಂಗಳೂರು ಬಿಟ್ಟರೆ ಮತ್ತೆ ಹತ್ತಿರದಲ್ಲೆಲ್ಲೂ ಸದ್ಯ ಪ್ರಾಣಿಗಳ ದೇಹವನ್ನು ಪರೀಕ್ಷಿಸುವ ವಿಧಿ ವಿಜ್ಞಾನ ಪ್ರಯೋಗಾಯಲಯವಿಲ್ಲದಿರುವುದು ಇನ್ನೊಂದು ಸಮಸ್ಯೆಯಾಗಿದೆ.

 

ಈ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು, ಪ್ರಾಣಿ ಹಂತಕರನ್ನು ಬಂಧಿಸದೇ ಇರುವುದರಿಂದ ವನ್ಯ ಪ್ರಾಣಿಗಳನ್ನು ಸಾಯಿಸುವ ಘಟನೆ ಮರುಕಳಿಸುತ್ತಿದೆ. ಅರಣ್ಯ ಇಲಾಖೆ ತನಿಖೆಯನ್ನು ನಡೆಸಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಹಾಗಾಗಿ ಜನರು ಇನ್ನು ಧೈರ್ಯದಿಂದ ವನ್ಯ ಪ್ರಾಣಿಗಳನ್ನು ಸಾಯಿಸಲು ಮುಂದಾಗುತ್ತಿದ್ದಾರೆ ಎಂದು ಪ್ರಾಣಿ ತಜ್ಞ ಡಾ ನಾಗರಾಜ್‌ ತಿಳಿಸುತ್ತಾರೆ. ನಾಗರಾಜ್‌ ಹಿಂದೆ ಅರಣ್ಯ ಇಲಾಖೆಯ ಜೊತೆ ಅನೇಕ ಕಡೆ ಆನೆ ಸೆರೆಹಿಡಿಯುವ ಕೆಲಸದಲ್ಲೂ ಭಗವಹಿಸಿದ್ದಾರೆ. ನಾವು ಹತ್ತಿರದ ಕೃಷಿಕರನ್ನೋ ಅಥವಾ ಹಳ್ಳಿಗರನ್ನು ಚಿರತೆ ಹಂತಕರೆಂದು ಹೇಳಲು ಸಾಧ್ಯವಿಲ್ಲ. ಬೇರೆ ಎಲ್ಲಿಂದಲೋ ವಿಷವುಣಿಸಿದ ನಾಯಿಯಯನ್ನು ಚಿರತೆ ಭೇಟೆಯಾಡಿ ಇಲ್ಲಿಗೆ ಎಳೆದುಕೊಂಡಿರಬಹುದು. ಹಾಗೇ ಯಾರಾದರೂ ಕಿಡಿಗೇಡಿಗಳು ಕೃಷಿಕರಿಗೆ ತೊಂದರೆ ಕೊಡಲು ಹೀಗೆ ಚಿರತೆಯನ್ನು ಸಾಯಿಸಿರಬಹುದು. ತನಿಖೆಯಾಗದೇ ಯಾವುದನ್ನೂ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕಿದೆ ಎಂದು ಡಾ. ನಾಗರಾಜ್‌ ಚಿರತೆಗಳ ಸಾವಿನ ವಿಚಾರದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಹಳ್ಳಿಗರು ಚಿರತೆಯಿಂದ ತಮ್ಮ ಆಡು, ಕುರಿ, ಹಸು ಮೇಯಿಸಲು ಹೆದರಿಕೆಯಾಗುತ್ತಿದೆ. ನಮ್ಮ ಜಾನುವಾರುಗಳನ್ನು ಚಿರತೆ ಹಿಡಿದುಕೊಂಡು ಹೋಗುತ್ತಿದೆ. ನಮಗೆ ಯಾವುದೇ ಪರಿಹಾರ ಬಂದಿಲ್ಲ ಎಂದು ರೈತರು ಚಿರತೆಗಳ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಕಬಿನಿ ಎಡ ಕಾಲುವೆಯ ಮೇಲೆ ನನ್ನ ಆಡಿನ ಹಿಂಡನ್ನು ಮೇಯಿಸುತ್ತಿರುವಾಗ ಚಿರತೆಯೊಂದು ನನ್ನ ಕುರಿಗಳ ಮೇಲೆ ದಾಳಿ ಮಾಡಿತು. ನಾನು ತಕ್ಷಣ ಕಿರುಚಿಕೊಂಡಿದ್ದಕ್ಕೆ ಹಾಗೇ ಕುರಿಗಳನ್ನು ಬಿಟ್ಟು ಓಡಿತು ಎಂದು ಮಾಡನಹಳ್ಳಿಯ ಗೋವಿಂದ್‌ ನಾಯ್ಕ್‌ ಎಂಬ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕಾಡು ಹಂದಿ ಮತ್ತು ನವಿಲಿನ ಕಾಟದಿಂದ ನಮ್ಮ ಹೂವಿನ ತೋಟಗಳು ನಾಶವಾಗುತ್ತಿವೆ. ತರಕಾರಿ ತೋಟಗಳಿಗೂ ಕಾಡುಪ್ರಾಣಿಯ ಕಾಟ ತಪ್ಪುತ್ತಿಲ್ಲ ಎಂದು ಗೊಲ್ಲೂರಿನ ಪ್ರಭುದೇವ ಎಂಬ ರೈತರು ವನ್ಯ ಮೃಗಗಳಿಂದಾಗುವ ತಮ್ಮ ಕಷ್ಟಗಳನ್ನು ತೋಡಿಕೊಳ್ಳುತ್ತಾರೆ. ಲಾಕ್‌ ಡೌನ್‌ ಕಾರಣದಿಂದ ರಸ್ತೆಯಲ್ಲಿ ವಾಹನಗಳ ಸಂಚಾರ ಕಡಿಮೆ ಇರುವುದರಿಂದ ಕಾಡು ಪ್ರಾಣಿಗಳು ಮನುಷ್ಯರ ವಸತಿ ಪ್ರದೇಶಕ್ಕೆ ನುಗ್ಗುತ್ತಿವೆ ಎಂದು ಪ್ರಾಣಿ ಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ.

ಬೆಂಗಳೂರಿನ ಹೆಬ್ಬಾಳದ ವೆಟರ್ನರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಪ್ರಾಣಿತಜ್ಞ ಡಾ. ಪ್ರಯಾಗ್‌ ಹೆಚ್‌.ಎಸ್‌ ಅವರ ಪ್ರಕಾರ, “ಚಿರತೆಗಳು ರಾತ್ರಿ ಹೊತ್ತಿನಲ್ಲಿ ಹಳ್ಳಿಗಳ ಕಡೆಗೆ ಬರುತ್ತವೆ. ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತುಕೊಳ್ಳುತ್ತವೆ. ಚಿರತೆಗಳನ್ನು ಕಂಡು ಜನರು ಗಾಬರಿಯಾಗುತ್ತಾರೆ. ಅದೇ ಭಯದಿಂದ ಚಿರತೆಗಳಿಗೆ ವಿಷ ಉಣಿಸುವಂತಹ ಕೆಲಸಕ್ಕೆ ಮುಂದಾಗುತ್ತಾರೆ. ಮುನುಷ್ಯ ಕಾಡು ಪ್ರಾಣಿಗಳ ಕುರಿತು ಹೆಚ್ಚು ತಿಳಿದುಕೊಳ್ಳಬೇಕು. ಅವುಗಳ ವರ್ತನೆಯನ್ನು ಅರ್ಥಮಾಡಿಕೊಳ್ಳಬೇಕು. ಅರಣ್ಯ ಇಲಾಖೆ ಸುತ್ತ ಮುತ್ತದ ಹಳ್ಳಿಗಳಲ್ಲಿ ವನ್ಯಪ್ರಾಣಿ ಸಂರಕ್ಷಣೆ ಕುರಿತು ಅರಿವು ಮೂಡಿಸಬೇಕು. ಆಗ ಜನರು ಕಾಡು ಪ್ರಾಣಿಗಳನ್ನು ತಮ್ಮ ಶತ್ರುಗಳ ರೀತಿ ನೋಡುವುದು ಕಡಿಮೆಯಾಗುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಚಿರತೆಯ ದೇಹದ ಮರಣೋತ್ತರ ಪರೀಕ್ಷೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಆ ವರದಿ ಬಂದ ಮೇಲೆ ಘಟನೆ ಕುರಿತು ಸ್ಪಷ್ಟ ಮಾಹಿತಿ ಸಿಗಲಿದೆ. ಸದ್ಯ 5 ಜನ ಶಂಕಿತರ ಮೇಲೆ ಕಣ್ಣಿಟ್ಟಿದ್ದೇವೆ. ಅವರ ವಿಚಾರಣೆಯನ್ನು ನಡೆಸುತ್ತಿದ್ದೇವೆ. ಪ್ರಕರಣವನ್ನು ಬೇಧೀಸುವಂತಹ ಮಾಹಿತಿಗಳು ನಮಗೆ ದೊರೆತಿದೆ ಎಂದು ಡಿಸಿಎಫ್‌ ಪ್ರಶಾಂತ್‌ ಪ್ರಕರಣದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ವನ್ಯಪ್ರಾಣಿ ಮತ್ತು ಮನುಷ್ಯನ ಸಂಘರ್ಷಗಳು ಪದೇ ಪದೇ ಮೈಸೂರು ಸುತ್ತ ಮುತ್ತ ವರದಿಯಾಗುತ್ತಿವೆ. ನಾಗರಹೊಳೆ, ಬಂಡಿಪುರ ಎರಡು ರಾಷ್ಟ್ರೀಯ ಉದ್ಯಾನಗಳಿಂದ ಸುತ್ತು ವರಿದಿರುವ ಮೈಸೂರಿನಲ್ಲಿ ಆದಷ್ಟು ವನ್ಯಮೃಗಗಳ ಹತ್ಯೆ ನಿಲ್ಲಬೇಕಿದೆ.

ಮೂಲ : ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌

ಅನುವಾದ : ರಾಜೇಶ್‌ ಹೆಬ್ಬಾರ್‌ 


ಇದನ್ನೂ ಓದಿ : ಗುಜರಾತ್ ಪರಿಸ್ಥಿತಿ ಈಗ ಬದಲಾಗಲಿದೆ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...