ದೇಶದಲ್ಲಿ ಕಾರ್ಮಿಕರು ಇನ್ನುಮುಂದೆ 12 ಗಂಟೆ ಕೆಲಸ ಮಾಡಬೇಕು. ಕೇಂದ್ರ ಸರ್ಕಾರ ಇಂಥದ್ದೊಂದು ನಿಯಮ ರೂಪಿಸಿದ್ದು ಗುಜರಾತ್ ಸರ್ಕಾರ ಇದನ್ನು ಯಥಾವತ್ತಾಗಿ ಜಾರಿಗೆ ತಂದಿದೆ. ಇದುವರೆಗೆ ಎಂಟು ಗಂಟೆ ದುಡಿಯುತ್ತಿದ್ದ ಕಾರ್ಮಿಕರು ಈಗ 12 ಗಂಟೆಗಳು ಕೆಲಸದ ಸ್ಥಳದಲ್ಲೇ ಉಳಿಯುವ ಪರಿಸ್ಥಿತಿ ಬರಲಿದೆ. ಅಂದರೆ ಕಾರ್ಮಿಕರು ಮತ್ತೆ ನಾಲ್ಕು ಗಂಟೆ ಹೆಚ್ಚುವರಿ ಕೆಲಸ ಮಾಡಬೇಕಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹೊಸ ನಿಯಮ ಜಾರಿಗೆ ಬಂದರೆ ಮಾಲಿಕರ ಆದಾಯ, ಲಾಭಾಂಶ ಹೆಚ್ಚಳಕ್ಕೆ ದಾರಿಯಾಗಲಿದೆ ಮತ್ತು ಕಾರ್ಮಿಕರು ಮಾನಸಿಕ, ದೈಹಿಕ ಒತ್ತಡಗಳಿಗೆ ಸಿಲುಕಿ ಆರೋಗ್ಯ ಕ್ಷೀಣವಾಗುವ ಸಾಧ್ಯತೆ ಹೆಚ್ಚಾಗಿದೆ.
ಕೈಗಾರಿಕೆಗಳು ಆರಂಭವಾದ ದಿನಗಳಲ್ಲಿ ಕಾರ್ಮಿಕರು ಜೀತದಾಳುಗಳಂತೆ, ಪಶುಗಳಂತೆ ದುಡಿಯುತ್ತಿದ್ದರು. ಕೆಲಸ ಮಾಡುವ ಸ್ಥಳದಲ್ಲಿ ಅವರಿಗೆ ಯಾವುದೇ ಸೌಲಭ್ಯಗಳು ಇರಲಿಲ್ಲ. ಹೋರಾಟಗಳು ತೀವ್ರಗೊಂಡ ಬಳಿಕ ವಿಶ್ವದಲ್ಲಿ ಸೂಕ್ತ ವ್ಯವಸ್ಥೆ ಜಾರಿಗೆ ಬಂತು. ಪರಿಣಾಮ ಕಾರ್ಮಿಕರು ಎಂಟು ದುಡಿಯಲು ಅವಕಾಶವಾಯಿತು. ಇದೇವೇಳೆ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಒಡಂಬಡಿಕೆಗೆ ಹಲವು ದೇಶಗಳು ಸಹಿ ಹಾಕಿದವು. ಅದರಲ್ಲಿ ಭಾರತವೂ ಒಂದು. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಹೊಸ ಕಾನೂನು ತಂದು ಐಎಲ್ಒ ಒಡಂಬಡಿಕೆಯನ್ನು ಉಲ್ಲಂಘಿಸಿದೆ. ಈ ಮೂಲಕ ದೇಶದಲ್ಲಿ ನಿರುದ್ಯೋಗದ ಹೆಚ್ಚಳಕ್ಕೆ ಮಾರ್ಗ ಕಲ್ಪಿಸಿದೆ. ನಿರುದ್ಯೋಗಿಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿರುವ ಹೊತ್ತಿನಲ್ಲಿ ಇಂಥ ಮಾರಕವಾದ ಕಾನೂನು ತಂದು ಕೇಂದ್ರ ಸರ್ಕಾರ ಬಂಡವಾಳಿಗರ ಪರ ತಾನಿದ್ದೇನೆ ಎಂಬುದನ್ನು ಸಾಬೀತುಪಡಿಸಿದೆ.

ಐಎಲ್ಓ ತೀರ್ಮಾನದಂತೆ ದಿನಕ್ಕೆ ಎಂಟು ಗಂಟೆ, ವಾರಕ್ಕೆ 48 ಗಂಟೆ ಕಾರ್ಮಿಕರು ಕೆಲಸ ಮಾಡಬೇಕೆಂಬ ನಿಯಮವಿದೆ. ಇದನ್ನು ಕೇಂದ್ರ ಸರ್ಕಾರ ಧಿಕ್ಕರಿಸಿದೆ. ಉಳ್ಳವರ ಪರ ನಿಂತುಕೊಂಡಿದೆ. ಮಾಲಿಕರಿಗೆ ಲಾಭ ಮಾಡಿಕೊಡುವ ಉದ್ದೇಶ ಕೆಲಸದ ಅವಧಿ ಹೆಚ್ಚಳ ಮಾಡಿರುವುದರ ಹಿಂದೆ ಅಡಗಿದೆ. ಕಾರ್ಮಿಕರಿಗೆ ಸಂಬಳ ಕಡಿಮೆ ಮಾಡುವ ಹುನ್ನಾರವೂ ಇದೆ. ಕೆಲಸದ ಅವಧಿ ಕಡಿಮೆ ಮಾಡಬೇಕೇ ವಿನಃ ಹೆಚ್ಚಳ ಮಾಡುವುದು ಸರ್ವಸಮ್ಮತವಲ್ಲ. ಕೇಂದ್ರದ ಈ ಕ್ರಮದಿಂದ ಹಲವರು ಉದ್ಯೋಗ ಕಳೆದುಕೊಳ್ಳುತ್ತಾರೆ. ನಿರುದ್ಯೋಗಿಗಳ ಸಂಖ್ಯೆ ಅಧಿಕವಾಗುತ್ತದೆ. ಹಾಗಾಗಿ ಸರ್ಕಾರ ಈಗಿರುವ ಪಾಳಿಯ ಅವಧಿಯನ್ನು ಕಡಿಮೆ ಮಾಢಬೇಕು. ಒಂದು ಪಾಳಿ 4 ರಿಂದ 6 ಗಂಟೆಗೆ ಇಳಿಸಿದರೆ ಎಲ್ಲರಿಗೂ ಉದ್ಯೋಗ ದೊರೆಯುತ್ತದೆ. ಪಾಳಿಗಳೂ ಹೆಚ್ಚಿ ಉತ್ಪಾದನೆ ದ್ವಿಗುಣವಾಗುತ್ತದೆ. ಆದರೆ ಕೇಂದ್ರ ಸರ್ಕಾರಕ್ಕೆ ಕಾರ್ಮಿಕರ ಹಿತಕ್ಕಿಂದ ಮಾಲಿಕರಿಗೆ ಸಹಕರಿಸುವುದು ಮುಖ್ಯವಾಗಿದೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ನಾನುಗೌರಿ.ಕಾಂಗೆ ತಿಳಿಸಿದರು.
ಕಾರ್ಮಿಕ ಸಂಘಟನೆಗಳ ವ್ಯಾಪಕ ವಿರೋಧದ ನಡುವೆಯೇ ಗುಜರಾತ್ ಸರ್ಕಾರ ಕಾರ್ಮಿಕರನ್ನು 12 ಗಂಟೆ ದುಡಿಸಿಕೊಳ್ಳುತ್ತಿದ್ದು ಕೇಂದ್ರ ಸರ್ಕಾರದ ಕಾನೂನನ್ನು ದೇಶದಲ್ಲೇ ಮೊದಲು ಜಾರಿಗೆ ತಂದ ರಾಜ್ಯವಾಗಿದೆ. ಬಿಜೆಪಿ ಸರ್ಕಾರದ ರಾಜ್ಯಗಳಲ್ಲಿ ಕೇಂದ್ರದ ಕಾನೂನು ಯಥಾವತ್ತು ಜಾರಿಯಾಗಲಿದೆ. ರಾಜ್ಯ ಸರ್ಕಾರಗಳಿಗೆ ಕೇಂದ್ರದ ನಿಯಮವನ್ನು ನಿರಾಕರಿಸುವ ಅಧಿಕಾರವಿದೆ. ಆದರೂ ರಾಜ್ಯದಲ್ಲಿ ಈ ಕಾನೂನು ಜಾರಿಗೊಂಡರೆ ಪ್ರತಿಯೊಬ್ಬ ಕಾರ್ಮಿಕರು 12 ಗಂಟೆ ದುಡಿಯುವುದು ಕಡ್ಡಾಯವಾಗಲಿದೆ. ಕೆಲಸದ ಅವಧಿ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಕಾರ್ಮಿಕರು ಅದರಲ್ಲೂ ಮಹಿಳಾ ಕಾರ್ಮಿಕರು ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. 24 ಗಂಟೆಗೆ ಮೂರು ಪಾಳಿಗಳಿದ್ದವು ಇನ್ನು ಮುಂದೆ ಎರಡೇ ಪಾಳಿಯಾಗಲಿವೆ. ಕುಟುಂಬದೊಂದಿಗೆ ಕಾರ್ಮಿಕರು ಕಾಲ ಕಳೆಯುವುದು ತಪ್ಪಲಿದ್ದು ಮಾನಸಿಕ ಖಿನ್ನತೆಗೆ ಒಳಗಾಗಲಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿರುವುದನ್ನೇ ಲಾಭ ಮಾಢಿಕೊಂಡು ಹೋರಾಟಗಳನ್ನು ರೂಪಿಸಲು ಆಗದಂತಹ ಪರಿಸ್ಥಿತಿಯಲ್ಲಿ ಇಂಥದ್ದೊಂದು ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಕೇಂದ್ರದ ಅವೈಜ್ಞಾನಿಕ ತೀರ್ಮಾನದಿಂದ ಶೇಕಡ 40ರಷ್ಟು ಉದ್ಯೋಗಗಳಿಗೆ ಕತ್ತರಿ ಬೀಳಲಿದೆ. ದೊಡ್ಡ ಪ್ರಮಾಣದ ನಿರುದ್ಯೋಗಕ್ಕೆ ಭಾಷ್ಯ ಬರೆಯಲಿದೆ. ಸಮಾಜದಲ್ಲಿ ಅಸಮತೋಲನ ಉಂಟಾಗಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಲು ಕಾರಣವಾಗಿದೆ ಎಂಬ ಆತಂಕ ವ್ಯಕ್ತವಾಗಿದೆ. ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುವ ಕಾರ್ಮಿಕರಿಗೆ ಕೇಂದ್ರದ ತೀರ್ಮಾನ ಮರಣಶಾಸನವಾಗಿದೆ. ಮೊದಲ ಅವಧಿಯಲ್ಲೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 12 ಗಂಟೆ ಕೆಲಸದ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ವಾಪಸ್ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗಲೂ ಕೇಂದ್ರ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕಿದೆ.
ಇದನ್ನೂ ಓದಿ: ಕಾರ್ಮಿಕರಿಗೆ ವೇತನ ಸಹಿತ ಕೆಲಸದ ಭದ್ರತೆ ಆದೇಶವನ್ನು ಸರ್ಕಾರ ಎರಡೇ ದಿನದಲ್ಲಿ ಹಿಂಪಡೆದದ್ದು ಏಕೆ?



ಈ ಕಾರ್ಮಿಕ ವಿರೋಧಿ ಕಾನೂನಿಗೆ ದಿಕ್ಕಾರ.