“ಅವತ್ತು ನಾನು ಸ್ವಲ್ಪ ಮೀನು ತೆಗೆದಿದ್ದೆ. ಅದಕ್ಕೆ ಅವರು ಮೀನು ಕದ್ದಿದಾಳೆ ಎಂದು ಹೇಳಿ ನನಗೆ ಹಲ್ಲೆ ಮಾಡಿದರು. ಈ ಘಟನೆ ನಡೆದ ಬಳಿಕ ನಾನು ಬಂದರಿಗೆ ಹೋಗಿಲ್ಲ. ಇನ್ನು ಇಲ್ಲಿ ಕೆಲಸ ಮಾಡುವುದು ಕಷ್ಟ. ಅದಕ್ಕೆ ನಾನು ಊರಿಗೆ ಹೋಗುತ್ತೇನೆ” ಎಂದು ಉಡುಪಿಯ ಮಲ್ಪೆ ಬಂದರಿನಲ್ಲಿ ಹಲ್ಲೆಗೊಳಗಾದ ದಲಿತ ಮಹಿಳೆ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಮೀನು ಕದ್ದ ಆರೋಪದ ಮೇಲೆ ವಿಜಯನಗರ ಜಿಲ್ಲೆ ಮೂಲದ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದ ವಿಡಿಯೋ ಮಾರ್ಚ್ 18ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಪ್ರಕರಣ ಸಂಬಂಧ 6 ಮಂದಿಯನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಎಲ್ಲಾ ಬಂಧಿತರನ್ನು ಏಪ್ರಿಲ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ಕುರಿತು ಸರಿಯಾಗಿ ಮಾಹಿತಿ ಸಂಗ್ರಹಿಸದ ಕಾರಣ ಮಲ್ಪೆ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸುರೇಶ್ ಮತ್ತು ಕಾನ್‌ಸ್ಟೇಬಲ್ ನಾಗರಾಜ್ ಅವರನ್ನು ಅಮಾನತುಗೊಳಿಸಲಾಗಿದೆ.
ತನ್ನ ಮೇಲೆ ಹಲ್ಲೆ ನಡೆದಿರುವ ಕುರಿತು ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಹಿಳೆ, “ನಾನು ಅವತ್ತು ಸ್ವಲ್ಪ ಮೀನು ತೆಗೆದಿರುವುದು ಹೌದು. ಮಲ್ಪೆ ಬಂದರಿನಲ್ಲಿ ಆ ರೀತಿ ಮೀನು ತೆಗೆಯುವುದು ಸಹಜ. ಆದರೆ ಅವತ್ತು ಏನೋ ನನ್ನ ಗ್ರಹಚಾರ ಸರಿ ಇರಲಿಲ್ಲ. ಅದಕ್ಕೆ ಏನು ಮಾಡಲು ಆಗಲ್ಲ. ಮೊನ್ನೆಯ ಘಟನೆ ಬಗ್ಗೆ ನನಗೆ ಏನೂ ಹೇಳಲು ಇಲ್ಲ. ನಾವು ನಮ್ಮ ಪಾಡಿಗೆ ದುಡಿದು ತಿನ್ನುತ್ತೇವೆ. ಈಗ ಇಲ್ಲಿ ಇರಲು ನನಗೆ ಆಗಲ್ಲ” ಎಂದಿದ್ದಾರೆ.
“ಈ ಪ್ರಕರಣದಲ್ಲಿ ಯಾರಿಗೆ ಏನು ಮಾಡುವುದು ಬೇಡ. ಅವರ ಪಾಡಿಗೆ ಅವರು, ನಮ್ಮ ಪಾಡಿಗೆ ನಾವು ಇರುತ್ತೇವೆ. ಘಟನೆಯ ಬಳಿಕ ನನಗೆ ಯಾರು ಕೂಡ ತೊಂದರೆ ಕೊಟ್ಟಿಲ್ಲ. ಘಟನೆ ನಡೆದ ದಿನ ರಾತ್ರಿ ಈ ವಿಚಾರದಲ್ಲಿ ರಾಜಿ ಮಾಡಿಕೊಂಡಿದ್ದೆವು. ಪ್ರಕರಣ ದಾಖಲಿಸುವುದು ಬೇಡ ಎಂದು ಮಾತನಾಡಿ ಬಂದಿದ್ದೆವು. ಅದರ ನಂತರ ಮೇಲಿನಿಂದ ಬಂದ ಒತ್ತಡಕ್ಕೆ ಮತ್ತೆ ಕರೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.
ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ಸಂತ್ರಸ್ತೆ
ಹಲ್ಲೆಗೊಳಗಾದ ಮಹಿಳೆ ಸಾಕ್ಷ್ಯ ಅಧಿನಿಯಮ ಕಲಂ 164 ಅಡಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ನೀಡಿದ್ದು, ಅದರಂತೆ ನ್ಯಾಯಾಧೀಶರು ಆ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.


