ಮಾರಿಷಸ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಟೀಕಿಸಿದ್ದು, ಮಣಿಪುರಕ್ಕೆ ಯಾವಾಗ? ಎಂದು ಪ್ರಶ್ನಿಸಿದೆ.
ಮಣಿಪುರದ ಜನರು ಪ್ರಧಾನಿಯ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಪ್ರಧಾನಿ ನಿರಂತರವಾಗಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ ನಂತರವೂ ಪರಿಸ್ಥಿತಿ ಉದ್ವಿಗ್ನವಾಗಿದೆ. ಅಲ್ಲಿನ ಜನರು ಎರಡು ವರ್ಷಗಳಿಂದ ಪ್ರಧಾನಿಯ ಭೇಟಿಗಾಗಿ ಕಾಯುತ್ತಲೇ ಇದ್ದಾರೆ. ಪ್ರಧಾನಿ ಭೇಟಿ ನೀಡಲು ನಿರಾಕರಿಸುವುದು ಮಣಿಪುರದ ಜನರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.
ಮಾರಿಷಸ್‌ಗೆ ತೆರಳಿರುವ ಪ್ರಧಾನಿ ಮೋದಿ ಅವರನ್ನು ಅಲ್ಲಿನ ಸರ್ಕಾರ ಸಾಂಪ್ರದಾಯಿಕವಾಗಿ ಸ್ವಾಗತಿಸಿ ಬರಮಾಡಿಕೊಂಡಿದೆ. ದ್ವೀಪ ರಾಷ್ಟ್ರದ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಮತ್ತು ದೇಶದ ಉನ್ನತ ನಾಯಕತ್ವದೊಂದಿಗೆ ಸಭೆ ನಡೆಸಲು ಮೋದಿ ತೆರಳಿದ್ದಾರೆ.
ಭೇಟಿಯ ಸಮಯದಲ್ಲಿ, ಎರಡೂ ದೇಶಗಳು ಸಾಮರ್ಥ್ಯ ವೃದ್ಧಿ, ವ್ಯಾಪಾರ ಮತ್ತು ಗಡಿಯಾಚೆಗಿನ ಆರ್ಥಿಕ ಅಪರಾಧಗಳನ್ನು ನಿಭಾಯಿಸುವ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಒದಗಿಸುವ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಿವೆ.
ಮಣಿಪುರದಲ್ಲಿ ಮೇ 2023ರಿಂದ ಇಂಫಾಲ್ ಕಣಿವೆ ಮೂಲದ ಮೈತೇಯಿಗಳು ಮತ್ತು ಪಕ್ಕದ ಬೆಟ್ಟಗಳ ಮೂಲದ ಕುಕಿ-ಝೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 220ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.


