ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ ದೂರವುಳಿದ ವಿಕೆಟ್ ಕೀಪರ್ ಎಂ.ಎಸ್.ಧೋನಿ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕುಟುಕಿದ್ದಾರೆ. ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಂತರ ವಿಕೆಟ್ ಕೀಪರ್, ಬ್ಯಾಟ್ಸಮನ್ ಧೋನಿ ವಿಶ್ರಾಂತಿಯಲ್ಲಿದ್ದಾರೆ. ಈಗಾಗಲೇ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡದ ಪಂದ್ಯದಿಂದ ಹೊರಗುಳಿದಿದ್ದಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಗೌತಮ್ ಗಂಭೀರ್ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಇದು ಕೇವಲ ಧೋನಿ ಒಬ್ಬರ ಭವಿಷ್ಯದ ವಿಷಯ ಮಾತ್ರವಲ್ಲ. ದೇಶದ ಕುರಿತ ವಿಷಯವಾದ್ದರಿಂದ ತಂಡವನ್ನು ಆಯ್ಕೆ ಮಾಡುವವರು ಗಂಭೀರವಾಗಿ ಚರ್ಚಿಸಬೇಕಾದ ವಿಷಯ ಎಂದು ಹೇಳುವ ಮೂಲಕ ಧೋನಿ ಅವರ ನಿವೃತ್ತಿ ಬಗ್ಗೆ ಟೀಕಿಸಿದ್ದಾರೆ. ನಿವೃತ್ತಿ ಎಂಬುದು ಅವರವರ ವೈಯಕ್ತಿಕ ವಿಷಯ. ದೇಶವನ್ನು ಪ್ರತಿನಿಧಿಸುವ ತಂಡದ ಆಟಗಾರನಾಗಿ ಆಡಬೇಕಾಗುತ್ತದೆ. ಆದರೆ ಭವಿಷ್ಯದ ಹಾಗೂ ಯೋಜನೆಗಳ ಬಗ್ಗೆ ನಿರ್ಣಯಿಸುವಾಗ ತಂಡದ ಆಯ್ಕೆದಾರರ ಜತೆ ಮಾತುಕತೆ ನಡೆಸುವುದು ಸೂಕ್ತ. ಆಟಗಾರ ತಂಡದಲ್ಲಿ ಆಡಬೇಕೇ ಹೊರತು, ತಾನು ಯಾವ ಸರಣಿಯಲ್ಲಿ ಆಡಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವಂತೆ ಇರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು 2023ರ ವರ್ಲ್ಡ್ ಕಪ್ ಟೂರ್ನಿ ಭಾರತದಲ್ಲಿ ನಡೆಯಲಿದೆ. ಪಂದ್ಯಕ್ಕಾಗಿ ಎಂ.ಎಸ್.ಧೋನಿ ಏನೇನು ಯೋಜನೆ ರೂಪಿಸಿದ್ದಾರೆ..? ಭಾರತ ತಂಡದ ಕ್ಯಾಪ್ಟನ್ ನಿರ್ಭೀಡೆಯಿಂದ ಧೋನಿ ಅವರೊಂದಿಗೆ ಈ ಕುರಿತು ಚರ್ಚಿಸಬೇಕು. ಧೋನಿ ಮುಂದಿನ ವರ್ಲ್ಡ್ ಕಪ್ ಪಂದ್ಯದಲ್ಲಿ ಆಡಲಿದ್ದಾರೋ, ಇಲ್ಲವೋ ಎಂಬುದನ್ನು ತಿಳಿಯಬೇಕು ಎಂದರು. ಈಗ ಧೋನಿ ಅನುಪಸ್ಥಿತಿಯಲ್ಲಿ 21 ವರ್ಷದ ಯುವ ಆಟಗಾರ ರಿಷಭ್ ಪಂತ್, ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇತರರನ್ನು ಅವರೊಟ್ಟಿಗೆ ಹೋಲಿಕೆ ಮಾಡದೇ ಯುವ ಆಟಗಾರರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.


