ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಹೆಹ್ಲೋಟ್ ಸದನವನ್ನು ಉದ್ದೇಶಿಸಿ ಸಂಪೂರ್ಣ ಸಾಂಪ್ರದಾಯಿಕ ಭಾಷಣವನ್ನು ಓದದೆ ವಿಧಾನಸಭೆಯಿಂದ ನಿರ್ಗಮಿಸಿರುವುದು ಇದೀಗ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಮಾಡುವ ಪದ್ಧತಿಯನ್ನು ಕೊನೆಗೊಳಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಎರಡು ದಿನಗಳ ಹಿಂದೆ ತಮಿಳುನಾಡು ಮತ್ತು ಕೇರಳದ ಆಯಾ ಶಾಸಕಾಂಗ ಸಭೆಗಳಲ್ಲಿ ಸಹ ರಾಜ್ಯಪಾಲರು ಇದೇ ರೀತಿಯ ನಡೆದುಕೊಂಡುವುದನ್ನು ಅವರು ಉಲ್ಲೇಖಿಸಿದ್ದಾರೆ.
“ಮೊದಲು ತಮಿಳುನಾಡು.. ನಂತರ ಕೇರಳ. ಈಗ ಕರ್ನಾಟಕ. ಮಾದರಿ ಸ್ಪಷ್ಟ ಮತ್ತು ಉದ್ದೇಶಪೂರ್ವಕವಾಗಿದೆ. ರಾಜ್ಯ ಸರ್ಕಾರಗಳು ಸಿದ್ಧಪಡಿಸಿದ ಭಾಷಣವನ್ನು ಓದಲು ನಿರಾಕರಿಸುವ ರಾಜ್ಯಪಾಲರು ಪಕ್ಷದ ಏಜೆಂಟ್‌ಗಳಂತೆ ವರ್ತಿಸುತ್ತಿದ್ದಾರೆ. ಸರಿಯಾಗಿ ಚುನಾಯಿತ ರಾಜ್ಯ ಸರ್ಕಾರಗಳನ್ನು ದುರ್ಬಲಗೊಳಿಸುತ್ತಿದ್ದಾರೆ” ಎಂದು ಅವರು ತಮ್ಮ ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ಈಗ ಇರುವ ಏಕೈಕ ಪರಿಹಾರವೆಂದರೆ ಮೊದಲ ವಾರ್ಷಿಕ ವಿಧಾನಸಭೆ ಅಧಿವೇಶನವನ್ನು ರಾಜ್ಯಪಾಲರ ಭಾಷಣದೊಂದಿಗೆ ಪ್ರಾರಂಭಿಸುವ ಪದ್ಧತಿಯನ್ನು ಕೊನೆಗೊಳಿಸುವುದು” ಎಂದು ಸ್ಟಾಲಿನ್ ಹೇಳಿದರು.
ಡಿಎಂಕೆ, ಭಾರತದಾದ್ಯಂತ ಸಮಾನ ಮನಸ್ಕ ವಿರೋಧ ಪಕ್ಷಗಳೊಂದಿಗೆ ಸಮಾಲೋಚಿಸಿ, ಮುಂದಿನ ಸಂಸತ್ತಿನ ಅಧಿವೇಶನದಲ್ಲಿ ಈ “ಬಳಕೆಯಲ್ಲಿಲ್ಲದ ಮತ್ತು ಅಪ್ರಸ್ತುತ ಅಭ್ಯಾಸ”ವನ್ನು ರದ್ದುಗೊಳಿಸಲು ಸಾಂವಿಧಾನಿಕ ತಿದ್ದುಪಡಿಗೆ ಒತ್ತಾಯಿಸುತ್ತದೆ ಎಂದು ಅವರು ಪುನರುಚ್ಚರಿಸಿದರು.


