ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ವಿಜಯೇಂದ್ರ ಅವರ ನೇಮಕದ ಬಗ್ಗೆ ಮಾಜಿ ಸಿಎಂ, ಕಾಂಗ್ರೆಸ್ ಎಂಎಲ್‌ಸಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು, ವಿಜಯೇಂದ್ರ ಅವರದ್ದು ಅತ್ತೂ ಕರೆದು ಔತಣ ಮಾಡಿಸಿಕೊಂಡಂತಹ ಸ್ಥಿತಿ ಎಂದು ಹೇಳಿದ್ದಾರೆ.
ನಾನು ಕಾಂಗ್ರೆಸ್‌ನಲ್ಲಿ ಇದ್ದೀನಿ. ಅಧ್ಯಕ್ಷರ ಆಯ್ಕೆ ಅವರ ಪಕ್ಷಕ್ಕೆ ಬಿಟ್ಟ ವಿಚಾರ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ ಬಂದು ಬಲಾಢ್ಯವಾಗಿ ಬೆಳೆದಿದೆ. ಬಿಜೆಪಿಯವರು ಈಗಾಗಲೇ ಬೇರೆ ರಾಜ್ಯದಲ್ಲಿ ಆಪರೇಷನ್ ಕಮಲ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ. 50-60 ಶಾಸಕರನ್ನು ಕರೆದುಕೊಂಡು ಬಂದು ಮತ್ತೆ ಸರ್ಕಾರ ರಚನೆ ಮಾಡುವುದು ಭ್ರಮೆ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಪಂಚ ರಾಜ್ಯದ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪರವಾಗಿ ಬರುತ್ತದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ವಿಜಯೇಂದ್ರ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಲು ಮೋದಿಯವರು ಯಾವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ದಿನೇಶ್ ಗುಂಡೂರಾವ್, ಗಾಜಿನ ಮನೆಯಲ್ಲಿ ಕುಳಿತು ಕಲ್ಲೆಸೆಯುವ ಮೊದಲು ತಾವೆಲ್ಲಿ ಕುಳಿತಿದ್ದೇವೆ ಎಂಬ ವಾಸ್ತವ ಅರಿಯಬೇಕು. ಬೇರೆಯವರು ಮಾಡಿದರೆ ಅಪರಾಧ, ತಾನು ಮಾಡಿದರೆ ಆದರ್ಶ ಎಂಬ ಭ್ರಮೆ ಒಳ್ಳೆಯದಲ್ಲ ಮೋದಿಯವರೆ ಎಂದು ಹೇಳಿದ್ದಾರೆ.
ಕುಟುಂಬ ರಾಜಕಾರಣದ ಬಗ್ಗೆ ಮೋದಿಯವರು ಅವಕಾಶ ಸಿಕ್ಕಾಗಲೆಲ್ಲಾ ಮಾತನಾಡುತ್ತಾರೆ. ಮೊನ್ನೆ ಮಧ್ಯಪ್ರದೇಶ ಚುನಾವಣಾ ಪ್ರಚಾರದಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಭಾಷಣ ಮಾಡಿದ್ದರು. ಆದರೆ ಈಗ ಮಾಜಿ ಸಿಎಂ ಬಿಎಸ್‌ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದಾರೆ. ಇದ್ಯಾವ ರಾಜಕಾರಣ ಮೋದಿಯವರೆ? ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.
ಇದನ್ನು ಓದಿ: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸಾಧ್ಯತೆ


