ಆಂಧ್ರಪ್ರದೇಶದಲ್ಲಿ ಈಗ ಹಣ, ಅಧಿಕಾರ, ಪ್ರತಿಷ್ಠೆಯದ್ದೆ ಕಾರುಬಾರು. ಸಾರ್ವಜನಿಕರ ಹಣದಲ್ಲಿ ಮಂತ್ರಿಗಳು ಆಸ್ತಿ ಗಳಿಕೆ ಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ ಎಂಬ ಆಪಾದನೆಗಳು ಸಾಮಾನ್ಯವಾಗಿ ಕೇಳಿ ಬಂದಿವೆ. ಈ ಹಿಂದೆ ಸಿಎಂ ಆಗಿದ್ದ ಚಂದ್ರಬಾಬು ನಾಯ್ಡು ಸಾರ್ವಜನಿಕರ ದುಡ್ಡಲ್ಲಿ ಶೋಕಿ ಮಾಡ್ತಿದ್ದಾರೆ ಎಂದು ಆರೋಪಿಸಿದ್ದ ಜಗನ್ ಮೋಹನ್ ರೆಡ್ಡಿ ಈಗ ತಾವು ಮಾಡುತ್ತಿರೋದೇನು ಎಂದು ಜನ ಪ್ರಶ್ನಿಸುತ್ತಿದ್ದಾರೆ.
ವಿಧಾನಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಜಗನ್ ಮೋಹನ್ ರೆಡ್ಡಿ, ಗೆದ್ದು ಸಿಎಂ ಕುರ್ಚಿ ಏರಿದ್ದಾರೆ. ಆದರೆ ಸಿಎಂ ಆದಾಗಿನಿಂದ ಒಂದಲ್ಲ ಒಂದು ವಿವಾದಗಳು ಅವರನ್ನು ಮುತ್ತಿಕೊಳ್ಳುತ್ತಲೇ ಇವೆ. ಕೆಲ ದಿನಗಳ ಹಿಂದೆ ಸರ್ಕಾರಿ ಯೋಜನೆಗಳ ಹೆಸರು ಬದಲಾಯಿಸಿ, ಜನರು, ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಜನರ ದುಡ್ಡಲ್ಲಿ ಐಷಾರಾಮಿ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ಅಯೋಧ್ಯೆ ತೀರ್ಪು- ವಿಚಿತ್ರ ತರ್ಕದ ಆಧಾರ: ಮಾರ್ಕಂಡೇಯ ಕಟ್ಜು
ಆಂಧ್ರದ ಗುಂಟೂರು ಜಿಲ್ಲೆಯ ತಡಿಪಲ್ಲಿಯಲ್ಲಿ ಖಾಸಗಿ ಮನೆ ನಿರ್ಮಾಣಕ್ಕೆ 3.25 ಕೋಟಿ ರೂಪಾಯಿಯಲ್ಲಿ 0.15 ಎಕರೆ ಜಮೀನು ಖರೀದಿಸಿದ್ದಾರೆ. ತಡಿಪಲ್ಲಿ ಆಂಧ್ರಪ್ರದೇಶದ ರಾಜಧಾನಿ ಅಮರಾವತಿಗೆ ಹತ್ತಿರದಲ್ಲಿದೆ. ಖಾಸಗಿ ಮನೆಯಲ್ಲಿ ಜಗನ್, ಸೋಲಾರ್ ಅಳವಡಿಕೆ, ಬೆಳಕಿನ ವ್ಯವಸ್ಥೆ, ಸಿಸಿ ಕ್ಯಾಮರಾ, ಹೆಚ್ಚುವರಿ ಹವಾ ನಿಯಂತ್ರಕ ಅಳವಡಿಕೆ, ಅತ್ಯುನ್ನತ ದರ್ಜೆಯ ರೆಫ್ರಿಜರೇಟರ್ ಅಳವಡಿಕೆಗೆ 3 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಅದರಲ್ಲಿ ಹವಾ ನಿಯಂತ್ರಣ ವ್ಯವಸ್ಥೆಗೆ 80 ಲಕ್ಷ ರೂಪಾಯಿ ವೆಚ್ಚ ತಗುಲಿದೆಯಂತೆ. ಇದೆಲ್ಲವನ್ನೂ ಜಗನ್ ಸಾರ್ವಜನಿಕರ ಹಣದಲ್ಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆದರೆ ಇದರಲ್ಲಿ ಯಾವುದೇ ಬದಲಾವಣೆ ಏನಿಲ್ಲ. ಏಕೆಂದರೆ ಆಂಧ್ರಪ್ರದೇಶದಲ್ಲಿ ಈ ಹಿಂದೆ ಸಿಎಂ ಆಗಿದ್ದ ಚಂದ್ರಬಾಬು ನಾಯ್ಡು ಸಹ ಸಾರ್ವಜನಿಕರ ಹಣವನ್ನು ಸಾಕಷ್ಟು ಪೋಲು ಮಾಡಿದ್ದಾರೆ. ಖಾಸಗಿ ನಿವೇಶನಕ್ಕಾಗಿ ಸಾಕಷ್ಟು ಹಣ ವೆಚ್ಚ ಮಾಡಿದ್ದಾರೆ. ಈಗ ಜಗನ್ ಅಧಿಕಾರದಲ್ಲಿದ್ದು, ಅದೇ ಹಾದಿ ಹಿಡಿದಿದ್ದಾರೆ. ಸಾರ್ವಜನಿಕರ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಡಿಪಲ್ಲಿಯಲ್ಲಿರುವ ಮನೆ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಸ್ವಂತದ್ದು. ವಿಧಾನಸಭೆ ಚುನಾವಣೆಗೂ ಮೊದಲು ಆ ಮನೆಯಲ್ಲೇ ಜಗನ್ ವಾಸ್ತವ್ಯ ಹೂಡಿದರು. ಅದನ್ನೇ ಸಿಎಂ ಕ್ಯಾಂಪ್ ರೆಸಿಡೆನ್ಸಿ ಅಂತಾ ಹೆಸರು ಬದಲಾಯಿಸಿದರು. ಮೇ ತಿಂಗಳಲ್ಲಿ ಅಧಿಕಾರಕ್ಕೇರಿದ ಜಗನ್ ಸರ್ಕಾರದ ಬೊಕ್ಕಸದಲ್ಲಿದ್ದ ಕೋಟಿ ಕೋಟಿ ಹಣವನ್ನ ಬಳಸಿಕೊಂಡಿದ್ದಾರೆ. ಮನೆಗೆ ಒದಗಿಸಿದ್ದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು 15 ಕೋಟಿ ರೂಪಾಯಿ ಬಳಸಿದ್ದರು. ಅದಾದ ನಂತರ ಅಕ್ಟೋಬರ್‌ನಲ್ಲಿ ಸಾರಿಗೆ, ರಸ್ತೆ, ಕಟ್ಟಡ ನಿರ್ಮಾಣಕ್ಕಾಗಿ 73 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿತು. ಅದೇ ಹಣದಲ್ಲಿ ಜಗನ್ ಮನೆಗೆ ಹೊಸ ಬಾಗಿಲುಗಳು, ಕಿಟಕಿಗಳನ್ನು ಕಟ್ಟಿಸಿದ್ದಾರೆ. ಇದಕ್ಕೂ ಮೊದಲು ಮನೆಗೆ ಹೋಗುವ 1.3ಕಿ.ಮೀ ರಸ್ತೆ ದುರಸ್ತಿಗಾಗಿ 5 ಕೋಟಿ ರೂಪಾಯಿ ವ್ಯಯಿಸಿದ್ದಾರೆ.
ಜುಲೈನಲ್ಲಿ ಹೈದ್ರಾಬಾದ್‌ನಲ್ಲಿರುವ ಜಗನ್ ಅವರ ಪಲಾಟಿಯಲ್ ಬಂಜಾರ್ ಹಿಲ್ಸ್, ಲೋಟಸ್ ಪಾಂಡ್ ರೆಸಿಡೆನ್ಸಿ ಅಂತಲೇ ಹೆಸರುವಾಸಿಯಾಗಿರುವ ಮನೆಗೆ ಭದ್ರತೆ ನಿಯೋಜನೆಗೆ ಸರ್ಕಾರ 24.5 ಲಕ್ಷ ರೂ. ನೀಡಿದೆ.
ಇನ್ನು ಕೆಲ ದಿನಗಳ ಹಿಂದಷ್ಟೇ ಜಗನ್, ಸಾರ್ವಜನಿಕರ ದುಡ್ಡನ್ನು ದುಂದುವೆಚ್ಚ ಮಾಡುತ್ತಿರುವ ಬಗ್ಗೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರಸ್ತಾಪಿಸಿದ್ದರು. ರೋಮ್ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು ಕುಯ್ಯುತ್ತಿದ್ದ. ಹಾಗೆಯೇ 5 ತಿಂಗಳಿಂದ ಆಂಧ್ರಪ್ರದೇಶ ಹಣಕಾಸು ಕೊರತೆ, ಕೆಲಸವಿಲ್ಲದೆ ಜನ ತಮ್ಮ ಜೀವ ಕಳೆದುಳ್ಳುತ್ತಿರುವ ವೇಳೆ, ಜಗನ್ ತನ್ನ ಹೈದ್ರಾಬಾದ್‌ನ ಪಲಾಟಿಯಲ್ ಮನೆಯಲ್ಲಿ ವಿಡಿಯೋ ಗೇಮ್ ಆಡುತ್ತ ಕುಳಿತಿದ್ದರು. ಅದಕ್ಕಾಗಿ ಸರ್ಕಾರ 15.65 ಕೋಟಿ ನೀಡಿತ್ತು ಎಂಬುದೇ ಶಾಕಿಂಗ್ ವಿಷಯ ಎಂದು ಬರೆದಿದ್ದರು.
ಇನ್ನು ಜಗನ್ ಅವರ ಮನೆಯ ಭದ್ರತೆಗೆ ಸರ್ಕಾರ ವ್ಯಯಿಸಿದ ವೆಚ್ಚದ ಬಗ್ಗೆ ಸಚಿವ ಪೆರ್ನಿ ವೆಂಕಟರಾಮಯ್ಯ ಸಮರ್ಥಿಸಿಕೊಂಡಿದ್ದರು. ಜಗನ್ ಅವರ ಮನೆ ಜನಸಂದಣಿ ಪ್ರದೇಶದ ಮಧ್ಯಭಾಗದಲ್ಲಿದೆ. ಅಲ್ಲಿ ಸುತ್ತಮುತ್ತ ಎತ್ತರವಾದ ಕಟ್ಟಡಗಳಿವೆ. ಹೀಗಾಗಿ ಭದ್ರತೆ ಅತೀ ಮುಖ್ಯ. ಬುಲೆಟ್ ಪ್ರೂಫ್ ಜಾಕೆಟ್, ಕಿಟಕಿ ಸೇರಿದಂತೆ ಹಲವು ವಸ್ತುಗಳ ಅವಶ್ಯಕತೆಯಿದೆ ಎಂದಿದ್ದರು. ನಾಯ್ಡು ಆಡಳಿತದ ಐದು ವರ್ಷದಲ್ಲಿ ೧೦೦ ಕೋಟಿ ರೂಪಾಯಿಯನ್ನು ನಾಯ್ಡು ಹೈದ್ರಾಬಾದ್ ಮತ್ತು ವಿಜಯವಾಡದಲ್ಲಿರುವ ಕ್ಯಾಂಪ್ ಆಫೀಸ್, ಫಾರ್ಮ್‌ಹೌಸ್, ಗೆಸ್ಟ್ ಹೌಸ್‌ಗಳ ನಿರ್ಮಾಣ ಮತ್ತು ಪೀಠೋಪಕರಣ ಮತ್ತು ಐಷಾರಾಮಿ ವಸ್ತುಗಳ ಅಳವಡಿಕೆಗೆ ವ್ಯಯಿಸಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ ನಾಯ್ಡು ಕುಟುಂಬಸ್ಥರು ವಾಸವಿದ್ದ ಜುಬಿಲಿ ಹಿಲ್ಸ್ ಮನೆ ಮರುನಿರ್ಮಾಣಗೊಳ್ಳುತ್ತಿದ್ದಾಗ ವರ್ಷಗಟ್ಟಲೇ ನಾಯ್ಡು ಮನೆಯವರು ಫೈಸ್ಟಾರ್ ಹೋಟೆಲ್‌ನಲ್ಲಿ ವಾಸವಾಗಿದ್ದರು. ಅದೆಲ್ಲಾ ವೆಚ್ಚವನ್ನು ಸರ್ಕಾರವೇ ಭರಿಸಿತ್ತು. ಅದು ಸಾರ್ವಜನಿಕರ ಹಣವನ್ನು ದುಂದುವೆಚ್ಚ ಮಾಡಿದ್ದಿರಲಿಲ್ಲವೇ..? ಎಂದು ಪ್ರಶ್ನಿಸಿದ್ದಾರೆ.


